Bengaluru Traffic: ಸಂಚಾರಿ ನಿಯಮ ಉಲ್ಲಂಘಿಸಿದವರ ವಿರುದ್ಧ ದೂರು ನೀಡಲು ಬಂದಿದೆ ಹೊಸ ಆ್ಯಪ್; ಇಲ್ಲಿದೆ ಅದರ ವಿಶೇಷತೆ
ಬೆಂಗಳೂರು ಸಾಕಷ್ಟು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿವೆ. ಈ ಬಗ್ಗೆ ಸಂಚಾರಿ ಪೊಲೀಸರು ಶಿಸ್ತು ಕ್ರಮ ಕೈಗೊಂಡಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ದೂರುಗಳನ್ನು ಹೆಚ್ಚಾಗಿ ಟ್ವಿಟರ್ ಮೂಲಕ ಬೆಂಗಳೂರು ಸಂಚಾರ ಪೊಲೀಸ್ ಅಕೌಂಟ್ಗೆ ಟ್ಯಾಗ್ ಮಾಡುವ ಮೂಲಕ ಜನರು ನೀಡುತ್ತಾರೆ. ಆದರೆ ಇದನ್ನು ತಪ್ಪಿಸಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸಂಚಾರಿ ಪೊಲೀಸರು ಹೊಸ ಆ್ಯಪ್ ಒಂದನ್ನು ಪರಿಚಯಿಸಿದ್ದಾರೆ.
ಬೆಂಗಳೂರು: ನಗರದಲ್ಲಿ ಸಾಕಷ್ಟು ಸಂಚಾರಿ ನಿಯಮ ಉಲ್ಲಂಘನೆ (Traffic Rules Break) ಪ್ರಕರಣಗಳು ದಾಖಲಾಗುತ್ತಿವೆ. ಈ ಬಗ್ಗೆ ಸಂಚಾರಿ ಪೊಲೀಸರು (Traffic Police) ಶಿಸ್ತು ಕ್ರಮ ಕೈಗೊಂಡಿದ್ದಾರೆ. ಇನ್ನು ಸಂಚಾರಿ ನಿಯಮ ಉಲ್ಲಂಘನೆ ದೂರುಗಳನ್ನು ಹೆಚ್ಚಾಗಿ ಟ್ವಿಟರ್ (Twitter) ಮೂಲಕ ಬೆಂಗಳೂರು ಸಂಚಾರ ಪೊಲೀಸ್ (Bengaluru Traffic Police) ಅಕೌಂಟ್ಗೆ ಟ್ಯಾಗ್ ಮಾಡುವ ಮೂಲಕ ಜನರು ನೀಡುತ್ತಾರೆ. ಆದರೆ ಇದನ್ನು ತಪ್ಪಿಸಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸಂಚಾರಿ ಪೊಲೀಸರು “Public Eye” ಎಂಬ ಹೊಸ ಆ್ಯಪ್ ಮತ್ತು ವೆಬ್ಸೈಟ್ ಪರಿಚಯಿಸಿದ್ದು, ಜನರು ಇದರ ಮೂಲಕ ದೂರು ನೀಡಬಹುದಾಗಿದೆ.
ಸಂಚಾರಿ ನಿಯಮ ಉಲ್ಲಂಘನೆಯ ಬಗ್ಗೆ ದೂರು ನೀಡಲು ಜನರು ಹೆಚ್ಚಾಗಿ ಟ್ವಿಟರ್ ಅನ್ನು ಅವಲಂಭಿಸಿದ್ದು, ಈ ಮೂಲಕವೇ ಪೊಲೀಸರಿಗೆ ದೂರು ನೀಡುತ್ತಿರುವ ಬಗ್ಗೆ ಗುರುವಾರ (ಜೂ.15) ನ್ಯೂಸ್9 ವರದಿ ಮಾಡಿತ್ತು. ಹೀಗೆ ದೂರು ನೀಡಿದ ಒಂದು ಟ್ವೀಟ್ಗೆ ಪ್ರತಿಕ್ರಿಯೆಸಿದ ಬೆಂಗಳೂರು ಸಂಚಾರ ಪೊಲೀಸ್, “ಸಂಚಾರಿ ನಿಯಮ ಉಲ್ಲಂಘಿಸಿದವರ ಬಗ್ಗೆ ನಮಗೆ ಮಾಹಿತಿ ನೀಡಿದ್ದಕ್ಕಾಗಿ ನಿಮಗೆ ಅಭಿನಂದಿಸುತ್ತೇವೆ. ಈ ಬಗ್ಗೆ ನಾವು ಸೂಕ್ತ ಕ್ರಮಕೈಗೊಳ್ಳುತ್ತೇವೆ. ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ಪಡೆಯಲು ಮತ್ತು ಉಲ್ಲಂಘನೆ ಮಾಡಿದವರ ವಿರುದ್ಧ ದೂರು ನೀಡಲು Publice eye ಫ್ಲಾಟ್ಫಾರಂ ಬಳಸಿ. ಇದು ಜನಸ್ನೇಹಿಯಾಗಿದ್ದು, ಉಪಯೋಗಿಸಲು ಸುಲಭದಾಯಕವಾಗಿದೆ ಎಂದು ಹೇಳಿದ್ದಾರೆ.
ಏನಿದು Public Eye?
IchaneMycity ಮತ್ತು ಬೆಂಗಳೂರು ಸಂಚಾರಿ ಪೊಲೀಸ್ ಜಂಟಿಯಾಗಿ ಈ ಆಪ್ ಅನ್ನು ಅಭಿವೃದ್ಧಿಪಡಿಸಿದೆ. ಸಾರ್ವಜನಿಕರು ಈ ಆ್ಯಪ್ ಮೂಲಕ ಸಂಚಾರಿ ನಿಯಮ ಉಲ್ಲಂಘಿಸುವರ ವಿರುದ್ಧ ದೂರು ನೀಡಬಹುದಾಗಿದೆ. ಈ ಆ್ಯಪ್ ಮೂಲಕ ನಗರದ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಸಂಚಾರಿ ನಿಯಮ ಉಲ್ಲಂಘಿಸಿದವರ ವಿರುದ್ಧ ದೂರನ್ನು ದಾಖಲಿಸುವುದು. ಅಲ್ಲದೇ ಬೆಂಗಳೂರು ರಸ್ತೆಗಳಲ್ಲಿ ಆರಮದಾಯಕ ಮತ್ತು ಸುರಕ್ಷಿತವಾಗಿ ಸಂಚರಿಸಲು ಸವಾರರಿಗೆ ತಿಳಿಸುವುದೇ ನಮ್ಮ ಉದ್ದೇಶವಾಗಿದೆ ಎಂದು IchangeMycity ವೈಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಈ ಬಡಾವಣೆಗಳಲ್ಲಿ ಜೂ.17 ರಂದು ಪವರ್ ಕಟ್
ಆ್ಯಪ್ ಹೇಗೆ ಉಪಯೋಗಿಸುವುದು?
ಸಾರ್ವಜನಿಕರು ಆ್ಯಪ್ ಅನ್ನು ಮೊಬೈಲ್ನಲ್ಲಿ ಸುಲಭವಾಗಿ ಉಪಯೋಗಿಸಬಹುದಾಗಿದೆ. ಆಂಡ್ರೈಡ್ ಮೊಬೈಲ್ ಉಪಯೋಗಿಸುವವರು ಪ್ಲೇಸ್ಟೋರ್ ಮೂಲಕ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಥವಾ ಆ್ಯಪಲ್ ಫೋನ್ ಬಳಕೆದಾರರು ಆ್ಯಪ್ ಸ್ಟೋರ್ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇಲ್ಲವೇ ನೇರವಾಗಿ Public Eye ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.
ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಸೈನ್ ಇನ್ ಮಾಡಿದ ನಂತರ, ಸಂಚಾರಿ ನಿಯಮ ಉಲ್ಲಂಘನೆಯ ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಬಹುದು. ವಾಹನದ ಸಂಖ್ಯೆಯನ್ನು ನಮೂದಿಸಿ, ಯಾವ ರೀತಿಯಾದ ನಿಯಮ ಉಲ್ಲಂಘನೆ ಎಂದು ಆಯ್ಕೆಮಾಡಿ ನಂತರ ಸಲ್ಲಿಸಬಹುದು.
ಛಾಯಾಚಿತ್ರವನ್ನು ಸ್ಪಷ್ಟತೆ ಮತ್ತು ಗೋಚರತೆಗಾಗಿ ಪರಿಶೀಲಿಸಲಾಗುತ್ತದೆ. ಮತ್ತು ನಂತರ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ರವಾನಿಸಲಾಗುತ್ತದೆ. ಅವರು 48 ಗಂಟೆಗಳ ಒಳಗೆ ದೂರನ್ನು ದಾಖಲಿಸಿಕೊಂಡು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತಾರೆ.
ಬೆಂಗಳೂರು ಸಂಚಾರ ಪೊಲೀಸರು ತೆಗೆದುಕೊಂಡ ಕ್ರಮವನ್ನು ಕಾಮೆಂಟ್‌ಗಳಾಗಿ ನವೀಕರಿಸಲಾಗುತ್ತದೆ. ಕಾಮೆಂಟ್‌ಗಳನ್ನು ಪರಿಶೀಲಿಸುವ ಮೂಲಕ ನಿಮ್ಮ ದೂರಿನ ನವೀಕರಣಗಳನ್ನು ನೀವು ವೀಕ್ಷಿಸಬಹುದು ಎಂದು IchangeMyCity ಹೇಳಿದೆ.
ಆದಾಗ್ಯೂ, ವಾಹನದ ನೋಂದಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಸೆರೆಹಿಡಿಯದಿದ್ದಲ್ಲಿ, ಉಲ್ಲಂಘನೆಯನ್ನು ಸ್ಪಷ್ಟವಾಗಿ ಸೆರೆಹಿಡಿಯದಿದ್ದಲ್ಲಿ, ಚಿತ್ರವು ಅಪ್ರಸ್ತುತವಾಗಿದ್ದರೇ, ನೋಂದಣಿ ಸಂಖ್ಯೆಯು ಬೇರೆ ರಾಜ್ಯದ್ದಾಗಿದ್ದರೆ, ಯಾವುದೇ ಚಿತ್ರಗಳನ್ನು ಸೆರೆಹಿಡಿಯದಿದ್ದಲ್ಲಿ, ಅದು ಸಂಚಾರಿ ನಿಯಮ ಉಲ್ಲಂಘನೆಯಾಘಿದ್ದರೂ ದೂರುಗಳನ್ನು ತಿರಸ್ಕರಿಸಬಹುದು.
ಗೌಪ್ಯತೆಯನ್ನು ಕಾಪಾಡುತ್ತದೆಯೇ?
IchangeMyCity ಪ್ರಕಾರ, ನಿಯಮ ಉಲ್ಲಂಘಿಸಿದವರ ಕುರಿತು ದೂರು ನೀಡಿದವರನ್ನು ಪೊಲೀಸರು ಸಂಪರ್ಕಿಸುವುದಿಲ್ಲ ಮತ್ತು ಅವರ ಫೋನ್ ಸಂಖ್ಯೆಗಳು ಮತ್ತು ಹೆಸರುಗಳನ್ನು ಎಲ್ಲಿಯೂ ಬಹಿರಂಗವಾಗುವುದಿಲ್ಲ.
ಪರಿಶೀಲನೆ ಉದ್ದೇಶಗಳಿಗಾಗಿ ಮತ್ತು ನಿಮ್ಮ ದೂರಿನ ಸ್ಥಿತಿಯ ಕುರಿತು ನಿಮ್ಮೊಂದಿಗೆ ಸಂವಹನ ನಡೆಸಲು ಮತ್ತು ಹೊಸ ವೈಶಿಷ್ಟ್ಯಗಳು ಮತ್ತು ಅಧಿಸೂಚನೆಗಳ ಕುರಿತು ಮಾಹಿತಿ ನೀಡಲು ನಿಮ್ಮ ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆ ಅಗತ್ಯವಿದೆ” ಎಂದು IChangeMyCity ಹೇಳಿದೆ.
ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:16 pm, Fri, 16 June 23