ಬೆಸ್ಕಾಂಗೆ ತಲೆನೋವಾದ ವಿದ್ಯುತ್ ಕಳ್ಳತನ ಪ್ರಕರಣಗಳು: 23-24 ಸಾಲಿನಿಂದ 2025 ರ ಆಗಸ್ಟ್ ವರೆಗೆ ಬರೋಬ್ಬರಿ 11 ಸಾವಿರ ಕೇಸ್

ಕರ್ನಾಟಕದ ಶೇಕಡಾ 50 ರಷ್ಟು ಬೇಡಿಕೆಯ ವಿದ್ಯುತ್ ಪೂರೈಕೆ ಮಾಡುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಗೆ ನಿರೀಕ್ಷಿತ ಆದಾಯ ಗಳಿಸುವುದು ಅನಿವಾರ್ಯ ಆಗಿದೆ. ಈ ಗುರಿ ಮಧ್ಯೆಯೇ ವಿದ್ಯುತ್ ಕಳ್ಳತನ ಮಾಡಿ ಬೆಸ್ಕಾಂ ಆದಾಯಕ್ಕೆ ಕುತ್ತು ತರುತ್ತಿರುವ ವಿದ್ಯುತ್ ಕಳ್ಳರ ಹಾವಳಿ ಬೆಸ್ಕಾಂಗೆ ತಲೆನೋವಾಗಿದೆ.

ಬೆಸ್ಕಾಂಗೆ ತಲೆನೋವಾದ ವಿದ್ಯುತ್ ಕಳ್ಳತನ ಪ್ರಕರಣಗಳು: 23-24 ಸಾಲಿನಿಂದ 2025 ರ ಆಗಸ್ಟ್ ವರೆಗೆ ಬರೋಬ್ಬರಿ 11 ಸಾವಿರ ಕೇಸ್
ಸಾಂದರ್ಭಿಕ ಚಿತ್ರ

Updated on: Oct 02, 2025 | 7:50 AM

ಬೆಂಗಳೂರು, ಅಕ್ಟೋಬರ್ 2: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ (BESCOM) ಇಡೀ ರಾಜ್ಯದ ಅತಿ ದೊಡ್ಡ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಒಂದು. ಕರ್ನಾಟಕದ ಶೇಕಡಾ 50 ರಷ್ಟು ಬೇಡಿಕೆಯ ವಿದ್ಯುತ್ ಅನ್ನು ಪೂರೈಕೆ ಮಾಡುತ್ತಾ ಬಂದಿದೆ. ಆದರೆ ಬೆಸ್ಕಾಂ ನಿಗಮಕ್ಕೆ ಪ್ರತಿ ವರ್ಷವೂ ವಿದ್ಯುತ್ ಕಳ್ಳತನದ ಪ್ರಕರಣಗಳು ತಲೆನೋವಾಗಿ ಪರಿಣಮಿಸುತ್ತಿದ್ದು, ಆದಾಯ ಸೋರಿಕೆಗೆ ಕಾರಣವಾಗಿದೆ. ಅನಧಿಕೃತವಾಗಿ ವಿದ್ಯುತ್ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ, ದಂಡ ಮತ್ತು ಜಾಗೃತಿ ಮೂಡಿಸಿದರೂ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಸ್ವತಃ ಬೆಸ್ಕಾಂ ನೀಡಿರುವ ಮಾಹಿತಿ ಪ್ರಕಾರ, 2023-24 ರ ಆರ್ಥಿಕ ವರ್ಷದಿಂದ ಈ ವರ್ಷದ ಆಗಸ್ಟ್ ವರೆಗೆ ಬರೋಬ್ಬರಿ 11,193 ವಿದ್ಯುತ್ ಕಳ್ಳತನದ ಪ್ರಕರಣಗಳು ದಾಖಲಾಗಿವೆ.

ಬೆಸ್ಕಾಂ ಜಾಗೃತ ದಳದ ಅಂಕಿ ಅಂಶ

2023-24 ಆರ್ಥಿಕ ವರ್ಷದಲ್ಲಿ 28,573 ಪ್ರಕರಣಗಳ ಪರಿಶೀಲನೆ ಮಾಡಲಾಗಿದ್ದು, ಈ ಪೈಕಿ 4,748 ಪ್ರಕರಣಗಳು ದೃಢಪಟ್ಟಿವೆ. 12.20 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. 2024-25 ಆರ್ಥಿಕ ವರ್ಷದಲ್ಲಿ 25,921 ಪ್ರಕರಣಗಳ ಪರಿಶೀಲನೆ ಮಾಡಲಾಗಿದ್ದು, 4,579 ಪ್ರಕರಣಗಳು ದೃಢಪಟ್ಟಿವೆ. 12.81 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. 2025-26(ಆಗಸ್ಟ್ ವರೆಗೆ) 9,853 ಪ್ರಕರಣಗಳ ಪರಿಶೀಲನೆ ಮಾಡಲಾಗಿದ್ದು, 1,866 ಪ್ರಕರಣಗಳು ದೃಢಪಟ್ಟಿವೆ. 4.95 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ: BESCOM WhatsApp Helpline: ಬೆಸ್ಕಾಂ ಸಂಪರ್ಕಕ್ಕಾಗಿ ಬಂದಿದೆ WhatsApp, 8 ಜಿಲ್ಲೆಗಳಿಗೆ ಅನ್ವಯವಾಗುವ ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ ನೋಡಿ

ಒಟ್ಟಾರೆ 2023-24 ರಿಂದ 2025 ಆಗಸ್ಟ್ ವರೆಗೆ 64,347 ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು, 11,193 ಕೇಸ್ ಗಳನ್ನ ದಾಖಲಿಸಿ 29.95 ಕೋಟಿ ರೂಪಾಯಿ ವಸೂಲಿ ಮಾಡಿರುವುದು ಅಂಕಿ ಅಂಶದಿಂದ ಬಯಲಾಗಿದೆ. ಬೆಳಕಿಗೆ ಬಂದಿರುವ ಪ್ರಕರಣಗಳು ಇಷ್ಟಾದರೆ, ಇನ್ನೂ ಬೆಳಕಿಗೆ ಬಾರದ ಪ್ರಕರಣಗಳು ಎಷ್ಟು ಎಂಬುದು ಈಗ ಇಂಧನ ಇಲಾಖೆಯ ಕಳವಳಕ್ಕೆ ಕಾರಣವಾಗಿದೆ. ಬೆಸ್ಕಾಂ ಆದಾಯ ಕೂಡ ಈ ರೂಪದಲ್ಲೂ ಸೋರಿಕೆಯಾಗುತ್ತಿರುವುದು ದೃಢವಾಗಿದೆ. ಇನ್ನಾದರೂ ಜನರು ವಿದ್ಯುತ್ ಬಳಕೆ ವಿಚಾರವಾಗಿ ಜಾಗೃತರಾಗುವುದು ಉತ್ತಮ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:47 am, Thu, 2 October 25