
ಬೆಂಗಳೂರು, (ಜುಲೈ 23): ಬೆಂಗಳೂರು ನಗರದಲ್ಲಿ ಮಾಂಸದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಬೆಂಗಳೂರು (bengaluru) ಘನತ್ಯಾಜ್ಯ ನಿರ್ವಹಣೆ ಸಂಸ್ಥೆ ಹೊಸ ನಿಯಮ ಜಾರಿಗೆ ತಂದಿದೆ. ಪ್ರತಿ ಕಿಲೋಗ್ರಾಂ ಚಿಕನ್ ಹಾಗೂ ಮಟನ್ (chicken and mutton) ತ್ಯಾಜ್ಯ ಸಂಗ್ರಹಕ್ಕೆ 5 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದ್ದು, ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಮಾರತಹಳ್ಳಿ ಹಾಗೂ ದೊಡ್ಡ ನೆಕ್ಕುಂದಿ ವಾರ್ಡ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಶುಲ್ಕ ಸಂಗ್ರಹ ಆರಂಭವಾಗಿದೆ. ಆದರೆ ಹೊಸ ನಿಯಮದಿಂದ ಸಣ್ಣ ಮತ್ತು ಮಧ್ಯಮ ಮಾಂಸ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ದೊಡ್ಡಬೆಕ್ಕುಂದಿ ಚಿಕನ್ ಅಂಗಡಿ ಮಾಲೀಕ, ಮಾಂಸವನ್ನು ಸ್ವಚ್ಛಗೊಳಿಸಲು ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಸುವುದು ಅನಿವಾರ್ಯ. ಆದರೆ ತ್ಯಾಜ್ಯದ ಜೊತೆಗೆ ನೀರಿನ ತೂಕವನ್ನೂ ಸೇರಿಸಿ ಶುಲ್ಕ ಲೆಕ್ಕ ಹಾಕಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಇದರಿಂದ ನೈಜ ತ್ಯಾಜ್ಯಕ್ಕಿಂತ ಹಲವು ಪಟ್ಟು ಹೆಚ್ಚು ತೂಕ ದಾಖಲಾಗುತ್ತಿದ್ದು, ಒಂದು ಅಂಗಡಿಗೆ ತಿಂಗಳಿಗೆ ಕನಿಷ್ಠ 10 ಸಾವಿರ ರೂಪಾಯಿ ಶುಲ್ಕ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತ್ಯಾಜ್ಯ ವಿಲೇವಾರಿಗೆ ಶುಲ್ಕ ಕಟ್ಟಲು ಯಾವುದೇ ವಿರೋಧ ಇಲ್ಲ, ಆದರೆ ನೀರಿನ ತೂಕದ ಆಧಾರದ ಮೇಲೆ ಹಣ ವಸೂಲಿ ಮಾಡುವುದು ಅನ್ಯಾಯ ಎಂದು ಅವರು ಹೇಳುತ್ತಿದ್ದಾರೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆ ಈ ಶುಲ್ಕ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು ಎಂದು ಚಿಲ್ಲರೆ ಮಾಂಸ ಮಾರಾಟಗಾರರು ಒತ್ತಾಯಿಸಿದ್ದಾರೆ. ಕೇವಲ ನೈಜ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಶುಲ್ಕ ನಿಗದಿಪಡಿಸಬೇಕು ಅಥವಾ ಈಗಿನ ದರವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದರೆ ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆಯೇ ಹೊರಿಸಬೇಕಾಗುತ್ತದೆ ಎಂದು ವ್ಯಾಪಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ವ್ಯಾಪಾರಿಗಳ ಆಕ್ಷೇಪಣೆ ಕುರಿತು ಬಿಎಸ್‌ಡಬ್ಲ್ಯುಎಂಎಲ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.
Published On - 9:58 pm, Thu, 23 July 26