AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾದ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್: ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ರೈಲಿಗಾಗಿ ಕಾಯುತ್ತಿದ್ದ ವೇಳೆ ಓರ್ವ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಪ್ಲಾಟ್‌ಫಾರ್ಮ್‌ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿರುವಂತಹ ಘಟನೆ ಮಂಗಳವಾರ ನಡೆದಿದೆ. ರೈಲ್ವೆ ಮಹಿಳಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.

ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾದ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್: ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on:Aug 01, 2025 | 11:15 AM

Share

ಬೆಂಗಳೂರು, ಜುಲೈ 01: ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (Sir M Visvesvaraya Terminal)​​ ಪ್ಲಾಟ್‌ಫಾರ್ಮ್‌ನಲ್ಲಿ ಮಂಗಳವಾರ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ (birth) ನೀಡಿದ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ರೈಲಿಗಾಗಿ ಕಾಯುತ್ತಿದ್ದ ಓರ್ವ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಸಕಾಲಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಗದ ಕಾರಣ ರೈಲ್ವೆ ಮಹಿಳಾ ಸಿಬ್ಬಂದಿ ಮತ್ತು ಇತರೆ ಪ್ರಯಾಣಿಕರ ನೆರವಿನೊಂದಿಗೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

23 ವರ್ಷದ ಅರ್ಚನಾ ಕುಮಾರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ. ರೈಲ್ವೆ ಮಹಿಳಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಆರ್‌ಪಿಎಫ್ ಕಾನ್‌ಸ್ಟೆಬಲ್ ಅಮೃತ ಎಂಬುವವರು ಘಟನೆ ವೇಳೆ ಸ್ಥಳದಲ್ಲಿದ್ದು, ತ್ವರಿತ ಮತ್ತು ಯಾವುದೇ ಅಪಾಯವಿಲ್ಲದೆ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ನೆರವಾದರು.

ಡಿಆರ್​ಎಂ ಬೆಂಗಳೂರು ಟ್ವೀಟ್​​

ಈ ಬಗ್ಗೆ ನೈರುತ್ಯ ರೈಲ್ವೆಯ ಬೆಂಗಳೂರಿನ ವಿಭಾಗೀಯ ರೈಲ್ವೆ ಟ್ವೀಟ್ ಮಾಡಿದ್ದು, ‘ಬೆಂಗಳೂರು ಎಸ್‌ಎಂವಿಟಿ ನಿಲ್ದಾಣದಲ್ಲಿ ಮಂಗಳವಾರದಂದು ಗರ್ಭಿಣಿ ಪ್ರಯಾಣಿಕರೊಬ್ಬರು ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳಾ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ಸಕಾಲಕ್ಕೆ ನೆರವಾದರು. ನಂತರ ಹೆಚ್ಚಿನ ಆರೈಕೆಗಾಗಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಭಾರತೀಯ ರೈಲ್ವೆ ಪ್ರಯಾಣಿಕರ ಯೋಗಕ್ಷೇಮಕ್ಕೆ ಬದ್ಧವಾಗಿದೆ’ ಎಂದು ತಿಳಿಸಿದೆ.

ಅರ್ಚನಾ ಕುಮಾರಿ ಅವರು ರೈಲು ಸಂಖ್ಯೆ 12836 ಎಸ್​​​​​​ಎಂವಿಟಿ ಬೆಂಗಳೂರು ಟು ಹಟಿಯಾ ಎಕ್ಸ್‌ಪ್ರೆಸ್‌ನಲ್ಲಿ ಹಟಿಯಾಗೆ ತೆರಳುವವರಿದ್ದರು. ಈ ವೇಳೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಇತ್ತ ಕರ್ತವ್ಯದಲ್ಲಿದ್ದ ಆರ್‌ವಿ ಸುರೇಶ್ ಬಾಬು ಎಂಬುವವರು ತಕ್ಷಣ ವೈದ್ಯಕೀಯ ಸಹಾಯಕ್ಕಾಗಿ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಫೋನ್​ನಲ್ಲಿ ಹರಟೆ ಹೊಡೆಯುತ್ತಾ ರೈಲು ಟಿಕೆಟ್ ಕೊಡಲು ಹತ್ತಾರು ಜನರ ಸತಾಯಿಸಿದ ಕ್ಲರ್ಕ್: ವಿಡಿಯೋ ವೈರಲ್ ಬೆನ್ನಲ್ಲೇ ಅಮಾನತು

ಹೆರಿಗೆಯ ನಂತರ, ತಾಯಿ ಮತ್ತು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿವಿ ರಾಮನ್ ಆಸ್ಪತ್ರೆಗೆ ರವಾನಿಸಲಾಗಿದೆ. ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಕಾಲಿಕ ನೆರವಿಗೆ ಅರ್ಚನಾ ಕುಮಾರಿ ಅವರ ಪತಿ ನಿಶಾಂಕ್ ಕುಮಾರ್​​ ಧನ್ಯವಾದ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:11 am, Fri, 1 August 25