ಬೆಂಗಳೂರಿನ ಬೆಳ್ಳಂದೂರು ಜಮೀನು ಡಿನೋಟಿಫೈ ಪ್ರಕರಣ; ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಜಾಮೀನು ಮಂಜೂರು
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಜಾಮೀನು ಮಂಜೂರಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಬೆಂಗಳೂರು: ನಗರದ ಬೆಳ್ಳಂದೂರು ಬಳಿ ಜಮೀನು ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ (BS Yediyurappa) ಜಾಮೀನು (Bail) ಮಂಜೂರಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 2000-01ರಲ್ಲಿ ಐಟಿ ಪಾರ್ಕ್ಗೆಂದು ಕೆಐಎಡಿಬಿ ಸ್ವಾಧೀನ ಮಾಡಿಕೊಂಡ ಬೆಳ್ಳಂದೂರು, ದೇವರಬೀಸನಹಳ್ಳಿಯಲ್ಲಿ ಭೂಮಿಯನ್ನು ಯಡಿಯೂರಪ್ಪ ಡಿಸಿಎಂ ಆಗಿದ್ದಾಗ 4.30 ಎಕರೆಯಷ್ಟು ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆಂದು 2013ರಲ್ಲಿ ವಾಸುದೇವರೆಡ್ಡಿ ಖಾಸಗಿ ದೂರು ಸಲ್ಲಿಸಿದ್ದರು. ದೂರಿನನ್ವಯ ಬಿಎಸ್ ಯಡಿಯೂರಪ್ಪಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಬಿಎಸ್ ಯಡಿಯೂರಪ್ಪ ಅವರು ನಿನ್ನೆ (ಜೂನ್ 17) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಯಡಿಯೂರಪ್ಪಗೆ ಜಾಮೀನು ನೀಡುವಂತೆ ಕೋರಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆಕ್ಷೇಪಣೆಗಳಿದ್ದರೆ ಅರ್ಜಿ ಸಲ್ಲಿಸಲು ಅಭಿಯೋಜಕರಿಗೆ ಕೋರ್ಟ್ ಸೂಚನೆ ನೀಡಿತ್ತು. ಜೊತೆಗೆ ವಿಚಾರಣೆಯನ್ನು ಕೋರ್ಟ್ ಇಂದಿಗೆ (ಜೂನ್ 18) ಮುಂದೂಡಿತ್ತು.
ಬಿ ಎಸ್ ಯಡಿಯೂರಪ್ಪ ಡಿಸಿಎಂ ಆಗಿದ್ದಾಗ 4.30 ಎಕರೆ ಡಿನೋಟಿಫೈ ಮಾಡಿಸಲಾಗಿದೆ ಎಂದು 2013 ರಲ್ಲಿ ವಾಸುದೇವರೆಡ್ಡಿ ಖಾಸಗಿ ದೂರು ಸಲ್ಲಿಸಿದ್ದರು. 2015 ರಲ್ಲಿ ಲೋಕಾಯುಕ್ತ ವಿಶೇಷ ಕೋರ್ಟ್ ತನಿಖೆಗೆ ಆದೇಶ ನೀಡಿತ್ತು. ಆರೋಪದಲ್ಲಿ ಹುರುಳಿಲ್ಲವೆಂದು ಜನವರಿ 2021 ರಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು. ಆದರೆ, ಬಿ ರಿಪೋರ್ಟ್ ತಿರಸ್ಕರಿಸಿ ತನಿಖೆ ನಡೆಸಲು ಆದೇಶಿಸಿತ್ತು. ಮತ್ತೆ ಲೋಕಾಯುಕ್ತ ಡಿವೈಎಸ್‌ಪಿ ಬಿ ರಿಪೋರ್ಟ್ ಸಲ್ಲಿಸಿದ್ದರು. ನಂತರ ಹೆಚ್ಚುವರಿ ಬಿ ರಿಪೋರ್ಟ್ ತಿರಸ್ಕರಿಸಿ ಸಮನ್ಸ್ ಜಾರಿ ಮಾಡಲಾಗಿತ್ತು.
ನನಗೆ ವಯಸ್ಸಾಯ್ತು, ಆರೋಗ್ಯವೂ ಸರಿಯಿಲ್ಲ ಎಂದು ವಿಚಾರಣೆಗೆ ಹಾಜರಾಗಲು ವಿನಾಯಿತಿ ಕೇಳಿದ್ದ ಬಿಎಸ್ ಯಡಿಯೂರಪ್ಪ: ಇನ್ನು ಮೇ 25ಕ್ಕೆ ಬಿಎಸ್ ಯಡಿಯೂರಪ್ಪಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಬಿಎಸ್ವೈ ಮನವಿ ಸಲ್ಲಿಸಿದ್ದರು. ಯಡಿಯೂರಪ್ಪಗೆ 79 ವರ್ಷ ಆಗಿದೆ. ಡಯಾಬಿಟಿಸ್ ಇದೆ. ಬೈಲಾಟರಲ್ ನ್ಯುಮೊನೈಟಿಸ್‌ನಿಂದಾಗ ವೈದ್ಯರ ಆರೈಕೆಯಲ್ಲಿದ್ದಾರೆ. ವೈದ್ಯರು ಮುಂದಿನ 10 ದಿನ ಬೆಡ್ ರೆಸ್ಟ್ ಗೆ ಸೂಚಿಸಿದ್ದಾರೆ. ಹೀಗಾಗಿ ಹಾಜರಾತಿಯಿಂದ ವಿನಾಯಿತಿ ನೀಡಲು ಬಿಎಸ್ವೈ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕೋರ್ಟ್ ಅಂದು ವಿನಾಯಿತಿ ನೀಡಿ ಜೂ.17ಕ್ಕೆ ಹಾಜರಾಗಲು ಸೂಚನೆ ನೀಡಿತ್ತು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Sat, 18 June 22