ಬದಲಾಗುತ್ತಿರುವ ವೆದರ್ಗೆ ಹೈರಾಣಾದ ಬೆಂಗಳೂರಿನ ಜನ: ಜ್ವರ ಸೇರಿದಂತೆ ಡೆಂಗ್ಯೂ, ಚಿಕನ್ ಗುನ್ಯಾ ಉಲ್ಬಣ
ಬೆಂಗಳೂರಿನಲ್ಲಿ ಕಳೆದ ಕೆಲವು ವಾರದಿಂದ ಬಿಟ್ಟು ಬಿಟ್ಟು ಮಳೆ ಹಾಗೂ ಬಿಸಲಿನ ವಾತಾವರಣ ಹಿನ್ನಲೆ ವೈರಾಣು ಜ್ವರ ಪ್ರಕರಣಗಳು ಸೇರಿದಂತೆ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಉಲ್ಬಣವಾಗುತ್ತಿದೆ. ನೆಗಡಿ, ಕೆಮ್ಮು, ಶೀತದ ಸಮಸ್ಯೆ ಕಂಡು ಬರುತ್ತಿದ್ದು, ದೊಡ್ಡವರೊಂದಿಗೆ ಮಕ್ಕಳೂ ಹೈರಾಣಾಗುವಂತೆ ಮಾಡಿದೆ.

ಬೆಂಗಳೂರು, ಅಕ್ಟೋಬರ್ 02: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (bangaluru) ಒಂದು ವಾರ ಮಳೆ, ಮತ್ತೊಂದು ವಾರ ಚಳಿ. ಸದ್ಯ ಈ ವಾತಾವರಣ ಜನರನ್ನ ಹೈರಾಣು ಮಾಡಿದೆ. ಕಳೆದ ಕೆಲವು ದಿನಗಳಿಂದ ಮಳೆ, ಬಿಸಿಲು, ಚಳಿಯ ವಾತಾವರಣ ಕಂಡು ಬರುತ್ತಿದೆ. ಬದಲಾಗುತ್ತಿರುವ ಬೆಂಗಳೂರಿನ ಈ ವೆದರ್ಗೆ ಜನರು ಫುಲ್ ಹೈರಾಣಾಗುತ್ತಿದ್ದಾರೆ. ಹೀಗಾಗಿ ಜನರಲ್ಲಿ ಸಾಂಕ್ರಾಮಿಕ ರೋಗಗಳ ಜೊತೆಗೆ ಡೆಂಗ್ಯೂ (Dengue) ಹಾಗೂ ಚಿಕನ್ ಗುನ್ಯಾ ಪ್ರಕರಣಗಳು ಹೆಚ್ಚಾಗಿವೆ.
ಈ ಬದಲಾಗುತ್ತಿರುವ ವಾತಾವರಣದಿಂದ ನಾನಾ ಕಾಯಿಲೆಗಳಿಗೆ ಕಾರಣವಾಗಿದೆ. ರಾಜ್ಯದಲ್ಲಿ ಸದ್ದಿಲ್ಲದೇ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಪ್ರಕರಣಗಳು ಏರಿಕೆಯಾಗಿವೆ. ರಾಜ್ಯದಲ್ಲಿ ಡೆಂಗ್ಯೂ ಐದು ಸಾವಿರ ಗಡಿ ದಾಟಿದರೆ, ಒಂದು ಸಾವಿರ ಗಡಿ ಹತ್ತಿರ ಚಿಕನ್ ಗುನ್ಯಾ ಪ್ರಕರಣಗಳು ಕಂಡುಬರುತ್ತಿವೆ.
ಇದನ್ನೂ ಓದಿ: ಕೇರಳದಲ್ಲಿ ಮೆದುಳು ತಿನ್ನೋ ಅಮೀಬಾ ಸೋಂಕಿಗೆ 19 ಜನ ಬಲಿ: ಕರ್ನಾಟಕದಲ್ಲಿ ಕಟ್ಟೆಚ್ಚರ!
ಇಡೀ ರಾಜ್ಯದ ಪ್ರಕರಣಗಳು ಒಂದು ಕಡೆಯಾದರೆ, ಬೆಂಗಳೂರಿನದ್ದೇ ಮತ್ತೊಂದು ಕಡೆ. ಬೆಂಗಳೂರಿನಲ್ಲಿ 2478 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ 734 ಚಿಕನ್ ಗುನ್ಯಾ ಕೇಸ್ಗಳಿದ್ದರೆ, ಅದರಲ್ಲೀ ಬೆಂಗಳೂರಿನಲ್ಲಿ 120 ಕೇಸ್ ದಾಖಲಾಗಿವೆ.
ವೈದ್ಯರ ಸಲಹೆ ಏನು?
ಈಡೀಸ್ ಈಜಿಪ್ಟೆ ಎಂಬ ಸೊಳ್ಳೆ ಕಚ್ಚುವುದರಿಂದ ಕಾಣಿಸಿಕೊಳ್ಳುವ ಕಾಯಿಲೆಗಳು ಕಂಡು ಬರುತ್ತಿವೆ. ನಿಂತ ನೀರಲ್ಲಿ ಈ ಡೇಂಜರ್ಸ್ ಸೊಳ್ಳೆ ಉತ್ಪತ್ತಿ ಹಿನ್ನಲೆ ಎಚ್ಚರವಹಿಸುವಂತೆ ವೈದ್ಯರು ಸೂಚಿಸಿದ್ದು, ವಿಪರೀತ ಜ್ವರ, ತಲೆನೋವು, ಮೈಕೈ ನೋವು, ಕೀಲುನೋವು, ವಾಂತಿ- ವಾಕರಿಕೆ, ಕಣ್ಣುಗಳ ಹಿಂಭಾಗದಲ್ಲಿ ನೋವು, ಊದಿಕೊಂಡ ಗ್ರಂಥಿಗಳು ಕಂಡುಬಂದರೆ ನಿರ್ಲಕ್ಷ್ಯ ವಹಿಸದ್ದಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ವಾತಾವರಣದಿಂದ ವೈರಾಣು ಜ್ವರ, ಕೆಮ್ಮು, ನೆಗಡಿ, ಅತಿಸಾರ ವಾಂತಿ, ಬೇಧಿ ಪ್ರಕರಣಗಳು ಹೆಚ್ಚುತ್ತಿದ್ದು, ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ಶೇ 15% ರಷ್ಟು ಜ್ವರದ ಪ್ರಕರಣ ಏರಿಕೆ ಕಂಡಬರುತ್ತಿದೆ. ಇದಕ್ಕೆಲ್ಲಾ ಸಿಲಿಕಾನ್ ಸಿಟಿಯಲ್ಲಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಹವಾಮಾನದ ಎಫೆಕ್ಟ್ ಕಾರಣ ಅಂತಿದ್ದಾರೆ ವೈದ್ಯರು.
ವಾತಾವರಣದಿಂದ ಕಂಡುಬರುತ್ತಿರುವ ಆರೋಗ್ಯ ಸಮಸ್ಯೆಗಳು ಯಾವವು?
- ವೈರಾಣು ಜ್ವರ
- ನೆಗಡಿ
- ತೀವ್ರ ಜ್ವರ
- ಉಸಿರಾಟದ ಸಮಸ್ಯೆ
- ನೆಗಡಿ ಕೆಮ್ಮು
- ತೀವ್ರ ಸುಸ್ತು
- ಮೈಕೈ ನೋವು
- ತಲೆ ಸಿಡಿತ, ಚಳಿ ಜ್ವರ
- ಕೆಲವರಲ್ಲಿ ಶೀತ ಜ್ವರ ಕಂಡು ಬರುತ್ತಿದೆ.
ಇದನ್ನೂ ಓದಿ: ಕರ್ನಾಟಕದ 41,000 ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆ: ಸಮೀಕ್ಷೆಯಲ್ಲಿ ಬಯಲಾಯ್ತು ಆಘಾತಕಾರಿ ಅಂಶ
ಒಟ್ಟಿನಲ್ಲಿ ಮಳೆ, ಚಳಿ ವಾತಾವರಣ ಹಿನ್ನಲೆ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಕಂಡುಬರುತ್ತಿದ್ದು, ಜನರು ಸ್ವಚ್ಛತೆ ಕಾಪಾಡುವುದು, ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಅಗತ್ಯ ಎಂಬ ಸಲಹೆಯನ್ನ ವೈದ್ಯರು ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.