ಬೆಂಗಳೂರು: ನಗರದ ಹಲವೆಡೆ ಪವರ್ ಕಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಷ್ಟು ದಿನ ಪವರ್ ಕಟ್ ಅನುಭವಿಸಿದ ರಾಜಾಜಿನಗರ, ಇಂದಿರಾನಗರ, ಹೆಬ್ಬಾಳ, ರಾಜರಾಜೇಶ್ವರಿ ನಗರ, ಶಿವಾಜಿನಗರ ಮತ್ತು ಹೆಬ್ಬಾಳ ಪ್ರದೇಶಗಳಲ್ಲಿ ಪರಿಸ್ಥಿತಿ ಇದೀಗ ಸುಧಾರಿಸಿದೆ. ಕಂಬದ ಮೂಲಕ ಜೋತುಬೀಳುವ ವಿದ್ಯುತ್ ತಂತಿಗಳನ್ನು ನೆಲದಡಿಗೆ ಅಳವಡಿಸುವ ಬೆಸ್ಕಾಂನ ಮೊದಲ ಮತ್ತು ಎರಡನೇ ಹಂತದ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ಅಕ್ಟೋಬರ್ 2021ರ ಹೊತ್ತಿಗೆ ಎರಡೂ ಹಂತದ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಒಂದಾದ ಮೇಲೆ ಒಂದರಂತೆ ಹಲವು ಅಡೆತಡೆಗಳು ಎದುರಾದ ಕಾರಣ ಕಾಮಗಾರಿ ತಡವಾಯಿತು. ರಸ್ತೆಗಳಲ್ಲಿ ಕಾಮಗಾರಿ ನಿರ್ವಹಿಸಲು ಮತ್ತು ರಸ್ತೆ ಅಗೆಯಲು ಅನುಮತಿ ಪಡೆದುಕೊಳ್ಳುವ ವಿಚಾರದಲ್ಲಿ ಒಂದಾದ ಮೇಲೆ ಒಂದರಂತೆ ಸಮಸ್ಯೆಗಳು ಎದುರಾದವು.
ರಸ್ತೆ ಅಗೆಯಲು ಅನುಮತಿ ಪಡೆದುಕೊಂಡ ನಂತರ ವಿವಿಧ ಸಂಸ್ಥೆಗಳಿಗೆ ಸೇರಿದ ಸ್ವತ್ತುಗಳಿಗೆ ಹಾನಿಯುಂಟು ಮಾಡುವುದಿಲ್ಲ ಎಂದು ಅವುಗಳಿಂದ ಅನುಮೋದನೆ ಪಡೆದುಕೊಳ್ಳಬೇಕಿತ್ತು. ಹೀಗಾಗಿ ಕಾಮಗಾರಿ ಆರಂಭವಾಗುವುದು ತಡವಾಯಿತು ಎನ್ನುವ ಬೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆ ಪ್ರತಿಕ್ರಿಯಿಸಿದರು.
ಪರೀಕ್ಷೆಗಳು ಆರಂಭವಾದ ಹಿನ್ನೆಲೆಯಲ್ಲಿ ಲೋಡ್ ಶೆಡಿಂಗ್ಗೆ ವಿರೋಧ ವ್ಯಕ್ತವಾದ ಕಾರಣ ಸುಮಾರು ಒಂದು ತಿಂಗಳು ಕಾಮಗಾರಿಯ ವೇಗಕ್ಕೆ ಕಡಿವಾಣ ಬಿದ್ದಿತ್ತು. ಪರೀಕ್ಷೆ ಅವಧಿಯಲ್ಲಿ ಮಕ್ಕಳ ಓದಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಬೆಸ್ಕಾಂ ಸಾಮಾನ್ಯವಾಗಿ ಪವರ್ ಕಟ್ ಮಾಡುವುದಿಲ್ಲ. ಪರೀಕ್ಷೆ ಮುಗಿದ ನಂತರ ಮತ್ತೆ ಕಾಮಗಾರಿಯನ್ನು ಬೆಸ್ಕಾಂ ಆರಂಭಿಸಿತು.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಜೂನ್ ತಿಂಗಳಿನಿಂದ ಮಳೆ ಬಿರುಸಾಗಲಿದೆ. ವಿದ್ಯುತ್ ವಿತರಣಾ ಜಾಲ ಸುಧಾರಿಸುವ ಎರಡೂ ಹಂತಗಳ ಕಾಮಗಾರಿಯನ್ನು ಮುಂಗಾರು ಆರಂಭವಾಗುವುದರೊಳಗೆ ಮುಗಿಸುವುದು ಬೆಸ್ಕಾಂನ ಗುರಿಯಾಗಿದೆ. ಆಗಸ್ಟ್ 2022ರ ಒಳಗೆ ಮುಗಿಸಬೇಕು ಎಂದುಕೊಂಡಿದ್ದ 3 ಮತ್ತು 4ನೇ ಹಂತದ ಕಾಮಗಾರಿಗಳೂ ಸುಮಾರು 6 ತಿಂಗಳು ತಡವಾಗುವ ಸಾಧ್ಯತೆಯಿದೆ. ಮುಕ್ಕಾಲು ಪಾಲು ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ಸಂಪೂರ್ಣಗೊಳ್ಳಲಿದೆ.
ಕಂಬದ ಮೇಲೆ ನೇತಾಡುವ ವಿದ್ಯುತ್ ತಂತಿಗಳನ್ನು ನೆಲದಡಿ ಅಳವಡಿಸುವುದರಿಂದ ಹಲವು ಲಾಭಗಳಿವೆ. ವಿದ್ಯುತ್ ತಂತಿಗಳು ತುಂಡಾಗಿ ವಿದ್ಯುತ್ ಕಡಿತಗೊಳ್ಳುವುದು, ಮರಗಳ ಕೊಂಬೆಗಳು ಬಿದ್ದು ಕಂಗಳು ಉರುಳುವುದು ಸೇರಿದಂತೆ ಹಲವು ಕಾರಣಗಳಿಂದ ಆಗುತ್ತಿದ್ದ ಅನಾಹುತಗಳು ತಪ್ಪಲಿದೆ. ಇದರ ಜೊತೆಗೆ ವಿದ್ಯುತ್ ಸಂಬಂಧಿತ ಅಪಘಾತಗಳ ಪ್ರಮಾಣವೂ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Bescom: ಹಳೆಯ ಟ್ರಾನ್ಸ್ಫಾರ್ಮರ್ಗಳನ್ನ ತಪಾಸಣೆ ಮಾಡಲು ಸೂಚನೆ ನೀಡಿರುವ ಬೆಸ್ಕಾಂ
ಇದನ್ನೂ ಓದಿ: ಬಿಡಬ್ಲ್ಯೂಎಸ್ಎಸ್ಬಿ ಹಾಗೂ ಬೆಸ್ಕಾಂ ವಿರುದ್ಧ 13 ಎಫ್ ಐಆರ್ ದಾಖಲಿಸಲು ಬಿಬಿಎಂಪಿ ತೀರ್ಮಾನ