ಉತ್ತರ ಪ್ರದೇಶದಲ್ಲಿ ಮಹಾಕುಂಭ, ಬೆಂಗಳೂರಿನಲ್ಲಿ ತಂತ್ರಜ್ಞಾನದ ಯುದ್ಧೋಪಕರಣಗಳ ಕುಂಭ: ರಾಜನಾಥ್ ಸಿಂಗ್

ಏರೋ ಇಂಡಿಯಾ 2025ರಲ್ಲಿ ಬೆಂಗಳೂರು ಏರ್​ ಶೋಗೆ ಸೋಮವಾರ ಅಧಿಕೃತ ಚಾಲನೆ ದೊರೆಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು. ಬೆಂಗಳೂರು ಭಾರತದ ಏರ್‌ಫೋರ್ಸ್‌ನ ಪ್ರಮುಖ ಕೇಂದ್ರವಾಗಿದೆ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಮಹಾಕುಂಭ, ಬೆಂಗಳೂರಿನಲ್ಲಿ ತಂತ್ರಜ್ಞಾನದ ಯುದ್ಧೋಪಕರಣಗಳ ಕುಂಭ: ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Edited By:

Updated on: Feb 10, 2025 | 10:57 AM

ಬೆಂಗಳೂರು, ಫೆಬ್ರವರಿ 10: ಉತ್ತರ ಪ್ರದೇಶದಲ್ಲಿ ಸಂಸ್ಕೃತಿಯ ಮಹಾ ಕುಂಭಮೇಳ ನಡೆಯುತ್ತಿದೆ. ಇಲ್ಲಿ ಬೆಂಗಳೂರಿನಲ್ಲಿ ತಂತ್ರಜ್ಞಾನ ಹಾಗೂ ಯುದ್ಧೋಪಕರಣಗಳ, ಯುದ್ಧ ವಿಮಾನಗಳ ಮಹಾ ಕುಂಭ ನಡೆಯುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಯಲಹಂಕ ವಾಯುನೆಲೆಯಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಏರೋ ಇಂಡಿಯಾ 2025ರ ವೈಮಾನಿಕ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಸೋಮವಾರ ಅವರು ಮಾತನಾಡಿದರು.

ಹೊಸ ಸವಾಲುಗಳಿಗೆ ಉತ್ತರ ಹುಡುಕುವ ಕಾರ್ಯ ಮಾಡಬೇಕಿದೆ. ಶಾಂತಿ, ಶಕ್ತಿ ನಮ್ಮ ಮಂತ್ರ ಬಲ ಆಗಬೇಕಿದೆ. ನಾವು ಬಲಾಢ್ಯರಾಗಿ ವಿಶ್ವದಲ್ಲಿ ನಮ್ಮ ಸ್ಥಾನ ಪ್ರದರ್ಶನ ಮಾಡಬೇಕಿದೆ. ಅತ್ಯಾಧುನಿಕ ಅನ್ವೇಷಣೆ ಮೂಲಕ ನಾವು ಮುಂದೆ ಹೆಜ್ಜೆ ಇಟ್ಟಿದ್ದೇವೆ ಏರ್​ಶೋ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. 10 ವರ್ಷಗಳಿಂದ ವೈಮಾನಿಕ‌ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇವೆ. ಬಜೆಟ್​ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 1,080 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಅವರು ತಿಳಿಸಿದರು.

ಏರೋ ಇಂಡಿಯಾ 2025ರ ವೈಮಾನಿಕ ಪ್ರದರ್ಶನ

ಬೆಂಗಳೂರು ಇನ್ನೋವೇಷನ್ ಹಬ್, ಸಾಫ್ಟ್‌ವೇರ್​ನ ಹೆಗ್ಗಳಿಕೆ ಹೊಂದಿರುವ ನಗರ. ಏರೋಸ್ಪೇಸ್ ಮೂಲಕವೂ ಬೆಂಗಳೂರು ಹೆಸರುವಾಸಿಯಾಗುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಬೆಂಗಳೂರು ಭಾರತದ ಏರ್ಫೋರ್ಸ್ ಕ್ಯಾಪಿಟಲ್: ಡಿಕೆ ಶಿವಕುಮಾರ್

ಬೆಂಗಳೂರು ಭಾರತದ ಏರ್ಫೋರ್ಸ್ ಕ್ಯಾಪಿಟಲ್ ಆಗಿ ಹೊರಹೊಮ್ಮಿದೆ ಎಂದು ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಏರ್ ಶೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 15ನೇ ಆವೃತ್ತಿಯ ಏರ್ ಶೋದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಬೆಂಗಳೂರು ಭಾರತದ ಏರ್ಫೋರ್ಸ್ ಕ್ಯಾಪಿಟಲ್. ಇಲ್ಲಿ 1.5 ಲಕ್ಷ ಜನ ಏರ್ಫೋರ್ಸ್​​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೈಮಾನಿಕ ಪ್ರದರ್ಶನ ಬರೀ ಪ್ರದರ್ಶನವಲ್ಲ, ನಮ್ಮ ಭದ್ರತಾ ಸಾಮರ್ಥ್ಯದ ಪ್ರದರ್ಶನ. ಇವತ್ತು ಬೆಂಗಳೂರು ಡಿಫೆನ್ಸ್ ಮತ್ತು ಮಾರುಕಟ್ಟೆಯನ್ನು ನಿರ್ವಹಿಸುವ ಏಕೈಕ ಕೇಂದ್ರವಾಗಿದೆ. ಇಂದು ಏರ್​ಫೋರ್ಸ್​​ನಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ಹೆಲಿಕಾಪ್ಟರ್ ತಯಾರಿಕೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ ಎಂದರು.

ಇದನ್ನೂ ಓದಿ: ಬೆಂಗಳೂರು ಏರ್​ ಶೋ ಲೈವ್​, ಲೋಹದ ಹಕ್ಕಿಗಳ ಚಮತ್ಕಾರ, ಆರ್ಭಟ

ಕರ್ನಾಟಕದಲ್ಲಿ ಇಂದು ಏರ್ ಕ್ರಾಫ್ಟ್ ಅಧ್ಯಯನಕ್ಕೆ ಸಂಬಂಧಿಸಿದ ಅನೇಕ ಇಂಜಿನಿಯರಿಂಗ್ ಕಾಲೇಜು ಹಾಗೂ ಸಂಸ್ಥೆಗಳಿವೆ. ಪ್ರತಿಭೆಗಳಿಗೆ ಕರ್ನಾಟಕ ಉತ್ತಮ ವೇದಿಕೆ ಒದಗಿಸುತ್ತಿದೆ. ಏರ್ ಶೋ ಎಲ್ಲರಿಗೂ ಒಂದು ಉತ್ತಮ ವೇದಿಕೆಯಾಗಲಿದೆ. ಏರ್ ಇಂಡಿಯಾ -2025ರ ಯಶಸ್ಸಿಗೆ ಕಾರಣವಾಗುತ್ತಿರುವ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಶ್ಲಾಘಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ