AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಋತುಚಕ್ರ ರಜೆಗೆ ಪುರುಷ ನೌಕರರ ವಿರೋಧ, ಮರು ಪರಿಶೀಲನೆಗಾಗಿ ಸರ್ಕಾರಕ್ಕೆ ಪತ್ರ: ಇದಕ್ಕಿದೆ ಹಲವು ಕಾರಣ!

Menstrual Leave: ಕರ್ನಾಟಕದಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ನೀಡಿದ ಋತುಚಕ್ರ ರಜೆಗೆ ಪುರುಷ ನೌಕರರಿಂದ ವಿರೋಧ ವ್ಯಕ್ತವಾಗಿದೆ. ಇದರಿಂದ ತಮ್ಮ ಮೇಲೆ ಹೆಚ್ಚುವರಿ ಕೆಲಸದ ಹೊರೆ ಬೀಳುತ್ತಿದೆ ಮತ್ತು ನೌಕರರ ನಡುವೆ ವೈಮನಸ್ಸು ಉಂಟಾಗುತ್ತಿದೆ ಎಂದು ಅವರು ವಾದಿಸಿದ್ದಾರೆ. ರಜೆಯ ನೀತಿಯನ್ನು ಪುನರ್ ಪರಿಶೀಲಿಸುವಂತೆ ಮತ್ತು ಸಮಗ್ರ ಅಧ್ಯಯನ ನಡೆಸುವಂತೆ ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ.

ಋತುಚಕ್ರ ರಜೆಗೆ ಪುರುಷ ನೌಕರರ ವಿರೋಧ, ಮರು ಪರಿಶೀಲನೆಗಾಗಿ ಸರ್ಕಾರಕ್ಕೆ ಪತ್ರ: ಇದಕ್ಕಿದೆ ಹಲವು ಕಾರಣ!
ಋತುಚಕ್ರ ರಜೆಗೆ ಪುರುಷ ನೌಕರರ ವಿರೋಧ
Ganapathi Sharma
|

Updated on: Jan 23, 2026 | 11:03 AM

Share

ಬೆಂಗಳೂರು, ಜನವರಿ 23: ಮಹಿಳಾ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಋತುಚಕ್ರ ರಜೆಗೆ (Menstrual Leave) ಸರ್ಕಾರಿ ಪುರುಷ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವಾಲಯದ ರಾಜ್ಯ ಶಿಷ್ಟಾಚಾರ ವಿಭಾಗದ ನೌಕರರು ಈ ಕುರಿತು ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು, ತಿಂಗಳಿಗೆ ಒಂದು ದಿನದಂತೆ ವರ್ಷಕ್ಕೆ 12 ಋತುಚಕ್ರ ರಜೆ ನೀಡುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯ ಶಿಷ್ಟಾಚಾರ ವಿಭಾಗದ ಅಧೀನ ಕಾರ್ಯದರ್ಶಿ ಬಾಣದ ರಂಗಯ್ಯ ಅವರ ನೇತೃತ್ವದಲ್ಲಿ ಸಲ್ಲಿಸಿರುವ ಈ ಪತ್ರದಲ್ಲಿ, ಸಮರ್ಪಕ ಅಧ್ಯಯನ ನಡೆಸದೇ ಋತುಚಕ್ರ ರಜೆಯನ್ನು ಜಾರಿಗೆ ತಂದಿರುವುದು ಸರಿಯಲ್ಲ ಎಂದು ಉಲ್ಲೇಖಿಸಲಾಗಿದೆ.

ಈಗಾಗಲೇ ಸರ್ಕಾರಿ ನೌಕರರಿಗೆ ಲಭ್ಯವಿರುವ ವಿವಿಧ ರಜೆಗಳನ್ನು ಮಹಿಳಾ ನೌಕರರು ಬಳಸಿಕೊಳ್ಳಬಹುದು ಎಂಬ ಸಲಹೆಯನ್ನೂ ಪತ್ರದಲ್ಲಿ ನೀಡಲಾಗಿದೆ.

‘ಪುರುಷ ನೌಕರರ ಮೇಲೆ ಹೆಚ್ಚುವರಿ ಹೊರೆ’

ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ಹೆಚ್ಚುವರಿ ರಜೆ ನೀಡುವುದರಿಂದ ಪುರುಷ ನೌಕರರ ಮೇಲೆ ಹೆಚ್ಚುವರಿ ಕೆಲಸದ ಹೊರೆ ಬೀಳುತ್ತಿದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಪುರುಷ ಮತ್ತು ಮಹಿಳಾ ನೌಕರರ ನಡುವೆ ವೈಮನಸ್ಸು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಮಹಿಳಾ ಸಿಬ್ಬಂದಿ ಹೆಚ್ಚಿರುವ ಇಲಾಖೆಗಳಲ್ಲಿ ಕರ್ತವ್ಯಗಳಿಗೆ ಸಮಸ್ಯೆ

ವಿಶೇಷವಾಗಿ, ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳಲ್ಲಿನ ದೈನಂದಿನ ಕರ್ತವ್ಯಗಳಿಗೆ ಋತುಚಕ್ರ ರಜೆ ಅಡಚಣೆಯಾಗಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ರಜೆಗಳ ಕಾರಣದಿಂದ ಕೆಲಸಗಳು ಪೆಂಡಿಂಗ್ ಆಗಿ, ಅದರ ಒತ್ತಡ ಪುರುಷ ನೌಕರರ ಮೇಲೆ ಮಾತ್ರವಲ್ಲದೆ ಮಹಿಳಾ ನೌಕರರಿಗೂ ಸಂಕಷ್ಟ ಉಂಟುಮಾಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: ಋತುಚಕ್ರ ರಜೆ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಗೆ ತಾತ್ಕಾಲಿಕ ಮಾರ್ಪಾಡು ಮಾಡಿದ ಹೈಕೋರ್ಟ್

ನಾಲ್ಕನೇ ವಾರದಲ್ಲಿ ರಜೆ ನೀಡುವ ಮುನ್ನ ನಡೆಸಿದ ರೀತಿಯಲ್ಲೇ ಋತುಚಕ್ರ ರಜೆಯ ಬಗ್ಗೆಯೂ ಸಮಗ್ರ ಅಧ್ಯಯನ ನಡೆಸಬೇಕಿದ್ದು, ಪುರುಷ ಮತ್ತು ಮಹಿಳಾ ನೌಕರರ ಕಾರ್ಯಭಾರ ಸಮತೋಲನದ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ಈ ವಿಷಯ ಇದೀಗ ಸರ್ಕಾರಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ