ಆನೇಕಲ್​​ ಬಳಿ ಹೊಸ ಕ್ರಿಕೆಟ್​​ ಸ್ಟೇಡಿಯಂಗೆ ನಾಳೆ ಗುದ್ದಲಿ ಪೂಜೆ: ಕ್ರೀಡಾಂಗಣದ ವಿಶೇಷತೆಗಳೇನು?

ಬೆಂಗಳೂರಿನ ಆನೇಕಲ್‌ನಲ್ಲಿ 943 ಕೋಟಿ ವೆಚ್ಚದಲ್ಲಿ 80,000 ಆಸನ ಸಾಮರ್ಥ್ಯದ ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದ್ದು, ನಾಳೆ ಸಿಎಂ ಸಿದ್ದರಾಮಯ್ಯ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದು ಭಾರತದ 2ನೇ ಅತಿದೊಡ್ಡ ಕ್ರೀಡಾಂಗಣವಾಗಲಿದ್ದು, ಇದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ಎರಡು ಪಟ್ಟು ದೊಡ್ಡದಾಗಿರಲಿದೆ. ಭಾರಿ ಜನಸ್ತೋಮ ನಿರ್ವಹಣೆಗೆ ಅಗತ್ಯವಾದ ಸುರಕ್ಷತಾ ವ್ಯವಸ್ಥೆಗಳನ್ನೂ ಈ ಕ್ರೀಡಾಂಗಣ ಹೊಂದಿರಲಿದೆ.

ಆನೇಕಲ್​​ ಬಳಿ ಹೊಸ ಕ್ರಿಕೆಟ್​​ ಸ್ಟೇಡಿಯಂಗೆ ನಾಳೆ ಗುದ್ದಲಿ ಪೂಜೆ: ಕ್ರೀಡಾಂಗಣದ ವಿಶೇಷತೆಗಳೇನು?
ಸಾಂದರ್ಭಿಕ ಚಿತ್ರ
Image Credit source: AI Image

Updated on: May 22, 2026 | 11:23 AM

ಬೆಂಗಳೂರು, ಮೇ 22: ನಗರದ ಹೊರವಲಯ ಆನೇಕಲ್‌ ಬಳಿ ನಿರ್ಮಾಣವಾಗಲಿರುವ ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ನಾಳೆ (ಮೇ 23) ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಲಿದ್ದಾರೆ. 80 ಸಾವಿರ ಆಸನ ಸಾಮರ್ಥ್ಯ ಹೊಂದಿರುವ ಈ ಕ್ರೀಡಾಂಗಣ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಬಳಿಕ ಭಾರತದ ಎರಡನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಲಿದೆ. ಸುಮಾರು 943 ಕೋಟಿ ವೆಚ್ಚದ ಈ ಯೋಜನೆ ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ನಿರ್ಮಾಣ ಎಲ್ಲಿ?

ನೂತನ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಸೂರ್ಯನಗರ 4ನೇ ಹಂತದಲ್ಲಿ (ಇಂಡ್ಲವಾಡಿ ಗ್ರಾಮ) ನಿರ್ಮಾಣವಾಗಲಿದೆ. ಕರ್ನಾಟಕ ಗೃಹ ಮಂಡಳಿ (KHB) ವತಿಯಿಂದ ‘ಕೆಎಚ್‍ಬಿ ಸೂರ್ಯ ಕ್ರೀಡಾ ಗ್ರಾಮ’ ಯೋಜನೆಯಡಿ ಈ ಬೃಹತ್ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ.

ಇದನ್ನೂ ಓದಿ: ವನ್ಯಜೀವಿಗಳಿಗೆ ತೊಂದರೆ ಆತಂಕ; ಆನೆಕಲ್​​ ಬಳಿ ಹೊಸ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ತೀವ್ರ ವಿರೋಧ

ವಿಶೇಷತೆ ಏನು?

ಆಧುನಿಕ ಸೌಲಭ್ಯಗಳು, ಹಾಸ್ಪಿಟಾಲಿಟಿ ಲೌಂಜ್‌ಗಳು, ವಿಐಪಿ ಬಾಕ್ಸ್‌ಗಳು ಹಾಗೂ ಮೀಡಿಯಾ ಸೌಲಭ್ಯಗಳನ್ನು ಒಳಗೊಂಡಂತೆ ಪ್ರೇಕ್ಷಕರ ಅನುಭವವನ್ನು ಉತ್ತಮಗೊಳಿಸುವ ವ್ಯವಸ್ಥೆಗಳು ಇರಲಿವೆ. ಜೊತೆಗೆ ಭಾರಿ ಜನಸ್ತೋಮ ನಿರ್ವಹಣೆಗೆ ಅಗತ್ಯವಾದ ಸುರಕ್ಷತಾ ವ್ಯವಸ್ಥೆಗಳನ್ನೂ ಈ ಕ್ರೀಡಾಂಗಣ ಹೊಂದಿರಲಿದೆ.

ಆಸನ ಸಾಮರ್ಥ್ಯ ಎಷ್ಟು?

ನಗರದ ಹೃದಯಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣವು ಕೇವಲ 32 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದು, ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ IPL ಪಂದ್ಯಗಳಿಗೆ ಇದು ಸಾಕಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ನೂತನ ಕ್ರೀಡಾಂಗಣವನ್ನು ಬಹಳ ದೊಡ್ಡದಾಗಿ 75 ಏಕರೆ ಜಾಗದಲ್ಲಿ ನಿರ್ಮಿಸಲು ಯೋಜಿಲಾಗಿದ್ದು, ಸ್ಟೇಡಿಯಂನಲ್ಲಿ 80 ಸಾವಿರ ಜನರಿಗೆ ಆಸನ ವ್ಯವಸ್ಥೆ ಇರಲಿದೆ. ಆ ಮೂಲಕ ಇದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ಎರಡು ಪಟ್ಟು ದೊಡ್ಡದಾಗಿರಲಿದೆ.

ಏನೆಲ್ಲ ಪ್ರಯೋಜನ?

ಸ್ಟೇಡಿಯಂ ಯೋಜನೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮಾತ್ರವಲ್ಲದೆ ಕರ್ನಾಟಕದಲ್ಲಿ ಕ್ರೀಡೆಗಳ ಉತ್ತೇಜನ ಸಂಬಂಧವೂ ಮಹತ್ವದ ಪಾತ್ರವಹಿಸಲಿದೆ. ಕ್ರಿಕೆಟ್ ತರಬೇತಿ ಕೇಂದ್ರಗಳು, ಯುವಕರ ಕ್ರೀಡಾ ಕಾರ್ಯಕ್ರಮಗಳಿಗೆ ಇದು ವೇದಿಕೆಯಾಗಲಿದೆ. ಶಾಲೆ, ಕಾಲೇಜು ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳಿಗೂ ಅವಕಾಶ ಕಲ್ಪಿಸುವ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ. ಕ್ರಿಕೆಟ್ ಮಾತ್ರವಲ್ಲದೆ, ಈ ಸ್ಟೇಡಿಯಂನ್ನು ಬಹುಉದ್ದೇಶೀಯ ವೇದಿಕೆಯಾಗಿ ರೂಪಿಸುವ ಯೋಜನೆಯೂ ಇದೆ. ಸಂಗೀತ ಕಾರ್ಯಕ್ರಮಗಳು, ಸಮ್ಮೇಳನಗಳು, ಸಾರ್ವಜನಿಕ ಸಭೆಗಳು, ಕಾರ್ಪೊರೇಟ್ ಕಾರ್ಯಕ್ರಮಗಳು ಹಾಗೂ ಪ್ರದರ್ಶನಗಳಿಗೂ ಇದನ್ನು ಬಳಸುವ ಉದ್ದೇಶವಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:22 am, Fri, 22 May 26

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us