
ಬೆಂಗಳೂರು, ನವೆಂಬರ್ 17: ಟನಲ್ ರಸ್ತೆ ಬಳಿಕ ಬೆಂಗಳೂರು ಮತ್ತು ತುಮಕೂರು ನಡುವೆ ಮೆಟ್ರೋ ವಿಸ್ತರಣೆಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ತಲೆ ಕೆಟ್ಟು ಹೋಗಿದೆ ಅನ್ನೋದಕ್ಕೆ ಇದೇ ಉದಾಹರಣೆಯಾಗಿದ್ದು, ಯಾವ ಕೆಲಸ ಎಲ್ಲಿ ಮಾಡಬೇಕು ಎನ್ನುವ ಅರಿವು ಇವರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೇಜಸ್ವಿ ಸೂರ್ಯ ಹೇಳಿದ್ದೇನು?
ಮೆಟ್ರೋ ಹೆಸರೇ ಹೇಳುವ ರೀತಿ ಇದು ನಗರ ಪ್ರದೇಶದ ದಟ್ಟಣೆಯನ್ನು ಕಡಿಮೆ ಮಾಡಲು ಇರುವ ಯೋಜನೆಯಾಗಿದೆ. ತುಮಕೂರಿಗೆ ಮೆಟ್ರೋ ಸಂಪರ್ಕಕ್ಕೆ ವಿರೋಧ ಮಾಡುತ್ತಾ ಇದ್ದೇವೆ ಅಂತಾ ಜನ ಅಂದುಕೊಳ್ಳಬಾರದು. ಮುಂಬೈನಿಂದ ಠಾಣೆಗೆ, ದೆಹಲಿಯಿಂದ ಹರಿಯಾಣದ ಗುರುಗ್ರಾಮಕ್ಕೆ ಹೇಗೆ ರಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್(RRTS) ಮಾಡಿದ್ದಾರೋ ಅದೇ ರೀತಿ ಇಲ್ಲಿಯೂ ಮಾಡಬಹುದು. ಒಂದು ಕಿಲೋಮೀಟರ್ ಮೆಟ್ರೋ ವಿಸ್ತರಣೆಗೆ 450 ಕೋಟಿ ರೂಪಾಯಿ ಖರ್ಚಾಗುತ್ತದೆ. ಅದೇ RRTS ಅಥವಾ ಸಬ್ ಅರ್ಬನ್ ರೈಲು ಮಾಡುತ್ತೇವೆ ಅಂದರೆ 150 ಕೋಟಿ ರೂಪಾಯಿ ಆಗಲಿದೆ. ಕಡಿಮೆ ಜನ ಕುಳಿತುಕೊಳ್ಳುವುದು ಮತ್ತು ಜಾಸ್ತಿ ಜನ ನಿಲ್ಲಲು ಅವಕಅಶ ಇರುವ ರೀತಿ ಮೆಟ್ರೋ ಡಿಸೈನ್ ಇದೆ. ವೈಟ್ಫೀಲ್ಡ್ನಿಂದ ವಿಜಯನಗರಕ್ಕೆ 26 ಕಿ.ಮೀ. ದೂರವನ್ನು ನಿಂತುಕೊಂಡು ಬರಬೇಕು. ಹೀಗಿರುವಾಗ ತುಮಕೂರಿನಿಂದಲೂ ಜನ ನಿಂತುಕೊಂಡು ಬರಬೇಕಾ? ನಿಮಗೆ ಸಲಹೆ ಕೊಡ್ತಾ ಇರೋದು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು – ತುಮಕೂರು ಮೆಟ್ರೋ ಯೋಜನೆ ಡಿಪಿಆರ್ಗೆ ಬಿಡ್ ಕರೆದ ಬಿಎಂಆರ್ ಸಿಎಲ್
ರಿಯಲ್ ಎಸ್ಟೇಟ್ ಲಾಬಿಗಳಿಗೆ ಸಹಾಯವಾಗೋ ರೀತಿಯಲ್ಲಿ ಯೋಜನೆ ಮಾಡ್ತೇವೆ ಅಂತಾ ಹೊರಟರೆ ಬರುವ ಐಡಿಯಾಗಳು ಇದೇ ರೀತಿಯವು. ಬೆಂಗಳೂರಿನ ಸಿಎಂಪಿ ಪ್ರಕಾರ 2031ರಲ್ಲಿ ಬೆಂಗಳೂರು ನಗರಕ್ಕೆ 300 ಕಿಲೋಮೀಟರ್ ಮೆಟ್ರೋ ಆಗಬೇಕು. ಮೊದಲು ಅದನ್ನು ಮಾಡಿ ಎಂದು ಸರ್ಕಾರ ಹಾಗೂ BMRCL ವಿರುದ್ದ ಸಂಸದ ತೇಜಸ್ವಿ ಸೂರ್ಯ ಕಿಡಿ ಕಾರಿದ್ದಾರೆ.
ಮಾದಾವರ (ಬಿಐಇಸಿ)–ತುಮಕೂರು ಮೆಟ್ರೋ ಮಾರ್ಗವು ನೆಲಮಂಗಲ, ದಾಬಸ್‌ಪೇಟೆ ಮತ್ತು ಕ್ಯಾತಸಂದ್ರ ಮೂಲಕ ಹಾದು ಹೋಗಲಿದೆ. ಯೋಜನೆಯ ಮೊದಲ ಹಂತಕ್ಕೆ 20,649 ಕೋಟಿ ರೂ.ವೆಚ್ಚವಾಗುವ ಅಂದಾಜು ಇದೆ. ಮೆಟ್ರೋ ಲೈನ್ ವಿಸ್ತರಣೆಯಾದಲ್ಲಿ ಒಂದು ದಿಕ್ಕಿನಲ್ಲಿ ಪ್ರತೀ ಗಂಟೆಗೆ ಸುಮಾರು 15 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ. ಮಾದವಾರದ ಬಿಐಇಸಿಯಿಂದ ತುಮಕೂರುವರೆಗೆ ಪ್ರಮುಖವಾಗಿ 26 ಮೆಟ್ರೋ ನಿಲ್ದಾಣಗಳನ್ನು ಬರಲಿದ್ದು, ಎಲ್ಲವೂ ಎಲೆವೆಟೆಡ್ ಮಾದರಿಯ ನಿಲ್ದಾಣಗಳಾಗಿರಲಿವೆ.
ವರದಿ: ಲಕ್ಷ್ಮೀ ನರಸಿಂಹ, TV9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:01 pm, Mon, 17 November 25