
ಬೆಂಗಳೂರು, ಜುಲೈ 27: ರಾಷ್ಟ್ರೀಯ ಹೆದ್ದಾರಿಯ ಪೀಣ್ಯ ಫ್ಲೈಓವರ್ (Peenya Flyover) ಮೇಲೆ ಡಾಂಬರೀಕರಣ ಕಾಮಗಾರಿ ಹಿನ್ನೆಲೆ ಇಂದಿನಿಂದ ಆಗಸ್ಟ್ 5ರವರೆಗೆ ಒಟ್ಟು 10 ದಿನಗಳ ಕಾಲ ಬೆಂಗಳೂರು (bangaluru) ನಗರ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ವಿಭಾಗ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತಾಗಿ ಬೆಂಗಳೂರು ಸಂಚಾರ ವಿಭಾಗ ಪೊಲೀಸರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ‘‘ಪೀಣ್ಯ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-4ರ ಪೀಣ್ಯ ಎಲಿವೇಟೆಡ್ ಫ್ಲೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಡಾಂಬರೀಕರಣ ಕಾಮಗಾರಿ
ಕೈಗೊಂಡಿದೆ.’’
‘‘ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಇಂದಿನಿಂದ ಆಗಸ್ಟ್ 05 ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗೆ 5 ಗಂಟೆಯವರೆಗೆ ಹಾಗೂ ಈ ಅವಧಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ಬೆಂಗಳೂರು ನಗರ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ’’.
ರಾಷ್ಟ್ರೀಯ ಹೆದ್ಮಾರಿ-4ರ ಪೀಣ್ಯ ಎಲಿವೇಟೆಡ್ ಫ್ಲೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಮೇಲೆ ಕೆನ್ನಮೆಟಲ್ ಮೀಡಿಯಾ (upper ramp)ದಿಂದ ಎಸ್ಆರ್ಎಸ್ (down ramp) ವರೆಗೆ ಫ್ಲೈಓವರ್ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ.
ನೆಲಮಂಗಲದಿಂದ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಕೆನ್ನಮೆಟಲ್ ಫ್ಯಾಕ್ಟರಿ ಹತ್ತಿರ ಫ್ಲೈಓವರ್ ಕೆಳಭಾಗದ ಎನ್.ಹೆಚ್.-4 ಮತ್ತು ಸರ್ವಿಸ್ ರಸ್ತೆ ಮೂಲಕ 8ನೇ ಮೈಲಿ ತಲುಪಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್.ಆರ್.ಎಸ್ ಜಂಕ್ಷನ್ ಹಾಗೂ ಗೊರಗುಂಟೆಪಾಳ್ಯ ಮೂಲಕ ಸಂಚರಿಸಬಹುದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.