Bengaluru News: ವೈಟ್ಫಿಲ್ಡ್ ನಿವಾಸಿಗಳಿಗೆ ಜಲ ಕಂಟಕ: ಟ್ಯಾಂಕರ್ ನೀರಿಗಾಗಿ ಪ್ರತಿ ತಿಂಗಳು 10 ಸಾವಿರ ರೂ. ಖರ್ಚು
ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದ ನಿವಾಸಿಗಳು ದಿನನಿತ್ಯದ ಬಳಕೆಗೆ ಸಾಕಾಗುವಷ್ಟು ನೀರು ದೊರೆಯದೆ ಪರದಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ತಮ್ಮ ಕಾಲೋನಿಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲವೆಂದು ನಿವಾಸಿಗಳು ದೂರಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ನೀರನ (Water) ಅಭಾವ ಶುರುವಾಗಿದೆ. ವಿವಿಧ ಜಿಲ್ಲೆಗಳಲ್ಲಿ ನೀರಿನ ಕೊರತೆಯಿಂದ ಜನರು ಪರದಾಡುತ್ತಿದ್ದಾರೆ. ಇದೀಗ ಬೆಂಗಳೂರಿನ ಜನರಿಗೂ ಇದರ ಬಿಸಿ ತಟ್ಟಿದೆ. ಹೌದು ಸಿಲಿಕಾನ್ ಸಿಟಿಯ (Bengaluru) ವೈಟ್‌ಫೀಲ್ಡ್ (Whitefield) ಪ್ರದೇಶದ ನಿವಾಸಿಗಳು ದಿನನಿತ್ಯದ ಬಳಕೆಗೆ ಸಾಕಾಗುವಷ್ಟು ನೀರು ದೊರೆಯದೆ ಪರದಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ತಮ್ಮ ಕಾಲೋನಿಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ನಾವು ನೀರು ಪೂರೈಸುವ ಟ್ಯಾಂಕರ್‌ಗಳನ್ನು ಕಾಯ್ದಿರಿಸಲು ತಿಂಗಳಿಗೆ 10,000 ರೂ. ನೀಡುವ ಪರೀಸ್ಥಿತಿ ಬಂದೊದಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ನಮ್ಮ ಅಪಾರ್ಟ್ಮೆಂಟ್ನಲ್ಲಿ 144 ಫ್ಲಾಟ್‌ಗಳಿವೆ. ನಮಗೆ ಸರಿಯಾಗಿ ನೀರು ಪೂರೈಕೆಯಾಗಿ ಆರು ತಿಂಗಳಾಗಿವೆ. ಕಾವೇರಿ ಪೈಪ್‌ಲೈನ್‌ನಲ್ಲಿನ ಕೆಲವು ಸಮಸ್ಯೆ ಮತ್ತು ಇನ್ನಿತರ ಸಮಸ್ಯೆಗಳಿಂದ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಆದರೆ ನಿಖರವಾಗಿ ಏನಾಗುತ್ತಿದೆ ಎಂದು ನಮಗೆ ತಿಳಿದಿಲ್ಲ. ಈ ಸಂಬಂಧ ನಾವು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ, ಆದರೆ ಪ್ರತಿಕ್ರಿಯೆ ಬಂದಿಲ್ಲ ಎಂದು ವೈಟ್‌ಫೀಲ್ಡ್‌ನ ಪ್ರೆಸ್ಟೀಜ್ ಬೌಲೆವರ್ಡ್‌ನಲ್ಲಿ ವಾಸಿಸುವ ಇರ್ಷಾದ್ ಅಹಮದ್ (36) ಹೇಳಿದ್ದಾರೆ.
ಸದ್ಯ ಬೋರ್‌ವೆಲ್ ನೀರನ್ನೇ ಅವಲಂಬಿಸಿದ್ದೇವೆ. ನಮಗೆ ಸ್ವಲ್ಪ ಕಾವೇರಿ ನೀರು ಸಿಗುತ್ತದೆ, ಆದರೆ ಅದು ಯಾವುದಕ್ಕೂ ಸಾಲಲ್ಲ. ಜನರು ನೀರಿಗಾಗಿ ತಿಂಗಳಿಗೆ 10,000 ರೂ. ಖರ್ಚು ಮಾಡುತ್ತಿದ್ದಾರೆ. ಬೋರಿನ ನೀರು ಸಹ ಸರಿಯಾಗಿ ಇಲ್ಲ. ನೀರಿನಲ್ಲಿ ಉಪ್ಪಿನ ಅಂಶ ಕೂಡಿದೆ. ಇದರಿಂದ ನಿವಾಸಿಗಳ ಚರ್ಮಕ್ಕೆ ದದ್ದುಗಳಾಗಿವೆ. 10 ಲೀಟರ್ ಸಾಮರ್ಥ್ಯದ ಒಂದು ಟ್ಯಾಂಕರ್ ಬೆಲೆ 800 ರಿಂದ 1,600 ರೂ ಇದೆ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಲುಷಿತ ನೀರು ಸೇವಿಸಿ ಒಂದೇ ಅಪಾರ್ಟ್ಮೆಂಟ್ನ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ: ದೂರು ದಾಖಲು
ಈ ಹಿಂದೆ ಸಿಗುತ್ತಿದ್ದ ನೀರಿನ ಶೇ.50 ರಷ್ಟು ನೀರು ಕೂಡ ಈಗ ಪೂರೈಕೆಯಾಗುತ್ತಿಲ್ಲ. ನಾನು ಒಂದೆರಡು ತಿಂಗಳಿನಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ. ನಾನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರೂ ಯಾವುದೇ ದೂರುಗಳಿಗೆ ಸ್ಪಂದಿಸುತ್ತಿಲ್ಲ. ನಾನು ಆರು ದೂರುಗಳನ್ನು ಸಲ್ಲಿಸಿದ್ದೇನೆ. ನಾನು ಪ್ರತಿ ತಿಂಗಳು ಕನಿಷ್ಠ ಮೂರರಿಂದ-ನಾಲ್ಕು ಟ್ಯಾಂಕರ್ಗೆ 2,500-3,000 ರೂ. ವೆಚ್ಚವಾಗುತ್ತಿದೆ ಎಂದು ಉತ್ತಮ ಸದಾಶಿವ (42) ಎಂಬುವರು ಮಾತನಾಡಿದ್ದಾರೆ.
ಕಳೆದ 1.5 ವರ್ಷಗಳಿಂದ ಸಮಸ್ಯೆ ಉಲ್ಬಣಗೊಂಡಿದ್ದು ಕಳೆದ ತಿಂಗಳಿನಿಂದ ಕೆಟ್ಟ ಪರೀಸ್ಥಿತಿ ಎದುರಿಸುತ್ತಿದ್ದೇವೆ. ಜನವರಿ 2022 ರ ಮೊದಲು, ದಿನಬಳಕೆಗಾಗಿ ನಾನು ಸಾಕಷ್ಟು ನೀರನ್ನು ಪಡೆಯುತ್ತಿದ್ದೆ. ನನ್ನ ಬಳಿ 8,000 ಲೀಟರ್ ಸಂಪ್ ಕೂಡ ಇದೆ. ನಮಗೆ ವಾರಕ್ಕೆ ಎರಡು ಬಾರಿ ನೀರು ಬರುತ್ತಿತ್ತು. ಪ್ರತಿ ಬಾರಿ ನೀರು ಬಂದರೆ ಸಂಪ್ ತುಂಬಿ ಹರಿಯುತ್ತಿತ್ತು. ಈಗ ಸಂಪ್‌ನಲ್ಲಿ ಪೈಪ್‌ನ ಮಟ್ಟವನ್ನು ಇನ್ನೂ 2 ಅಡಿಗಳಷ್ಟು ಕಡಿಮೆ ಮಾಡಿದ್ದೇನೆ. ಆದರೂ ಇನ್ನೂ ನೀರು ಬಂದಿಲ್ಲ. ಇದು ಗಂಭೀರ ಸಮಸ್ಯೆಯಾಗಿದೆ ಎಂದು ವೆಂಕಟೇಶ್ ಎಸ್ (60) ಅಳಲು ತೋಡಿಕೊಂಡಿದ್ದಾರೆ.
ನೀರು ನಿಯಂತ್ರಿಸುವ ಅಧಿಕಾರಿಗಳು ನೀರಿನ ಟ್ಯಾಂಕರ್ ಪೂರೈಕೆದಾರರೊಂದಿಗೆ ಕೈಜೋಡಿಸಿದ್ದಾರೆ. ನೀರು ಮಾಫಿಯಾ ಇದೆ. ನಮಗೆ ಸರಿಯಾಗಿ ನೀರು ನೀಡದ ಕಾರಣ, ನಾವು ನೀರಿನ ಟ್ಯಾಂಕರ್ನ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದರು.
ಬೇಸಿಗೆಯಲ್ಲಿ ವಿದ್ಯುತ್ ಏರಿಳಿತದಿಂದ ಸಮಸ್ಯೆ ಉಂಟಾಗುತ್ತದೆ. ಇದರ ಪರಿಣಾಮವಾಗಿ, ವೈಟ್‌ಫೀಲ್ಡ್‌ನ ಕೆಲವು ಪ್ರದೇಶಗಳು ಬಾಧಿತವಾಗಿವೆ. ವಿದ್ಯುತ್ ಬಂದರೆ ಸಮಯವೂ ಬದಲಾಗುತ್ತಿತ್ತು. ಕಳೆದ ಎರಡು ತಿಂಗಳಿನಿಂದ ನಾವು ಎದುರಿಸುತ್ತಿರುವ ಸಮಸ್ಯೆ ಇದು ಎಂದು BWSSB ಕಾರ್ಯನಿರ್ವಾಹಕ ಇಂಜಿನಿಯರ್ ಮಿರ್ಜಾ ಅಹ್ಮದ್ ಮಾಹಿತಿ ನೀಡಿದರು
ಆರಂಭದಲ್ಲಿ, ಒಂದು ಮನೆ ಬೋರ್‌ವೆಲ್ ಬೆಂಬಲದೊಂದಿಗೆ 20,000-25,000 ಲೀಟರ್ ಬಳಸಲಾಗುತ್ತಿತ್ತು. ಈಗ ಬೋರ್‌ವೆಲ್‌ಗಳು ಬತ್ತಿ ಹೋಗಿರುವುದರಿಂದ ಬಿಡಬ್ಲ್ಯೂಎಸ್‌ಎಸ್‌ಬಿ ನೀರಿನ ಬಳಕೆ ಕೂಡ ಹೆಚ್ಚುತ್ತಿದೆ. ಪರಿಣಾಮವಾಗಿ, ಮೇಲ್ದಂಡೆ ಪ್ರದೇಶದ ಜನರು ಉತ್ತಮ ಪ್ರಮಾಣದ ನೀರನ್ನು ಪಡೆಯುತ್ತಾರೆ ಆದರೆ ಕೆಳಭಾಗದಲ್ಲಿ ಕೆಲವು ಸಮಸ್ಯೆಗಳಿವೆ. ಕಾವೇರಿ ಹಂತ 4 ಯೋಜನೆಯಡಿ 2012 ರಲ್ಲಿ ಮಾಡಿದ ಹಂಚಿಕೆ, ಇಂದಿಗೂ ಅದೇ ಹಂಚಿಕೆ ಉಳಿದಿದೆ. ವೈಟ್‌ಫೀಲ್ಡ್ ವಾಸ್ತವವಾಗಿ ಮಿತಿಮೀರಿ ಬೆಳೆದಿದೆ. ಜನಸಂಖ್ಯೆಯಲ್ಲಿ 3-3.5 ರಷ್ಟು ಹೆಚ್ಚಳವಾಗಿದೆ. ಒಟ್ಟಾರೆ ಪೂರೈಕೆ ಒಂದೇ ಆಗಿದ್ದರೂ ಬೇಡಿಕೆ ಹೆಚ್ಚಿದೆ ಎಂದು ಅಹ್ಮದ್ ಹೇಳಿದರು.
ಅಧಿಕಾರಿಗಳು ಸೀಮಿತ ಬಜೆಟ್‌ನಲ್ಲಿ ನೀರು ಸರಬರಾಜು ಪೈಪ್‌ಲೈನ್ ಅನ್ನು ಮೇಲ್ದರ್ಜೆಗೇರಿಸುತ್ತಿದ್ದಾರೆ. ಇದು ಸಮಯ ತೆಗೆದುಕೊಳ್ಳುವ ಮತ್ತು ನಿರಂತರ ಪ್ರಕ್ರಿಯೆಯಾಗಿದೆ. ಜನಸಂಖ್ಯೆ ಎಲ್ಲಿ ಹೆಚ್ಚಾಗಬಹುದು ಎಂಬುದೂ ನಮಗೆ ತಿಳಿದಿಲ್ಲ. ಹಾಗಾಗಿ ಆ ಭಾಗದಲ್ಲಿ ಪೈಪ್‌ಲೈನ್ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ