AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

ಭಾರತೀಯ ಪ್ರಸಿದ್ಧ ಇತಿಹಾಸಕಾರ, ಅಂಕಣಕಾರ ಮತ್ತು ಚಿಂತಕರಾದ ಡಾ. ರಾಮಚಂದ್ರ ಗುಹಾ 2025ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗಾಂಧೀಜಿಯವರ ಜೀವನ ಮೌಲ್ಯಗಳನ್ನು ಸಮಾಜದಲ್ಲಿ ಹರಡಲು ಮಹತ್ತರ ಕೊಡುಗೆ ನೀಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ಪ್ರತಿವರ್ಷ ಪ್ರದಾನಿಸಲಾಗುತ್ತದೆ.

ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ
ರಾಮಚಂದ್ರ ಗುಹಾ
ಪ್ರಸನ್ನ ಹೆಗಡೆ
|

Updated on: Oct 01, 2025 | 8:48 PM

Share

ಬೆಂಗಳೂರು, ಅಕ್ಟೋಬರ್ 01: 2025ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಭಾರತೀಯ ಪ್ರಸಿದ್ಧ ಇತಿಹಾಸಕಾರ, ಅಂಕಣಕಾರ ಮತ್ತು ಚಿಂತಕರಾದ ಡಾ. ರಾಮಚಂದ್ರ ಗುಹಾ (Ramachandra Guha) ಅವರನ್ನು ಕರ್ನಾಟಕ ಸರ್ಕಾರ ಆಯ್ಕೆ ಮಾಡಿದೆ. ಗಾಂಧೀಜಿಯವರ ಜೀವನ ಮೌಲ್ಯಗಳನ್ನು ಸಮಾಜದಲ್ಲಿ ಹರಡಲು ಮಹತ್ತರ ಕೊಡುಗೆ ನೀಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪ್ರತಿ ವರ್ಷ ಈ ಪ್ರಶಸ್ತಿಯನ್ನ ನೀಡಲಾಗುತ್ತದೆ.

ಗಾಂಧೀ ಜಯಂತಿಯನ್ನು ರಾಜ್ಯಾದ್ಯಂತ ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಅಂಗವಾಗಿ ಗಾಂಧೀಜಿಯವರ ತತ್ತ್ವ, ಮೌಲ್ಯ ಹಾಗೂ ಸಮಾಜಮುಖಿ ಚಿಂತನೆಗಳನ್ನು ಜನಮನಗಳಲ್ಲಿ ಬಿತ್ತುವಲ್ಲಿ ಮಹತ್ವದ ಪಾತ್ರವಹಿಸಿರುವ ಡಾ. ರಾಮಚಂದ್ರ ಗುಹಾ ಅವರನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ. ಗುಹಾ ಅವರು ಭಾರತದ ಸಮಕಾಲೀನ ಇತಿಹಾಸ, ರಾಜಕೀಯ ಚಳವಳಿಗಳು, ಪರಿಸರ ಹೋರಾಟಗಳು ಹಾಗೂ ಕ್ರಿಕೆಟ್ ಕುರಿತ ತಮ್ಮ ಅಧ್ಯಯನ ಮತ್ತು ಗ್ರಂಥ ರಚನೆಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಅಧಿಕಾರದಿಂದ ಇಳಿಸ್ತಾರೆಂಬ ಭಯ: ಛಲವಾದಿ ನಾರಾಯಣಸ್ವಾಮಿ

ಡಾ.ಗುಹಾ ಅವರ ಪ್ರಮುಖ ಕೃತಿಗಳು

  • India After Gandhi (ಸ್ವಾತಂತ್ರ್ಯಾನಂತರ ಭಾರತದ ಇತಿಹಾಸ)
  • A Corner of a Foreign Field (ಭಾರತೀಯ ಕ್ರಿಕೆಟ್‌ನ ಸಾಮಾಜಿಕ ಇತಿಹಾಸ)
  • Gandhi Before India (ಮಹಾತ್ಮ ಗಾಂಧೀಜಿಯವರ ಜೀವನಚರಿತ್ರೆಯ ಮೊದಲ ಭಾಗ)
  • Gandhi: The Years That Changed the World (ಜೀವನಚರಿತ್ರೆಯ ಎರಡನೇ ಭಾಗ)
  • The Unquiet Woods (ತಳಸ್ತರದ ಪರಿಸರ ಚಳವಳಿಗಳ ಅಧ್ಯಯನ)

ಡಾ. ರಾಮಚಂದ್ರ ಗುಹಾ ಅವರ ಈ ಕೃತಿಗಳು ಇತಿಹಾಸ ಅಧ್ಯಯನವನ್ನು ಶ್ರೀಮಂತಗೊಳಿಸುವುದಷ್ಟೇ ಅಲ್ಲದೆ, ಸಾಮಾನ್ಯ ಓದುಗರಿಗೂ ಸುಲಭವಾಗಿ ತಲುಪುವ ಶೈಲಿಯಲ್ಲಿರುವುದರಿಂದ ಸಮಾಜದಲ್ಲಿ ಚಿಂತನ–ಮನನಕ್ಕೆ ಪ್ರೇರಣೆಯಾಗಿವೆ. ವಿಶೇಷವಾಗಿ ಗಾಂಧೀ ತತ್ತ್ವಗಳನ್ನು ಆಳವಾಗಿ ವಿಶ್ಲೇಷಿಸಿ ಅವನ್ನು ಸಮಕಾಲೀನ ಭಾರತಕ್ಕೆ ಸಂಬಂಧಿಸಿದಂತೆ ಅರ್ಥೈಸುವಲ್ಲಿ ಡಾ. ಗುಹಾ ಅವರಿಗೆ ವಿಶಿಷ್ಟ ಸ್ಥಾನವಿದೆ. ಇವರು ಬರೆದಿರುವ ಗಾಂಧೀಜಿಯವರ ಎರಡು ಸಂಪುಟಗಳ ಜೀವನಚರಿತ್ರೆ ಕನ್ನಡ ಸೇರಿ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.