ಸರ್ಕಾರದ ಜಾಹೀರಾತಿನಲ್ಲಿ ನೆಹರು ಭಾವಚಿತ್ರ ಕೈಬಿಟ್ಟ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಪಷ್ಟನೆ: ಹೇಳಿದ್ದೇನು?
ಸರ್ಕಾರದ ಜಾಹೀರಾತಿನಲ್ಲಿ ನೆಹರು ಫೋಟೋ ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿ ಸಿಎಂ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ. ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸಿ, ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.
ಬೆಂಗಳೂರು: ಕರ್ನಾಟಕ ಸರ್ಕಾರವು (Govt of Karnataka) ‘ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ’ (Har Ghar Tiranga) ಅಭಿಯಾನದ ಉತ್ತೇಜನಕ್ಕಾಗಿ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ ಜವಾಹರ್ಲಾಲ್ ನೆಹರು (Jawaharlal Nehru) ಅವರ ಭಾವಚಿತ್ರ ಕೈಬಿಟ್ಟಿರುವುದು ಕಾಂಗ್ರೆಸ್ನ (Indian National Congress) ಕೆಂಗಣ್ಣಿಗೆ ಗುರಿಯಾಗಿದೆ. ಸದ್ಯ ಈಗ ನೆಹರು ಭಾವಚಿತ್ರ ಕೈಬಿಟ್ಟ ಬಗ್ಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಹಾಗೂ ಮತ್ತೊಂದು ಕಡೆ ಡಿಕೆ ಶಿವಕುಮಾರ್(DK Shivakumar), ಸಿಎಂ ಬಸವರಾಜ ಬೊಮ್ಮಾಯಿಗೆ(Basavaraj Bommai) ಪತ್ರ ಬರೆದಿದ್ದಾರೆ.
ಸರ್ಕಾರದ ಜಾಹೀರಾತಿನಲ್ಲಿ ನೆಹರು ಭಾವಚಿತ್ರ ಕೈಬಿಟ್ಟಿದ್ದಕ್ಕೆ ಸ್ಪಷ್ಟನೆ
ಜವಾಹರ್ ಲಾಲ್ ನೆಹರು ದೇಶ ವಿಭಜನೆಗೆ ಕಾರಣರಾದವರು. ಹೀಗಾಗಿ ಉದ್ದೇಶಪೂರ್ವಕವಾಗಿಯೇ ನಾವು ನೆಹರು ಭಾವಚಿತ್ರ ಕೈಬಿಟ್ಟಿದ್ದೇವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ. ಜವಾಹರ್ ಲಾಲ್ ನೆಹರು ಮಹಾತ್ಮ ಗಾಂಧಿ ಮಾತನ್ನೇ ಕೇಳಲಿಲ್ಲ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ವಿಸರ್ಜಿಸಿ ಎಂದು ಗಾಂಧಿ ಹೇಳಿದ್ದರು. ಆದರೆ ಜವಾಹರ್ ಲಾಲ್ ನೆಹರು ಕಾಂಗ್ರೆಸ್ ವಿಸರ್ಜನೆ ಮಾಡಲಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ಜಾಹೀರಾತಿನಲ್ಲಿ ನೆಹರು ಫೋಟೊ ನಾಪತ್ತೆ: ಕಾಂಗ್ರೆಸ್ ನಾಯಕರ ಆಕ್ರೋಶ
ಸಿಎಂ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ರ
ಸರ್ಕಾರದ ಜಾಹೀರಾತಿನಲ್ಲಿ ನೆಹರು ಫೋಟೋ ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿ ಸಿಎಂ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ. ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸಿ, ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಈ ವಿಚಾರದಲ್ಲಿ ಅಧಿಕಾರರೂಢ ಸರ್ಕಾರದ ಜವಾಬ್ದಾರಿ ಒಂದು ಪಟ್ಟು ಹೆಚ್ಚಾಗಿಯೇ ಇರುತ್ತದೆ. ಆದರೆ, ದಿನಪತ್ರಿಕೆಗಳಲ್ಲಿ ಬಂದಿರುವ ಸರ್ಕಾರಿ ಜಾಹೀರಾತಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ಹೋರಾಟಗಾರ, ದೇಶದ ಮೊದಲ ಪ್ರಧಾನಿ, ಸ್ವಾತಂತ್ರೋತ್ತರ ನವಭಾರತ ನಿರ್ಮಾಣದ ಶಿಲ್ಪಿ ಜವಾಹರಲಾಲ್ ನೆಹರು ಅವರ ಭಾವಚಿತ್ರ ಹಾಗೂ ಹೆಸರನ್ನು ಉದ್ದೇಶಪೂರ್ವಕವಾಗಿ ಪ್ರಕಟಿಸದೆ ಅವರಿಗೆ ಅಪಮಾನ ಮಾಡಿದ್ದೀರಿ. ಆ ಮೂಲಕ ಇತಿಹಾಸ ತಿರುಚುವ ವಿಫಲ ಯತ್ನ ಮಾಡಿದ್ದೀರಿ.
ಮುಖ್ಯಮಂತ್ರಿ ಸ್ಥಾನದಿಂದ ತಾವು ಇಂತಹ ಕೀಳು ಮಟ್ಟದ ರಾಜಕಾರಣ ಮಾಡಬಾರದಿತ್ತು. ಇದು ತಮ್ಮ ಆತ್ಮಸಾಕ್ಷಿಗೆ ಶೋಭೆ ತರುವ ಕೆಲಸವಲ್ಲ. ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನೆಹರು ಅವರು ಅಸಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಪ್ರತಿ ಹಂತದಲ್ಲೂ ತಮ್ಮ ಬದುಕು ಮುಡಿಪಿಟ್ಟವರು. ಅಲ್ಲದೆ ಸ್ವತಂತ್ರ್ಯ ಹೋರಾಟಕ್ಕಾಗಿ 9 ವರ್ಷಗಳ ಸೆರೆವಾಸ ಅನುಭವಿಸಿದ್ದರು. ಸ್ವಾತಂತ್ರ್ಯ ಹೋರಾಟ, ನವಭಾರತ ನಿರ್ಮಾಣದಲ್ಲಿ ನೆಹರು ಅವರ ಪಾತ್ರ ಬಹಳ ಹಿರಿದು. ಇದು ನಿಮಗೂ ಗೊತ್ತಿದೆ. ಈ ಇತಿಹಾಸ ಓದಿಯೇ ನಾವು ನೀವು ಬೆಳೆದಿದ್ದೇವೆ. ಆದರೂ ರಾಜಕೀಯ ಕಾರಣಕ್ಕೆ ನೀವು ಇಂತಹ ಕ್ಷುಲ್ಲಕ ಕೆಲಸಕ್ಕೆ ಕೈ ಹಾಕಬಾರದಿತ್ತು. ಇದು ಅಕ್ಷಮ್ಯ. ಆಗಿರುವ ಪ್ರಮಾದಕ್ಕೆ ನೀವು ಕ್ಷಮೆ ಯಾಚಿಸಬೇಕು. ಇತಿಹಾಸದ ಸತ್ಯವನ್ನು ಎತ್ತಿ ಹಿಡಿಯಬೇಕು ಎಂದು ಪತ್ರದ ಮೂಲಕ ಡಿಕೆಶಿವಕುಮಾರ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ದೇಶ ವಿಭಜನೆಗೆ ಜವಾಹರ್ಲಾಲ್ ನೆಹರು ಕಾರಣ ಎಂದು ವಿಡಿಯೊ ಟ್ವೀಟ್ ಮಾಡಿದ ಬಿಜೆಪಿ, ಕಾಂಗ್ರೆಸ್ ತಿರುಗೇಟು
ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ಸರ್ಕಾರ ಹೀಗೆ ಮಾಡಿದೆ
ಇನ್ನು ಇದೇ ವಿಚಾರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ರಾಜ್ಯದ ಜನರಿಗೆ ಸಿಎಂ ಬೊಮ್ಮಾಯಿ ಕ್ಷಮೆ ಕೇಳಬೇಕು. ಉದ್ದೇಶಪೂರ್ವಕವಾಗಿಯೇ ನೆಹರು ಫೋಟೋ ಹಾಕಿಲ್ಲ. ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ಸರ್ಕಾರ ಹೀಗೆ ಮಾಡಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕೂಡ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಭಾರತದ 1ನೇ ಪ್ರಧಾನಮಂತ್ರಿ ಮತ್ತು ರಾಷ್ಟ್ರ ನಿರ್ಮಾತೃ ಪಂಡಿತ್ ಜವಾಹರಲಾಲ್ ನೆಹರು ಅವರ ಮೇಲಿನ ಕೊನೆಯಿಲ್ಲದ ದ್ವೇಷವು ಅದರ ಉತ್ತುಂಗವನ್ನು ತಲುಪಿದೆ. ಬೊಮ್ಮಾಯಿ ಸರ್ಕಾರ ತನ್ನ ಅಸ್ತಿತ್ವವನ್ನೇ ನಿರಾಕರಿಸುವ ಮೂಲಕ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ. ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದಂದು, ಇದು ಇಂದಿನ ಆಡಳಿತಗಾರರ ಪಾತ್ರ ಮತ್ತು ಕೆಟ್ಟ ಆಲೋಚನಾ ಪ್ರಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
Published On - 4:54 pm, Sun, 14 August 22