ಬೆಂಗಳೂರು ಸೆ.13: ಭೂಕಬಳಿಕೆ, ಹಲ್ಲೆ, ಜಾತಿ ನಿಂದನೆ ಆರೋಪದ ಅಡಿಯಲ್ಲಿ ಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಿ.ಸುಧಾಕರ್ (Minister D Sudhakar) ಮೇಲೆ ಎಫ್ಐಆರ್ (FIR) ದಾಖಲಾಗಿದ್ದು, ಇದರಿಂದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ (Congress Government) ಕಸಿವಿಸಿ ಉಂಟಾಗಿದೆ. ಅಷ್ಟಕ್ಕೂ ಒಂದು ಜಮೀನಿನ ವಿಚಾರದಲ್ಲಿ ಶುರುವಾದ ವಿವಾದ ಈಗ ಅಟ್ರಾಸಿಟಿ ಕೇಸ್ ತನಕ ಬಂದು ನಿಂತಿದೆ ಹಾಗಿದ್ದರೇ ಅಲ್ಲಿ ನಡೆದಿರುವುದಾದರು ಏನು? ದೂರುದಾರರು ಹೇಳುತ್ತಿರುವುದು ಏನು ಸಂಪೂರ್ಣ ಮಾಹಿತಿ ಇಲ್ಲಿದೆ.
ಸೆಪ್ಟೆಂಬರ್ 10 ರಂದು ಬೆಂಗಳೂರಿನ ಯಲಹಂಕ ಪೋಲಿಸ್ ಠಾಣೆಯಲ್ಲಿ, ಸೆವೆನ್ ಹಿಲ್ಸ್ ಡೆವಲಪರ್ಸ್ ಅಂಡ್ ಟ್ರೇಡರ್ಸ್, ಡಿ ಸುಧಾಕರ್, ಶ್ರೀನಿವಾಸ, ಭಾಗ್ಯಮ್ಮ ಮತ್ತು ಅಪರಿಚಿತ 35 ರಿಂದ 40 ಜನರ ವಿರುದ್ಧ ಸುಬ್ಬಮ್ಮ ಎಂಬುವವರು ದೂರು ನೀಡಿದ್ದರು. ದೂರಿನ ಅನ್ವಯ ಯಲಹಂಕ ಪೊಲೀಸ್ ಠಾಣೆ ಯಲ್ಲಿ ಎಸ್ಸಿ/ಎಸ್ಟಿ ಪ್ರಿವೆಂಷನ್ ಅಫ್ ಅಟ್ರಾಸಿಟಿ ಕಾಯ್ದೆ, ಮತ್ತು ಐಪಿಸಿ ಸೆಕ್ಷನ್ 427,143,147,149,447,323 ಅಡಿಯಲ್ಲಿ ಕೇಸ್ ದಾಖಲಾಗಿತ್ತು.
ಈ ಗಲಾಟೆ ಯಲಹಂಕದ ಸರ್ವೆ ನಂಬರ್ 108/1 ರಲ್ಲಿ ಇರುವ ಸುಮಾರು ಒಂದುವರೆ ಎಕರೆ ಜಮೀನಿನ ವಿಚಾರವಾಗಿ ಶುರುವಾಗಿದೆ. ಈ ಜಮೀನು 1963ರಲ್ಲಿ ಸರ್ಕಾರ ವೆಂಕಟರಮಣಪ್ಪ ಮುನಿಯಪ್ಪ ಎಂಬುವವರಿಗೆ ನೀಡಿದೆ. ನಂತರ ಅದನ್ನು 2019ರಲ್ಲಿ ಸುಧಾಕರ್ ಅವರ ಸೆವೆನ್ ಹಿಲ್ಸ್ ಕಂಪನಿ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಅದರಂತೆ 15 ದಿನಗಳ ಹಿಂದೆ ಕಂಪನಿ ಹೆಸರಿಗೆ ಜಮೀನು ರಿಜಿಸ್ಟರ್ ಆಗಿದೆ. ಈದಾದ ಬಳಿಕ ಜಮೀನು ಮೂಲ ಮಾಲಿಕರ ಕುಟುಂಬ ಹಾಗೂ ಸುಧಾಕರ್ ಅವರ ನಡುವೆ ಗಲಾಟೆ ಶುರುವಾಗಿದೆ.
ಇದನ್ನೂ ಓದಿ: ಸಚಿವ ಡಿ.ಸುಧಾಕರ್ ವಿರುದ್ಧ ಎಫ್ಐಆರ್: ಮಹಿಳೆ ಜತೆ ಗಲಾಟೆ, ಏನಿದು ಪ್ರಕರಣ? ಇಲ್ಲಿದೆ ಡಿಟೇಲ್ಸ್
ಏಕಾಏಕಿ ತಮ್ಮ ಹೆಸರಿನಲ್ಲಿದ್ದ ಜಾಗವನ್ನು ಮೋಸದಿಂದ ತಮ್ಮ ಹೆಸರಿಗೆ ಕ್ರಯಪತ್ರ ಮಾಡಿಕೊಂಡಿದ್ದಾರೆ. ಅಲ್ಲದೇ ನಮ್ಮ ಮೇಲೆ ಹಲ್ಲೆ ಮಾಡಿ ಜಮೀನಿಂದ ಖಾಲಿ ಮಾಡಿಸಲು ಪ್ರಯತ್ನ ಪಟ್ಟಿದ್ದಾರೆ ಎಂದು ಆರೋಪಿಸಿ ಜಮೀನಿನ ಮೂಲ ಮಾಲಿಕ ವೆಂಕಟರಮಣಪ್ಪ ಅವರ ಪತ್ನಿ ಸುಬ್ಬಮ್ಮ, ಸೊಸೆ ರತ್ನ, ಮೊಮ್ಮಗ ಅರವಿಂದ ಹಾಗೂ ಇನ್ನಿತರು ಸಚಿವ ಸುಧಾಕರ್ ಹಾಗೂ ಉಳಿದ 35 ಜನರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ತೆರವುಗೊಳಿಸಲು ಹೋದವರು ಹೇಳುವ ಪ್ರಕಾರ, ನಾವು ಕೂಲಿ ಕೆಲಸದವರು, ಈ ಜಾಗ ಕಂಪನಿಗೆ ಸೇರಿದ್ದು. ಜಮೀನಿನಲ್ಲಿ ಇದ್ದವರನ್ನು ತೆರವುಗೊಳಿಸಿ, ಶೆಡ್ ನಿರ್ಮಾಣ ಮಾಡಿ ಎಂದು ಹಿಲ್ಸ್ ಡೆವಲಪರ್ ಅಂಡ್ ಟ್ರೇಡರ್ಸ್ ಕಂಪನಿಯವರು ನಮಗೆ ಕೆಲಸ ಕೊಟ್ಟಿದ್ದರು. ಅದಕ್ಕೆ ನಾವು ತೆರವುಗೊಳಿಸಲು ಹೋಗಿದ್ದೇವೆ. ಆದರೆ ನಾವು ಯಾರ ಮೇಲೂ ಹಲ್ಲೆ ಮಾಡಿಲ್ಲ. ಅವರೇ ನಮ್ಮ ಹಲ್ಲೆ ಮಾಡಿದ್ದಾರೆ ಎಂದು ಅರೋಪ ಮಾಡಿದ್ದಾರೆ.
ಇನ್ನು ಈ ಜಮೀನಿಗೆ ಹೊಂದಿಕೊಂಡು ಇರುವ ಕೆ ಹೆಚ್ ಬಿ ಕಾಲೋನಿಗೆ ಸೇರುವ ಡಾಂಬರ್ ರಸ್ತೆಯನ್ನು ಕಿತ್ತು ಹಾಕಲಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ದೂರು ನೀಡಿದ್ದು, ರಸ್ತೆ ಹಾನಿ ಮಾಡಿದವರ ವಿರುದ್ಧ ಸಹ ಕೇಸ್ ದಾಖಲು ಮಾಡಲಾಗಿದೆ. ಸದ್ಯ ಎರಡೂ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ