
ಬೆಂಗಳೂರು, ಜುಲೈ 05: ಶನಿವಾರ (ಜು.05) ಬೆಳ್ಳಂ ಬೆಳಿಗ್ಗೆ ಬೆಂಗಳೂರು ನಗರ ಸಂಚಾರಿ ಪೊಲೀಸರು (Bengaluru Traffic Police), ಆರ್‌ಟಿಓ (RTO) ಮತ್ತು ಕಾನೂನು ಮಾಪನ ಇಲಾಖೆ ಅಧಿಕಾರಿಗಳು ನಗರದಲ್ಲಿನ ಹೆಲ್ಮೆಟ್ (Helmet) ಅಂಗಡಿ ಮತ್ತು ಮಳಿಗೆಗಳ ಮೇಲೆ ದಾಳಿ ಮಾಡಿದರು. ನಿಷೇಧ ಇದ್ದರೂ ಕಳಪೆ ಗುಣಮಟ್ಟದ ಹಾಗೂ ಅರ್ಧ ಹೆಲ್ಮೆಟ್ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ಅಧಿಕಾರಿಗಳು ನಗರದ ಸಿದ್ಧಯ್ಯ ರಸ್ತೆ, ಕಲಾಸಿಪಾಳ್ಯ ರಸ್ತೆ, ಲಾಲ್ ಬಾಗ್ ರಸ್ತೆ, ಮಾಗಡಿ ರಸ್ತೆ, ಸುಮನಹಳ್ಳಿ, ವಿಜಯನಗರ, ಅಗ್ರಹಾರ ದಾಸರಹಳ್ಳಿ, ನಾಗರಭಾವಿ, ಔಟರ್ ರಿಂಗ್ ರಸ್ತೆ ಸೇರಿದಂತೆ ಒಟ್ಟು 19 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಕಳಪೆ ಗುಣಮಟ್ಟದ ಮತ್ತು ಅರ್ಧ ಹೆಲ್ಮೆಟ್ ಮಾಡುತ್ತಿದ್ದ ಆರು ಅಂಗಡಿಗಳಿಗೆ ಮಾಪನ ಇಲಾಖೆ 50 ಸಾವಿರ ರೂ. ದಂಡ ವಿಧಿಸಿದೆ. ಜೊತೆಗೆ, ದಿ ಲೀಗಲ್ ಮೆಟ್ರಾಲಜಿ ಕಾಯ್ದೆ (ಮಾಪನಶಾಸ್ತ್ರ ಕಾಯ್ದೆ) ಅಡಿ ನೋಟಿಸ್ ನೀಡಿದೆ. 13 ಅಂಗಡಿ ಮಾಲೀಕರಿಗೆ ಕೋರ್ಟ್ನಲ್ಲಿ ದಂಡ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ಅಧಿಕಾರಿಗಳು ಕಳಪೆ ಹಾಗೂ ಅರ್ಧ ಹೆಲ್ಮೆಟ್ಗಳನ್ನು ಜಪ್ತಿ ಮಾಡಿದರು.
ಕಳಪೆ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುತ್ತಿದ್ದವರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ದಂಡ ವಿಧಿಸಿದರು. 38 ಬೈಕ್ ಸವಾರರಿಗೆ ದಂಡ ವಿಧಿಸಿ, ಲೈಸೆನ್ಸ್ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಭಾರತದಲ್ಲಿ, ಮೋಟಾರು ವಾಹನ ಕಾಯ್ದೆಯ ಪ್ರಕಾರ, ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ ಮತ್ತು ಅದು ಐಎಸ್ಐ ಮಾರ್ಕ್ ಹೊಂದಿರಬೇಕು. ವಾಹನ ಸವಾರರು ಮತ್ತು ಹಿಂಬದಿ ಸವಾರರೂ ಇಬ್ಬರೂ ಪೂರ್ಣ ಹೆಲ್ಮೆಟ್ ಧರಿಸುವುದು ಖಡ್ಡಾಯವಾಗಿದೆ.
ಇದನ್ನೂ ಓದಿ: ಸ್ಟಿಕ್ಕರ್ ಅಂಟಿಸಲು ಕೊಟ್ಯಂತರ ರೂ ಖರ್ಚು: ಸಮೀಕ್ಷೆಯ ಖರ್ಚು ವೆಚ್ಚಗಳ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ
ಅರ್ಧ ಹೆಲ್ಮೆಟ್ಗಳನ್ನು ನಿಷೇಧಿಸಲಾಗಿದೆ. ಅರ್ಧ ಹೆಲ್ಮೆಟ್ಗಳು ತಲೆಗೆ ಪೂರ್ಣ ರಕ್ಷಣೆ ನೀಡುವುದಿಲ್ಲ, ಇದು ಅಪಘಾತದ ಸಮಯದಲ್ಲಿ ಗಂಭೀರ ಗಾಯಗಳಿಗೆ ಕಾರಣವಾಗಬಹುದು. ಐಎಸ್ಐ ಮಾರ್ಕ್ ಇಲ್ಲದ ಅಥವಾ ಅರ್ಧ ಹೆಲ್ಮೆಟ್ ಧರಿಸಿದರೆ ದಂಡ ವಿಧಿಸಲಾಗುತ್ತದೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು