ಕರ್ನಾಟಕದಲ್ಲಿ ಪೊಲೀಸ್ ಕಳ್ಳಾಟ: ಮತ್ತೋರ್ವ PSI ಸಸ್ಪೆಂಡ್
ಬೆಂಗಳೂರಿನಲ್ಲಿ ಪೊಲೀಸರಿಂದಲೇ ನಡೆಯುತ್ತಿರುವ ದರೋಡೆ ಮತ್ತು ಭ್ರಷ್ಟಾಚಾರ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇತ್ತೀಚಿನ ದಿನದಲ್ಲಿ ಪೊಲೀಸರೇ ಕಳ್ಳತನ, ವಂಚನೆಯಲ್ಲಿ ತೋಡಗಿಕೊಂಡಿರುವುದು ಪತ್ತೆಯಾಗಿದೆ.ಕಾನ್ಸ್ಟೇಬಲ್ಗಳು ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಕಳ್ಳತನದ ಕೃತ್ಯದಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ಇದಕ್ಕೆ ಮತ್ತೊಂದು ಪ್ರಕರಣ ಸೇರಿಕೊಂಡಿದೆ.

ಬೆಂಗಳೂರು, ಡಿ.16: ಕಳ್ಳತನ, ಸುಲಿಗೆ, ದರೋಡೆ, ಅತ್ಯಾಚಾರ, ಕೊಲೆಯನ್ನು ತಡೆಯಬೇಕಿರುವ ಪೊಲೀಸರೇ, ಈ ಕೆಲಸ ಮಾಡಿದ್ರೆ ಹೇಗಿರುತ್ತೆ. ಇತ್ತೀಚೆಗೆ ಬೆಂಗಳೂರಿನಲ್ಲಿ (Bengaluru police corruption) ಪೊಲೀಸರೇ ದರೋಡೆ, ಕಳ್ಳತನ ಮಾಡಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಿದ್ದಾರೆ. ರಾಜ್ಯದಲ್ಲಿ ಜನ ಪೊಲೀಸರು ಇದ್ದರೆ ಎಂಬ ನಂಬಿಕೆಯಲ್ಲಿ ನಿರ್ಭೀತರಾಗಿ ಓಡಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪೊಲೀಸರೇ ಕಳ್ಳತನ ಮಾಡುತ್ತಿದ್ದಾರೆ. ಮೋಸ, ವಂಚನೆಯಲ್ಲಿ ತೋಡಗಿಸಿಕೊಂಡಿದ್ದಾರೆ. ಪೊಲೀಸರೇ ಇಂತಹ ಕೃತ್ಯದಲ್ಲಿ ಭಾಗಿಯಾದರೆ, ನ್ಯಾಯ ಯಾರಲ್ಲಿ ಕೇಳುವುದು. ಬೆಂಗಳೂರಿನ ಹಲವು ಭಾಗದಲ್ಲಿ ಪೊಲೀಸರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗುತ್ತಿರುವುದು ಬೆಂಗಳೂರಿನ ಜನರಿಗೆ ಆತಂಕ ಸೃಷ್ಟಿಸಿದೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜ್ಯೂಸ್ ಹಾಗೂ ಜೆರಾಕ್ಸ್ ಅಂಗಡಿ ಮಾಲೀಕನಿಗೆ ಸುಳ್ಳುಕೇಸ್ ದಾಖಲಿಸುವುದಾಗಿ ಬೆದರಿಸಿ ಲಕ್ಷ ಲಕ್ಷ ಲೂಟಿ ಮಾಡಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದ ಜ್ಯೂಸ್ ಹಾಗೂ ಜೆರಾಕ್ಸ್ ಅಂಗಡಿ ಮಾಲೀಕನಿಂದ PSI ಹರೀಶ್ 1.60 ಲಕ್ಷ ರೂ ವಸೂಲಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದೀಗ PSI ಹರೀಶ್ ಅವರನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಎಸ್ ಪಿ ಶ್ರೀನಿವಾಸ್ ಗೌಡ ಅವರು ಸೇವೆಯಿಂದ ಅಮಾನತು ಮಾಡಿದ್ದಾರೆ. ಅಕ್ಟೋಬರ್ 29 ರಂದು ಅಂದಿನ ಚನ್ನಪಟ್ಟಣ ಟೌನ್ PSI ಆಗಿದ್ದ ಹರೀಶ್, ರಾಜೇಶ್ ಅವರ ಅಂಗಡಿ ಬಳಿ ಹೋಗಿ ನೀವು ನಕಲಿ ಆಧಾರ್ ಕಾರ್ಡ್ ಮಾಡುತ್ತೀದ್ದೀರಿ ಎಂದು ಕನಕಪುರದಿಂದ ಚನ್ನಪಟ್ಟಣ ಠಾಣೆಗೆ ಕರೆದುಕೊಂಡು ಬಂದು, ಬೆದರಿಕೆ ಹಾಕಿದ್ದರು. ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ, ಪೆಟ್ರೋಲ್ ಬಂಕ್ನಲ್ಲಿ 60 ಸಾವಿರ ಸ್ಕ್ಯಾನ್ ಮಾಡಿಸಿಕೊಂಡಿದ್ದರು ಎಂದು ಅಂಗಡಿ ಮಾಲೀಕ ರಾಜೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಒಂದು ಲಕ್ಷ ನಗದು ಕೂಡ ರಾಜೇಶ್ ಅವರಿಂದ ಕಸಿದುಕೊಂಡಿದ್ದರು. ಹೀಗಾಗಿ ವಾರದ ಹಿಂದೆ ರಾಜೇಶ್ ಕೇಂದ್ರವಲಯ ಐಜಿಪಿ ಅವರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಕಿಡ್ನಿ ದಾನಕ್ಕೆ ಮನವಿ ಮಾಡಿದ್ದ ವೈದ್ಯೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಈ ಬಗ್ಗೆ ತಕ್ಷಣ ಪ್ರಕ್ರಿಯಿಸಿದ ಐಜಿಪಿ ಕಚೇರಿ, ಇದರ ತನಿಖೆಯನ್ನು ಸೆನ್ ಠಾಣೆಯ DYSP ಕೆಂಚೇಗೌಡ ಅವರಿಗೆ ವಹಿಸಲಾಗಿತ್ತು. ಈ ಬಗ್ಗೆ DYSP ಕೆಂಚೇಗೌಡ ಅವರು ತನಿಖೆಯನ್ನು ನಡೆಸಿ, ವರದಿಯನ್ನು ಕೇಂದ್ರವಲಯ ಐಜಿಪಿ ಕಚೇರಿಗೆ ನೀಡಿದ್ದಾರೆ. ತನಿಖೆಯಲ್ಲಿ ಆರೋಪ ಮೇಲ್ನೋಟಕ್ಕೆ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್ ಪಿ ಶ್ರೀನಿವಾಸ್ ಗೌಡ ಅವರು ಕಗ್ಗಲಿಪುರ ಠಾಣೆಯಲ್ಲಿ PSI ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಅವರನ್ನು ಅಮಾನತು ಮಾಡಿದ್ದಾರೆ.
ತನಿಖೆಯ ವೇಳೆ ಪಿಎಸ್ ಐ ಹರೀಶ್ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಇನ್ನು ಅಂಗಡಿ ಮಾಲೀಕ ರಾಜೇಶ್ ಹೇಳಿರುವ ಪ್ರಕಾರ, ನನ್ನ ಮೇಲೆ ಯಾವುದೇ ದೂರು ದಾಖಲಿಸಿಕೊಳ್ಳದೇ, ಮೆಡಿಕಲ್ ಪರೀಕ್ಷೆ ಕೂಡ ಮಾಡಿಸಿದ್ರು ಎಂದು ಹೇಳಿದ್ದಾರೆ. ಇದೀಗ ಪಿಎಸ್ ಐ ಹರೀಶ್ ಅಮಾನತುಗೊಂಡಿರುವ ಬಗ್ಗೆ ರಾಜೇಶ್ ಅವರು ಸಂತಸ ವ್ಯಕ್ತಪಡಿಸಿದ್ದು, ಇನ್ನು ಇಂತಹ ಅಧಿಕಾರಿಗಳು ಬೆಂಗಳೂರಿನಲ್ಲಿ ಇದ್ದಾರೆ, ಅವರನ್ನು ಕೂಡ ಅಮಾನತು ಮಾಡಿ ಎಂದು ಹೇಳಿದ್ದಾರೆ.
ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Tue, 16 December 25



