ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್: ಈವರೆಗೆ ಏನೆಲ್ಲಾ ಬೆಳವಣಿಗೆಗಳು ಆಯ್ತು? ಇಲ್ಲಿದೆ ವಿವರ

| Updated By: ರಮೇಶ್ ಬಿ. ಜವಳಗೇರಾ

Updated on: Mar 01, 2024 | 10:33 PM

Bengaluru rameswaram cafe : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಭಯಾನಕ ಬಾಂಬ್​ ಸ್ಫೋಟವೇ ಸಂಭವಿಸಿದೆ. ಸ್ಫೋಟದ ಶಬ್ದಕ್ಕೆ ಸುತ್ತಮುತ್ತಲಿನ ಸ್ಥಳೀಯರೇ ಬೆಚ್ಚಿಬಿದ್ದಿದ್ದಾರೆ. ಯಾರಿಗೆ ಏನಾಗುತ್ತಿದೆ ಎಂದು ಗೊತ್ತಾಗಿಲ್ಲ. ಕಣ್ಣು ತೆರೆದು ಬಿಡುವಷ್ಟರಲ್ಲೇ ಎಲ್ಲವೂ ಚೆಲ್ಲಾಪಿಲ್ಲಿಯಾಗಿದೆ. ವಸ್ತುಗಳೆಲ್ಲಾ ಪುಡಿಪುಡಿಯಾಗಿವೆ. ಇದೀಗ ಬಾಂಬ್​ ಸ್ಫೋಟಕ್ಕೆ ಇಡೀ ಬೆಂಗಳೂರೇ ಬೆಚ್ಚಿಬಿದ್ದಿದೆ. ಇನ್ನು ಇದೀಗ ಇಲ್ಲಿಯವರೆಗೂ ಏನೆಲ್ಲಾ ಬೆಳವಣಿಗೆಗಳು ಆಗಿವೆ ಎನ್ನುವ ವಿವರ ಇಲ್ಲಿದೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್: ಈವರೆಗೆ ಏನೆಲ್ಲಾ ಬೆಳವಣಿಗೆಗಳು ಆಯ್ತು? ಇಲ್ಲಿದೆ ವಿವರ
Follow us on

ಬೆಂಗಳೂರು, (ಮಾರ್ಚ್ 01) ರಾಮೇಶ್ವರಂ ಕೆಫೆ. ಬೆಂಗಳೂರಿನಲ್ಲೇ ಫೇಮಸ್​. ಯಾವಾಗಲೂ ಜನರಿಂದ ತುಂಬಿತುಳುಕ್ತಿರುತ್ತೆ. ಅದೇ ರೀತಿ ಇವತ್ತೂ ಕೂಡ ಮಟಮಟ ಮಧ್ಯಾಹ್ನ ಸರಿಯಾಗಿ 12.55 ಆಗಿತ್ತು. ಬೆಂಗಳೂರಿನ ಕುಂದಲಹಳ್ಳಿಯಲ್ಲಿರೋ ರಾಮೇಶ್ವರಂ ಕೆಫೆಯಲ್ಲಿ (Bengaluru rameswaram cafe )ಗ್ರಾಹಕರು ಬಿಸಿಬಿಸಿಯಾದ ಊಟವನ್ನ ಸವಿಯುತ್ತಿದ್ದರು. ಆದ್ರೆ ಏಕಾಏಕಿ ಹೋಟೆಲ್​ನಲ್ಲಿ ಬಾಂಬ್​ ಸ್ಫೋಟಗೊಂಡಿದ್ದು, ಊಟ ಮಾಡುತ್ತಿದ್ದವರು ಬಿಟ್ಟು ಓಡಿದ್ದಾರೆ. ಹೋಟೆಲ್ ಸಿಬ್ಬಂದಿ ಫಾರುಖ್, ಅಮೇಜನ್ ಕಂಪನಿಯ ಸಿಬ್ಬಂದಿ ದೀಪಾಂಶು, ಸ್ವರ್ಣಾಂಬ, ಮೋಹನ್, ನಾಗಶ್ರೀ, ಮೋಮಿ, ಬಲರಾಮ್ ಕೃಷ್ಣನ್, ನವ್ಯಾ, ಶ್ರೀನಿವಾಸ್ ಗಾಯಗೊಂಡಿದ್ದಾರೆ. ಇದರಲ್ಲಿ ಸ್ವರ್ಣಾಂಬಗೆ 40 ಪರ್ಸೆಂಟ್ ಸುಟ್ಟಗಾಯಗಳಾಗಿವೆ. ಸ್ಫೋಟದ ತೀವ್ರತೆಗೆ ಮಹಿಳೆ ವಿಲವಿಲ ಒದ್ದಾಡಿದ್ದಾಳೆ. ತಕ್ಷಣವೇ ಎಲ್ಲರನ್ನೂ ಆಸ್ಪತ್ರೆಗೆ ರವಾನಿಸಲಾಗಿದೆ.

ಹೊರಗಡೆ ತಂದಿರುವ ವಸ್ತು ಸ್ಫೋಟ

ವಿಷಯ ತಿಳಿಯುತ್ತಿದ್ದಂತೆಯೇ ಹೆಚ್​ಎಎಲ್ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದರು. ಆರಂಭದಲ್ಲಿ ಸಿಲಿಂಡರ್, ಇಲ್ಲ ಬಾಯ್ಲರ್ ಸ್ಫೋಟವಾಗಿರಬಹುದು ಎಂದುಕೊಂಡಿದ್ದರು. ಆದ್ರೆ, ಕೆಫೆಯಲ್ಲಿರುವ ಯಾವುದೇ ವಸ್ತು ಸ್ಫೋಟವಾಗಿಲ್ಲ. ಬದಲಿಗೆ ಹೊರಗಡೆಯಿಂದ ತಂದಿರುವ ವಸ್ತು ಸ್ಫೋಟವಾಗಿದೆ ಎನ್ನುವುದು ಗೊತ್ತಾಗಿದೆ. ಇನ್ನು ಸ್ಥಳದಲ್ಲಿ ಬ್ಯಾಟರಿ, ಬ್ಯಾಗ್ ಪತ್ತೆಯಾಗಿದ್ದು, ಬ್ಯಾಗ್ ನಲ್ಲಿ ವಸ್ತುವೇ ಸ್ಫೋಟವಾಗಿರುವುದು ಗೊತ್ತಾಗಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ರವೆ ಇಡ್ಲಿ ತಿಂದು ಬಾಂಬ್ ಇಟ್ಟು ಹೋಗಿದ್ದಾನೆ: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಕೆಶಿ

ಸ್ಥಳಕ್ಕೆ ಎಫ್​ಎಸ್ಎಲ್​ ತಜ್ಞರು, ಅಧಿಕಾರಿಗಳು ದೌಡು

ಇನ್ನು ಸ್ಫೋಟವಾದ ಸ್ಥಳದಲ್ಲಿ ಟೈಮರ್ ಪತ್ತೆಯಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಫೋಟದ ವಿಚಾರ ಗೊತ್ತಾಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಹೆಚ್​ಎಎಲ್​ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಕೂಡ ಪತ್ತೆಯಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್​ ಮತ್ತು ತಂಡ ಆಗಮಿಸಿ ಸ್ಫೋಟದ ಸ್ಥಳದಲ್ಲಿ ಇಂಚಿಂಚೂ ಪರಿಶೀಲನೆ ನಡೆಸಿದರು. ಇನ್ನು ಬಾಂಬ್​ ನಿಷ್ಕ್ರಿಯ ದಳ, ಶ್ವಾನ ದಳ, ಎಫ್​ಎಸ್ಎಲ್​ ತಜ್ಞರೂ ಪರಿಶೀಲನೆ ನಡೆಸಿದರು. ಇಷ್ಟೇ ಅಲ್ಲ NIA ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕಿದರು.

ಟೈಮರ್‌ ಇಟ್ಟು ಬಾಂಬ್‌ ಸ್ಫೋಟ

ಬೆಂಗಳೂರಿನ ವೈಟ್‌ ಫೀಲ್ಡ್‌ ಸಮೀಪದ ಬ್ರೂಕ್‌ ಫೀಲ್ಡ್ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟವು (Blast in Rameshwaram Cafe) ತಲ್ಲಣಗೊಳಿಸಿದೆ. ಸ್ಫೋಟಗೊಂಡ ಸ್ಥಳದಲ್ಲಿ ಬ್ಯಾಟರಿ ಪತ್ತೆಯಾಗಿದ್ದು, ತನಿಖೆಯನ್ನು ಚುರುಕುಗೊಳಿಸಲಾಗಿದೆ. ಈ ನಡುವೆ ಟೈಮರ್ ಇಟ್ಟು ಬಾಂಬ್ ಸ್ಫೋಟ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಸ್ಪೋಟದ ಬಳಿಕ ಸಿಕ್ಕ ವಸ್ತುಗಳಿಂದ ಟೈಮರ್ ಅಳವಡಿಕೆ ಮಾಡಲಾಗಿದೆಯೆ ಎಂಬ ಶಂಕೆ ವ್ಯಕ್ತವಾಗಿದೆ. ಬ್ಯಾಗ್ ಇಟ್ಟು ಬ್ಯಾಗಿನ ಒಳಗೆ ಟೈಮರ್ ಫಿಕ್ಸ್ ಮಾಡಿ ಬ್ಲಾಸ್ಟ್ ಮಾಡಲಾಗಿದೆ ಎಂಬ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇದು ಆತಂಕವನ್ನು ಹೆಚ್ಚು ಮಾಡಿದೆ.

ಕೂಡಲೇ ಸ್ಥಳಕ್ಕೆ ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ, ಪ್ರಯೋಗಾಲಯ ತಜ್ಞ ಸೇರಿದಂತೆ ಹಿರಿಯ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಸ್ಥಳದಲ್ಲೇ ಟೈಮರ್​ ಒಂದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಟೈಮರ್ ಬಾಂಬ್ ಇಟ್ಟಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ, ‘ಬಾಂಬ್ ಬೆಂಗಳೂರು’ ಕಳಂಕ ತರಬೇಡಿ ಎಂದ ಆರ್​. ಅಶೋಕ್

ಡಿಸಿಎಂ, ಗೃಹ ಸಚಿವರು ಭೇಟಿ

ಇನ್ನು ಘಟನಾ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.  ಬಳಿಕ ಮಾತನಾಡಿ ಡಿಕೆಶಿ, ಆರೋಪಿ ರವೆ ಇಡ್ಲಿ ತಿಂದು ಬ್ಯಾಗ್ ಇಟ್ಟು ಹೋಗಿದ್ದಾನೆ. ಆ ವ್ಯಕ್ತಿ ಪತ್ತೆಗೆ ಪೊಲಿಸರು ಕಾರ್ಯಚರಣೆ ನಡೆಸಿದ್ದಾರೆ. ಕೆಲವೇ ಕ್ಷಣದಲ್ಲಿ ಆರೋಪಿಯನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲು

ಬ್ರೂಕ್ ಫೀಲ್ಡ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಬಂಧ ಹೆಚ್ಎಎಲ್ ಪೊಲೀಸ್​ ಠಾಣೆಯಲ್ಲಿ ಯುಎಪಿಎ (ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವ ಕಾಯ್ದೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಲಾಗಿದೆ. ದುಷ್ಕರ್ಮಿಗಳು ಟೈಮರ್ ಬಳಸಿ ಐಇಡಿ ಸ್ಫೋಟಿಸಿದ್ದಾರೆ. ಸ್ಫೋಟವಾದ ಸ್ಥಳದಲ್ಲಿ ಪತ್ತೆಯಾದ ಟೈಮರ್ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಮಾಂಡ್ ಸೆಂಟರ್​ನಲ್ಲಿ ಆರೋಪಿ ಚಲನವಲನದ ಬಗ್ಗೆ ಶೋಧ ಮಾಡಲಾಗಿತ್ತಿದ್ದು, ರಾಮೇಶ್ವರಂ ಕೆಫೆ ಮಾರ್ಗದಲ್ಲಿರುವ ಸಿಸಿಕ್ಯಾಮರಾ ದೃಶ್ಯವನ್ನು ಸಿಬ್ಬಂದಿ ಪರಿಶೀಲಿಸುತ್ತಿದ್ದಾರೆ. ಆರೋಪಿ ಎಲ್ಲೆಲ್ಲಿ ಓಡಾಡಿದ್ದ ಅನ್ನೋ ಬಗ್ಗೆ ಪರಿಶೀಲಿಸಲಾಗುತ್ತಿದೆ.

ಆಸ್ಪತ್ರೆಗೆ ರಾಜ್ಯಪಾಲ, ವಿಪಕ್ಷ ನಾಯಕರು ಭೇಟಿ

ಇನ್ನು ಘಟನೆ ಸಂಬಂಧ ಬಿಜೆಪಿ ನಾಯಕರು , ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಬಳಿಕ ಈ ಬಾಂಬ್ ಬ್ಲಾಸ್ಟ್ ಆಗಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದರು. ಬಳಿಕ ಬಿಜೆಪಿ ನಾಯಕರು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜೊತೆ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.