Arvind Limbavali: ಮಹದೇವಪುರ ವರ್ತೂರು ಕೋಡಿ ಘಟನೆ: ಪ್ರವಾಹಕ್ಕೆ ಕಾರಣವಾದ ಒತ್ತುವರಿ ತೆರವುಗೊಳಿಸಿದ್ದೇ ಅಪರಾಧವೆ? ಅರವಿಂದ್ ಲಿಂಬಾವಳಿ ಪ್ರತಿಕ್ರಿಯೆ

mahadevapura mahadevapura ಅಪಾರ ಮಳೆಯಿಂದಾಗಿ ಪ್ರವಾಹಕ್ಕೆ ಒಳಗಾದ ಪ್ರದೇಶಗಳ ವೀಕ್ಷಣೆ ಸಂದರ್ಭದಲ್ಲಿ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ವಿಡಿಯೋ ಹರಿದಾಡುತ್ತಿದೆ. ಆದರೆ ಪ್ರವಾಹಕ್ಕೆ ಕಾರಣವಾಗಿರುವುದು ಆ ಮಹಿಳೆಯೇ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

Arvind Limbavali:  ಮಹದೇವಪುರ ವರ್ತೂರು ಕೋಡಿ ಘಟನೆ: ಪ್ರವಾಹಕ್ಕೆ ಕಾರಣವಾದ ಒತ್ತುವರಿ ತೆರವುಗೊಳಿಸಿದ್ದೇ  ಅಪರಾಧವೆ? ಅರವಿಂದ್ ಲಿಂಬಾವಳಿ ಪ್ರತಿಕ್ರಿಯೆ
ಮಹದೇವಪುರ ವರ್ತೂರು ಕೋಡಿ ಘಟನೆ: ಪ್ರವಾಹಕ್ಕೆ ಕಾರಣವಾದ ಒತ್ತುವರಿ ತೆರವುಗೊಳಿಸಿದ್ದೇ ಅಪರಾಧವೆ?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 03, 2022 | 2:55 PM

ಅಪಾರ ಮಳೆಯಿಂದಾಗಿ ಪ್ರವಾಹಕ್ಕೆ ಒಳಗಾದ ಪ್ರದೇಶಗಳ ವೀಕ್ಷಣೆ ಸಂದರ್ಭದಲ್ಲಿ ಮಹದೇವಪುರ ಶಾಸಕ (mahadevapura bjp mla) ಮತ್ತು ಮಾಜಿ ಸಚಿವರಾದ ಶ್ರೀ ಅರವಿಂದ ಲಿಂಬಾವಳಿಯವರು (Arvind Limbavali) ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ (high handedness) ಎಂಬ ವಿಡಿಯೋ (Viral Vedio) ಹರಿದಾಡುತ್ತಿದೆ. ಈ ಬಗ್ಗೆ ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ ಎಂದು ಅರವಿಂದ್ ಲಿಂಬಾವಳಿ ಪ್ರತಿಕ್ರಿಯಿಸಿದ್ದಾರೆ.

ಆದರೆ ಕಾಂಗ್ರೆಸ್ ಪಕ್ಷದ ಇದೇ ಕಾರ್ಯಕರ್ತೆ ರೂತ್ ಸಗಾಯ್ ಮೇರಿ ಎಷ್ಟೋ ವರ್ಷಗಳಿಂದ ರಾಜಕಾಲುವೆ ಒತ್ತುವರಿ ಮಾಡಿ, ಜನರಿಗೆ ಸಮಸ್ಯೆಯುಂಟು ಮಾಡಿದ್ದಾರಲ್ಲ, ಅದನ್ನು ಖಾಲಿ ಮಾಡಲು ಹೇಳಿ. ಕಾಂಗ್ರೆಸ್ ಕಾರ್ಯಕರ್ತೆ ತನ್ನ ಮೊಂಡುತನವನ್ನು ಇಲ್ಲಿಗೇ ನಿಲ್ಲಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

ಪ್ರವಾಹಕ್ಕೆ ಕಾರಣವಾದ ಅಕ್ರಮ ಒತ್ತುವರಿಯ ಕಾಂಪೌಂಡ್‌ ನಿರ್ಮಿಸಿದ್ದ ಮಹಿಳೆ ಮತ್ತು ಅವರ ಪತಿಯ ಅಪರಾಧವನ್ನು ಮರೆಮಾಚಿ ಶಾಸಕರದ್ದೇ ತಪ್ಪು ಎಂಬಂತೆ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿರುವುದು ಖಂಡನೀಯ.

ಈ ಘಟನೆಯ ನಂತರ ಮಹಿಳೆ, ಪತಿ ವಿರುದ್ಧ ರಾಜ್ಯ ಸರ್ಕಾರದ ಅಧಿಕಾರಿಯೇ ದೂರು ಕೊಟ್ಟ ಹಿನ್ನೆಲೆಯಲ್ಲಿ ಎಫ್‌ ಐ ಆರ್ ದಾಖಲಾಗಿದೆ. ಇದಾದ ಎರಡು ದಿನಗಳ ನಂತರ ವಿಡಿಯೋ ವೈರಲ್‌ ಆಗಿರುವುದರ ಹಿಂದೆ ಕಾಂಗ್ರೆಸ್‌ ಪಕ್ಷದ ಹೀನ ಕೈಗಳು ಇರುವುದು ಸಾಬೀತಾಗಿದೆ.

ಶ್ರೀ ಅರವಿಂದ ಲಿಂಬಾವಳಿಯವರ ಜನಸ್ಪಂದನೆಯ ಕಾರ್ಯವೈಖರಿಯನ್ನು ಸಹಿಸದೆ ನಡೆಯುತ್ತಿರುವ ಅಪಪ್ರಚಾರದ ಹಿಂದಿನ ಸತ್ಯ ಸಂಗತಿಗಳು ಇಲ್ಲಿವೆ.

ಆಗಸ್ಟ್‌ 29 ರಿಂದ ಬೆಂಗಳೂರು ಮತ್ತು ಸುತ್ತಮುತ್ತ ಸುರಿದ ಭಾರೀ ಮಳೆಗೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಹಲವಾರು ಕೆರೆಗಳು ಕೋಡಿ ಬಿದ್ದವು. ಹಲವು ವಸತಿ ಸಂಕೀರ್ಣಗಳ ಒಳಗೆ ನೀರು ನುಗ್ಗಿ ವಿದ್ಯುತ್‌ ಸಂಪರ್ಕ ಕಡಿತವಾಯಿತು; ಕುಡಿಯುವ ನೀರಿಗೂ ಸಮಸ್ಯೆ ಉಂಟಾಯಿತು.

ಈ ಹಿನ್ನೆಲೆಯಲ್ಲಿ ಶಾಸಕ ಶ್ರೀ ಅರವಿಂಧ ಲಿಂಬಾವಳಿಯವರು ಆಗಸ್ಟ್‌ 30 ರಂದು ಹಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದೇ ರೀತಿ ವರ್ತೂರು ಕೋಡಿಯ ಟಿ ಝೆಡ್‌ ವಸತಿ ಸಮುಚ್ಚಯದಲ್ಲೂ ಪರಿವೀಕ್ಷಣೆ ನಡೆಸಿದರು. ಆಗ ವೈಟ್‌ಫೀಲ್ಡ್‌ನ ಸರ್ವೆ ಸಂಖ್ಯೆ 18 ರಲ್ಲಿ ರಾಜಕಾಲುವೆ ಒತ್ತುವರಿಯಾಗಿದ್ದನ್ನು ಗಮನಿಸಿ ಸದರಿ ಸೈಟಿನ ಕಾಂಪೌಂಡ್‌ ಮೇಲೆ ಕಂದಾಯ ಅಧಿಕಾರಿಗಳಿಂದ ಗುರುತು ಮಾಡಿಸಿದ್ದರು.

ಸೆಪ್ಟೆಂಬರ್ 1 ರಂದು ಮಾನ್ಯ ಮುಖ್ಯಮಂತ್ರಿಯವರು ಸ್ಥಳವೀಕ್ಷಣೆಗೆ ಬರುವ ಮುನ್ನ ಶ್ರೀ ಅರವಿಂದ ಲಿಂಬಾವಳಿಯವರು ಮತ್ತೆ ಅದೇ ಸ್ಥಳದಲ್ಲಿ ಸಂತ್ರಸ್ತ ನಾಗರಿಕರ ಜೊತೆ ಮಾಹಿತಿ ಸಂಗ್ರಹ ಮಾಡುತ್ತಿರುವಾಗ ಸದರಿ ಒತ್ತುವರಿಯಾಗಿ ಕಾಂಪೌಂಡ್‌ ನಿರ್ಮಿಸಿದ್ದ ಪ್ರಭು ಎಂಬಾತ ಬಂದು ಇಲ್ಲಸಲ್ಲದ ವಾದ ಮಾಡತೊಡಗಿದರು. ಅದೂ ಅಲ್ಲದೆ ಶಾಸಕರು ನಡೆದು ಬರುತ್ತಿರುವಾಗ ಸದರಿ ವ್ಯಕ್ತಿಯ ಪತ್ನಿ ಮತ್ತು ಕಾಂಗ್ರೆಸ್‌ ಪಾರ್ಟಿಯ ಅಲ್ಪಸಂಖ್ಯಾತ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರೂತ್‌ ಸಗಾಯಿ ಮೇರಿ @ ಅಮೀನಾ ಎಂಬುವವರು ಕಾಂಪೌಂಡನ್ನು ಯಾವುದೇ ನೋಟೀಸು ನೀಡದೆ ಒಡೆದಿದ್ದೀರಿ ಎಂದು ಕಿರುಚಾಡಿರುತ್ತಾರೆ. ಶಾಸಕರ ವಿನಂತಿಯ ನಡುವೆಯೂ ಆಕೆ ತನ್ನಲ್ಲಿದ್ದ ಯಾವುದೋ ದಾಖಲೆಯನ್ನು ತೋರಿಸದೆ ಕೂಗಾಡಿರುತ್ತಾರೆ.

ಈ ಇಬ್ಬರೂ ಸೇರಿ ರಾಜಕಾಲುವೆಯನ್ನು 12 ಅಡಿ ಒತ್ತುವರಿ ಮಾಡಿಕೊಂಡಿರುವುದರಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆ ಆಗಿದ್ದುದು ಸ್ಪಷ್ಟವಾಗಿದೆ. ಇದನ್ನು ಸಂಬಂಧಿತ ಅಧಿಕಾರಿಗಳೂ ದಾಖಲಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಶಾಸಕರು ಅಲ್ಲಿದ್ದ ಪೊಲೀಸ್ ಅಧಿಕಾರಿಗೆ ಮಹಿಳಾ ಪೊಲೀಸರನ್ನು ಕರೆದು ಈ ಮಹಿಳೆಯನ್ನು ಕರೆದುಕೊಂಡು ಹೋಗಲು ತಿಳಿಸಿದ್ದಾರೆ.

ಈ ಘಟನೆಯಾದ ದಿನವೇ ಕರ್ನಾಟಕ ಸರ್ಕಾರದ ರಾಜಸ್ವ ನಿರೀಕ್ಷಕ ಶ್ರೀ ಪಾರ್ಥಸಾರಥಿ ಅವರು ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಗೆ ಈ ಇಬ್ಬರೂ ಅಲ್ಲದೆ, ಕುಟುಂಬದ ಇತರೆ ಸದಸ್ಯರ ವಿರುದ್ಧ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ದೂರು ಸಲ್ಲಿಸಿದ್ದಾರೆ (ಅಪರಾಧ ಸಂಖ್ಯೆ 0263/2022 ದಿನಾಂಕ 1.09.2022). ಪೊಲೀಸರು ಈ ಬಗ್ಗೆ ಕರ್ನಾಟಕ ಲ್ಯಾಂಡ್‌ ರೆವಿನ್ಯೂ ಕಾಯ್ದೆ 1964 ರ ವಿವಿಧ ಕಲಂಗಳ ಅನ್ವಯ ಎಫ್‌ ಐ ಆರ್‌ ಸಲ್ಲಿಸಿದ್ದಾರೆ. ಸೆ. 1 ರ ಮಧ್ಯಾಹ್ನ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರಾಜಕಾಲುವೆಯ ಮೇಲೆ ನಿರ್ಮಿಸಿದ್ದ ಕಾಂಪೌಂಡನ್ನು ತೆರವು ಮಾಡುತ್ತಿದ್ದಾಗಲೇ ಈ ಮಹಿಳೆ ಬಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದನ್ನು ಮತ್ತು ಸ್ಥಳದ ವಾತಾವರಣವನ್ನು ಕಲುಷಿತಗೊಳಿಸಿದ್ದನ್ನು ತಮ್ಮ ದೂರಿನಲ್ಲಿ ಅಧಿಕಾರಿ ಸ್ಪಷ್ಟವಾಗಿ ದಾಖಲಿಸಿದ್ದಾರೆ.

ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯೂ ಎಚ್ಚರಿಕೆ ಕೊಟ್ಟ ಹಿನ್ನೆಲೆಯಲ್ಲಿ ಅಧಿಕಾರಿಗಳು ಒತ್ತುವರಿಯ ಪರಿಣಾಮವಾಗಿ ನೀರು ನುಗ್ಗಿ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆ ಆಗಬಾರದು ಎಂಬ ಹಿನ್ನೆಲೆಯಲ್ಲಿ ಅಧಿಕೃತವಾಗಿ ಗುರುತಿಸಿ ಕಾಂಪೌಡ್‌ನ್ನು ತೆರವುಗೊಳಿಸಿದ್ದರಲ್ಲಿ ಯಾವ ಅಪರಾಧ ಆಗಿದೆ?

ಪೊಲೀಸರಿಗೆ ದೂರು ಕೊಟ್ಟ ಎರಡು ದಿನಗಳ ನಂತರ ವಿಡಿಯೋವನ್ನು ಹರಿಬಿಟ್ಟಿರುವುದು ಶಾಸಕರ ವಿರುದ್ಧ ಮತ್ತು ಅವರ ನಿರಂತರ ಜನಪರ ಕಾರ್ಯಗಳ ವಿರುದ್ಧ ಅಪಪ್ರಚಾರ ನಡೆಸಲು ಎಂಬುದು ಅತ್ಯಂತ ಸ್ಪಷ್ಟವಾಗಿದೆ.

ಈ ಸತ್ಯಾಂಶಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮಗಳು ಸಾರ್ವಜನಿಕ ಹಿತದ ಪರವಾಗಿ ದನಿ ಎತ್ತಬೇಕು ಮತ್ತು ವೈಯಕ್ತಿಕ ಹಿತಾಸಕ್ತಿ, ರಾಜಕೀಯ ಷಡ್ಯಂತ್ರಗಳ ವಿರುದ್ಧ ಧ್ವನಿ ಎತ್ತಬೇಕಿದೆ.

Published On - 2:54 pm, Sat, 3 September 22