ನವರಾತ್ರಿಯಲ್ಲಿ ಸ್ತ್ರೀ ರೂಪ ತಾಳುತ್ತಾನೆ ಉಡುಪಿ ಶ್ರೀಕೃಷ್ಣ! ಏನಿದು ಅಪರೂಪದ ಪೂಜಾ ಕ್ರಮ? ಇಲ್ಲಿದೆ ಮಾಹಿತಿ
ಕೃಷ್ಣ ದೇವರು ಸ್ತ್ರೀಲೋಲ ಎನ್ನುತ್ತಾರೆ. ಆದರೆ ಕೃಷ್ಣನೇ ಹೆಣ್ಣಾಗಿ ರೂಪ ಬದಲಿಸುವುದನ್ನು ಎಲ್ಲಾದರೂ ಕಂಡಿದ್ದೀರಾ? ನವರಾತ್ರಿ ಬಂದಾಗ ಒಂಭತ್ತು ದಿನಗಳ ಕಾಲ ಉಡುಪಿಯ ಶ್ರೀಕೃಷ್ಣ ಮಠದ ಕಡೆಗೋಲು ಕೃಷ್ಣ ಹೆಣ್ಣಿನ ರೂಪ ಧರಿಸಿ ದೇವಿಯ ಸ್ವರೂಪ ಪಡೆಯುತ್ತಾನೆ! ಪುರುಷ ದೇವರು ಸ್ತ್ರೀಯಾಗಿ ಬದಲಾಗುವ ಅಪರೂಪದ ಆರಾಧನಾ ಪದ್ಧತಿಯ ಕುರಿತ ಮಾಹಿತಿ ಇಲ್ಲಿದೆ.

ಉಡುಪಿ, ಅಕ್ಟೋಬರ್ 2: ದೇವರಿಗೆ ನೂರೆಂಟು ಬಗೆಯ ಅಲಂಕಾರ ಮಾಡುವ ಬಗ್ಗೆ ಕೇಳಿರುತ್ತೀರಿ. ಆದರೆ, ಪುರುಷ ದೇವರನ್ನು ಹೆಣ್ಣಿನ ಸ್ವರೂಪದಲ್ಲಿ, ಅಂದರೆ ಶಕ್ತಿ ಸ್ವರೂಪದಲ್ಲಿ ಪೂಜಿಸುತ್ತಾರೆ ಎಂಬುದು ಗೊತ್ತಿದೆಯಾ? ಉಡುಪಿಯ (Udupi) ಶ್ರೀ ಕೃಷ್ಣನಿಗೆ ನವರಾತ್ರಿಯ ಒಂಭತ್ತು ದಿನವೂ ಹೆಣ್ಣಿನ ಅಲಂಕಾರ ಮಾಡಲಾಗುತ್ತದೆ. ಇದೊಂದು ಅಪರೂಪದ ಪೂಜಾಕ್ರಮ. ಶಕ್ತಿಯ ಆರಾಧನೆಯ ಜೊತೆಗೆ ಅನುಸಂಧಾನ ಮಾಡುವ ಈ ಅಪರೂಪದ ಅಲಂಕಾರಗಳು ಭಕ್ತರಿಗೆ ಹೊಸ ಅನುಭವ ನೀಡುತ್ತದೆ. ಉಡುಪಿ ಕೃಷ್ಣ ಮಠ (Udupi Sri Krishna Matha) ಬಿಟ್ಟರೆ ಬೇರೆಲ್ಲೂ ಈ ಪದ್ಧತಿ ಇಲ್ಲ. ಕೃಷ್ಣನ ಅಲಂಕಾರದಲ್ಲಿ ಹೊಸ ದಾಖಲೆ ಬರೆದ ವಾದಿರಾಜ ಯತಿಗಳ ಕಾಲದಿಂದ ಅಂದರೆ, ಸುಮಾರು ನಾಲ್ಕು ಶತಮಾನಗಳಿಂದ ಈ ಕ್ರಮ ಬೆಳೆದು ಬಂದಿದೆ ಎನ್ನಲಾಗಿದೆ.
ಉಡುಪಿ ಕೃಷ್ಣನಿಗೆ ಪೂಜೆ ಮಾಡುವ ಅಧಿಕಾರ ಕೇವಲ ಯತಿಗಳದ್ದು. ಹಾಗಾಗಿ ಅಲಂಕಾರ ಮಾಡುವ ಜವಾಬ್ದಾರಿಯೂ ಅವರದ್ದೇ. ಉಡುಪಿಯ ಕೃಷ್ಣನನ್ನು ಸ್ವತಃ ವಿಶ್ವಕರ್ಮ ದೇವರು ರುಕ್ಮಿಣೀ ದೇವಿಗೆಂದೇ ತಯಾರಿಸಿಕೊಟ್ಟರು ಎಂಬ ಪೌರಾಣಿಕ ಕಥೆಯಿದೆ. ಹಾಗಾಗಿ ಇದೊಂದು ಬಾಲಕೃಷ್ಣನ ವಿಗ್ರಹ. ಬಾಲರೂಪಿ ಕೃಷ್ಣನಿಗೆ ಏನು ಅಲಂಕಾರ ಮಾಡಿದರೂ ಸೊಗಸೇ ಎಂಬುದು ಭಕ್ತರ ನಂಬಿಕೆ.
ಐದು ಶತಮಾನಗಳ ಹಿಂದೆ ವಾದಿರಾಜ ಸ್ವಾಮಿಗಳು ಈ ಬಾಲಕೃಷ್ಣನಿಗೆ ಮುನ್ನೂರು ಬಗೆಯ ಅಲಂಕಾರ ಮಾಡಿ ಸಂಭ್ರಮಿಸಿದ್ದರು ಎಂಬ ಇತಿಹಾಸ ಇದೆ. ರೂಪಗಳು ಬೇರೆಯಾದರೂ ಒಳಗಿನ ಶಕ್ತಿಯೊಂದೇ ಎಂಬುದು ಉಡುಪಿ ಕೃಷ್ಣನ ಬಗೆಗಿರುವ ನಂಬಿಕೆ.

ಈ ಬಾರಿಯೂ ಪರ್ಯಾಯ ಪುತ್ತಿಗೆ ಮಠಾಧೀಶರು, ಅತ್ಯಂತ ಕಲಾತ್ಮಕವಾಗಿ ಅಲಂಕಾರ ಮಾಡಿದ್ದಾರೆ. ಮಯೂರ ವಾಹಿನಿ ಮಹಾಸರಸ್ವತಿ, ಲಕ್ಷ್ಮಿ ಹೃದಯ, ಮುತ್ತುಲಕ್ಷ್ಮಿ, ಶ್ರೀ ಚಕ್ರ ಲಕ್ಷ್ಮಿ, ರುಕ್ಮಿಣಿ, ನೀರೆ ತೋರೆಲೆ ಹೀಗೆ ಕಡೆಗೋಲು ಕೃಷ್ಣ ದೇವರು ನಾನಾ ರೂಪಗಳಲ್ಲಿ ಕಂಗೊಳಿಸಿದ್ದಾನೆ. ಯಾವುದೇ ಸ್ವರೂಪಕ್ಕೂ ಉಡುಪಿಯ ಕಡೆಗೋಲು ಕೃಷ್ಣನ ವಿಗ್ರಹ ಒಗ್ಗಿಕೊಳ್ಳುತ್ತದೆ ಎಂಬುದು ಇನ್ನೊಂದು ವಿಶೇಷ.
ಇದನ್ನೂ ಓದಿ: ಸುಭದ್ರೆಗಾಗಿ ಸಂಘರ್ಷ:ಉಡುಪಿ ಮಠ-ಹಿರೇಕಲ್ಮಠಗಳ ನಡುವೆ ಆನೆಗಾಗಿ ಹಕ್ಕು ಯುದ್ಧ
ಕೃಷ್ಣ ಸ್ತ್ರೀ ಲೋಲ ಎಂಬ ಮಾತನ್ನು ಕೇಳಿದ್ದೇವೆ. ಆದರೆ ಕೃಷ್ಣ ದೇವರು ಸ್ವತಃ ಶಕ್ತಿ ಸ್ವರೂಪಿಣಿಯಾಗಿ ಕಂಗೊಳಿಸುವ ಅಪರೂಪದ ಅವತಾರಗಳನ್ನು ನವರಾತ್ರಿ ಮಾತ್ರವಲ್ಲದೆ ಪ್ರತಿ ಶುಕ್ರವಾರವೂ ಉಡುಪಿಯ ಶ್ರೀಕೃಷ್ಣಮಠದಲ್ಲಿ ನೀವು ಕಾಣಬಹುದು.



