
ಬೆಂಗಳೂರು, ಮೇ 18: ಕರ್ನಾಟಕದಲ್ಲಿ ಪೂರ್ವ ಮುಂಗಾರು (Rain) ಮತ್ತಷ್ಟು ಚುರುಕು ಪಡೆದುಕೊಂಡಿದೆ. ಎರಡು ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆಯಾಗುವುದಾಗಿ ಹವಾಮಾನ ಇಲಾಖೆ ಎಚ್ಚರಿಸಿತ್ತು. ಈ ಮಧ್ಯೆ ನಿನ್ನೆ ರಾತ್ರಿ ಸುರಿದ ಮಳೆ ಒಂದು ಕಡೆ ತಂಪೆರೆದಿದ್ದು, ಮತ್ತೊಂದೆಡೆ ಭಾರಿ ಅವಾಂತರ ಸೃಷ್ಟಿಸಿದೆ. ನಗರದ ಸಾಯಿ ಲೇಔಟ್ಗೆ (Sai Layout) ಜಲ ಕಂಟಕ ಎದುರಾಗಿದ್ದು, ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಸಂಕಷ್ಟ ಪಡುವಂತಾಗಿದೆ.
ನಗರದಲ್ಲಿ ನಿನ್ನೆ ಸುರಿದ ಮಳೆಗೆ ಜನರು ಬೆಚ್ಚಿ ಬಿದಿದ್ದಾರೆ. ಮಳೆಯಿಂದಾಗಿ ಬೆಂಗಳೂರಿನ ಸಾಯಿಲೇಔಟ್ ಜಲಾವೃತಗೊಂಡಿದ್ದು, ಇದೇ ವರ್ಷದಲ್ಲಿ 2ನೇ ಬಾರಿ ಸಮಸ್ಯೆ ಎದುರಾಗಿದೆ. ಸಾಯಿಮಂದಿರಕ್ಕೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಬೆಳಗ್ಗೆಯಾದರೂ ನೀರು ಮಾತ್ರ ಖಾಲಿಯಾಗಿಲ್ಲ. ರಾಜಕಾಲುವೆ ನೀರು ರಸ್ತೆ ತುಂಬಿ ಮನೆಗಳಿಗೂ ನುಗ್ಗಿದೆ. ಹಾಗಾಗಿ ಜನರು ಹೊರಗೆ ಬಾರದೆ ಮನೆಯಲ್ಲಿ ಉಳಿಯುವಂತಾಗಿದೆ.
ಇದನ್ನೂ ಓದಿ: Bangalore Rains: ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಜೋರು ಮಳೆ, ಟ್ರಾಫಿಕ್ ಜಾಮ್
ಇನ್ನು ಸಾಯಿ ಲೇಔಟ್ನ ಕಾವೇರಿ ನಗರದ ಮನೆಗಳಿಗೂ ಮಳೆ ನೀರು ನುಗ್ಗಿದೆ. ಬಿಬಿಎಂಪಿಯವರು ಈಗ ಬಂದಿದ್ದಾರೆ. ಕೋಟಿ ಕೋಟಿ ಹಣ ಇಟ್ಟಿದ್ದೀವೆ ಅಂತಾರೆ ಇದೇನಾ ಇವರ ಕೆಲಸ. ಈ ರೀತಿ ಹಿಂಸೆ ಕೊಡುವ ಬದಲು ಸಾಯಿಸಿಬಿಡಿ ಅಂತಾ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪದೇ ಪದೇ ಅವಾಂತರಕ್ಕೆ ನಿವಾಸಿಗಳು ಸುಸ್ತಾಗಿದ್ದು, ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ. ಸಣ್ಣ ಮಳೆ ಬಂದರೂ ಇಡೀ ಮನೆ ಮುಳುಗುತ್ತಿದೆ. ತೆರಿಗೆ ಕಟ್ಟುತ್ತೇವೆ ಆದರೂ ಇಂತಹ ಸ್ಥಿತಿ ಇದೆ. ನಮ್ಮ ತಂದೆ ಆಸ್ಪತ್ರೆಯಲ್ಲಿದ್ದಾರೆ, ಇಲ್ಲಿ ನೋಡಿದರೆ ಹೀಗಾಗಿದೆ. ಇದೇನಾ ಗ್ರೇಟರ್ ಬೆಂಗಳೂರು? ನಮಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇತ್ತ ಬನ್ನೇರುಘಟ್ಟ ಮುಖ್ಯರಸ್ತೆಯ ಮೈಕೋ ಲೇಔಟ್ನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಸುಮಾರು 15 ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಚರಂಡಿ ನೀರು ಹೊರಹಾಕಲು ಹರಸಾಹಸಪಟ್ಟಿದ್ದಾರೆ.
ಇದನ್ನೂ ಓದಿ: Karnataka Rains: ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರ ಜೋರು, ಬೆಂಗಳೂರಿಗೆ ಯೆಲ್ಲೋ ಅಲರ್ಟ್
ಇನ್ನು ವರ್ತೂರಿನ ಕಪೂರ್ ರೆಸಾರ್ಟ್ ಬಳಿಯೂ ಜನ ಮತ್ತು ಸವಾರರು ಪರದಾಡಿದ್ದರು. ದಿಢೀರ್ ಸುರಿದ ಮಳೆಗೆ ರಸ್ತೆಯಲ್ಲಿ ಮೂರ್ನಾಲ್ಕು ಅಡಿ ನೀರು ನಿಂತಿದ್ದು, ಹಲವು ಬೈಕ್ಗಳು ನೀರಲ್ಲಿ ಮುಳುಗಿ ಹೋಗಿದ್ದವು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.