ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್‌ನಿಂದಲೇ ಕನ್ನ: ವೋಟ್ ಚೋರಿ ಆರೋಪಿಸಿ ಕಾಂಗ್ರೆಸ್ ವಿರುದ್ಧ ಆರ್ ಅಶೋಕ್ ವಾಗ್ದಾಳಿ
ಹಾವೇರಿಯಲ್ಲಿ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸಚಿವರ ಸಮ್ಮುಖದಲ್ಲೇ ನಕಲಿ ಮತದಾನ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಪ್ರಜಾಪ್ರಭುತ್ವ ವಿರೋಧಿ ಕೃತ್ಯವೆಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಈ ವಿವಾದದ ಸಂಪೂರ್ಣ ವಿವರ ಹಾಗೂ ಪ್ರಮುಖ ನಾಯಕರ ಪ್ರತಿಕ್ರಿಯೆಗಳ ಬಗ್ಗೆ ಇಲ್ಲಿ ತಿಳಿಯಿರಿ.

ಮುಖ್ಯಾಂಶಗಳು
- ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
- ಹಾವೇರಿಯಲ್ಲಿ ಸಚಿವರ ಸಮ್ಮುಖದಲ್ಲಿ ನಕಲಿ ಮತದಾನ ನಡೆದ ಗಂಭೀರ ಆರೋಪವಿದೆ.
- ತಪ್ಪಿತಸ್ಥರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು.
ಬೆಂಗಳೂರು, ಅಕ್ಟೋಬರ್ 25: ದಿನ ಬೆಳಗಾದರೆ ‘ವೋಟ್ ಚೋರಿ’ ಎಂದು ಬಿಜೆಪಿ ಹಾಗೂ ಇತರ ಪಕ್ಷಗಳ ವಿರುದ್ಧ ಸುಳ್ಳಿನ ಸರಮಾಲೆ ಹೆಣೆಯುವ ಕಾಂಗ್ರೆಸ್‌ಗೆ ಈಗ ಸ್ವಪಕ್ಷದ ನಾಯಕರ ನಕಲಿ ಮತದಾನದ ಆರೋಪವೇ ತಿರುಗೇಟು ನೀಡಿದೆ. ಹಾವೇರಿಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ವೇಳೆ ಸಚಿವರ ಸಮ್ಮುಖದಲ್ಲೇ ನಕಲಿ ಮತದಾನ ನಡೆದಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಎಕ್ಸ್ ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಚಿವರ ಸಮ್ಮುಖದಲ್ಲೇ ಅಕ್ರಮದ ಆರೋಪ!
ಆರ್. ಅಶೋಕ್ ಪೋಸ್ಟ್ನಲ್ಲಿ ಹೇಳಿರುವಂತೆ, ಹಾವೇರಿಯಲ್ಲಿ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರೊಂದಿಗೆ ಬಂದ ಕಾಂಗ್ರೆಸ್ ಕಾರ್ಯಕರ್ತೆ ಶಿಲ್ಪಾ ಬಡಮ್ಯನವರ ಎಂಬುವವರು, ಸಂಜೀವಕುಮಾರ್ ನೀರಲಗಿ ಅವರ ಪತ್ನಿ ಆಶಾ ಪಾಟೀಲ್ ಅವರ ಹೆಸರಿನಲ್ಲಿ ನಕಲಿ ಮತ ಚಲಾಯಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಮ್ಮದೇ ಸಮ್ಮುಖದಲ್ಲಿ ನಡೆದ ಈ ಅಕ್ರಮದ ಬಗ್ಗೆ ಸಚಿವರು ಹೊಣೆಗಾರಿಕೆಯಿಂದ ಉತ್ತರಿಸುವ ಬದಲು ಜಾರಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
‘ವೋಟ್ ಚೋರಿ’ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್‌ನಿಂದಲೇ ಪ್ರಜಾಪ್ರಭುತ್ವಕ್ಕೆ ಕನ್ನ!
ದಿನ ಬೆಳಗಾದರೆ ‘ವೋಟ್ ಚೋರಿ’ ಎಂದು ಸುಳ್ಳಿನ ಸರಮಾಲೆ ಹೆಣೆಯುವ @INCKarnataka ನಾಯಕರೇ, ಹಾವೇರಿಯಲ್ಲಿ ನಡೆದಿರುವುದೇನು? ನಿಮ್ಮದೇ ಸಚಿವರ ಸಮ್ಮುಖದಲ್ಲೇ ನಕಲಿ ಮತದಾನದ ಆರೋಪ ಕೇಳಿಬಂದಿದೆಯಲ್ಲ, ಈಗ ಯಾರಿಗೆ ಪಾಠ ಹೇಳುತ್ತೀರಿ?
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರೊಂದಿಗೆ ಬಂದ ಕಾಂಗ್ರೆಸ್ ಕಾರ್ಯಕರ್ತೆ ಶಿಲ್ಪಾ ಬಡಮ್ಯನವರ ಅವರು, ಸಂಜೀವಕುಮಾರ್ ನೀರಲಗಿ ಅವರ ಪತ್ನಿ ಆಶಾ ಪಾಟೀಲ್ ಅವರ ಹೆಸರಿನಲ್ಲಿ ನಕಲಿ ಮತ ಚಲಾಯಿಸಿದ ಗಂಭೀರ ಆರೋಪ ಕೇಳಿಬಂದಿದೆ.
ತಮ್ಮ ರಾಜಕೀಯ ವಿರೋಧಿಗಳ ಮೇಲೆ ‘ವೋಟ್ ಚೋರಿ’ ಆರೋಪ ಮಾಡುವ ಕಾಂಗ್ರೆಸ್‌ಗೆ, ತನ್ನದೇ ಪಕ್ಷದವರ ವಿರುದ್ಧ ಕೇಳಿಬಂದಿರುವ ಈ ಗಂಭೀರ ಆರೋಪಕ್ಕೆ ಉತ್ತರಿಸುವ ನೈತಿಕ ಧೈರ್ಯವಿದೆಯೇ?
❌ಕಣ್ಣೆದುರೇ ಅಕ್ರಮದ ಆರೋಪ; ಸಚಿವರದ್ದು ಜಾರಿಕೊಳ್ಳುವ ಉತ್ತರ!
ತಮ್ಮೊಂದಿಗೇ ಬಂದ ಮಹಿಳೆಯ ಪರಿಚಯವೇ ಇಲ್ಲ, ಎಲ್ಲರನ್ನೂ ಸಮಾನವಾಗಿ ನೋಡುತ್ತೇನೆ ಎಂಬ ಸಚಿವರ ಸಮರ್ಥನೆ ಹಾಸ್ಯಾಸ್ಪದ. ತಮ್ಮದೇ ಸಮ್ಮುಖದಲ್ಲಿ ಇಂತಹ ಗಂಭೀರ ಆರೋಪ ಕೇಳಿಬಂದಾಗ ಹೊಣೆಗಾರಿಕೆಯಿಂದ ಉತ್ತರಿಸುವ ಬದಲು ಜಾರಿಕೊಳ್ಳುವುದು ತಪ್ಪು ಮಾಡಿರುವವರ ಲಕ್ಷಣ?
❌ಬೇರೆಯವರಿಗೆ ಪ್ರಜಾಪ್ರಭುತ್ವದ ಪಾಠ; ತಮಗೆ ಬಂದಾಗ ಮೌನ!
ವಿರೋಧ ಪಕ್ಷಗಳ ವಿರುದ್ಧ ಆಧಾರರಹಿತ ಆರೋಪಗಳ ಸುರಿಮಳೆಗೈಯುವ ಕಾಂಗ್ರೆಸ್ ನಾಯಕರು, ಈಗ ತಮ್ಮದೇ ಪಕ್ಷದ ಕಾರ್ಯಕರ್ತೆಯ ವಿರುದ್ಧ ಕೇಳಿಬಂದಿರುವ ನಕಲಿ ಮತದಾನದ ಆರೋಪಕ್ಕೆ ಉತ್ತರಿಸಲಿ. ಮತಗಳ್ಳ ಮಾಡುತ್ತಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಚುನಾವಣಾ ಆಯೋಗದ ಬಗ್ಗೆ ಮಾತನಾಡುವ ನೈತಿಕತೆ ಉಳಿದಿದೆಯೇ?
❌ಕಾಂಗ್ರೆಸ್ನ ಬೂಟಾಟಿಕೆಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ!
ಮತದಾನವೆಂಬುದು ಪ್ರಜಾಪ್ರಭುತ್ವದ ಪವಿತ್ರ ಹಕ್ಕು. ಅದಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲೇಬೇಕು.
ನಕಲಿ ಮತದಾನದ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ. ತಪ್ಪಿತಸ್ಥರು ಯಾರೇ ಆಗಿರಲಿ, ಅವರಿಗೆ ಶಿಕ್ಷೆಯಾಗಲಿ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳಿದ್ದರೆ ಅವರ ಮೇಲೂ ಕ್ರಮ ಜರುಗಲಿ.
ದೇಶಕ್ಕೆ ಪ್ರಜಾಪ್ರಭುತ್ವದ ಪಾಠ ಹೇಳುವ ಮೊದಲು, ನಿಮ್ಮ ಪಕ್ಷದೊಳಗಿನ ಪ್ರಜಾಪ್ರಭುತ್ವದ ಪಾವಿತ್ರ್ಯವನ್ನು ಕಾಪಾಡಿಕೊಳ್ಳಿ!
#VoteChorCongress
— R. Ashoka (@RAshokaBJP) October 25, 2026
ಕಾಂಗ್ರೆಸ್‌ಗೆ ಆರ್ ಅಶೋಕ್ ಸವಾಲ್
“ಬೇರೆಯವರಿಗೆ ಪ್ರಜಾಪ್ರಭುತ್ವ ಹಾಗೂ ಪಾರದರ್ಶಕತೆಯ ಪಾಠ ಹೇಳುವ ಕಾಂಗ್ರೆಸ್ ನಾಯಕರು, ತಮ್ಮ ಪಕ್ಷದವರೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಮೌನಕ್ಕೆ ಶರಣಾಗಿದ್ದಾರೆ,” ಎಂದು ಅಶೋಕ್ ಕಿಡಿಕಾರಿದ್ದಾರೆ. ಮತ ಕಳ್ಳತನ ಮಾಡುವ ಕಾಂಗ್ರೆಸ್‌ಗೆ ಚುನಾವಣಾ ಆಯೋಗ ಅಥವಾ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಮತದಾನ ಎಂಬುದು ಪ್ರಜಾಪ್ರಭುತ್ವದ ಪವಿತ್ರ ಹಕ್ಕು. ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು ಹಾಗೂ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಜರುಗಿಸಬೇಕು ಎಂದು ಆರ್ ಅಶೋಕ್ ಆಗ್ರಹಿಸಿದ್ದಾರೆ. ಈ ಬೂಟಾಟಿಕೆಗೆ ಮುಂಬರುವ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:16 am, Sun, 25 October 26




