ರಾಜ್ಯವನ್ನು ಆಳುತ್ತಿರುವ ಬಿಜೆಪಿಗೆ ಮೇಕೆದಾಟು ಯೋಜನೆಯಲ್ಲಿ ಬದ್ಧತೆ ಇದ್ದರೆ ಕೇಂದ್ರದ ಮೇಲೆ ಒತ್ತಡ ಹಾಕಿ ಅನುಮತಿ ತರಲಿ: ಹೆಚ್​.ಡಿ. ಕುಮಾರಸ್ವಾಮಿ

| Updated By: preethi shettigar

Updated on: Jul 30, 2021 | 2:13 PM

ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾಗಿದ್ದು, ಬಸವರಾಜ ಬೊಮ್ಮಾಯಿ ಕೂಡ ಭರವಸೆ ನೀಡಿದ್ದಾರೆ. ಹೀಗಿರುವಾಗಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮೇಕೆದಾಟು ಯೋಜನೆ ಕುರಿತಾಗಿ ಮತ್ತೆ ಧ್ವನಿ ಎತ್ತಿದ್ದು, ಟ್ವೀಟರ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯವನ್ನು ಆಳುತ್ತಿರುವ ಬಿಜೆಪಿಗೆ ಮೇಕೆದಾಟು ಯೋಜನೆಯಲ್ಲಿ ಬದ್ಧತೆ ಇದ್ದರೆ ಕೇಂದ್ರದ ಮೇಲೆ ಒತ್ತಡ ಹಾಕಿ ಅನುಮತಿ ತರಲಿ: ಹೆಚ್​.ಡಿ. ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ
Follow us on

ಬೆಂಗಳೂರು: ಕರ್ನಾಟದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು ಹಾಕುತ್ತಿದೆ. ಅಲ್ಲದೆ ಯೋಜನೆ ವಿರೋಧಿಸಿ ತಮಿಳುನಾಡು ಸರ್ವಪಕ್ಷಗಳ ನಿಯೋಗ (all-party delegation from Tamilnadu) ಹಲವು ಕಸರತ್ತುಗಳನ್ನು ನಡೆಸುತ್ತಿದೆ. ಕರ್ನಾಟಕ ನೀಡಿರುವ ಮೇಕೆದಾಟು ಯೋಜನೆ (Mekedatu dam project) ವರದಿಯಲ್ಲಿ ಹಲವು ತಪ್ಪುಗಳಿವೆ, ತಮಿಳುನಾಡು ರಾಜ್ಯದ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದನ್ನು ಯಾವುದೇ ಕಾರಣಕ್ಕೂ ಕೇಂದ್ರ ಒಪ್ಪುವುದಿಲ್ಲ. ಕರ್ನಾಟಕ ವರದಿಯನ್ನು ತಿರಸ್ಕರಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಮಾಧ್ಯಮದವರಿಗೆ ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿರುವಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಕೆದಾಟು ಯೋಜನೆ ಮಾಡಿಯೇ ತಿರುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾಗಿದ್ದು, ಬಸವರಾಜ ಬೊಮ್ಮಾಯಿ ಕೂಡ ಭರವಸೆ ನೀಡಿದ್ದಾರೆ. ಹೀಗಿರುವಾಗಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮೇಕೆದಾಟು ಯೋಜನೆ ಕುರಿತಾಗಿ ಮತ್ತೆ ಧ್ವನಿ ಎತ್ತಿದ್ದು, ಟ್ವೀಟರ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಟ್ವೀಟ್ನ ಸಾರಾಂಶ ಹೀಗಿದೆ
ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡುವ ವಿಚಾರದಲ್ಲಿ ಕರ್ನಾಟಕದ ಪರವಾಗಿ ಇರುವವರು ಯಾರು? ತಮಿಳುನಾಡಿನ ವಿರೋಧ ಪಕ್ಷ ಎಐಎಡಿಎಂಕೆ ಎನ್‌ಡಿಎ ಸರ್ಕಾರದ ಮೇಲೆ ಒತ್ತಡ ಹಾಕಿದೆ. ಆಡಳಿತ ಪಕ್ಷ ಡಿಎಂಕೆ ಕಾಂಗ್ರೆಸ್‌ ಮೇಲೆ ಒತ್ತಡ ಹಾಕಿದೆ. ಕರ್ನಾಟಕದಲ್ಲಿ ಮಾತ್ರ ಎರಡೂ ಪಕ್ಷಗಳು ಯೋಜನೆ ಜಾರಿಯಾಗಬೇಕು ಎನ್ನುತ್ತವೆ? ಯಾರು ಯಾರ ಪರ ಇದ್ದೀರಿ?

ಮೇಕೆದಾಟು ಯೋಜನೆ ಜಾರಿಯಾಗದೆಂದು ಕೇಂದ್ರ ಜಲಸಂಪನ್ಮೂಲ ಸಚಿವರು ಭರವಸೆ ನೀಡಿರುವುದಾಗಿ ತಮಿಳುನಾಡಿನ ಆಡಳಿತ ಪಕ್ಷ, ವಿರೋಧ ಪಕ್ಷಗಳೆರಡೂ ನಿನ್ನೆಯಷ್ಟೇ ಪುನರುಚ್ಚರಿಸಿವೆ. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದ, ತಮಿಳುನಾಡು ಬಿಜೆಪಿ ಮುಖಂಡ, ಮಾಜಿ ಐಪಿಎಸ್‌ ಅಧಿಕಾರಿಯೊಬ್ಬರು ಮೇಕೆದಾಟು ಯೋಜನೆ ವಿರುದ್ಧ ಉಪವಾಸಕ್ಕೂ ಕೂರುತ್ತಿದ್ದಾರೆ.

ಮೇಕೆದಾಟು ಅಣೆಕಟ್ಟು ಯೋಜನೆ ತಮಿಳುನಾಡಿನಲ್ಲಿ ರಾಜಕೀಯ ಒಗ್ಗಟ್ಟು ಪ್ರದರ್ಶನಕ್ಕೆ ಕಾರಣವಾಗಿದ್ದರೆ, ಅದೇ ಮೇಕೆದಾಟು ಯೋಜನೆ ರಾಜ್ಯದಲ್ಲಿನ ಒಡಕುತನವನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ‘ನಾವು ಯೋಜನೆ ಪರ ಇದ್ದೇವೆ’ ಎಂದು ರಾಜ್ಯದ ಮುಖ್ಯಮಂತ್ರಿಯೊಬ್ಬರೇ ಹೇಳಿದರೆ ಸಾಲದು. ಆಡಳಿತ ಪಕ್ಷ ಇದರ ಪರ ಇರುವುದಾಗಿ ಕೆಲಸದ ಮೂಲಕ ಸಾಬೀತು ಮಾಡಬೇಕು.

ಅಣೆಕಟ್ಟು ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದು ಹೇಳುತ್ತಿದ್ದ ಯಡಿಯೂರಪ್ಪ ಅವರು ಕೇಂದ್ರ ಸರ್ಕಾರದ ಅನುಮತಿ ಪಡೆಯಲಿಲ್ಲ. ಈಗ ಬೊಮ್ಮಾಯಿ ಅವರೂ ಯೋಜನೆ ಜಾರಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಇವೆಲ್ಲ ಮಾತಿನಲ್ಲೇ ಉಳಿಯಬಾರದು. ಕೇಂದ್ರದ ಬಳಿಗೆ ಹೋಗಿ ಅನುಮತಿ ಪಡೆಯಲು ಪ್ರಯತ್ನಿಸಬೇಕು. ಈ ಕಾರ್ಯವನ್ನು ಜೆಡಿಎಸ್‌ ಯಾವಾಗಲೂ ಬೆಂಬಲಿಸುತ್ತದೆ.

ಮೇಕೆದಾಟು, ಕೃಷ್ಣಾ, ಮಹದಾಯಿ ಯೋಜನೆಗಳಿಗೆ ಅನುಮತಿ ನೀಡಲು ಆಗ್ರಹಿಸಿ ಜೆಡಿಎಸ್‌ ರಾಜ್ಯಪಾಲರ ಮೂಲಕ ರಾಷ್ಟ್ರಪತಿ, ಪ್ರಧಾನಿಗೆ ಮನವಿ ಸಲ್ಲಿಸಿದೆ. ಈ ವಿಚಾರವಾಗಿ ಪ್ರಧಾನಿಯನ್ನೂ ಭೇಟಿಯಾಗಲು ನಿರ್ಧರಿಸಿದ್ದೇವೆ. ರಾಜ್ಯವನ್ನು ಆಳುತ್ತಿರುವ ಬಿಜೆಪಿಗೆ ಈ ಯೋಜನೆಗಳ ವಿಚಾರದಲ್ಲಿ ಬದ್ಧತೆ ಇದ್ದರೆ ಕೇಂದ್ರದ ಮೇಲೆ ಒತ್ತಡ ಹಾಕಿ ಅನುಮತಿ ತರಲಿ.

ಇದನ್ನೂ ಓದಿ:
ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ; ಎಲ್ಲದರ ಬಗ್ಗೆ ಪ್ರಧಾನಿ ಮೋದಿಗೆ ತಿಳಿಸುತ್ತೇನೆ: ಹೆಚ್ ಡಿ ಕುಮಾರಸ್ವಾಮಿ

Mekedatu Project: ಮೇಕೆದಾಟು ಯೋಜನೆಯನ್ನು ಜಾರಿ ಮಾಡಿಯೇ ಮಾಡುತ್ತೇವೆ; ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಅಚಲ ನುಡಿ

Published On - 2:03 pm, Fri, 30 July 21