Tushar Girinath Press conference: ಮಾರ್ಚ್ 2026ರೊಳಗೆ ಎಲ್ಲಾ ವೈಟ್ ಟ್ಯಾಪಿಂಗ್ ಪೂರ್ಣ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೆಂಗಳೂರಿನಲ್ಲಿ ರಸ್ತೆ ಕಾಮಗಾರಿಗಳ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. 2026ರ ಮಾರ್ಚ್ ಅಂತ್ಯದೊಳಗೆ ಎಲ್ಲಾ ಬ್ಲಾಕ್ ಟ್ಯಾಪಿಂಗ್ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ವೈಟ್ ಟ್ಯಾಪಿಂಗ್ ಕಾಮಗಾರಿಗಳು ಜೂನ್ 2026ರೊಳಗೆ ಮುಕ್ತಾಯಗೊಳ್ಳಲಿದ್ದು, ನಗರದ ಮುಖ್ಯ ರಸ್ತೆಗಳು ಸುಧಾರಣೆಗೊಳ್ಳಲಿವೆ ಎಂದು ತಿಳಿಸಿದ್ದಾರೆ.

ಬೆಂಗಳೂರು, ಡಿ.6: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೆಂಗಳೂರು ನಗರದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇಂದು ಅವರು ಸುದ್ದಿಗೋಷ್ಠಿಯನ್ನು ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 2026ರ ಮಾರ್ಚ್ ಅಂತ್ಯದೊಳಗೆ ಎಲ್ಲಾ ಬ್ಲಾಕ್ ಟ್ಯಾಪಿಂಗ್ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಅವರು ಭರವಸೆ ನೀಡಿದ್ದಾರೆ. ನಗರದ ಪ್ರಮುಖ ರಸ್ತೆಗಳಾದ ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳ ಮೇಲೆ ಸುಮಾರು ಎಂಟು ವರ್ಷಗಳಿಂದ ಯಾವುದೇ ಗಣನೀಯ ಹಣ ಹೂಡಿಕೆ ಮಾಡಿರಲಿಲ್ಲ, 2022ರಲ್ಲಿ ಕೇವಲ 550ರಿಂದ 600 ಕೋಟಿ ರೂಪಾಯಿಗಳನ್ನು ಮಾತ್ರ ಈ ರಸ್ತೆಗಳಿಗಾಗಿ ವಿನಿಯೋಗಿಸಲಾಗಿತ್ತು. ಹಿಂದೆ 1350 ಕಿಲೋಮೀಟರ್ ಇದ್ದ ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳ ವ್ಯಾಪ್ತಿಯನ್ನು ಈಗ 1680 ಕಿಲೋಮೀಟರ್‌ಗೆ ಹೆಚ್ಚಿಸಲಾಗಿದೆ. ಈ ರಸ್ತೆಗಳ ವ್ಯವಸ್ಥಿತ ನಿರ್ವಹಣೆಯಿಂದ ಮುಂದಿನ ದಿನಗಳಲ್ಲಿ ರಸ್ತೆ ಗುಂಡಿಗಳು ಇರುವುದಿಲ್ಲ ಮತ್ತು ಸಾರಿಗೆ ವ್ಯವಸ್ಥೆ ಸುಧಾರಿಸಲಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳಿಗೆ ವಿವಿಧ ಮೂಲಗಳಿಂದ ಹಣ ಹಂಚಿಕೆ ಮಾಡಲಾಗಿದೆ. ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 900 ಕೋಟಿ ರೂಪಾಯಿ ಮತ್ತು ಕರ್ನಾಟಕ ಸರ್ಕಾರದಿಂದ 800 ಕೋಟಿ ರೂಪಾಯಿ ಸೇರಿದಂತೆ ಒಟ್ಟು 1700 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 153 ಕಿಲೋಮೀಟರ್ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಹೆಚ್ಚುವರಿಯಾಗಿ, ಡಿಎಲ್‌ಪಿ ಅವಧಿಯಲ್ಲಿರುವ ಸುಮಾರು 400 ಕಿಲೋಮೀಟರ್ ರಸ್ತೆಗಳಿವೆ. ಬ್ಲಾಕ್ ಟ್ಯಾಪಿಂಗ್ ಅಡಿಯಲ್ಲಿ 693 ಕೋಟಿ ರೂಪಾಯಿ ವೆಚ್ಚದಲ್ಲಿ 350 ಕಿಲೋಮೀಟರ್ ರಸ್ತೆಗಳ ಕೆಲಸ ಭರದಿಂದ ಸಾಗುತ್ತಿದೆ. ಈ ಎಲ್ಲಾ ಕಾಮಗಾರಿಗಳ ನಂತರ, ಕೇವಲ 507 ರಿಂದ 510 ಕಿಲೋಮೀಟರ್ ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳು ಮಾತ್ರ ಉಳಿಯಲಿವೆ.
ವೈಟ್ ಟ್ಯಾಪಿಂಗ್ ಮತ್ತು ಬ್ಲಾಕ್ ಟ್ಯಾಪಿಂಗ್ ಕಾಮಗಾರಿಗಳನ್ನು ಒಟ್ಟಿಗೆ ನಡೆಯುತ್ತಿವೆ. 693 ಕೋಟಿ ರೂಪಾಯಿ ಬ್ಲಾಕ್ ಟ್ಯಾಪಿಂಗ್ ಯೋಜನೆಯಲ್ಲಿ ಮೈಕ್ರೋ ಸರ್ಫೇಸಿಂಗ್ ಬದಲಿಗೆ ಚಿಪ್ ಕಾರ್ಪೆಟಿಂಗ್ ವಿಧಾನವನ್ನು ಅಳವಡಿಸಲಾಗುತ್ತಿದೆ, ಏಕೆಂದರೆ ಮಳೆಗಾಲದಲ್ಲಿ ಮೈಕ್ರೋ ಸರ್ಫೇಸಿಂಗ್ ಸಾಧ್ಯವಾಗಿರಲಿಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ, ಎಸ್ಐಪಿ ಯೋಜನೆಯಡಿಯಲ್ಲಿ 1270 ಕೋಟಿ ರೂಪಾಯಿ ವೆಚ್ಚದಲ್ಲಿ 550 ಕಿಲೋಮೀಟರ್ ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಇಲ್ಲಿದೆ ನೋಡಿ ವಿಡಿಯೋ:
ರಸ್ತೆ ಕಾಮಗಾರಿಗಳು ಪ್ರಾರಂಭವಾಗುವಲ್ಲಿ ಕೆಲವು ವಿಳಂಬಗಳು ಕಂಡುಬಂದಿವೆ. 1250 ಕೋಟಿ ರೂಪಾಯಿಗಳ 500 ಕಿಲೋಮೀಟರ್ ರಸ್ತೆ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿದೆ ಮತ್ತು ಡಿಸೆಂಬರ್ ಅಂತ್ಯದ ವೇಳೆಗೆ ಮತ್ತು ಜನವರಿ 15ರೊಳಗೆ ಎಲ್ಲಾ ಟೆಂಡರ್‌ಗಳನ್ನು ಅಂತಿಮಗೊಳಿಸಲಾಗುವುದು ಎಂದು ಗಿರಿನಾಥ್ ಹೇಳಿದ್ದಾರೆ. ಮಳೆಗಾಲಕ್ಕೂ ಮುನ್ನ, ಅಂದರೆ ಮಾರ್ಚ್, ಏಪ್ರಿಲ್, ಮೇ ತಿಂಗಳೊಳಗೆ 524 ಕಿಲೋಮೀಟರ್ ಬ್ಲಾಕ್ ಟ್ಯಾಪಿಂಗ್ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಮೇ 2026ರೊಳಗೆ ಒಟ್ಟು 900 ಕಿಲೋಮೀಟರ್ ಬ್ಲಾಕ್ ಟ್ಯಾಪಿಂಗ್ ರಸ್ತೆಗಳು ಪೂರ್ಣಗೊಳ್ಳಲಿವೆ.
ಇದನ್ನೂ ಓದಿ: ಇ-ಖಾತೆ ನೀಡುವುದರಲ್ಲಿ ಸಾಕಷ್ಟು ತೊಂದರೆ: 10 ಹೊಸ ಸೇವಾಕೇಂದ್ರ ಆರಂಭಕ್ಕೆ ತೀರ್ಮಾನ
ಇನ್ನು ವೈಟ್ ಟ್ಯಾಪಿಂಗ್ 600 ಕಿಲೋಮೀಟರ್ ರಸ್ತೆಗಳ ಪೈಕಿ 127 ಕಿಲೋಮೀಟರ್ ಈಗಾಗಲೇ ಪೂರ್ಣಗೊಂಡಿದೆ. 153 ಕಿಲೋಮೀಟರ್ ರಸ್ತೆಯಲ್ಲಿ ಕೆಲಸ ಪ್ರಗತಿಯಲ್ಲಿದ್ದು, ಅದರಲ್ಲಿ 48 ಕಿಲೋಮೀಟರ್‌ಗೆ ಇನ್ನೂ ಕೆಲಸ ಪ್ರಾರಂಭವಾಗಿಲ್ಲ. ಪೊಲೀಸ್ ಅನುಮತಿ ಮತ್ತು ಬಿಡಬ್ಲ್ಯೂಎಸ್ಎಸ್‌ಬಿ ಪೈಪ್‌ಲೈನ್ ಸ್ಥಳಾಂತರದಂತಹ ಸವಾಲುಗಳಿಂದ ಈ ವಿಳಂಬ ಉಂಟಾಗುತ್ತಿದೆ. ಎಂ.ಜಿ. ರೋಡ್‌ನಂತಹ ಕೆಲವು ಪ್ರದೇಶಗಳಲ್ಲಿ ವೈಟ್ ಟ್ಯಾಪಿಂಗ್ ಬದಲಿಗೆ ಸ್ಟೋನ್ ಮ್ಯಾಟ್ರಿಕ್ಸ್ ಅಸ್ಫಾಲ್ಟ್ (SMA) ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಲಾಗಿದೆ. ಜೂನ್ 2026ರೊಳಗೆ ಎಲ್ಲಾ ವೈಟ್ ಟ್ಯಾಪಿಂಗ್ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ. ಒಟ್ಟಾರೆ, 273 ಕಿಲೋಮೀಟರ್ ಉದ್ದದ ಹೈ-ಡೆನ್ಸಿಟಿ ಕಾರಿಡಾರ್‌ಗಳು ಸೇರಿದಂತೆ ಎಲ್ಲಾ ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳು ಮೇ 2026ರೊಳಗೆ ಪೂರ್ಣಗೊಳ್ಳಲಿವೆ ಎಂದು ಗಿರಿನಾಥ್ ಭರವಸೆ ನೀಡಿದ್ದಾರೆ. ಈ ಕೆಲಸಗಳಿಗೆ ಎಲ್ಲಾ ಆಯುಕ್ತರು ಮತ್ತು ಪಾಲಿಕೆ ಕಮಿಷನರ್‌ಗಳು ಬದ್ಧರಾಗಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




