SC, ST ಅನುದಾನದಲ್ಲಿ 11,144 ಕೋಟಿ ದುರ್ಬಳಕೆ ಆರೋಪ; ಕಾಂಗ್ರೆಸ್ ವಿರುದ್ಧ ಮೂರು ಹಂತಗಳಲ್ಲಿ ಹೋರಾಟಕ್ಕೆ ಬಿಜೆಪಿ ಸಜ್ಜು
ದುರ್ಬಳಕೆ ಮಾಡಿಕೊಳ್ಳದೆ ಕೇವಲ SC, ST ಸಮುದಾಯಕ್ಕೆ ಅನುದಾನ ಬಳಸದಿದ್ದರೆ 3 ಹಂತದಲ್ಲಿ ಹೋರಾಟ ಮಾಡಿ ಪಾದಯಾತ್ರೆ ಮೂಲಕ ತೆರಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಚಿಂತನೆ ನಡೆಸಿದೆ. SC, ST ಸಮುದಾಯಕ್ಕೆ ಮೀಸಲಾದ ಅನುದಾನದಲ್ಲಿ 11,144 ಕೋಟಿಯನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು, ಸೆ.12: SC, ST ಸಮುದಾಯಕ್ಕೆ ಮೀಸಲಾದ ಅನುದಾನದಲ್ಲಿ 11,144 ಕೋಟಿಯನ್ನು ಕಾಂಗ್ರೆಸ್ ಸರ್ಕಾರ(Congress Government) ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ(Govind Karjol) ಆರೋಪಿಸಿದ್ದಾರೆ. ಇನ್ನು ಈ ಆರೋಪ ಹಿನ್ನೆಲೆ ಮೂರು ಹಂತಗಳಲ್ಲಿ ಹೋರಾಟ ಮಾಡಲು ವಿಪಕ್ಷ ಬಿಜೆಪಿ(BJP) ನಾಯಕರು ಮುಂದಾಗಿದ್ದಾರೆ. ದುರ್ಬಳಕೆ ಮಾಡಿಕೊಳ್ಳದೆ ಕೇವಲ SC, ST ಸಮುದಾಯಕ್ಕೆ ಅನುದಾನ ಬಳಸದಿದ್ದರೆ 3 ಹಂತದಲ್ಲಿ ಹೋರಾಟ ಮಾಡಿ ಪಾದಯಾತ್ರೆ ಮೂಲಕ ತೆರಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಚಿಂತನೆ ನಡೆಸಿದೆ.
ಅನುದಾನವನ್ನು ಪರಿಶಿಷ್ಟ ಸಮುದಾಯಕ್ಕೆ ಬಳಸದೇ ಹೋದರೆ 3 ಹಂತದಲ್ಲಿ ಹೋರಾಟ ಮಾಡಲಾಗುತ್ತೆ. ಸೆ.25ರಿಂದ ಅಕ್ಟೋಬರ್ 10ರವರೆಗೆ ಮೊದಲ ಹಂತದಲ್ಲಿ ಜನಾಂದೋಲನ ನಡೆಸಲು, ಅ.11ರಿಂದ ಅಕ್ಟೋಬರ್ 25ರವರೆಗೆ ಎರಡನೇ ಹಂತದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಚಿವರು ಹಾಗೂ ಶಾಸಕರಿಗೆ ಮುತ್ತಿಗೆ, ಜಿಲ್ಲಾ ಸಚಿವರ ಮನೆ ಮುಂದೆ ಧರಣಿ ನಡೆಸಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಹಾಗೂ ನವೆಂಬರ್ 2ನೇ ವಾರದಲ್ಲಿ ಮೂರನೇ ಹಂತದಲ್ಲಿ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಸಮಾಧಿಯಿಂದ ಪಾದಯಾತ್ರೆ ತೆರಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಚಿಂತನೆ ನಡೆದಿದೆ.
ಇದನ್ನೂ ಓದಿ: ಆಡಳಿತ ಯಂತ್ರಕ್ಕೆ ಚುರುಕು: ವಾರಕ್ಕೊಮ್ಮೆ ಜನ ಸಂಪರ್ಕ ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ
ಸರ್ಕಾರದ ವಿರುದ್ಧ ಮುಂದಿನ ಹೋರಾಟದ ಬಗ್ಗೆ ಚರ್ಚಿಸುತ್ತೇವೆ -ಬಿಎಸ್ವೈ
ಬಹಳ ಕಡಿಮೆ ಅವಧಿಯಲ್ಲಿ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜನ ಛೀಮಾರಿ ಹಾಕುವ ಸ್ಥಿತಿ ಬಂದಿದೆ ಎಂದು ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು. ಗೌರಿ ಗಣೇಶ ಹಬ್ಬದ ನಂತರ ರಾಜ್ಯಾದ್ಯಂತ ಪ್ರವಾಸಕ್ಕೆ ತೀರ್ಮಾನಿಸಿದ್ದೇನೆ. ಸರ್ಕಾರದ ವಿರುದ್ಧ ಮುಂದಿನ ಹೋರಾಟದ ಬಗ್ಗೆ ಚರ್ಚಿಸುತ್ತೇವೆ. ದೆಹಲಿಯಲ್ಲಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಿದೆ. ಸಭೆಯಲ್ಲಿ ಪಾಲ್ಗೊಳ್ಳಲು ನಾಳೆ ದೆಹಲಿಗೆ ತೆರಳುತ್ತಿದ್ದೇವೆ. ಜೆಡಿಎಸ್ ಜೊತೆ ಮೈತ್ರಿ ವಿಚಾರವಾಗಿ ವರಿಷ್ಠರು ತೀರ್ಮಾನಿಸುತ್ತಾರೆ. ಇದು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಬಿಟ್ಟ ವಿಚಾರ ಎಂದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:27 pm, Tue, 12 September 23