
ಬೆಂಗಳೂರು, ಜನವರಿ: ಗಣರಾಜ್ಯೋತ್ಸವದ (Republic Day) ಹಿನ್ನೆಲೆಯಲ್ಲಿ ನಗರದಲ್ಲಿ ಈ ತಿಂಗಳು ಭಾರತೀಯ ಸಂವಿಧಾನ, ನಾಗರಿಕರ ಹಕ್ಕುಗಳು ಹಾಗೂ ಫೆಡರಲಿಸಂ ವಿಷಯಗಳ ಕುರಿತ ಪುಸ್ತಕಗಳಿಗೆ ವಿಶೇಷ ಬೇಡಿಕೆ ಕಂಡುಬಂದಿದೆ. ಕೆಲವು ಓದುಗರು ಅಧ್ಯಯನಕ್ಕಾಗಿ ಈ ಪುಸ್ತಕಗಳನ್ನು ಖರೀದಿಸುತ್ತಿದ್ದರೆ, ಇನ್ನೂ ಕೆಲವರು ಕಾರ್ಯಕ್ರಮಗಳಿಗೆ ಬಹುಮಾನ ಹಾಗೂ ಉಡುಗೊರೆಯಾಗಿ ನೀಡಲು ಸಂವಿಧಾನ ಸಂಬಂಧಿತ ಪುಸ್ತಕಗಳನ್ನು ಆಯ್ಕೆ ಮಾಡುತ್ತಿದ್ದಾರೆ.
ಸಂವಿಧಾನ ಕುರಿತ ಕನ್ನಡ ಪುಸ್ತಕಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಬರೆದಿರುವ ಸಂವಿಧಾನ ಓದು ಪುಸ್ತಕ ಜನವರಿಯಲ್ಲಿ ಶೇ15ಕ್ಕಿಂತ ಹೆಚ್ಚು ಮಾರಾಟ ಹೆಚ್ಚಾಗಿದೆ. ಶಾಂತರಾಜ್ ಡಿ.ಎಂ. ಅವರ ಭಾರತ ಸಂವಿಧಾನಕ್ಕೂ ಉತ್ತಮ ಬೇಡಿಕೆ ಇದೆ ಎಂದು ಸಪ್ನಾ ಬುಕ್ ಹೌಸ್‌ನ ಕನ್ನಡ ಪುಸ್ತಕ ಮತ್ತು ಪ್ರಕಾಶನ ವಿಭಾಗದ ಪ್ರಧಾನ ವ್ಯವಸ್ಥಾಪಕ ಆರ್. ದೊಡಗೇಗೌಡ ಹೇಳಿದ್ದಾರೆ.ಈ ಬಾರಿ ನಿಯಮಿತ ಓದುಗರ ಜೊತೆಗೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಉದ್ಯೋಗಸ್ಥರೂ ಈ ಪುಸ್ತಕಗಳನ್ನು ಖರೀದಿಸುತ್ತಿರುವುದು ಗಮನಾರ್ಹವಾಗಿದೆ.
ಬಸವನಗುಡಿಯ ಡಿ.ವಿ.ಜಿ. ರಸ್ತೆಯ ಆಕೃತಿ ಪುಸ್ತಕ ಅಂಗಡಿಯ ಮಾಲೀಕ ಗುರುಪ್ರಸಾದ್ ಡಿ.ಎನ್, ಇತ್ತೀಚೆಗೆ ಓದುಗರು ಹಕ್ಕುಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ವಿವರಿಸುವ ಪುಸ್ತಕಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಕಳೆದ ವಾರದಲ್ಲಿ ಈ ವಿಭಾಗದ ಪುಸ್ತಕಗಳಿಗೆ ಶೇ 25–30ರಷ್ಟು ಬೇಡಿಕೆ ಹೆಚ್ಚಾಗಿದೆ ಎಂದಿದ್ದಾರೆ. ಜೊತೆಗೆ ಸಣ್ಣ ಗಾತ್ರದ ಭಾರತ ಸಂವಿಧಾನ ಪ್ರತಿಗಳೂ ಉತ್ತಮವಾಗಿ ಮಾರಾಟವಾಗುತ್ತಿವೆ ಎಂದು ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಹರಿವು ಬುಕ್ಸ್ ಹಾಗೂ ಚರ್ಚ್ ಸ್ಟ್ರೀಟ್‌ನ ಬುಕ್‌ವರ್ಮ್ ಸೇರಿದಂತೆ ಹಲವು ಪುಸ್ತಕ ಅಂಗಡಿಗಳಲ್ಲಿಯೂ ಸಂವಿಧಾನ ಸಂಬಂಧಿತ ಕೃತಿಗಳ ಮಾರಾಟ ಚುರುಕಾಗಿದ್ದು, ಪ್ರಜಾಪ್ರಭುತ್ವ ಮೌಲ್ಯಗಳ ಕುರಿತು ಹೆಚ್ಚುತ್ತಿರುವ ಆಸಕ್ತಿಯೇ ಇದಕ್ಕೆ ಕಾರಣ ಎಂದು ಪುಸ್ತಕ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.