ಬೆಂಗಳೂರು: ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ದಂಡಕ್ಕೆ (Bengaluru Traffic Fines)) 50% ಡಿಸ್ಕೌಂಟ್ ಘೋಷಣೆ ಮಾಡಿದ್ದೇ ತಡ ವಾಹನ ಸವಾರರು ಫೈನ್ ಪಾವತಿಸುವುದಕ್ಕೆ ಸವಾರರು ಮುಗಿಬಿದ್ದಿದ್ರು. ಟ್ರಾಫಿಕ್ ಪೊಲೀಸರು(Bengaluru Traffic Police) ಕಂಡ್ರೆ, ಭಯಗೊಂಡು ಎಸ್ಕೇಪ್ ಆಗುತ್ತಿದ್ದ ಸವಾರರೆಲ್ಲಾ ಕಳೆದ 10 ದಿನದಿಂದ ಪೊಲೀಸರನ್ನೇ ಹುಡುಕಿಕೊಂಡು ಹೋಗಿ ಸರದಿ ಸಾಲಿನಲ್ಲಿ ನಿಂತು ದಂಡ ಪಾವತಿಸಿದ್ದಾರೆ. ಬಹಳ ದಿನಗಳಿಂದ ಹಲವು ಕೇಸ್ನೊಂದಿಗೆ ಸಾವಿರಾರು ರೂಪಾಯಿ ಬಾಕಿ ಉಳಿಸಿಕೊಂಡಿದ್ದವರು 50 ಪರ್ಸೆಂಟ್ ಆಫರ್ ಅನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಇನ್ನು ಪೊಲೀಸ್ ಇಲಾಖೆ ಸಹ ರಿಯಾಯಿತಿ ನೀಡಿ ಸರ್ಕಾರದ ಬೊಕ್ಕಸ ತುಂಬಿಸಿದೆ. ಹಾಗಾದ್ರೆ, ಫಿಫ್ಟಿ ಪರ್ಸೆಂಟ್ ಆಫರ್ನಿಂದ 10 ದಿನಗಳಲ್ಲಿ ದಂಡದ ಹಣ ಹರಿದುಬಂದಿದ್ದು ಬರೋಬ್ಬರಿ 120 ಕೋಟಿ 76 ಲಕ್ಷ 40 ಸಾವಿರದ 161 ರೂ.
ಹೌದು…ಹೆಲ್ಮೆಟ್ ಇಲ್ಲದೆ ಪ್ರಯಾಣ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಉಲ್ಲಂಘನೆ, ಸೀಟ್‌ಬೆಲ್ಟ್ ಅಂತಾ ಸಾರಿಗೆ ನಿಯಮಗಳನ್ನ ಗಾಳಿಗೆ ತೂರಿರೋ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ರು . ಈ ದಂಡದ ಮೊತ್ತವೇ ನೂರಾರು ಕೋಟಿಯಾಗಿತ್ತು. ಆದ್ರೆ ಸವಾರರು ಮಾತ್ರ ದಂಡ ಪಾವತಿಸದೇ ತಪ್ಪಿಸಿಕೊಂಡು ಓಡಾಡ್ತಿದ್ರು. ಆದ್ರೆ ಕೋರ್ಟ್ ಮೂಲಕ ಆಫರ್‌ಗೆ ಅನುಮತಿ ಪಡೆದ ಟ್ರಾಫಿಕ್ ಪೊಲೀಸರು ಭರ್ಜರಿ ವಸೂಲಿ ಮಾಡಿದ್ದಾರೆ. ಹೌದು.. ದಂಡ ಶುಲ್ಕದಲ್ಲಿ ಶೇಕಡಾ 50 ರ ರಿಯಾಯ್ತಿಯನ್ನ ಟ್ರಾಫಿಕ್ ಪೊಲೀಸರು ಘೋಷಣೆ ಮಾಡಿದ್ರು. ಫೆಬ್ರವರಿ 2 ರಂದು ಘೋಷಣೆ ಮಾಡ್ತಿದ್ದಂತೆ ದಂಡ ಪಾವತಿಸುವುದಕ್ಕೆ ಸವಾರರು ಮುಗಿ ಬಿದ್ದಿದ್ರು. ಅದರಲ್ಲೂ ಕಡೇ ದಿನವಾದ ಇವತ್ತು ಕ್ಯೂನಲ್ಲಿ ನಿಂತು ಸಾವಿರಾರು ಜನ ಫೈನ್ ಕಟ್ಟಿದ್ದಾರೆ.
ಇನ್ನು ಆಫರ್ ಘೋಷಣೆ ಮಾಡಿದ ಮೊದಲ ದಿನವೇ ಕೋಟಿ ಕಲೆಕ್ಷನ್ ಆಗಿತ್ತು. ಕೊನೆ ದಿನವಾದ ಇವತ್ತು(ಫೆಬ್ರವರಿ 11) 9,45,887 ಪ್ರಕರಣಗಳ ಮೂಲಕ ಬರೋಬ್ಬರಿ 31 ಕೋಟಿ 26 ಲಕ್ಷದ 76 ಸಾವಿರದ 500 ರೂಪಾಯಿ ದಂಡದ ಹಣ ಖಾಕಿ ಖಜಾನೆ ಸೇರಿದೆ. ಆ ಮೂಲಕ ಹತ್ತೇ ದಿನದಲ್ಲಿ ಬರೋಬ್ಬರಿ 120 ಕೋಟಿ 76 ಲಕ್ಷ 40 ಸಾವಿರದ 161 ರೂ. ದಂಡದ ರೂಪದಲ್ಲಿ ಹಣ ಹರಿದು ಬಂದಿದೆ. ಇವತ್ತು ರಾತ್ರಿ 12 ಗಂಟೆವರೆಗೂ ಆನ್‌ಲೈನ್‌ನಲ್ಲಿ ಪಾವತಿಸಲು ಅನುಮತಿ ಇದೆ. ಹೀಗಾಗಿ ಒಟ್ಟು ಎಷ್ಟು ಸಂಗ್ರಹ ಆಯ್ತು ಎನ್ನುವುದು ನಾಳೆ(ಫೆಬ್ರವರಿ 12) ಪಕ್ಕಾ ಲೆಕ್ಕ ಸಿಗಲಿದೆ. ಇನ್ನು ಟ್ರಾಫಿಕ್ ನಿಯಮ ಉಲ್ಲಂಘನೆಯಲ್ಲಿ ರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ಕೇಸ್‌ಗಳಿವೆ. ಈ ಆಫರ್‌ನಿಂದಾಗಿ ಒಟ್ಟು 41 ಲಕ್ಷ 20 ಸಾವಿರದ 626 ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಲಾಗಿದೆ.
ಯಾವ ಏರಿಯಾ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ನೋಡಿದ್ರೂ ಕ್ಯೂ. ನಮ್ದ್ ಎಷ್ಟಿದೆ ನೋಡಿ ಸರ್ ಎಂದು ಕೆಲವರು ಆತಂಕದಿಂದಲೇ ಕೇಳುತ್ತಿದ್ರೆ, ಇನ್ನು ಕೆಲವರು ಕ್ಲೀಯರ್ ಆಯ್ತಾ ಸಾರ್ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಇದರ ನಡುವೆ ಕೆಲವರು ಮಾರುದ್ದದ ಫೈನ್ ಲೀಸ್ಟ್ ಹಿಡಿದು ಜೇಬಲ್ಲಿನ ಹಣ ಖಾಲಿ ಮಾಡಿಕೊಂಡಿದ್ದಾರೆ. ಅಂತಿಮವಾಗಿ ಟ್ರಾಫಿಕ್ ಫೈನ್ ಆಫರ್ ಪೊಲೀಸರ ಬಾಕ್ಸ್ ಆಫೀಸ್ ಧೂಳೆಬ್ಬಿಸಿದಂತೂ ಸತ್ಯ.
ಹೈಕೋರ್ಟ್ ನ್ಯಾಯಾಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ನ್ಯಾ.ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬಾಕಿ ಇರುವ ಟ್ರಾಫಿಕ್ ದಂಡ ಪಾವತಿಗೆ ವಿನಾಯಿತಿ ನೀಡುವಂತೆ ಚರ್ಚೆ ನಡೆಸಿದ್ದರು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಅನುಮತಿ ನೀಡಿದ್ದರು. ಇದರ ಮೇರೆಗೆ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯಾದ್ಯಂತ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಬಗ್ಗೆ ಕಾನೂನು ಇಲಾಖೆ ಅಧಿಕಾರಿಗಳ ಒಪ್ಪಿಗೆ ಪಡೆದ ಸಾರಿಗೆ ಇಲಾಖೆ, ಶೇ.50 ವಿನಾಯಿತಿ ನೀಡಿತ್ತು.
ಒಟ್ಟಿನಲ್ಲಿ ಫೈನ್ ಕಟ್ಟಬೇಕಾಗುತ್ತೆ ಎಂದು ತಪ್ಪಿಸಿಕೊಂಡು ಓಡಾಡುತ್ತಿದ್ದ ವಾಹನ ಸವಾರರು, ಕಳೆದ 10 ದಿನಗಳಿಂದ ಮಾತ್ರ ಪೊಲೀಸರನ್ನ ಹುಡುಕಿಕೊಂಡು ಹೋಗಿ ದಂಡ ಪಾವತಿಸಿದ್ದಾರೆ. ಈ ಆಫರ್ ಅವಧಿ ಇವತ್ತಿಗೆ ಅಂತ್ಯವಾಗಿದೆ. ಆದ್ರೆ, ಇದಕ್ಕೆ ಬಂದ ಭರ್ಜರಿ ರೆಸ್ಪಾನ್ಸ್ನಿಂದ ಇದನ್ನ ವಿಸ್ತಾರಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.
Published On - 11:38 pm, Sat, 11 February 23