ಬೆಂಗಳೂರು, ಮಾರ್ಚ್ 13: ಬೆಂಗಳೂರಿನಾದ್ಯಂತ (Bengaluru) ಅಪಾರ ಪ್ರಮಾಣದಲ್ಲಿ ನೀರು ಬಳಸುವ ಮತ್ತು ದೊಡ್ಡ ಮಟ್ಟದ ಗ್ರಾಹಕರಿಗೆ ಮಾಡಲಾಗುತ್ತಿರುವ ಸರಬರಾಜಿನಲ್ಲಿ ಶೇ 20ರಷ್ಟು ಕಡಿತ ಮಾಡಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಿರ್ಧರಿಸಿದೆ. ಸದ್ಯ ಲಭ್ಯವಿರುವ ಕಾವೇರಿ ನೀರನ್ನು (Cauvery Water) ತುರ್ತಾಗಿ ನೀರಿನ ಅಗತ್ಯವಿರುವ ಪ್ರದೇಶಗಳಿಗೆ ಪೂರೈಕೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ವಿಚಾರವಾಗಿ ದೊಡ್ಡಮಟ್ಟದ ಗ್ರಾಹಕರ ಜತೆ ಮಂಡಳಿ ಅಧಿಕಾರಿಗಳು ಸಭೆ ನಡೆಸಿದ್ದು, ನಗರವು ಎದುರಿಸುತ್ತಿರುವ ತೀವ್ರ ನೀರಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರಬರಾಜಿನಲ್ಲಿ ಕಡಿತ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನೀರಿನ ತೀವ್ರ ಕೊರತೆಯಿದೆ. ನಗರದ 1.4 ಕೋಟಿ ಜನಸಂಖ್ಯೆಯ ಯೋಗಕ್ಷೇಮವನ್ನು ಪರಿಗಣಿಸಿ, ಈ ಕ್ರಮ ಕೈಗೊಳ್ಳುವುದು ಮತ್ತು ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶಗಳಿಗೆ ಹಂಚಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ಡಾ ರಾಮಪ್ರಸಾತ್ ಮನೋಹರ್ ವಿ. ತಿಳಿಸಿದ್ದಾರೆ.
ದಿನವೊಂದಕ್ಕೆ ಎರಡು ಕೋಟಿ ಲೀಟರ್‌ಗಿಂತಲೂ ಹೆಚ್ಚು ನೀರು ಬಳಕೆ ಮಾಡುವ ಸಂಸ್ಥೆಗಳನ್ನು ಬಿಡಬ್ಲ್ಯುಎಸ್‌ಎಸ್‌ಬಿ ಬೃಹತ್ ಗ್ರಾಹಕರು ಎಂದು ವರ್ಗೀಕರಿಸಿದೆ. ನಗರದಲ್ಲಿ ಅಂತಹ 38 ಬಳಕೆದಾರರಿದ್ದಾರೆ. ಅವರು ಪ್ರಸ್ತುತ ತಿಂಗಳಿಗೆ ಒಟ್ಟು 1,765 ಮಿಲಿಯನ್ ಲೀಟರ್ ನೀರು ಬಳಸುತ್ತಾರೆ.
ದೊಡ್ಡ ಗ್ರಾಹಕರಿಗೆ ಶೇ 20ರಷ್ಟು ಸರಬರಾಜು ಕಡಿತಗೊಳಿಸುವ ಈ ನಿರ್ಧಾರದಿಂದ ನಾವು ದಿನಕ್ಕೆ ಕನಿಷ್ಠ 10 ಎಂಎಲ್ಡಿ ನೀರನ್ನು ಉಳಿಸಲು ಸಾಧ್ಯವಾಗುತ್ತದೆ. ನಗರದ ಕೊಳೆಗೇರಿಗಳು ಮತ್ತು ಬಡವರ ಅಗತ್ಯಗಳನ್ನು ಪೂರೈಸಲು ಇದನ್ನು ಮರುಹಂಚಿಕೆ ಮಾಡಬಹುದು ಎಂದು ಮನೋಹರ್ ತಿಳಿಸಿದ್ದಾರೆ.
ಆದಾಗ್ಯೂ, ನೀರಿನ ಸರಬರಾಜಿನಲ್ಲಿ ಈಗಲೇ ಹಠಾತ್ ಕಡಿತ ಮಾಡುವುದಿಲ್ಲ. ಮಾರ್ಚ್ 15 ರಿಂದ ಹಂತಹಂತವಾಗಿ ಕಡಿತಗೊಳಿಸಲಾಗುವುದು. ಏಪ್ರಿಲ್ 15 ರ ವೇಳೆಗೆ ಒಟ್ಟು ಶೇ 20 ರ ಕಡಿತದ ಗುರಿಯನ್ನು ಸಾಧಿಸಲಾಗುತ್ತದೆ ಎಂದು ಮನೋಹರ್ ಹೇಳಿರುವುದಾಗಿ ಪತ್ರಿಕಾ ವರದಿಗಳು ಉಲ್ಲೇಖಿಸಿವೆ.
ಬೆಂಗಳೂರಿನಲ್ಲಿ ಮೂರು ಆಸ್ಪತ್ರೆಗಳು (ನಿಮ್ಹಾನ್ಸ್, ವಿಕ್ಟೋರಿಯಾ ಮತ್ತು ಕಮಾಂಡ್ ಆಸ್ಪತ್ರೆ) ಬೃಹತ್ ಪ್ರಮಾಣದ ನೀರು ಬಳಕೆಯ ಗ್ರಾಹಕರಾಗಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿ ಪರಿಗಣಿಸಿ ಈ ಮೂರು ಸಂಸ್ಥೆಗಳಿಗೆ ನೀರು ಸರಬರಾಜು ಕಡಿತದ ನಿರ್ಧಾರ ಅನ್ವಯಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ: ಈಜು ಕೊಳಕ್ಕೆ ಕುಡಿಯುವ ನೀರಿನ ಬಳಕೆಗೆ ನಿಷೇಧ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಬಯೋಕಾನ್ ಪ್ರೈವೇಟ್ ಲಿಮಿಟೆಡ್, ಏರ್ ಫೋರ್ಸ್ ಸ್ಟೇಷನ್‌ಗಳು, ಬೆಂಗಳೂರು ವಿಶ್ವವಿದ್ಯಾಲಯ, ರೈಲ್ವೇಸ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಇವುಗಳು ಸಹ ದೊಡ್ಡ ಗ್ರಾಹಕರ ಪಟ್ಟಿಯಲ್ಲಿ ಸೇರಿದ್ದು, ನೀರು ಸರಬರಾಜಿನಲ್ಲಿ ಕಡಿತ ಎದುರಿಸಲಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:37 am, Wed, 13 March 24