ಚುನಾವಣೆ ಸಿದ್ಧತೆ ಚುರುಕುಗೊಳಿಸಿದ ಬಿಜೆಪಿ; ನಾಳೆ ಕೋರ್ ಕಮಿಟಿ ಸಭೆ, ಯಡಿಯೂರಪ್ಪ ಜೊತೆಗೆ ಸಿಎಂ ಬೊಮ್ಮಾಯಿ ಚರ್ಚೆ

ಚುನಾವಣೆ ಸಿದ್ಧತೆ ಚುರುಕುಗೊಳಿಸಿದ ಬಿಜೆಪಿ; ನಾಳೆ ಕೋರ್ ಕಮಿಟಿ ಸಭೆ, ಯಡಿಯೂರಪ್ಪ ಜೊತೆಗೆ ಸಿಎಂ ಬೊಮ್ಮಾಯಿ ಚರ್ಚೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೇ 14ರಂದು ಬಿಜೆಪಿ ರಾಜ್ಯ ಘಟಕದ ಕೋರ್ ಕಮಿಟಿ ಸಭೆ ನಡೆಯಲಿದೆ. ಸಭೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 13, 2022 | 1:30 PM

ಬೆಂಗಳೂರು: ನಗರದಲ್ಲಿ ಮೇ 14ರಂದು ಬಿಜೆಪಿ ರಾಜ್ಯ ಘಟಕದ ಕೋರ್ ಕಮಿಟಿ ಸಭೆ ನಡೆಯಲಿದೆ. ಸಭೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಹಲವು ವಿಚಾರಗಳನ್ನು ಈಗಾಗಲೇ ಚರ್ಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಒಬಿಸಿ ಮೀಸಲಾತಿ ಸಂಬಂಧ ಕಾನೂನು ಸಚಿವರು ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಬಿಬಿಎಂಪಿ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್​ನಲ್ಲಿ ಪ್ರಕರಣ ಇನ್ನೂ ಬಾಕಿಯಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಒಬಿಸಿ ಮೀಸಲಾತಿ ಅಗತ್ಯವಿದೆ. ಅದನ್ನು ಸರಿಯಾದ ರೀತಿಯಲ್ಲಿ ಯೋಚಿಸಲು ಸ್ವಲ್ಪ ಕಾಲಾವಕಾಶ ಬೇಕು ಎಂದು ಕೋರಿದ್ದೇವೆ. ಇದು ಸಾಧ್ಯವಾಗದಿದ್ದರೆ ಈ ಹಿಂದೆ ಅಸ್ತಿತ್ವದಲ್ಲಿದ್ದ ಮಾದರಿಯಲ್ಲಿ ಹಳೆಯ ಒಬಿಸಿ ಮೀಸಲಾತಿ ನಿಯಮಗಳ ಅನ್ವಯವೇ ಮೀಸಲಾತಿ ಜಾರಿಗೊಳಿಸಲು ಅವಕಾಶ ಕೊಡಿ ಎಂದು ಕೋರಿದ್ದೇವೆ ಎಂದರು. ನಮ್ಮ ಬೇಡಿಕೆಯು ಬಹುತೇಕ ಈಡೇರುವ ಅವಕಾಶವಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸ್ವಗೃಹ ಕಾವೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಭೇಟಿಯಾಗಿ ಚರ್ಚಿಸಿದರು. ಸಂಪುಟ ವಿಸ್ತರಣೆ, ಪುನಾರಚನೆ, ರಾಜ್ಯಸಭಾ ಚುನಾವಣೆ, ವಿಧಾನ ಪರಿಷತ್​ ಚುನಾವಣೆ ಸಂಬಂಧ ಯಡಿಯೂರಪ್ಪ ಅವರೊಂದಿಗೆ ಬೊಮ್ಮಾಯಿ ಚರ್ಚಿಸಿದರು. ಈ ವೇಳೆ ಮುಖ್ಯಮಂತ್ರಿಯೊಂದಿಗೆ ಸಚಿವ ಗೋವಿಂದ ಕಾರಜೋಳ ಸಹ ಇದ್ದರು. ಇತ್ತೀಚೆಗಷ್ಟೇ ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿದ್ದ ಮುಖ್ಯಮಂತ್ರಿ ಬೊಮ್ಮಾಯಿ ನಂತರ ಇದೀಗ ಯಡಿಯೂರಪ್ಪ ಅವರನ್ನು ಭೇಟಿಯಾಗಿರುವುದು ಮಹತ್ವ ಪಡೆದುಕೊಂಡಿದೆ.

ಲಂಡನ್ ಪ್ರವಾಸ ರದ್ದು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಲಂಡನ್ ಪ್ರವಾಸ ರದ್ದಾಗಿದೆ. ಮೇ 19ರಂದು ಲಂಡನ್ ಪ್ರವಾಸಕ್ಕೆ ತೆರಳಬೇಕಿದ್ದ ಸಿಎಂ, ಮೇ 21ರಂದು ಕೇವಲ ದಾವೋಸ್​ಗೆ ಭೇಟಿ ನೀಡಿ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ಲಂಡನ್ ನಲ್ಲಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಿಗದಿಯಾಗಿತ್ತು. ಈ ನಡುವೆ ಸಿಎಂ ಅಮೆರಿಕಾಕ್ಕೆ ಹೋಗ್ತಾರಾ ಎಂದು ಮಾಧ್ಯಮ ಪ್ರತಿನಿಧಿಯೊಬ್ಬರು ಕೇಳಿದ ಪ್ರಶ್ನೆಗೂ ಸಿಎಂ ಕಿರಿಕಿರಿ ಅನುಭವಿಸಿದರು. ‘ನಾನು ಹೋಗ್ತೀನಿ ಅಂತ ನಿಮಗೆ ಯಾರು ಹೇಳಿದರು? ನೀವು ಹೋಗುವುದಿದ್ದರೆ ಹೋಗಿ, ಒಳ್ಳೆಯದಾಗಲಿ’ ಎಂದು ಸಿಟ್ಟಿನಲ್ಲಿ ಪ್ರತಿಕ್ರಿಯಿಸಿದರು.

ಬೆಂಗಳೂರಿಗೆ ಅರುಣ್ ಸಿಂಗ್

ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಇಂದು ರಾತ್ರಿ (ಮೇ 13) ಬೆಂಗಳೂರಿಗೆ ಬರುತ್ತಿದ್ದಾರೆ. ಅವರು ಶನಿವಾರ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆಯಲಿರುವ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ‌ ಸಾಧ್ಯತೆ ಹಿನ್ನೆಲೆಯಲ್ಲಿ ಬಿಜೆಪಿ ಹಲವು ಸಭೆಗಳನ್ನು ನಡೆಸಲು ಉದ್ದೇಶಿಸಿದೆ.

ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ: ಬೊಮ್ಮಾಯಿ ಭರವಸೆ

ಬೆಂಗಳೂರಿನಲ್ಲಿ 4ನೇ ವಿಶ್ವ ಮಾದಿಗರ ದಿನಾಚರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ, ಕೇಂದ್ರ ಸಚಿವ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕೆನ್ನುವ ಬೇಡಿಕೆ ಕುರಿತು ಪ್ರತಿಕ್ರಿಯಿಸಿ, ನೀವು ನ್ಯಾಯ ಕೇಳುವುದು ತಪ್ಪಲ್ಲ. ಈ ಪ್ರಕ್ರಿಯೆಯಲ್ಲಿ ಬೇರೆಯವರಿಗೂ ತೊಂದರೆ ಆಗಬಾರದು. ಈಗ ಕ್ಲಿಷ್ಟಕರ ಸನ್ನಿವೇಶ ಇದೆ. ಹೀಗಾಗಿ ಹೇಗೆ ಒಳ ಮೀಸಲಾತಿ ಒದಗಿಸಬೇಕು ಅಂತ ಎಲ್ಲರೂ ಮಾರ್ಗದರ್ಶನ ಮಾಡಿದ್ದಾರೆ. ಸಾಮಾಜಿಕ ನ್ಯಾಯದಡಿ ಮೀಸಲಾತಿ ಕೊಡುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಸರ್ಕಾರ ಮಾದಿಗ ಸಮುದಾಯದ ಜತೆ ಇದೆ. ಸಮುದಾಯಕ್ಕೆ ಒಳ ಮೀಸಲಾತಿ ಕೊಡುವ ವಿಚಾರದಲ್ಲಿ ನೂರಕ್ಕೆ ನೂರರಷ್ಟು ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

Follow us on

Related Stories

Most Read Stories

Click on your DTH Provider to Add TV9 Kannada