
ಬೆಂಗಳೂರು, (ಮಾರ್ಚ್ 12): ಭಾರೀ ಸಂಚಲನ ಮೂಡಿಸಿದ್ದ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ (Biklu Shiva murder case) ಜೈಲುಪಾಲಾಗಿದ್ದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ (MLA Bairathi Basavaraj) ಕೊನೆಗೂ ಜಾಮೀನು ದೊರೆತಿದೆ. ಬೆಂಗಳೂರಿನ ಕೆಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಸುಪ್ರೀಂ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ವಜಾ ಬಳಿಕ ಶಾಸಕನನ್ನು ಬಂಧಿಸಲಾಗಿತ್ತು. ಇದೀಗ ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಬಸವರಾಜ್‌ಗೆ ರಿಲೀಫ್ ಸಿಕ್ಕಿದೆ.
ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಬೈರತಿ ಬಸವರಾಜ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರೂ ಸಹ ಜಾಮೀನು ಸಿಕ್ಕಿರಲಿಲ್ಲ, ಇದರಿಂದ ವಿಧಿಯಿಲ್ಲದೇ ಅಹಮದಾಬಾದ್ ನಲ್ಲಿ ತಲೆಮರೆಸಿಕೊಂಡಿದ್ದ ಬೈರತಿ ಬಸವರಾಜ್ ಪೊಲೀಸರ ಮುಂದೆ ಶರಣಾಗಲು ಆಗಮಿಸುತ್ತಿದ್ದರು. ಆ ವೇಳೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಕೊನೆಗೂ ಜನಪ್ರತಿನಿಧಿಗಳ ಕೋರ್ಟ್, ಕೆಲ ಷರತ್ತಿನೊಂದಿಗೆ ಜಾಮೀನು ನೀಡಿದೆ. 2 ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ, ಸಾಕ್ಷ್ಯಾಧಾರ ನಾಶಪಡಿಸುವಂತಿಲ್ಲ, ಸಾಕ್ಷಿಗಳನ್ನು ಬೆದರಿಸುವಂತಿಲ್ಲ, ಕೋರ್ಟ್ ಅನುಮತಿಯಿಲ್ಲದೇ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ ಎಂದು ಷರತ್ತು ಹಾಕಿ ಜಾಮೀನು ಮಂಜೂರು ಮಾಡಿದೆ.
ಬಿಕ್ಲು ಶಿವ ಪ್ರಕರಣದಲ್ಲಿ ಬಂಧನ ಭೀತಿ ಹಿನ್ನೆಲೆಯಲ್ಲಿ ಶಾಸಕ ಬೈರತಿ ಬಸವರಾಜ್ ಪರಾರಿಯಾಗಿದ್ದರು. ಬಳಿಕ ಹೈಕೋರ್ಟ್ ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿತ್ತು. ನಂತದ ಸುಪ್ರೀಂಕೋರ್ಟ್ ನಲ್ಲೂ ಸಹ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಇದರ ಬೆನ್ನಲ್ಲೇ ಬೈರತಿ ಬಸವರಾಜ್ ಫೆಬ್ರವರಿ 13ರಂದು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ವಿಮಾನ ನಿಲ್ದಾಣದಲ್ಲೇ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.
ಪ್ರಕರಣ ಹಿನ್ನೆಲೆ
ಹಲಸೂರು ಕೆರೆ ಸಮೀಪ 2025ರ ಜುಲೈ 15ರಂದು ರೌಡಿ ಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಪ್ರಕಾಶ್‌ನ ಕೊಲೆ ಆಗಿತ್ತು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎನ್ನಲಾಗಿತ್ತು. ಈ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜು ವಿರುದ್ಧ ಆರೋಪ ಕೇಳಿಬಂದಿತ್ತು. ಹೀಗಾಗಿ ಕೊಲೆ ಆರೋಪದ ಮೇರೆಗೆ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಬೈರತಿ ಬಸವರಾಜ್ ವಿರುದ್ಧ ಭಾರತೀನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಬೈರತಿ ಬಸವರಾಜ್ 5ನೇ ಆರೋಪಿಯಾಗಿದ್ದಾರೆ. ಇನ್ನು ಕೊಲೆಯಾದ ಶಿವಪ್ರಕಾಶ್‌ನ ತಾಯಿ ವಿಜಯಲಕ್ಷ್ಮೀ ನೀಡಿದ ದೂರಿನ ಮೇರೆಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Published On - 7:01 pm, Thu, 12 March 26