ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ, ‘ಬಾಂಬ್ ಬೆಂಗಳೂರು’ ಕಳಂಕ ತರಬೇಡಿ ಎಂದ ಆರ್. ಅಶೋಕ್
ಬೆಂಗಳೂರಿನ ಕುಂದಲಹಳ್ಳಿಯ ಬ್ರೂಕ್ ಫೀಲ್ಡ್ ರಸ್ತೆಯಲ್ಲಿರುವ ಫುಡ್ಪ್ರಿಯರ ಅಚ್ಚುಮೆಚ್ಚಿನ ತಾಣ ರಾಮೇಶ್ವರಂ ಕೆಫೆಯಲ್ಲಿ ದುರುಳರು ಟೈಮರ್ ಅಳವಡಿಸಿ, IED ಬಾಂಬ್ ಸ್ಫೋಟಿಸಿದ್ದಾರೆ. ಸ್ಥಳದಲ್ಲಿ ಬ್ಯಾಟರಿ, ನಟ್ಗಳು ಪತ್ತೆಯಾಗಿದೆ. ಈ ಘಟನೆ ರಾಜ್ಯ ರಾಜಧಾನಿ ಬೆಂಗಳೂರನ್ನು ಅಕ್ಷರಶಃ ದಂಗಾಗಿಸಿದೆ. ಸದ್ಯ ಈ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ರಾಜ್ಯ ಸರ್ಕಾರ ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ ‘ಬಾಂಬ್ ಬೆಂಗಳೂರು’ ಎಂಬ ಕಳಂಕ ತರಬೇಡಿ ಎಂದು ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರು, ಮಾರ್ಚ್ 1: ರಾಜ್ಯ ಸರ್ಕಾರ ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ ‘ಬಾಂಬ್ ಬೆಂಗಳೂರು’ ಎಂಬ ಕಳಂಕ ತರಬೇಡಿ ಎಂದು ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka) ಚಾಟಿ ಬೀಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ (Rameswaram Cafe Blast) ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಸಮಾಜಘಾತುಕ ಶಕ್ತಿಗಳಿಗೆ ರೆಕ್ಕೆಪುಕ್ಕ ಬಂದಿದೆ. ಶರ್ಟ್ ಗುಂಡಿ ಬಿಚ್ಚಿಕೊಂಡು ಎದೆ ಉಬ್ಬಿಸಿಕೊಂಡು ಓಡಾಡುತ್ತಿದ್ದಾರೆ. ದೇಶದ ಕಾನೂನು ಇವರಿಗೆ ಅನ್ವಯವಾಗಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಗಲಾಟೆ ಆದಾಗಲೂ ಯಾವುದೇ ಕ್ರಮಕೈಗೊಳ್ಳಲಿಲ್ಲ. ರಾಜ್ಯದಲ್ಲಿ ಸರಣಿ ಕೊಲೆಗಳಾದಾಗಲೂ ಸರ್ಕಾರ ಕ್ರಮಕೈಗೊಳ್ಳಲಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದರು. ಆದರೆ ಆಡಳಿತಾರೂಢ ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕುಕ್ಕರ್ ಬ್ಲಾಸ್ ಆರೋಪಿಯನ್ನು ಬ್ರದರ್ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ರಾಮೇಶ್ವರಂ ಕೆಫೆ ಆರೋಪಿಯನ್ನು ಅಂಕಲ್ ಎಂದು ಹೇಳುತ್ತಾರೇನೋ? ಇವರನ್ನು ಅಂಕಲ್ ಅಂದರೆ ನಾವೆಲ್ಲರೂ ಏನಾಗಬೇಕು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್; ಸ್ಥಳದಲ್ಲಿ ಬ್ಯಾಟರಿ ಜತೆ ಟೈಮರ್ ಪತ್ತೆ, ಟೈಂ ಬಾಂಬ್ ಶಂಕೆ?
ರಾಜ್ಯ ಸರ್ಕಾರ ದೇಶದ್ರೋಹಿಗಳನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡುತ್ತೇವೆ. ರಾಜ್ಯ ಸರ್ಕಾರ ಸಮಾಜಘಾತುಕರಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಆದಾಯ ಕಡಿಮೆ ಆಗಬೇಕು. ಬೆಂಗಳೂರಿಗೆ ಕಟ್ಟ ಹೆಸರು ಬರಬೇಕು ಅಂತ ಭಯೋತ್ಪಾದನಾ ಸಂಘಟನೆ ಈ ರೀತಿ ಕೃತ್ಯ ಮಾಡುತ್ತಿದ್ದಾರೆ. ಭಯೋತ್ಪಾದನಾ ಕೃತ್ಯ ಮಾಡುವವರಿಗೆ ಕಾಂಗ್ರೆಸ್ ಅವಕಾಶ ಮಾಡಿ ಕೊಟ್ಟಿದೆ. ರಾಜ್ಯದ ಭದ್ರತೆ ವಿಚಾರ ಇದು. ಇದರಲ್ಲಿ ರಾಜಕಾರಣ ಬೇಡ. ಓಟಿಗಾಗಿ ಇದನ್ನ ನೋಡಬೇಡಿ. ಆಡಳಿತ ಪಕ್ಷವಾಗಿ ನೀವು ನಡೆದುಕೊಳ್ಳಿ, ವಿಪಕ್ಣವಾಗಿ ನಾವು ನಡೆದುಕೊಳ್ಳುತ್ತೇವೆ. ಜವಾಬ್ದಾರಿಯಿಂದ ಆಡಳಿತ ಪಕ್ಷ ನಡೆದುಕೊಳ್ಳಬೇಕು. ತಕ್ಷಣ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ರಾಜ್ಯದಲ್ಲಿ ಇನ್ನೂ ಕೆಲವೆಡೆ ಘಟನೆ ನಡೆಯಬಹುದು. ಕಾನೂನು ಸುವ್ಯವಸ್ಥೆ, ಇಂಟೆಲಿಜೆನ್ಸ್, ಸರ್ಕಾರ ಬದುಕಿದ್ದರೆ ತಕ್ಷಣ ಕ್ರಮ ತೆಗೆದುಕೊಳ್ಳಿ ಎಂದಿದ್ದಾರೆ.
ಐಇಡಿ ಬ್ಲಾಸ್ಟ್ ಅಂತಾ ಸ್ವತಃ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ: ಬಿ.ವೈ.ವಿಜಯೇಂದ್ರ
ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟದಿಂದ 9 ಜನರಿಗೆ ಗಾಯಗಳಾಗಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಇಂತಹ ಘಟನೆಗಳು ನಡೆಯುತ್ತಿವೆ. ಐಇಡಿ ಬ್ಲಾಸ್ಟ್ ಅಂತಾ ಸ್ವತಃ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ವಿಧಾನಸೌಧದಲ್ಲಿ ಮೊನ್ನೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಅದರ ಮುಂದುವರಿದ ಭಾಗವಾಗಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿ ಎಂದರು.
ಸರ್ಕಾರ ಎಫ್ಎಸ್ಎಲ್ ವರದಿಯನ್ನು ಮುಚ್ಚಿಡುವ ಕೆಲಸ ಮಾಡುತ್ತಿದೆ. ಪಾಕಿಸ್ತಾನ ಜಿಂದಾಬಾದ್ ಘೋಷಣೆಯ FSL ವರದಿ ಮುಚ್ಚಿಡುವ ಯತ್ನ ಮಾಡಲಾಗಿದೆ. ಡಿ.ಜೆ.ಹಳ್ಳಿ & ಕೆ.ಜಿ.ಹಳ್ಳಿ ಗಲಭೆಕೋರರು ಅಮಾಯಕರು ಅಂತಾರೆ. ಅವರೆಲ್ಲಾ ಅಮಾಯಕರೆಂದು ಕಾಂಗ್ರೆಸ್ ಶಾಸಕ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರ ಬಾಂಬ್ ಸ್ಫೋಟ ಘಟನೆ ಗಂಭೀರವಾಗಿ ಪರಿಗಣಿಸಬೇಕು. ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ತಕ್ಷಣ ಎನ್ಐಎಗೆ ವಹಿಸಬೇಕು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.