
ಬೆಂಗಳೂರು, (ಡಿಸೆಂಬರ್ 16): ಆಸ್ಪತ್ರೆಗೆ ಹೋಗುವಾಗ ಅಪಘಾತ (Accident) ಸಂಭವಿಸಿದ್ದು, ಎದೆ ನೋವು ಎಂದು ಆಸ್ಪತ್ರೆಗೆ ತೆರಳುತ್ತಿದ್ದ ವೆಂಕಟರಮಣ್ ಎನ್ನುವರು ಸಾವನ್ನಪ್ಪಿದ್ದಾರೆ.ಈ ಹೃದಯವಿದ್ರಾವಕ ಘಟನೆ ಬೆಂಗಳೂರಿನ (Bengaluru) ಇಟ್ಟುಮಡುವಿನ ಬಾಲಾಜಿನಗರದಲ್ಲಿ ನಡೆದಿದ್ದು, ವ್ಯಕ್ತಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಯಾರೊಬ್ಬರು ಸಹಾಯ ಬಂದಿಲ್ಲ. ಕಾಪಾಡಿ ಎಂದು ಪತ್ನಿ ಅಂಗಲಾಚಿ ಬೇಡಿಕೊಂಡರೂ ಯಾರು ಸಹ ಸಹಾಯ ಮಾಡಲು ಮುಂದೆ ಬಂದಿಲ್ಲ. ಬದಲಾಗಿ ಏನಾಗಿದೆ ಎಂದು ನೋಡಿ ಹಾಗೇ ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು. ಪರಿಣಾಮ ವೆಂಕಟರಮಣನ್ ಹೆಂಡ್ತಿ ಮುಖ ನೋಡುತ್ತಲೇ ಸಾವನ್ನಪ್ಪಿದ್ದಾರೆ. ಇನ್ನು ತುಂಬಾ ಜನರಿಗೆ ಸಹಾಯ ಮಾಡಿದ ಗಂಡನ ಸಹಯಾಕ್ಕೆ ಯಾರು ಬರಲಿಲ್ಲ ಎಂದು ಹೆಂಡ್ತಿ ರೂಪ ಗೋಳಾಡಿದ್ದಾರೆ. ಅಲ್ಲದೇ ಇನ್ನೊಬ್ಬರಿಗೆ ಸಹಾಯ ಎಂದು ಮಾಧ್ಯಮಗಳ ಮೂಲಕ ಕೈಮುಗಿದು ಬೇಡಿಕೊಂಡಿದ್ದಾಳೆ.
ಇಂದು (ಡಿಸೆಂಬರ್ 16) ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಅವರಿಗೆ ಎದೆನೋವು ಕಾಣಿಸಿಕೊಂಡ ಕಾರಣ ಪತ್ನಿಯೊಂದಿಗೆ ಬೈಕ್‌ನಲ್ಲಿಯೇ ಆಸ್ಪತ್ರೆಗೆ ತೆರಳಿದ್ದಾರೆ. ಆದ್ರೆ. ಅವರು ಮೇಜರ್ ಆರ್ಟ್ ಅಟ್ಯಾಕ್ ಆಗಿದೆ ಜಯದೇವ ಆಸ್ಪತ್ರೆಗೆ ಹೋಗಿ ಎಂದು ಹೇಳಿದ್ದಾರೆ. ಅದರಂತೆ ಬೈಕಿನಲ್ಲಿ ಹೋಗುವಾಗ ವೆಂಕಟರಮಣನ್ ಮತ್ತೆ ಎದೆ ನೋವು ಹೆಚ್ಚಾಗಿದ್ದು, ನಿಯಂತ್ರಣ ತಪ್ಪಿ ಮತ್ತೊಂದು ಬೈಕ್ಗೆ ಗುದ್ದಿದ್ದಾರೆ. ಪರಿಣಾಮ ವೆಂಕಟರಮಣ್ ರಸ್ತೆಯಲ್ಲಿ ಬಿದ್ದು ಒದ್ದಾಡಿದ್ದಾರೆ. ಆ ವೇಳೆ ಪತ್ನಿ ರೂಪ, ಕಾಪಾಡಿ ಕಾಪಾಡಿ ಎಂದು ಅಂಗಲಾಚಿದ್ದಾರೆ. ಆದರೂ ಯಾರೊಬ್ಬರು ಸಹಾಯಕ್ಕೆ ಬಂದಿಲ್ಲ. ಕೊನೆಗೆ ವೆಂಕಟರಮಣನ್ ಸಾವನ್ನಪ್ಪಿದ್ದಾರೆ. ಸದ್ಯ ಮೃತ ವೆಂಕಟರಮಣನ್ ಕಣ್ಣುಗಳನ್ನು ದಾನ ಮಾಡಲಾಗಿದೆ.
ಇನ್ನು ಮೃತ ವೆಂಕಟರಮಣ ಪತ್ನಿ ರೂಪ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅವರಿಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳಿಯ ಆಸ್ಪತ್ರೆಗೆ ಬೈಕಿನಲ್ಲೆ ಹೋದ್ವಿ. ಅವರು ಮೇಜರ್ ಇದೆ ಜಯದೇವಗೆ ಹೋಗಿ ಅಂತ ವೈದ್ಯರು ಹೇಳಿದ್ರು. ಒಂದು ಅಂಬುಲೆನ್ಸ್ ವ್ಯವಸ್ಥೆ ಕೂಡ ಆಸ್ಪತ್ರೆಯವರು ಮಾಡಿಲ್ಲ. ಜಯದೇವ ಆಸ್ಪತ್ರೆಗೆ ನಾವು ಬೈಕಿನಲ್ಲೆ ಹೊರಟ್ವಿ. ಅದ್ರೆ ಕದೇರನಹಳ್ಳಿ ಬಳಿ ಹೋಗುವಾಗ ಎದೆನೋವು ಜಾಸ್ತಿಯಾಗಿದ್ದು, ಮತ್ತೊಂದು ಬೈಕ್ ಗೆ ಅಪಘಾತವಾಗಿ ರಸ್ತೆಯಲ್ಲೆ ಇಬ್ಬರೂ ಬಿದ್ವಿ.ನನಗೆ ಗಾಯವಾಗಿ ರಕ್ತ ಬರ್ತಿದ್ರೂ ಎಲ್ಲರಲ್ಲೂ ಕೈ ಮುಗಿದು ಕೇಳಿಕೊಂಡೆ.ರಸ್ತೆಯಲ್ಲಿ ಹೋಗುವವರು ಯಾರು ನಮ್ಮ ಕಡೆ ನೋಡಲೇ ಇಲ್ಲ ಎಂದು ಕಣ್ಣೀರಿಟ್ಟರು.
ಯಜಮಾನ್ರು ಕಣ್ಣು ಬಿಟ್ಟು ತಲೆ ಎತ್ತಿ ನನ್ನನ್ನ ನೋಡುತ್ತಿದ್ರು. ಅವರಿಗೆ ಮಕ್ಕಳನ್ನ ನೋಡ್ಬೇಕು ಅನ್ನೋ ಆಸೆಯಾಗಿತ್ತು. 15 ನಿಮಿಷದ ಬಳಿಕ ಒಬ್ಬರು ಕ್ಯಾಬ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದ್ರೆ ಅಷ್ಟರಲ್ಲಿ ಅವರ ಪ್ರಾಣ ಹೋಗಿತ್ತು. ಅವರು ತುಂಬಾ ಜನಕ್ಕೆ ಸಹಾಯ ಮಾಡಿದ್ರು. ಆದ್ರೆ ಅವರ ಸಹಾಯಕ್ಕೆ ಯಾರೂ ಕೂಡ ಬಂದಿಲ್ಲ. ಕೈಮುಗಿದು ಕೇಳಿಕೊಂಡರೂ ವಾಹನ ಸವಾರರು ಸಹಾಯ ಮಾಡಿಲ್ಲ.ಜನ ಮಾನವೀಯತೆಯನ್ನೆ ಮರೆತಿದ್ದಾರೆ ಎಂದರು
ಒಬ್ಬರು ಯಾರಾದ್ರೂ ಸಹಾಯ ಮಾಡಿದ್ರೆ ಅವರು ಬದುಕುಳಿಯುತ್ತಿದ್ದರು. ಇಬ್ಬರೂ ಸಣ್ಣ ಮಕ್ಕಳಿದ್ದಾರೆ,ಅವ್ರನ್ನ ಈಗ ನಾನೇ ನೋಡಿಕೊಳ್ಳಬೇಕು. ಸದ್ಯ ಪತಿಯ ಎರಡೂ ಕಣ್ಣನ್ನ ದಾನ ಮಾಡಿದ್ದೇವೆ. ಅದರಿಂದ ಯಾರಿಗಾದ್ರೂ ದೃಷ್ಟಿ ಬಂದ್ರೆ ಅವರಿಗಾದರೂ ಉಪಯೋಗ ಆಗಲಿ. ಜನ ಸ್ವಲ್ಪನಾದ್ರೂ ಮಾನವೀಯತೆ ಹೊಂದಿರಬೇಕು ಎಂದರು.
Published On - 6:20 pm, Tue, 16 December 25