ಬೆಂಗಳೂರು, ಜ.25: ಬಿಟ್ ಕಾಯಿನ್(Bitcoin case) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಹಾಗೂ ಸೈಬರ್ ಎಕ್ಸ್ಪರ್ಟ್ ಸಂತೋಷ್ ಎಂಬಾತನನ್ನು ಸಿಐಡಿ(CID) ವಶಕ್ಕೆ ಪಡೆದಿದೆ. ಬೆಂಗಳೂರಿನ 1ನೇ ACMM ನ್ಯಾಯಾಲಯವು ಬಂಧಿತ ಆರೋಪಿಗಳನ್ನು ಜನವರಿ 31ರವರೆಗೆ ಸಿಐಡಿ ಕಸ್ಟಡಿಗೆ ಅಂದರೆ 6 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಲು ಆದೇಶ ನೀಡಿದೆ.
ಬಿಟ್ ಕಾಯಿನ್ ಪ್ರಕರಣದಲ್ಲಿ ನಿನ್ನೆ(ಜ.24) ಮಹತ್ತರ ಬೆಳವಣಿಗೆ ನಡೆದಿತ್ತು. ತನಿಖೆ ನಡೆಸುತ್ತಿರುವ ಎಸ್ಐಟಿ ಮತ್ತೊಂದು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಕರೆದಿದ್ದವರನ್ನೆಲ್ಲಾ ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿತ್ತು. ಅದರಲ್ಲಿ ಇಬ್ಬರು ಪೊಲೀಸರಾದ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಹಾಗೂ ಸೈಬರ್ ಎಕ್ಸ್ಪರ್ಟ್ ಸಂತೋಷ್ ಎಂದು ತಿಳಿದುಬಂದಿತ್ತು. ಈ ಹಿನ್ನಲೆ ನಿನ್ನೆ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಇಂದು ಮಧ್ಯಾಹ್ನ ಮೂರು ಘಂಟೆಗೆ ಎಸ್ಐಟಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚನೆಯಾಗಿ ಆರು ತಿಂಗಳು ಕಳೆದಿದ್ದರೂ ಇದುವರೆಗೆ ಯಾರನ್ನೂ ಅರೆಸ್ಟ್ ಮಾಡಿರಲಿಲ್ಲ. ಇನ್ನು ಪ್ರಕರಣದಲ್ಲಿ ಸಾವಿರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಅರೋಪ ಮಾಡಿದ್ದ ಬೆನ್ನಲ್ಲೆ ತನಿಖೆ ಮಾಡಿದಾಗ ಕೇವಲ ಮೂರೂವರೆ ಲಕ್ಷ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ವರ್ಗಾವಣೆ ಮಾಹಿತಿ ಲಭ್ಯವಾಗಿದೆ. ಸದ್ಯ ಪ್ರಕರಣ ಸಂಬಂಧ ಹೆಚ್ಚಿನ ತನಿಖೆಯನ್ನು ಸಿಐಟಿ ನಡೆಸುತ್ತಿದೆ. ತನಿಖೆಯಲ್ಲಿ ಏನೆಲ್ಲ ಅಂಶಗಳು ಬೆಳಕಿಗೆ ಬರಲಿವೆ ಎನ್ನುವುದುನ್ನು ಕಾದುನೋಡಬೇಕಿದೆ.
ಇನ್ನು ಶ್ರೀಕಿಯನ್ನು ಬಂಧಿಸಿ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಲಾಗಿತ್ತು. ಈ ವೇಳೆ ಸಿಸಿಬಿ ತನಿಖೆಯಲ್ಲಿ ಲೋಪ ನಡೆದಿದೆ ಎಂದು ಎಸ್‍ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿಯೇ ಎಫ್‍ಐಆರ್ ಕೂಡ ದಾಖಲಾಗಿತ್ತು. ಇದೀಗ ಈ ಪ್ರಕರಣದ ಪ್ರಮುಖ ಸಾಕ್ಷಿ ಶ್ರೀಕಿ ತನಿಖೆಗೆ ಸಹಕರಿಸದೇ ಸತಾಯಿಸುತ್ತಿದ್ದಾನೆ. ಜೊತೆಗೆ ಈ ಪ್ರಕರಣದಲ್ಲಿ ಕೆಲ ಬಿಜೆಪಿ ನಾಯಕರ ಹೆಸರುಗಳು ಕೇಳಿಬಂದಿದ್ದವು. ಇದರಿಂದಲೇ ಈ ಬಿಟ್ ಕಾಯಿನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಎಸ್ಐಟಿ ಅಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ