Turkey Earthquake: ಟರ್ಕಿ ಭೂಕಂಪ ವೇಳೆ ನಾಪತ್ತೆಯಾಗಿದ್ದ ಬೆಂಗಳೂರಿನ ಟೆಕ್ಕಿ ಶವ ಹೋಟೆಲ್‌ನ ಅವಶೇಷಗಳಲ್ಲಿ ಪತ್ತೆ
ಟರ್ಕಿಯ ಭೂಕಂಪನದ ನಂತರ ಕಾಣೆಯಾಗಿದ್ದ ಬೆಂಗಳೂರಿನ ಟೆಕ್ಕಿ ವಿಜಯ್ ಕುಮಾರ್ ಹೋಟೇಲ್ವೊಂದರ ಅವಶೇಷಗಳ ಅಡಿ ಶವವಾಗಿ ಪತ್ತೆಯಾಗಿದೆ.
ಬೆಂಗಳೂರು: ಟರ್ಕಿಯಲ್ಲಿ ಉಂಟಾದ ಅತಿದೊಡ್ಡ ಭೂಕಂಪ (Turkey Earthquake) ದೇಶವನ್ನು ಸ್ಮಶಾನವನ್ನಾಗಿಸಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಿದ್ದು, ಸದ್ಯ ಭೂಕಂಪನದಿಂದ 26 ಸಾವಿರ ಜನ ಸಾವನ್ನಪ್ಪಿದ್ದಾರೆ. ಟರ್ಕಿಯಲ್ಲಿ 10 ಜನ ಭಾರತೀಯರು ಸಿಲುಕಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಆದರೆ ಓರ್ವ ಬೆಂಗಳೂರಿನ ವ್ಯಕ್ತಿ ಕಾಣೆಯಾಗಿದ್ದಾನೆ ಎಂದು ವರದಿಯಾಗಿತ್ತು. ಇದೀಗ ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ಬೆಂಗಳೂರಿನ ನಿವಾಸಿ, ಟೆಕ್ಕಿ ವಿಜಯ್ ಕುಮಾರ್ ಮೃತ ದುರ್ದೈವಿ.
ಟೆಕ್ಕಿ ವಿಜಯ್ ಕುಮಾರ್ ಟರ್ಕಿಯ ಮಾಲತ್ಯ ನಗರದ ಹೋಟೆಲ್‌ನ 24 ಅಂತಸ್ತಿನ ಹೋಟೆಲ್‌ನ 2ನೇ ಮಹಡಿಯಲ್ಲಿ ತಂಗಿದ್ದರು. ಭೂಕಂಪನದ ನಂತರ ಹೋಟೆಲ್ ಸಂಪೂರ್ಣ ಕುಸಿದಿತ್ತು. ವಿಜಯ್ ಕುಮಾರ್ ಫೆಬ್ರವರಿ 6ರಿಂದ ನಾಪತ್ತೆಯಾಗಿದ್ದರು. ಇಂದು (ಫೆ.11) ಅವಶೇಷಗಳ ತೆರವು ಕಾರ್ಯಾಚರಣೆ ವೇಳೆ ಬೆಳಿಗ್ಗೆ ಟೆಕ್ಕಿಯ ಪಾಸ್‌ಪೋರ್ಟ್ ಹಾಗೂ ಇತರೆ ವಸ್ತುಗಳು ಪತ್ತೆಯಾಗಿದ್ದವು. ಈಗ ವಿಜಯ ಕುಮಾರ್ ಶವ ಪತ್ತೆಯಾಗಿದೆ ಎಂದು ಟರ್ಕಿಯ ಅಂಕಾರಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ.
We inform with sorrow that the mortal remains of Shri Vijay Kumar, an Indian national missing in Turkiye since February 6 earthquake, have been found and identified among the debris of a hotel in Malatya, where he was on a business trip.@PMOIndia @DrSJaishankar @MEAIndia 1/2
— India in Türkiye (@IndianEmbassyTR) February 11, 2023
ಯಾರು ಈ ಟೆಕ್ಕಿ ವಿಜಯ ಕುಮಾರ್?
ಟೆಕ್ಕಿ ವಿಜಯ ಕುಮಾರ್ ಉತ್ತರಾಖಂಡ್ ಮೂಲದವರಾಗಿದ್ದಾರೆ. ಇವರು ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಬೆಂಗಳೂರು ಮೂಲದ ಆಕ್ಸಿಪ್ಲಾಂಟ್ಸ್ ಇಂಡಿಯಾದಲ್ಲಿ ಗ್ಯಾಸ್ ಪೈಪ್‌ಲೈನ್ ಕಂಪನಿಯಲ್ಲಿ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದರು. ಸದ್ಯ ವಿಜಯ ಕುಮಾರ್ ವರ್ಕ್ ಫ್ರಾಂ ಹೋಮ್ನಲ್ಲಿದ್ದರು. ಜನವರಿ ಮೊದಲ ವಾರ ವಿಜಯಕುಮಾರ್ ಬೆಂಗಳೂರಿಗೆ ಬಂದಿದ್ದರು. ನಂತರ ಕಾರ್ಯ ನಿಮಿತ್ತ ಬೆಂಗಳೂರಿಂದ ಟರ್ಕಿಗೆ ಪ್ರಯಾಣ ಬೆಳಸಿದರು. ಮೊದಲು ದೆಹಲಿ ತಲುಪಿಸಿದರು, ಬಳಿಕ ಜನವರಿ 23 ರಂದು ದೆಹಲಿಯಿಂದ ಇಸ್ತಾನ್‌ಬುಲ್ ಮೂಲಕ ಟರ್ಕಿಯ ಪೂರ್ವ ಅನಟೋಲಿಯಾ ಮಲತ್ಯಾಗೆ ತಲುಪಿದ್ದರು.
ಪೂರ್ವ ಅನಟೋಲಿಯಾ ಪ್ರದೇಶದ ಮಲತ್ಯಾ ನಗರದ 24 ಅಂತಸ್ತಿನ ಹೋಟೆಲ್‌ನ 2ನೇ ಮಹಡಿಯಲ್ಲಿ ವಾಸವಿದ್ದರು. ಭೂಕಂಪನದ ಬಳಿಕ ಫೆ.6 ರಂದು ಕಾಣೆಯಾಗಿದ್ದರು. ವಿಜಯ ಕುಮಾರ್ಗಾಗಿ ಶೋಧಕಾರ್ಯ ನಡೆಯುತ್ತಿತ್ತು.
ವಿಜಯಕುಮಾರ್ ಕೈಯಲ್ಲಿದ್ದ ಟ್ಯಾಟೊ ಮೂಲಕ ಮೃತದೇಹ ಪತ್ತೆ
ಉತ್ತರಾಖಂಡ್‌ನಲ್ಲಿರುವ ಕುಟುಂಬ ಸದಸ್ಯರು ವಿಜಯ ಕುಮಾರ್ನನ್ನು ಗುರುತಿಸಲು ಟೆಕ್ಕಿ ಎಡಗೈಯಲ್ಲಿದ್ದ ಟ್ಯಾಟೋ ಫೋಟೋ ಕಳುಹಿಸಿದ್ದರು. ಈ ಗುರುತಿನ ಮೂಲಕ ವಿಜಯ ಕುಮಾರ್ ಪತ್ತೆಯಾಗಿದ್ದಾರೆ. ದುರಾದೃಷ್ಟವಶಾತ್ ಅವರು ಮೃತಪಟ್ಟಿದ್ದಾರೆ. ವಿಜಯ್ ಕುಮಾರ್ಗೆ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳಿದ್ದಾರೆ.
ಟರ್ಕಿ ಮತ್ತು ಸಿರಿಯಾ ಭೂಕಂಪನ
ಮೂರು ದಿನಗಳ ಹಿಂದೆ, ಸೋಮವಾರ ಟರ್ಕಿ ಮತ್ತು ಸಿರಿಯಾ ಗಡಿಭಾಗ ಸಮೀಪದ ಪ್ರದೇಶಗಳಲ್ಲಿ 24 ಗಂಟೆ ಅಂತರದಲ್ಲಿ ನಾಲ್ಕು ಭೂಕಂಪಗಳು ಸಂಭವಿಸಿ ಭಾರೀ ಅನಾಹುತ ಸೃಷ್ಟಿಸಿವೆ. ಈಗಾಗಲೇ ಸಾವಿನ ಸಂಖ್ಯೆ 26 ಸಾವಿರ ಗಡಿದಾಟಿದೆ. ಟರ್ಕಿಯಲ್ಲಿ 10 ಸಾವಿರಕ್ಕೂ ಹೆಚ್ಚು ಕಟ್ಟಡಗಳು ಧರೆಗುರುಳಿವೆ. ಕಟ್ಟಡಗಳ ಅವಶೇಷಗಳನ್ನು ತೆಗೆದಷ್ಟೂ ಶವಗಳು ಪತ್ತೆಯಾಗುತ್ತಿವೆ. ಎರಡು ದಿನಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಈ ಟರ್ಕಿ ಭೂಕಂಪದಲ್ಲಿ ಸಾವಿನ ಸಂಖ್ಯೆ 20 ಸಾವಿರ ಗಡಿ ದಾಟಬಹುದು ಎಂದು ಅಂದಾಜು ಮಾಡಿತ್ತು. ಅದೀಗ ನಿಜವಾಗಿದೆ. ಇನ್ನೂ ಸಾವಿರಾರು ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಆಗಬೇಕಿದೆ. ಟರ್ಕಿ ಮತ್ತು ಸಿರಿಯಾದಲ್ಲಿ ಭಾರೀ ಚಳಿ, ಮಳೆಯ ವಾತಾವರಣ ಇದ್ದು, ರಕ್ಷಣಾ ಕಾರ್ಯಾಚರಣೆಯನ್ನು ಕುಂಠಿತಗೊಳಿಸಿದೆ. ಈ ಸವಾಲುಗಳ ಮಧ್ಯೆಯೂ ರಕ್ಷಣಾ ಕಾರ್ಯಕರ್ತರು ದೃತಿಗೆಡದೆ ಕೆಲಸ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:01 pm, Sat, 11 February 23