Karnataka Politics: ಒಂದು ವಾರದೊಳಗೆ ರಾಜ್ಯ ಸಚಿವ ಸಂಪುಟ ರಚನೆ: ಬಸವರಾಜ ಬೊಮ್ಮಾಯಿ
Karnataka Bengaluru News: ಬಸವರಾಜ ಬೊಮ್ಮಾಯಿ ಭೇಟಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕ ಮುನ್ನಡೆಸುವುದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ, ಕರ್ನಾಟಕದ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದೇನೆ ಎಂದೂ ಬರೆದುಕೊಂಡಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕ ಮುನ್ನಡೆಸುವುದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ, ಕರ್ನಾಟಕದ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದೇನೆ ಎಂದೂ ಬರೆದುಕೊಂಡಿದ್ದಾರೆ. ಇಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಮತ್ತೊಂದು ಕಡೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಶಾಸಕರು ನಾಯಕರ ಬೆನ್ನ ಹಿಂದೆ ಬಿದ್ದಿದ್ದಾರೆ. ಹೈಕಮಾಂಡ್ಗೆ ಒತ್ತಡ ಹಾಕುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
LIVE NEWS & UPDATES
-
ಕರ್ನಾಟಕದದಿಂದ ಕೇಂದ್ರ ಸಂಪುಟ ಸೇರಿದ ಸಚಿವರು ಮತ್ತು ಸಿಎಂ ಬೊಮ್ಮಾಯಿ ಮೋದಿ ಜೊತೆ
ನಿರ್ಮಲಾ ಸೀತಾರಾಮನ್ ಕೂಡ ಜೊತೆಗಿದ್ದಾರೆ
-
ನಾಳೆ ಸಂಜೆ 4.55ಕ್ಕೆ ದೆಹಲಿಯಿಂದ ವಾಪಸಾಗಲಿರುವ ಸಿಎಂ
ನಾಳೆ ಸಂಜೆ 4.55ಕ್ಕೆ ದೆಹಲಿಯಿಂದ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಸಂಜೆ 5.30ಕ್ಕೆ ಕೊವಿಡ್ ಹೆಚ್ಚಿರುವ ಜಿಲ್ಲಾಡಳಿತ ಜತೆ ಸಭೆ ನಡೆಸಲಿದ್ದಾರೆ. ಗೃಹಕಚೇರಿ ಕೃಷ್ಣಾದಲ್ಲಿ ವಿಡಿಯೋ ಸಂವಾದ ನಡೆಸಲಿದ್ದಾರೆ. ಬಿಬಿಎಂಪಿ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳ ಜಿಲ್ಲಾಡಳಿತಗಳ ಜತೆ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
-
ಬೊಮ್ಮಾಯಿ ಜೊತೆ ಆಡಳಿತದ ಅನುಭವಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಪ್ರಧಾನಿ ನರೇಂದ್ರ ಮೋದಿ 45 ನಿಮಿಷ ಚರ್ಚೆ ನಡೆಸಿದ್ದಾರೆ. ತನ್ನ ಆಡಳಿತದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಉತ್ತಮ ಆಡಳಿತ ನೀಡುವಂತೆ ಮೋದಿ ಸಲಹೆ ನೀಡಿದ್ದಾರೆ. 10 ನಿಮಿಷಗಳ ಕಾಲ ಅಮಿತ್ ಶಾ ಜೊತೆ ಸಿಎಂ ಚರ್ಚೆ ನಡೆಸಿದ್ದಾರೆ. ಟಫ್ ಟೈಂ ನಿಭಾಯಿಸುವಂತೆ ಹೇಳಿದ್ದಾರೆ. ಆಡಳಿತ ಮತ್ತು ಸಂಪುಟ ಚಾಕಚಕ್ಯತೆಯಿಂದ ನಿಭಾಯಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಏಮ್ಸ್ ಸ್ಥಾಪನೆಗೆ ಸಿಎಂ ಮನವಿ
ಹುಬ್ಬಳ್ಳಿ-ಧಾರವಾಡದಲ್ಲಿ ಏಮ್ಸ್ ಸ್ಥಾಪನೆಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿದ್ದಾರೆ. ರಾಯಚೂರಿನಲ್ಲಿ ಏಮ್ಸ್ ಮಾದರಿ ಸಂಸ್ಥೆ ಸ್ಥಾಪನೆಗೆ ಮನವಿ ಮಾಡಲಾಗಿದೆ. ಕಲಬುರಗಿಯಲ್ಲಿರುವ ಇಎಸ್ಐ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮೇಲ್ದರ್ಜೆಗೆ ಮನವಿ ಸಲ್ಲಿಸಲಾಗಿದೆ. ಪ್ರಾದೇಶಿಕ ಏಮ್ಸ್ ಮಾದರಿಯಲ್ಲಿ ಮೇಲ್ದರ್ಜೆಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ನಾನು ಯಾವುದೇ ಸ್ಟ್ಯಾಂಪ್ ಆಗುವುದಿಲ್ಲ
ಬಿಜೆಪಿ ಸಿದ್ಧಾಂತ ಅಡಿಯಲ್ಲಿ ಮಾಡಿರುವ ಸ್ಟ್ಯಾಂಪ್ ಇರುತ್ತದೆ. ನಾನು ಯಾವುದೇ ಸ್ಟ್ಯಾಂಪ್ ಆಗುವುದಿಲ್ಲ ಎಂದು ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ, ಬಿಜೆಪಿ ತತ್ವ ಸಿದ್ಧಾಂತದ ಸ್ಟ್ಯಾಂಪ್ ಇರುತ್ತೆ. ಸರ್ವರನ್ನು ಒಳಗೊಂಡ ಪ್ರಬುದ್ಧರ ತಂಡ ಸಂಪುಟದಲ್ಲಿರುತ್ತದೆ. ಡಿಸಿಎಂಗಳ ಬಗ್ಗೆಯೂ ಸಂಪುಟ ರಚನೆ ವೇಳೆ ಗೊತ್ತಾಗುತ್ತೆ ಎಂದು ಅವರು ಹೇಳಿದ್ದಾರೆ.
ರಾಜ್ಯಕ್ಕೆ ಲಸಿಕೆ ಪೂರೈಕೆಯಲ್ಲಿ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದೇನೆ
ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಳ ಕಳವಳಕಾರಿಯಾಗಿದೆ. ಕೇರಳದ ಗಡಿ ಜಿಲ್ಲಾಡಳಿತಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸುವೆ. ನಾಳೆ ಬೆಂಗಳೂರಿಗೆ ತೆರಳಿದ ನಂತರ ವಿಡಿಯೋ ಕಾನ್ಫರೆನ್ಸ್ ಭಾಗವಹಿಸಲಿದ್ದೇನೆ. ನೆರೆ ಪರಿಸ್ಥಿತಿ ಬಗ್ಗೆ ಜಿಲ್ಲಾಡಳಿತಗಳ ಜತೆ ಸಂವಾದ ನಡೆಸುವೆ. ಮುಂದಿನ ತಿಂಗಳು ಮತ್ತೊಮ್ಮೆ ನಾನು ದೆಹಲಿ ಬರುತ್ತೇನೆ. ರಾಜ್ಯಕ್ಕೆ ಲಸಿಕೆ ಪೂರೈಕೆಯಲ್ಲಿ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದೇನೆ. ಪ್ರಧಾನಿ ಮೋದಿ ಭೇಟಿ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಒಂದು ವಾರದೊಳಗೆ ರಾಜ್ಯ ಸಚಿವ ಸಂಪುಟ ರಚನೆ
ಒಂದು ವಾರದೊಳಗೆ ರಾಜ್ಯ ಸಚಿವ ಸಂಪುಟ ರಚನೆ ಮಾಡುತ್ತೇನೆ. ಕೇಂದ್ರದ ನಾಯಕರ ಜತೆ ಯಾವುದೇ ಚರ್ಚೆ ಮಾಡಿಲ್ಲ. ಸಚಿವ ಸಂಪುಟ ರಚನೆ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಸಚಿವರಿಗೆ ಮನವಿ
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ, ಕೃಷ್ಣಾ ಮೇಲ್ದಂಡೆ ಯೋಜನೆ 2ನೇ ಹಂತದ ಯೋಜನೆಗೆ ಒತ್ತಾಯಿಸಿ ಸಚಿವರಿಗೆ ಮನವಿ ಮಾಡಲಾಗಿದೆ. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ಗೆ ಮನವಿ ಮಾಡಿದ್ದೇನೆ. ಎತ್ತಿನಹೊಳೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ಆಗ್ರಹಿಸಿ ಮನವಿ ಮಾಡಲಾಗಿದೆ. ಕಳಸಾ-ಬಂಡೂರಿ ಯೋಜನೆ ಜಾರಿಗೆ ಒತ್ತಾಯ ಮಾಡಿದ್ದೇನೆ. ಬೆಂಗಳೂರಿನಲ್ಲಿ ಕೇಂದ್ರದ ಯೋಜನೆಗಳ ಜಾರಿಗೆ ಸಮಿತಿ, ಸ್ಮಾಲ್ ವರ್ಕಿಂಗ್ ಗ್ರೂಪ್ ಮಾಡಲು ತೀರ್ಮಾನಿಸಿದ್ದೇನೆ. ನಾಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾಗುವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸ್ವಚ್ಛ, ಸುಭದ್ರ ಆಡಳಿತಕ್ಕೆ ಪ್ರಧಾನಿ ಮೋದಿ ಸೂಚಿಸಿದ್ದಾರೆ
ಸ್ವಚ್ಛ, ಸುಭದ್ರ ಆಡಳಿತಕ್ಕೆ ಪ್ರಧಾನಿ ಮೋದಿ ಸೂಚಿಸಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ರಾಜನಾಥ್ ಸಿಂಗ್, ಜೆ.ಪಿ.ನಡ್ಡಾ ಭೇಟಿ ವೇಳೆ ಪಕ್ಷದ ಜೊತೆ ಸಹಕರಿಸಬೇಕು ಎಂದು ಸಿಂಗ್, ನಡ್ಡಾ ಸಲಹೆ ನೀಡಿದ್ಧಾರೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಹೆಚ್ಚು ಒತ್ತು ನೀಡುವಂತೆ ಸೂಚನೆ ಕೊಟ್ಟಿದ್ದಾರೆ. ಕೇಂದ್ರ, ರಾಜ್ಯದ ಸಹಕಾರದಲ್ಲಿ ಯೋಜನೆ ಜಾರಿಗೆ ಸಲಹೆ ಮಾಡಿದ್ದಾರೆ. ಕೇಂದ್ರದ ಯೋಜನೆಗಳು ಜನರಿಗೆ ಮುಟ್ಟಿಸುವಂತೆ ಸೂಚನೆ ನೀಡಲಾಗಿದೆ. ಮುಂದಿನ ಚುನಾವಣೆಗಳಿಗೆ ಸಿದ್ಧರಾಗುವಂತೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ಉತ್ತಮ ಸರ್ಕಾರ ನೀಡಬೇಕೆಂದು ಬಿಜೆಪಿ ನಾಯಕರು ಸಲಹೆ ನೀಡಿದ್ದಾರೆ
ಇಡೀ ದಿನ ಕೇಂದ್ರದ ಬಿಜೆಪಿ ನಾಯಕರನ್ನು ಭೇಟಿಯಾದೆ. ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಭೇಟಿಯಾಗಿದ್ದೇನೆ ಎಂದು ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಉತ್ತಮ ಸರ್ಕಾರ ನೀಡಬೇಕೆಂದು ಬಿಜೆಪಿ ನಾಯಕರು ಸಲಹೆ ನೀಡಿದ್ದಾರೆ. ಕೇಂದ್ರದಲ್ಲಿರುವ ರಾಜ್ಯದ ಐವರು ಸಚಿವರ ಜತೆ ಪಿಎಂ ಭೇಟಿ ಮಾಡಿದ್ದೇನೆ. ರಾಜ್ಯದಲ್ಲಿ ಆಗಬೇಕಿರುವ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದೇನೆ. ನಮ್ಮ ನೆರೆಯ ರಾಜ್ಯಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆ ಗಡಿ ಜಿಲ್ಲೆಗಳ ಡಿಸಿಗಳ ಜತೆ ಸಮಾಲೋಚನೆ ನಡೆಸಿ ಸೂಚನೆ ನೀಡಲಿದ್ದೇನೆ. ಕೊವಿಡ್ ನಿಯಮ ಪಾಲನೆ ಬಗ್ಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಪ್ರಧಾನಿ ಮೋದಿ ತೋರಿದ ಸಂಯಮ, ಪ್ರೀತಿಗೆ ಆಭಾರಿ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಸ್ವಚ್ಚ ಸರಕಾರ ಕೊಡೊಬೇಕು ಎಂದು ಮೋದಿ ಹೇಳಿದ್ದಾರೆ
ಸ್ವಚ್ಚ ಸರಕಾರ ಕೊಡಬೇಕು ಎಂದು ಮೋದಿ ಹೇಳಿದ್ದಾರೆ. ಕರ್ನಾಟಕ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಸಿಎಂ ಬೊಮ್ಮಾಯಿ ಟೆಸ್ಟಿಂಗ್ ಟೈಂ ಎಂದು ಅಮಿತ್ ಶಾ ಹೇಳಿದ್ದಾರೆ. ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ನಡ್ಡಾ ಹೇಳಿದ್ದಾರೆ. ಮುಂಬರುವ ಚುನಾವಣೆಗೆ ಸಿದ್ದರಾಗುವಂತೆ ನಡ್ಡಾ ಸೂಚನೆ ನೀಡಿದ್ದಾರೆ ಎಂದು ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರ ಭೇಟಿ ಬಳಿಕ ಅವರು ಮಾತನಾಡಿದ್ದಾರೆ.
ಸಿಎಂ ಬೊಮ್ಮಾಯಿ ಭೇಟಿ ಬಗ್ಗೆ ಪ್ರಧಾನಿ ಟ್ವೀಟ್
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕ ಮುನ್ನಡೆಸುವುದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ, ಕರ್ನಾಟಕದ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದೇನೆ ಎಂದೂ ಬರೆದುಕೊಂಡಿದ್ದಾರೆ.
Met CM of Karnataka Shri @BSBommai ji today. Conveyed best wishes as he begins a new journey for Karnataka’s progress. Assured full support for the development of Karnataka. pic.twitter.com/C0pgJERPdx
— Narendra Modi (@narendramodi) July 30, 2021
ಕೊರೊನಾ ಹೆಚ್ಚಿರುವ 10 ಜಿಲ್ಲಾಡಳಿತಗಳ ಜತೆ ಸಿಎಂ ಸಭೆ
ಕೊರೊನಾ ಪ್ರಕರಣಗಳ ಸಂಖ್ಯೆ ದಿನೇದಿನೇ ಏರಿಕೆ ಆಗುತ್ತಿದೆ. ಹೀಗಾಗಿ ಕೊವಿಡ್ ಪ್ರಕರಣಗಳು ಹೆಚ್ಚಿರುವ 10 ಜಿಲ್ಲಾಡಳಿತಗಳ ಜತೆ ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ ನಿವಾಸದಲ್ಲಿ ಬಿಜೆಪಿ ನಾಯಕರು
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿವಾಸಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ. ಖಾಸಗಿ ಕಾರಿನಲ್ಲಿ ಬಂದಿರುವ ಮಾಜಿ ಸಚಿವರು, ಸ್ಪೀಕರ್ ನಿವಾಸದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸ್ಪೀಕರ್ ಸರ್ಕಾರಿ ನಿವಾಸ ಕುತೂಹಲದ ಕೇಂದ್ರವಾಗಿದೆ.
ಬೊಮ್ಮಾಯಿ ರಬ್ಬರ್ ಸ್ಟ್ಯಾಂಪೋ, ಐರನ್ ಸ್ಟ್ಯಾಂಪೋ ಗೊತ್ತಿಲ್ಲ
ಬಸವರಾಜ ಬೊಮ್ಮಾಯಿ ರಬ್ಬರ್ ಸ್ಟ್ಯಾಂಪೋ, ಐರನ್ ಸ್ಟ್ಯಾಂಪೋ ಗೊತ್ತಿಲ್ಲ. ಹೊಸ ಸರ್ಕಾರದ ಕೆಲಸ ನೋಡಿ ಜನ ತೀರ್ಮಾನಿಸುತ್ತಾರೆ. ಕೆಲವರು ಸರ್ಕಾರದ ಬಗ್ಗೆ ಆತುರದಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಸಿಎಂಗೆ ಅವಕಾಶ ಕೊಡಬೇಕೆಂಬುದು ನನ್ನ ಅಭಿಪ್ರಾಯ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿದ್ದ ದೋಷಗಳು, ಸಮಸ್ಯೆ ಸರಿಪಡಿಸಿ ಆಡಳಿತ ನೀಡುತ್ತಾರಾ ನೋಡಬೇಕಿದೆ ಎಂದು ಅವರು ಮಾತನಾಡಿದ್ದಾರೆ.
ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡ್ತಿರುವುದು ದುರದೃಷ್ಟ
ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡ್ತಿರುವುದು ನಮ್ಮ ರಾಜ್ಯದ ದುರದೃಷ್ಟ ಎಂದು ರಾಮನಗರದಲ್ಲಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ ಸಿಎಂ ಆದಾಗಲೂ ಸಂಪುಟ ರಚನೆ ವಿಳಂಬ ಆಗಿತ್ತು. ರಾಜ್ಯ ಬಿಜೆಪಿಯಲ್ಲಿ ಈಗಲೂ ಅದೇ ರೀತಿಯ ಪರಿಸ್ಥಿತಿಯಿದೆ. ಸಂಪುಟ ರಚನೆ ಮಾಡುವುದು ಕೂಡ ಸಿಎಂಗೆ ಸವಾಲಾಗಲಿದೆ. ಆದಷ್ಟು ಬೇಗ ಸಿಎಂ ಬೊಮ್ಮಾಯಿ ಸಂಪುಟ ರಚಿಸಬೇಕು. ಸಂಪುಟ ರಚನೆಗೆ ಹೈಕಮಾಂಡ್ ಗ್ರೀನ್ಸಿಗ್ನಲ್ ನೀಡಬೇಕು. ಪ್ರವಾಹ ಪರಿಸ್ಥಿತಿ ಇದೆ, ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ಸಚಿವ ಸಂಪುಟ ರಚಿಸಬೇಕಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿಯಾಗಿದ್ದಾರೆ. ದೆಹಲಿಯ ಜೆ.ಪಿ.ನಡ್ಡಾ ನಿವಾಸದಲ್ಲಿ ಅವರನ್ನು ಭೇಟಿಯಾಗಿದ್ದಾರೆ. ಈ ಮೊದಲು, ರಾತ್ರಿ ಸಿಎಂ ಬೊಮ್ಮಾಯಿ ಭೇಟಿಗೆ ನಡ್ಡಾ ಸಮಯ ನೀಡಿದ್ದರು. ಬಳಿಕ ಸಂಜೆ 5.30 ಕ್ಕೆ ಭೇಟಿಗೆ ಸಮಯ ನೀಡಲಾಗಿತ್ತು. ಹೀಗಾಗಿ ಈಗ ಬಸವರಾಜ ಬೊಮ್ಮಾಯಿ ನಡ್ಡಾ ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ. ಸಂಪುಟ ರಚನೆಯ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಚಿವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಬಸವರಾಜ ಬೊಮ್ಮಾಯಿ ಆಗಮನ
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮುಕ್ತಾಯವಾಗಿದೆ. ದೆಹಲಿಯ ಪ್ರಧಾನಿ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಮೋದಿ ಭೇಟಿಯಾಗಿದ್ದರು. ಇದೀಗ, ಪ್ರಧಾನಿ ಭೇಟಿ ಬಳಿಕ ಸಚಿವ ಜೋಶಿ ನಿವಾಸಕ್ಕೆ ಬೊಮ್ಮಾಯಿ ಆಗಮಿಸಿದ್ದಾರೆ. ಅಕ್ಬರ್ ರಸ್ತೆಯಲ್ಲಿರುವ ಸಚಿವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಬೊಮ್ಮಾಯಿ ತೆರಳಿದ್ದಾರೆ.
ಸಚಿವ ಸ್ಥಾನಕ್ಕೆ ಲಾಬಿ ಮಾಡಲು ನಾನು ದೆಹಲಿಗೆ ಹೋಗಿಲ್ಲ
ಸಚಿವ ಸ್ಥಾನಕ್ಕೆ ಲಾಬಿ ಮಾಡಲು ನಾನು ದೆಹಲಿಗೆ ಹೋಗಿಲ್ಲ ಎಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶಾಸಕ ರಾಜ್‌ಕುಮಾರ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸಲು ಕೆಲಸ ಮಾಡುತ್ತಿದ್ದೇನೆ. 20 ವರ್ಷದಿಂದ ಪಕ್ಷಕ್ಕೆ ತಳಮಟ್ಟದಿಂದ ಕೆಲಸ ಮಾಡಿದ್ದೇನೆ. ಸಂಪುಟದಲ್ಲಿ ಅವಕಾಶ ಮಾಡಿಕೊಟ್ಟರೆ ಕೆಲಸ ಮಾಡುತ್ತೇನೆ. ಆದರೆ ಪಕ್ಷ ಏನು ತೀರ್ಮಾನ ಮಾಡುತ್ತದೆ ನೋಡಬೇಕು ಎಂದು ಶಾಸಕ ರಾಜ್‌ಕುಮಾರ್ ಪಾಟೀಲ್ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಕಾಲೆಳೆದ ನೆಟ್ಟಿಗರು
ಟ್ವಿಟರ್ನಲ್ಲಿ ಪಿ.ವಿ. ಸಿಂಧುಗೆ ಅಭಿನಂದನೆ ಸಲ್ಲಿಸಿ ಸಿಎಂ ಬಸವರಾಜ ಬೊಮ್ಮಾಯಿ ಪೋಸ್ಟ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ನೆಟ್ಟಿಗರು ಬಸವರಾಜ ಬೊಮ್ಮಾಯಿ ಕಾಲೆಳೆದಿದ್ದಾರೆ. ಮೊದಲು ಕರ್ನಾಟಕಕ್ಕೆ ಬನ್ನಿ, ಪ್ರವಾಹ ಪೀಡಿತ ಪ್ರದೇಶಗಳತ್ತ ನೋಡಿ ಎಂದು ಕಮೆಂಟ್ ಮಾಡಿದ್ದಾರೆ. ದೆಹಲಿ ಪ್ರವಾಸದಲ್ಲಿ ಇರುವ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಜನರು ಟ್ವೀಟ್ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಅಕ್ರಮ ಗಣಿಗಾರಿಕೆ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾಗೆ ಸಂಸದೆ ಸುಮಲತಾ ದೂರು
ಮಂಡ್ಯ ಅಕ್ರಮ ಗಣಿಗಾರಿಕೆ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾಗೆ ಸಂಸದೆ ಸುಮಲತಾ ದೂರು ನೀಡಿದ್ದಾರೆ. ಅಕ್ರಮ ಗಣಿಗಾರಿಕೆಯಿಂದ ಕೆಆರ್ಎಸ್ ಅಣೆಕಟ್ಟು ಸೇರಿದಂತೆ ಪರಿಸರ, ರೈತರು, ಅರಣ್ಯ, ಪ್ರಾಣಿ ಸಂಕುಲಕ್ಕೆ ಅಪಾಯ ಉಂಟಾಗಿದೆ. ಹೀಗೆ ಆಗುತ್ತಿರುವ ಅಪಾಯದ ಬಗ್ಗೆ ಅಮಿತ್ ಶಾಗೆ ಸುಮಲತಾ ಮನವರಿಕೆ ಮಾಡಿದ್ದಾರೆ. ಕೇಂದ್ರದಿಂದ ಉನ್ನತ ಮಟ್ಟದ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಗಿ ಸುಮಲತಾ ಒತ್ತಾಯ ಮಾಡಿದ್ದಾರೆ.
ಭೋವಿ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ಒತ್ತಾಯ
ವಿಧಾನ ಪರಿಷತ್ ಸದಸ್ಯ ಸುನಿಲ್ ವಲ್ಯಾಪುರೆಗೆ ಸಚಿವ ಸ್ಥಾನ ನೀಡಲು ಆಗ್ರಹ ಕೇಳಿಬಂದಿದೆ. ಸುನಿಲ್ ವಲ್ಯಾಪುರೆ ಬೆಂಬಲಿಗರು ಯಡಿಯೂರಪ್ಪ ನಿವಾಸದ ಬಳಿ ಆಗಮಿಸಿದ್ದಾರೆ. ಸಾಮಾಜಿಕ ನ್ಯಾಯದಡಿ ಭೋವಿ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ಒತ್ತಾಯ ಮಾಡಲಾಗಿದೆ.
ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದಾರೆ. ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದಾರೆ. ಪ್ರಧಾನಿ ನಿವಾಸದಲ್ಲಿ ಭೇಟಿಯಾಗಿ ಸಿಎಂ ಬೊಮ್ಮಾಯಿ ಧನ್ಯವಾದ ತಿಳಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಯನಶೀಲರು
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಧ್ಯಯನಶೀಲರು. ಸರಳ ಸಜ್ಜನಿಕೆ ಉಳ್ಳವರು, ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡಬಲ್ಲರು. ತಂದೆಯವರ ಗರಡಿಯಲ್ಲಿ ಬಸವರಾಜ್ ಬೊಮ್ಮಾಯಿ ಪಳಗಿದ್ದಾರೆ. ಹೀಗಾಗಿ ಅವರು ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡುವ ಭರವಸೆಯಿದೆ ಎಂದು ಗದಗನಲ್ಲಿ ತೋಂಟದಾರ್ಯ ಡಾ. ಸಿದ್ಧರಾಮ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಅವರ ತಂದೆ ಎಸ್ ಆರ್ ಬೊಮ್ಮಾಯಿ ಸಮಾಜವಾದಿ ಹಿನ್ನೆಲೆ ಉಳ್ಳವರು. ಬಸವರಾಜ ಬೊಮ್ಮಾಯಿ ಈ ಹಿಂದೆ ಜಲ ಸಂಪನ್ಮೂಲ ಸಚಿವರಾಗಿದ್ದಾಗ ಸಾಕಷ್ಟು ನೀರಾವರಿ ಯೋಜನೆ ಮಾಡಿದ್ದಾರೆ. ಕರ್ನಾಟಕ ಸಮಗ್ರ ಅಭಿವೃದ್ಧಿ ಮಾಡುವ ಆಶಾಭಾವನೆ ಇದೆ. ಅವರು ಉತ್ತರ ಕರ್ನಾಟಕದವರು ಹೀಗಾಗಿ ಉತ್ತರ ಕರ್ನಾಟಕ ಸೇರಿದಂತೆ ಸಮಗ್ರ ರಾಜ್ಯದ ಅಭಿವೃದ್ಧಿ ಮಾಡ್ತಾರೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಭವನದಿಂದ ಪ್ರಧಾನಿ ನಿವಾಸಕ್ಕೆ ತೆರಳಿದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ದೆಹಲಿ ಭೇಟಿ ನೀಡಿದ್ದಾರೆ. ಈ ವೇಳೆ, ಸಿಎಂ ಬೊಮ್ಮಾಯಿ ಕರ್ನಾಟಕ ಭವನದಿಂದ ಪ್ರಧಾನಿ ನಿವಾಸಕ್ಕೆ ತೆರಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಗೆ ತೆರಳಿದ್ದಾರೆ.
ಈ ಮಧ್ಯೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬಳಿ ಇದೆ ಸಚಿವರ ಪಟ್ಟಿ ಇದೆ. ಹೈಕಮಾಂಡ್ ಸಚಿವರ ಪಟ್ಟಿ ತಯಾರಿಸಿದೆ ಎಂದು ಹೇಳಲಾಗುತ್ತಿದೆ. ಸಿಎಂ ಭೇಟಿ ವೇಳೆ ಜೆ.ಪಿ ನಡ್ಡಾ ಪಟ್ಟಿ ಮುಂದಿಡಲಿದ್ದಾರೆ. ಸಿಎಂ ಬೊಮ್ಮಾಯಿ ಭೇಟಿ ವೇಳೆ ಪಟ್ಟಿ ಬಗ್ಗೆ ಚರ್ಚೆ ನಡೆಯಲಿದೆ. ಇಂದು ರಾತ್ರಿ 8 ಗಂಟೆಗೆ ಬೊಮ್ಮಾಯಿ, ನಡ್ಡಾ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಬಿಜೆಪಿ ಹೈಕಮಾಂಡ್ ಬಳಿ ಬೊಮ್ಮಾಯಿ ಸಂಪುಟದ ಪಟ್ಟಿ ಇದೆ ಎಂದು ಹೇಳಲಾಗುತ್ತಿದೆ.
ಬಿಎಸ್‌ವೈ ಕೈಕಾಲು ಹಿಡಿದು ಯತ್ನಾಳ್ ಬಿಜೆಪಿಗೆ ಬಂದಿದ್ದಾರೆ
ಯತ್ನಾಳ್ಗೆ ಯಡಿಯೂರಪ್ಪ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಯಡಿಯೂರಪ್ಪ ಸಾಮರ್ಥ್ಯ, ನಾಯಕತ್ವ, ಹೋರಾಟ ದೊಡ್ಡದು. ನೂರಾರು ಪಾದಯಾತ್ರೆ, ಸಾವಿರಾರು ಹೋರಾಟ ಮಾಡಿದ್ದಾರೆ. ಯಾರೋ ಒಂದಿಬ್ಬರು ಮಾತಾಡಿದರೆ ಗೌರವ ಕಡಿಮೆಯಾಗಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಶಾಸಕ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಬಿಎಸ್‌ವೈ ಕೈಕಾಲು ಹಿಡಿದು ಯತ್ನಾಳ್ ಬಿಜೆಪಿಗೆ ಬಂದಿದ್ದಾರೆ. ಜೆಡಿಎಸ್ಗೆ ಹೋದಾಗ ಯತ್ನಾಳ್ರ ಹಿಂದುತ್ವ ಎಲ್ಲಿ ಹೋಗಿತ್ತು? ಸ್ವಾರ್ಥಕ್ಕಾಗಿ ಹಿಂದುತ್ವ ಬೇಕಾ ಎಂದು ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ. ಜೆಡಿಎಸ್ನಲ್ಲಿ ಇದ್ದಾಗ ಯತ್ನಾಳ್ ಅಲ್ಪಸಂಖ್ಯಾತರ ಓಲೈಕೆ ಮಾಡಿಲ್ವಾ ಎಂದು ಯತ್ನಾಳ್ ವಿರುದ್ಧ ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.
ಕಾವೇರಿ ನಿವಾಸಕ್ಕೆ ಹಿಂದಿರುಗಿದ ಬಿ.ಎಸ್.ಯಡಿಯೂರಪ್ಪ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿ ಮನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿದ್ದರು. ಇದೀಗ ಬೊಮ್ಮಲಾಪುರದಿಂದ ಯಡಿಯೂರಪ್ಪ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಕಾವೇರಿ ನಿವಾಸಕ್ಕೆ ಬಿ.ಎಸ್.ಯಡಿಯೂರಪ್ಪ ಹಿಂದಿರುಗಿದ್ದಾರೆ.
ಮೈಸೂರಿನಲ್ಲೂ ಶುರುವಾಯ್ತು ಸಚಿವ ಸ್ಥಾನಕ್ಕೆ ಬೇಡಿಕೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಬಳಿಕ, ಸಚಿವ ಸಂಪುಟ ರಚನೆಗೂ ಮುನ್ನ ಸಚಿವ ಸ್ಥಾನಕ್ಕೆ ಬೇಡಿಕೆಗಳು ಹೆಚ್ಚಾಗಿವೆ. ಮೈಸೂರಿನಲ್ಲೂ ಸಚಿವ ಸ್ಥಾನಕ್ಕೆ ಬೇಡಿಕೆ ಕೇಳಿಬಂದಿದೆ. ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಪರ ಸಚಿವ ಸ್ಥಾನಕ್ಕೆ ಬೇಡಿಕೆ ಶುರುವಾಗಿದೆ. ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್ ರಾಜು ಅವರಿಂದ ವಿಡಿಯೋ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಲಾಗಿದೆ.
ಬಸವರಾಜ ಬೊಮ್ಮಾಯಿಗೆ ಆಡಳಿತ ಮಾಡಲು ಬಿಡುವುದಿಲ್ಲ
ಬಸವರಾಜ ಬೊಮ್ಮಾಯಿಗೆ ಆಡಳಿತ ಮಾಡಲು ಬಿಡುವುದಿಲ್ಲ. ಬೊಮ್ಮಾಯಿಗೆ ಬಿಜೆಪಿಯವರೇ ಆಡಳಿತ ನಡೆಸಲು ಬಿಡಲ್ಲ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಕಾಂಗ್ರೆಸ್ ಪಕ್ಷದ ಶಿವರಾಜ ತಂಗಡಗಿ ಹೇಳಿಕೆ ನೀಡಿದ್ದಾರೆ. ಸರ್ಕಾರ ಬಹಳ ದಿನ ನಡೆಯಲ್ಲ, ನಮ್ಮ ಹಿರಿಯರು ಚುನಾವಣೆಗೆ ರೆಡಿಯಾಗಲು ಹೇಳಿದ್ದಾರೆ. ಸರ್ಕಾರ ಬಹಳ ದಿನ ನಡೆಯೋಕೆ ಸಾಧ್ಯ ಇಲ್ಲ. ಬಿಜೆಪಿಯವರು ಅಡಳಿತ ಮಾಡೋಕೆ ಬರಲ್ಲ ಎಂದು ತಂಗಡಗಿ ಮಾತನಾಡಿದ್ದಾರೆ. 2022 ಕ್ಕೆ ಚುನಾವಣೆ ನಡೆಯುತ್ತೆ ಅನ್ಮೋದು ನಮ್ಮ ಪಕ್ಷದ ಅಭಿಪ್ರಾಯ ಎಂದು ತಿಳಿಸಿದ್ದಾರೆ.
ಬಸವರಾಜ ಬೊಮ್ಮಾಯಿ, ಸಂಸದರ ಸಭೆಯಲ್ಲಿ ಗಜೇಂದ್ರ ಸಿಂಗ್ ಶೇಖಾವತ್ ಭಾಗಿ
ಕರ್ನಾಟಕ ರಾಜ್ಯದ ಸಂಸದರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ಹಿನ್ನೆಲೆ, ಸಂಸದರ ಸಭೆಯಲ್ಲಿ ಗಜೇಂದ್ರ ಸಿಂಗ್ ಶೇಖಾವತ್ ಭಾಗಿಯಾಗಿದ್ದಾರೆ. ಕೇಂದ್ರದ ಜಲಶಕ್ತಿ ಇಲಾಖೆ ಸಚಿವ ಗಜೇಂದ್ರ ಸಿಂಗ್, ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಮೇಕೆದಾಟು ಯೋಜನೆ ಬಗ್ಗೆ ಗಜೇಂದ್ರ ಸಿಂಗ್ ಚರ್ಚೆ ನಡೆಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಸಭೆಗೆ ವಿಪಕ್ಷ ಸಂಸದರು ಗೈರು
ಕರ್ನಾಟಕ ರಾಜ್ಯದ ಸಂಸದರ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆಗೆ ವಿಪಕ್ಷ ಸಂಸದರು ಗೈರಾಗಿದ್ದಾರೆ. ಲೋಕಸಭಾ ಸದಸ್ಯರಾದ ಡಿ.ಕೆ.ಸುರೇಶ್, ಪ್ರಜ್ವಲ್ ರೇವಣ್ಣ, ರಾಜ್ಯಸಭಾ ಸಂಸದರಾದ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಜಿ.ಸಿ.ಚಂದ್ರಶೇಖರ್, ನಾಸಿರ್ ಹುಸೇನ್ ಸಭೆಗೆ ಗೈರು ಹಾಜರಾಗಿದ್ದಾರೆ.
ಸಿಎಂ ಬೊಮ್ಮಾಯಿ ಸಭೆಗೆ ಆಗಮಿಸುತ್ತಿರುವ ಸಂಸದರು
ದೆಹಲಿಯಲ್ಲಿ ರಾಜ್ಯದ ಸಂಸದರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ಹಿನ್ನೆಲೆಯಲ್ಲಿ ಸಭೆಗೆ ಸಂಸದರು ಆಗಮಿಸುತ್ತಿದ್ದಾರೆ. ಕೇಂದ್ರ ಸಚಿವ ಭಗವಂತ್ ಖೂಬಾ, ನಾರಾಯಣ ಸ್ವಾಮಿ, ಸಂಸದರಾದ ಪಿ.ಸಿ.ಗದ್ದಿಗೌಡರ್, ರಮೇಶ್ ಜಿಗಜಿಣಗಿ, ಬಚ್ಚೇಗೌಡ, ಈರಣ್ಣ ಕಡಾಡಿ, ಕರಡಿ ಸಂಗಣ್ಣ, ದೇವೇಂದ್ರಪ್ಪ, ನಳಿನ್ ಕುಮಾರ್ ಕಟೀಲು, ಜಿ.ಎಂ.ಸಿದ್ದೇಶ್ವರ್, ಜಿ.ಎಸ್.ಬಸವರಾಜು, ಅಮರೇಶ್ವರ್ ನಾಯಕ್, ಸಚಿವ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ ಆಗಮಿಸುತ್ತಿದ್ದಾರೆ.
ನನಗೆ ಮುಖ್ಯಮಂತ್ರಿ ಆಗುವ ಅವಕಾಶವನ್ನು ತಪ್ಪಿಸಿದ್ದು ಯಡಿಯೂರಪ್ಪ -ಯತ್ನಾಳ್
ನನಗೆ ಮುಖ್ಯಮಂತ್ರಿ ಆಗುವ ಅವಕಾಶವನ್ನು ಯಡಿಯೂರಪ್ಪ ತಪ್ಪಿಸಿದರು. ಆದರೆ ಈಗ ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲ್ಲಾ. ಈ ಹಿಂದೆ ನಾನೇನೂ ದೆಹಲಿಯಲ್ಲಿ ಲಾಬಿ ಮಾಡಿ ಕೇಂದ್ರದಲ್ಲಿ ಸಚಿವ ಆಗಿರಲಿಲ್ಲ. ಮೋದಿ ಪ್ರಾಮಾಣಿಕರು, ದೇಶಕ್ಕಾಗಿ ಪರಿವರ್ತನೆ ಯಜ್ಞ ಮಾಡುತ್ತಿದ್ದಾರೆ. ದೆಹಲಿ ಲಾಬಿ ಮಾಡಿ ಮಂತ್ರಿಯಾಗೋವಷ್ಟು ಕೆಳಮಟ್ಟದ ರಾಜಕಾರಣಿಯಲ್ಲಾ ನಾನು. ಯಡಿಯೂರಪ್ಪ ಒಬ್ಬರೇ ಬೊಮ್ಮಾಯಿ ಅವರನ್ನಾ ಸಿಎಂ ಮಾಡಿಲ್ಲ. ಯತ್ನಾಳ್ ಅವರನ್ನ ಸಿಎಂ ಮಾಡಿದರೆ ಮೂರು ತಿಂಗಳಲ್ಲಿ ಸರ್ಕಾರ ಕೆಡವುತ್ತೇನೆಂದು ಕೇಂದ್ರದ ನಾಯಕರ ಮುಂದೆ ಯಡಿಯೂರಪ್ಪ ಬೆದರಿಕೆ ಹಾಕಿದರು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬಿಜೆಪಿ ಸೇರಲಿದ್ದಾರೆ ಶಾಸಕ ಎನ್ ಮಹೇಶ್
ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್ ಮಹೇಶ್ ಬಿಜೆಪಿ ಸೇರಲು ನಿರ್ಧಾರ ಮಾಡಿದ್ದಾರೆ. ಬಿಎಸ್ಪಿಯಿಂದ ಆಯ್ಕೆಯಾಗಿದ್ದ ಎನ್ ಮಹೇಶ್, ನಂತ್ರ ಬಿಎಸ್ಪಿಯಿಂದ ಉಚ್ಚಾಟನೆಗೊಂಡಿದ್ದರು. ಬಿ.ಎಸ್. ಯಡಿಯೂರಪ್ಪ ಅವರ ಆಹ್ವಾನದಿಂದಾಗಿ ಬಿಜೆಪಿ ಸೇರಲು ಈಗ ನಿರ್ಧಾರ ಮಾಡಿದ್ದಾರೆ. ಯಡಿಯೂರಪ್ಪ ಇಂದು ಗುಂಡ್ಲುಪೇಟೆಗೆ ಆಗಮಿಸಿದ ವೇಳೆ ಇಬ್ಬರ ನಡುವೆ ಮಾತುಕತೆ ನಡೆದಿದೆ. ಶೀಘ್ರದಲ್ಲಿಯೇ ಬಿಜೆಪಿ ಸೇರುವ ಬಗ್ಗೆ ಎನ್ ಮಹೇಶ್ ತಿಳಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಬೊಮ್ಮಾಯಿ
ಸಂಸತ್ ಭವನದಲ್ಲಿ ಗೃಹ ಸಚಿವ ಅಮಿತ್ ಶಾರನ್ನು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದಾರೆ. ಸಿಎಂ ಸ್ಥಾನಕ್ಕೆ ಪರಿಗಣಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.
ಅಭಿಮಾನಿಗಳಿಂದ ಪ್ರತಿಧ್ವನಿಸಿದ ಹೌದು ಹುಲಿಯಾಗೆ ಏ ಸುಮ್ನಿರಯ್ಯಾ ಎಂದ ಸಿದ್ದರಾಮಯ್ಯ
ಸಿದ್ದರಾಮಯ್ಯ ಭಾಷಣ ವೇಳೆ ಪ್ರತಿಧ್ವನಿಸಿದ ಹೌದು ಹುಲಿಯಾಗೆ ಏ ಸುಮ್ನಿರಯ್ಯಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಗಿದ್ದಾರೆ. ಹುಬ್ಬಳ್ಳಿ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಂತೆ ಅಭಿಮಾನಿಗಳು ಹೌದು ಹುಲಿಯಾ ಎಂದಿದ್ದಕ್ಕೆ ಸುಮ್ನಿರಯ್ಯಾ ಎಂದು ಸಿದ್ದರಾಮಯ್ಯ ಪ್ರತಿಧ್ವನಿಸಿದ್ದಾರೆ.
ಅಭಿಮಾನಿಗಳನ್ನ ಕಾಂಗ್ರೆಸ್ಗೆ ಕರೆತರುವ ಕೆಲಸ ಮಾಡ್ತೀನಿ -ಮಧು ಬಂಗಾರಪ್ಪ
ನಾನು ಇದ್ದಿದ್ದು ಒಂದೇ ಪಕ್ಷದಲ್ಲಿ, ಅದು ಬಂಗಾರಪ್ಪ ಪಕ್ಷ ಎಂದು ಕಾಂಗ್ರೆಸ್ ಸೇರ್ಪಡೆ ಬಳಿಕ ಹುಬ್ಬಳ್ಳಿಯ ಕಾಂಗ್ರೆಸ್ ಸಮಾವೇಶದಲ್ಲಿ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ನಾನು ತಂದೆಯವರನ್ನ ಕಳೆದುಕೊಂಡಿರಬಹುದು. ಲಕ್ಷಾಂತರ ಬಂಗಾರಪ್ಪನವರನ್ನ ಪಡೆದುಕೊಂಡಿದ್ದೇನೆ. ಬಂಗಾರಪ್ಪನವರ ಅಭಿಮಾನಿಗಳು ಯಾವುದೇ ಪಕ್ಷದಲ್ಲಿರಲಿ. ಅಭಿಮಾನಿಗಳನ್ನ ಕಾಂಗ್ರೆಸ್ಗೆ ಕರೆತರುವ ಕೆಲಸ ಮಾಡ್ತೀನಿ. ಬಂಗಾರಪ್ಪನವರಿಗೆ ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರಿ. ಆ ಸ್ಥಾನವನ್ನ ಉಳಿಸಿಕೊಂಡು ಹೋಗುವ ಕೆಲಸ ಮಾಡ್ತೀನಿ. ಕಾಂಗ್ರೆಸ್ ಬಂಗಾರಪ್ಪನವರಿಗೆ ಅಧಿಕಾರವನ್ನ ಕೊಟ್ಟ ಪಕ್ಷ. ರಾಜಕೀಯ ಜೀವನದ ಹೊಸ ಹೆಜ್ಜೆಯನ್ನ ಇಡುತ್ತಿದ್ದೇನೆ ಎಂದು ಮಧು ಬಂಗಾರಪ್ಪ ತಿಳಿಸಿದ್ರು.
ದೆಹಲಿಯಲ್ಲಿ ಗಜೇಂದ್ರ ಸಿಂಗ್ ಭೇಟಿಯಾದ ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ರಾಜ್ಯದ ನೀರಾವರಿ ವಿಷಯಗಳ ಕುರಿತು ಚರ್ಚಿಸಿದರು. ಸಂಸದರಾದ ಶಿವಕುಮಾರ್ ಉದಾಸಿ ಮತ್ತು ಡಾ. ಉಮೇಶ್ ಜಾಧವ್, ಮಾಜಿ ಸಚಿವರಾದ ಆರ್. ಅಶೋಕ್, ಉಮೇಶ್ ವಿ. ಕತ್ತಿ ಜೊತೆಗಿದ್ದರು
ಬಂಗಾರಪ್ಪ ಕೇವಲ ಒಂದು ಜಾತಿಯ ನಾಯಕನಾಗಿರಲಿಲ್ಲ -ಸಿದ್ದರಾಮಯ್ಯ
ಬಂಗಾರಪ್ಪ ಕೇವಲ ಒಂದು ಜಾತಿಯ ನಾಯಕನಾಗಿರಲಿಲ್ಲ. ದಿ.ಬಂಗಾರಪ್ಪನವರು ಸಮೂಹ ನಾಯಕರಾಗಿದ್ದರು ಎಂದು ಹುಬ್ಬಳ್ಳಿ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಬಂಗಾರಪ್ಪ ಇಡೀ ರಾಜ್ಯ ಒಪ್ಪುವಂತಹ ನಾಯಕರಾಗಿದ್ರು. ಮಧು ಬಂಗಾರಪ್ಪನವರಿಗೂ ಅಂತಹ ಶಕ್ತಿ ಇದೆ. ಇಡೀ ರಾಜ್ಯದಲ್ಲಿ ಬಂಗಾರಪ್ಪನವರಿಗೆ ಬೆಂಬಲಿಗರಿದ್ದರು. ನೀವು ಅದನ್ನ ಮುಂದುವರಿಸಬೇಕು ಎಂದ ಸಿದ್ದರಾಮಯ್ಯ ಮಧು ಬಂಗಾರಪ್ಪಗೆ ಸಲಹೆ ನೀಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ರವಿ ಕುಟುಂಬಕ್ಕೆ ಬಿಎಸ್‌ವೈ ನೆರವು
ಆತ್ಮಹತ್ಯೆ ಮಾಡಿಕೊಂಡ ರವಿ ಕುಟುಂಬಕ್ಕೆ ಮಾಜಿ ಸಿಎಂ ಯಡಿಯೂರಪ್ಪ ನೆರವಾಗಿದ್ದಾರೆ. 5 ಲಕ್ಷ ರೂ. ನೆರವು ನೀಡಿ ಇನ್ನೂ 5 ಲಕ್ಷ ರೂ. ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಸಿಎಂ
ರಕ್ಷಣಾ ಸಚಿವ ರಾಜನಾಥ್ ಸಿಂಗ್ರನ್ನು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದಾರೆ. ಬೊಮ್ಮಾಯಿ ಸಿಎಂ ಆದ ಬಳಿಕ ಮೊದಲ ಬಾರಿಗೆ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ರಾಜನಾಥ್ ಸಿಂಗ್ ಮನೆಯಲ್ಲಿ ಕೇಂದ್ರದ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ರನ್ನು ಭೇಟಿ ಮಾಡಿದ್ದಾರೆ. ಮೈಸೂರು ಪೇಟಾ ತೊಡಿಸಿ ರಾಜನಾಥ್ ಸಿಂಗ್ರನ್ನು ಸನ್ಮಾನಿಸಿದ್ದಾರೆ.
17 ಶಾಸಕರಿಗೆ ಸಚಿವ ಸ್ಥಾನದ ಬಗ್ಗೆ ಈಗ ಏನೂ ಹೇಳಲ್ಲ -ಯಡಿಯೂರಪ್ಪ
ಬಿಜೆಪಿಗೆ ಬಂದಿದ್ದ 17 ವಲಸಿಗರಿಗೆ ಸಚಿವ ಸ್ಥಾನ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಬಿ.ಎಸ್. ಯಡಿಯೂರಪ್ಪ 17 ಶಾಸಕರಿಗೆ ಸಚಿವ ಸ್ಥಾನದ ಬಗ್ಗೆ ಈಗ ಏನೂ ಹೇಳಲ್ಲ ಎಂದಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವುದು ಸಿಎಂಗೆ ಬಿಟ್ಟ ವಿಚಾರ. ಸಚಿವ ಸ್ಥಾನದ ಬಗ್ಗೆ ಸಿಎಂ, ಹೈಕಮಾಂಡ್ ನಿರ್ಧರಿಸುತ್ತದೆ. ಸಂಪುಟ ವಿಸ್ತರಣೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗುಂಡ್ಲುಪೇಟೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ರು.
ಶಾಸಕ ಬಸವರಾಜ್ ಮತ್ತಿಮೂಡ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಅಭಿಮಾನಿಗಳಿಂದ ಪಾದಯಾತ್ರೆ
ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಅಭಿಮಾನಿಗಳು ಪಾದಯಾತ್ರೆಗೆ ಮುಂದಾಗಿದ್ದಾರೆ. ಕಲಬುರಗಿ ನಗರದ ಸರ್ದಾರ್ ವಲ್ಲಭ ಭಾಯ್ ಪಟೇಲ್ ವೃತ್ತದಿಂದ ಶ್ರೀ ಶರಣಬಸವೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ಮಾಡಲಿದ್ದಾರೆ.
ಮಹಳೆಯರ ಪರವಾಗಿ ಲಾಬಿ ಮಾಡಲು ದೆಹಲಿಗೆ ಬಂದ ತೇಜಸ್ವಿನಿ ಗೌಡ
ಮಹಳೆಯರ ಪರವಾಗಿ ದೆಹಲಿಗೆ ಲಾಬಿ ಮಾಡಲು ಬಂದಿದ್ದೇನೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಅರ್ಹತೆ ಇರುವ ಮಹಿಳೆಯರಿಗೆ ಸಚಿವಸ್ಥಾನ ನೀಡಿ. ಪಕ್ಷದ ಹಿತವನ್ನು ಗಮನದಲ್ಲಿಟ್ಟುಕೊಂಡು ಸಚಿವಸ್ಥಾನ ನೀಡಿ. ಹಳೆ ಮೈಸೂರು ಭಾಗದಲ್ಲಿ ಸಂಘಟನೆಗಾಗಿ ಸಚಿವಸ್ಥಾನ ನೀಡಬೇಕು. ಸಚಿವೆ ಶೋಭಾ ಜೊತೆಗೂಡಿ ವರಿಷ್ಠರ ಬಳಿ ಕೇಳುತ್ತೇವೆ ಎಂದು ದೆಹಲಿಯಲ್ಲಿ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೂ ಬಂಗಾರಪ್ಪನವರಿಗೂ ಬಹಳ ನಂಟಿದೆ -ರಣದೀಪ್ ಸುರ್ಜೇವಾಲ
ಕಾಂಗ್ರೆಸ್ ಪಕ್ಷಕ್ಕೂ ಬಂಗಾರಪ್ಪನವರಿಗೂ ಬಹಳ ನಂಟಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹುಬ್ಬಳ್ಳಿ ಕಾಂಗ್ರೆಸ್ ಸಮಾವೇಶದಲ್ಲಿ ಹೇಳಿದರು. ಬಂಗಾರಪ್ಪ ಇತಿಹಾಸ, ಭವಿಷ್ಯದ ಸೇತುವೆಯಾಗುತ್ತಾರೆ. ಬಂಗಾರಪ್ಪಗೆ ಗಾಂಧಿ ಕುಟುಂಬದ ಜತೆ ಉತ್ತಮ ಸಂಬಂಧವಿದೆ. ಮಧು ಬಂಗಾರಪ್ಪಗೂ ರಾಹುಲ್, ಸೋನಿಯಾ ಆಶಿರ್ವಾದವಿದೆ ಎಂದರು. ಮಧು ಬಂಗಾರಪ್ಪಗೆ ತ್ರಿವರ್ಣ ಧ್ವಜ ನೀಡಿ ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಸಿಎಂ ದೆಹಲಿ ಭೇಟಿ ಬೆನ್ನಲ್ಲೇ ಸಚಿವಾಕಾಂಕ್ಷಿಗಳೂ ದೆಹಲಿಗೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದಂತೆ ಸಚಿವಾಕಾಂಕ್ಷಿಗಳೂ ದೆಹಲಿ ಭೇಟಿಗೆ ಮುಂದಾಗಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸಚಿವ ಸ್ಥಾನಕ್ಕೆ ಲಾಬಿ ನಡೆಸಲು ಸವದಿ ದೆಹಲಿಗೆ ತೆರಳಿದರಾ? ಎಂಬ ಅನುಮಾನವಿದ್ದು ವರಿಷ್ಠರ ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ಮನವಿ ಮಾಡುವ ಸಾಧ್ಯತೆ ಇದೆ. ಸದ್ಯ ವಿಸ್ತಾರ ವಿಮಾನದಲ್ಲಿ KIABಯಿಂದ ದೆಹಲಿಯತ್ತ ಸವದಿ ಪ್ರಯಾಣ ಬೆಳೆಸಿದ್ದಾರೆ.
ನಾನು ಬಂಗಾರಪ್ಪನವರ ಗರಡಿಯಲ್ಲಿ ಬೆಳದವನು -ಡಿಕೆ ಶಿವಕುಮಾರ್
ನಾನು ಬಂಗಾರಪ್ಪನವರ ಗರಡಿಯಲ್ಲಿ ಬೆಳದವನು. ನನ್ನ ರಾಜಕೀಯ ಗುರುಗಳ ಮಗನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರೊದು ನನ್ನ ಭಾಗ್ಯ ಎಂದು ಹುಬ್ಬಳ್ಳಿಯ ಕಾಂಗ್ರೆಸ್ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ರು. ಕಳೆದ ಹಲವು ದಿನಗಳಿಂದ ಮಧುಗೆ ನಾನು ಗಾಳ ಹಾಕಿದ್ದೆ. ಆದ್ರೆ ಆ ಮೀನು ಕಚ್ಚಲಿಲ್ಲ, ಕಚ್ಚಿದ್ರೆ ಇಷ್ಟೊತ್ತಿಗೆ ಮಾಜಿ ಮಂತ್ರಿಯಾಗಿರುತ್ತಿದ್ದರು. ಆದ್ರೆ ಇವಾಗ ಬಲೆ ಹಾಕಿ ಕರೆದುಕೊಂಡು ಬಂದ್ವಿ ಎಂದರು.
ಗುಂಡ್ಲುಪೇಟೆಗೆ ಆಗಮಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಮರಾಜನಗರದ ಗುಂಡ್ಲುಪೇಟೆ ಆಗಮಿಸಿದ್ದು ಆತ್ಮಹತ್ಯೆಗೆ ಶರಣಾದ ಅಭಿಮಾನಿ ರವಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಬಿ.ಎಸ್. ಯಡಿಯೂರಪ್ಪ ನೋಡಲು ಅಭಿಮಾನಿಗಳ ನೂಕು ನುಗ್ಗಲೂ ಕಂಡು ಬರುತ್ತಿದೆ. ರಾಜಾ ಹುಲಿಗೆ ಜೈ, ಮುಂದಿನ ಸಿಎಂ ವಿಜಯೇಂದ್ರ ಎಂದು ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮಧು ಬಂಗಾರಪ್ಪ
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮಧು ಬಂಗಾರಪ್ಪ. ಕಾಂಗ್ರೆಸ್ ಬಾವುಟ ನೀಡಿ ನಾಯಕರು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮಧು ಬಂಗಾರಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಸಿಎಂ ಆದ ಬಳಿಕ ದೆಹಲಿಗೆ ಮೊದಲ ಭೇಟಿ: ಬಸವರಾಜ ಬೊಮ್ಮಾಯಿ
ಸಿಎಂ ಆದ ಬಳಿಕ ದೆಹಲಿಗೆ ಮೊದಲ ಭೇಟಿ ನೀಡುತ್ತಿದ್ದೇನೆ. ಮಧ್ಯಾಹ್ನ 12 ಗಂಡೆಗೆ ಸಂಸತ್ನಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೇನೆ. 4 ಗಂಟೆಗೆ ಪ್ರಧಾನಿ ನಿವಾಸದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತೇನೆ. ಸಂಜೆಯ ವೇಳೆಗೆ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗುತ್ತೇನೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಸಭೆ ನಡೆಸಿ ರಾಜ್ಯದ ಯೋಜನೆಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ಪ್ರಧಾನಿ, ಗೃಹ ಸಚಿವರ ಜೊತೆ ಸಂಪುಟ ಬಗ್ಗೆ ಚರ್ಚೆ ಸಾಧ್ಯವಿಲ್ಲ, ನಡ್ಡಾ ಅವರ ಜೊತೆ ಚರ್ಚೆ ಸಾಧ್ಯತೆ ಇದೆ. ಅತೀ ಬೇಗ ಸಂಪುಟ ರಚನೆಯಾಗಬೇಕಿದೆ ಎಂದು ಹೇಳಿದ್ದಾರೆ. ಕೇರಳ ಗಡಿ ಭಾಗದಲ್ಲಿ ಬಿಗಿಗೊಳಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೆ, ಗಡಿ ಜಿಲ್ಲೆಗಳ ಡಿಸಿಗಳ ಜೊತೆ ಸಮಾಲೋಚನೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಸಂಜೆ 4 ಗಂಟೆಗೆ ಪ್ರಧಾನಿ ಮೋದಿಯನ್ನು ಭೇಟಿಯಾಗುವೆ -ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿದ ಅವರು, ಸಿಎಂ ಆದ ಬಳಿಕ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿದ್ದೇನೆ. ಇಂದು ರಕ್ಷಣಾ ಸಚಿವರನ್ನು ಭೇಟಿಯಾಗುತ್ತೇನೆ. ಬಳಿಕ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗುತ್ತೇನೆ. ಸಂಜೆ 4 ಗಂಟೆಗೆ ಪ್ರಧಾನಿ ನಿವಾಸದಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗುವೆ ಎಂದು ಹೇಳಿದರು.
ಕ್ಯಾಬಿನೆಟ್ ರೇಸ್ಗೆ ನವಲಗುಂದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ
ಜಗದೀಶ್ ಶೆಟ್ಟರ್ ಸಚಿವ ಸಂಪುಟದಿಂದ ಹೊರಗುಳಿಯುವ ನಿರ್ಧಾರ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಿಂದ ಕ್ಯಾಬಿನೆಟ್ ರೇಸ್ಗೆ ನವಲಗುಂದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಇಳಿದಿದ್ದಾರೆ. ಮುನೇನಕೊಪ್ಪ ರೇಸ್ನಿಂದಾಗಿ ಅರವಿಂದ್ ಬೆಲ್ಲದಗೆ ಸಚಿವ ಸ್ಥಾನವು ಕೈ ತಪ್ಪುವ ಆತಂಕ ಎದುರಾಗಿದೆ. ಶಾಸಕ ಮುನೇನಕೊಪ್ಪ ಜಗದೀಶ್ ಶೆಟ್ಟರ್ ಆಪ್ತರಾಗಿದ್ದಾರೆ. ಮುನೇನಕೊಪ್ಪ ಪರ ಶೆಟ್ಟರ್ ಬ್ಯಾಟಿಂಗ್ ಮಾಡುವ ಆತಂಕದಲ್ಲಿ ಬೆಲ್ಲದ್ ಇದ್ದಾರೆ.
ಸಿಎಂ ಬೊಮ್ಮಾಯಿ ಭೇಟಿಗೆ ಆಗಮಿಸಿದ ಸಂಸದ ರಾಘವೇಂದ್ರ
ದೆಹಲಿಗೆ ಬಂದಿಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯ ಕರ್ನಾಟಕ ಭವನಕ್ಕೆ ಆಗಮಿಸಿದ್ದಾರೆ. ಈ ವೇಳೆ ಸಂಸದರಾದ ಶಿವಕುಮಾರ್ ಉದಾಸಿ, ಮತ್ತು ಸಚಿವಾಕಾಂಕ್ಷಿ ಶಾಸಕ ಎಂ.ಪಿ ಕುಮಾರಸ್ವಾಮಿ, ಸಂಸದ ರಾಘವೇಂದ್ರ ಸಿಎಂ ಭೇಟಿಗೆ ಆಗಮಿಸಿದ್ದಾರೆ.
ಜನರು ಬಯಸಿದರೆ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ
ಜನರು ಬಯಸಿದರೆ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಳುಗನಹಳ್ಳಿಯಲ್ಲಿ ಅಂಬರೀಶ್ ಪುತ್ರ ಅಭಿಷೇಕ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಚುನಾವಣೆಗೆ ಸ್ಪರ್ಧೆ ಮಾಡುವ ಬಗೆಗೆ ಪರೋಕ್ಷವಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಏನೇನು ಬದಲಾವಣೆಯಾಗುತ್ತೊ ಯಾರಿಗೆ ಗೊತ್ತು. ಜನ ಬಯಸಿದ್ದೆ ಆದ್ರೆ ನಾನು ಬರ್ತಿನಿ. ಮದ್ದೂರಿಗಾಗಲಿ, ಮಂಡ್ಯಗಾಗಲಿ ಜಿಲ್ಲೆಯಲ್ಲಿರೊ ಏಳೂ ಕ್ಷೇತ್ರಗಳಿಗೂ ಒಳ್ಳೆಯ ಎಂಎಲ್ಎಗಳು ಸಿಗಬೇಕು. ಒಳ್ಳೆಯ ಜನಪ್ರತಿನಿಧಿಗಳು ಸಿಗಬೇಕು. ಯಾರ ಮನೆಯವರು, ನನಗೆ ಬೇಕಾದವರು ಅಂತಲ್ಲ. ಒಳ್ಳೆಯ ವ್ಯಕ್ತಿಗಳು ಸಿಗಬೇಕು ಎಂದು ಅಭಿಷೇಕ್ ಹೇಳಿದ್ರು.
ಕರ್ನಾಟಕ ಭವನಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರೋ ಬಸವರಾಜ ಬೊಮ್ಮಾಯಿ ಮೊದಲ ಬಾರಿಗೆ ದೆಹಲಿಗೆ ಬಂದಿಳಿದಿದ್ದು ಕರ್ನಾಟಕ ಭವನಕ್ಕೆ ಆಗಮಿಸಿದ್ದಾರೆ.
ಶಾಸಕಿ ಪೂರ್ಣಿಮಾ ಪರ ಯಾದವಶ್ರೀ ಬ್ಯಾಟಿಂಗ್
ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಪರ ಯಾದವಶ್ರೀ ಬ್ಯಾಟಿಂಗ್ ಮಾಡಿದ್ದಾರೆ. ಜಾತಿ ಆಧಾರಿತ ಸಿಎಂ, ಸಚಿವ ಸ್ಥಾನ ನೀಡುವುದು ಸಹಜವಾಗಿದೆ. ಕಳೆದ ಸಲ ಯಾದವ ಸಮುದಾಯಕ್ಕೆ ಮಂತ್ರಿಸ್ಥಾನ ನೀಡುವುದಾಗಿ ಬಿ.ಎಸ್. ಯಡಿಯೂರಪ್ಪ, ಬಿ.ಎಲ್.ಸಂತೋಷ ಭರವಸೆ ನೀಡಿದ್ದರು. ಎಲ್ಲಾ ಸಮುದಾಯಗಳಿಗೂ ಅವಕಾಶ ನೀಡಲಾಗುತ್ತಿದೆ. ಹಿಂದುಳಿದ ಗೊಲ್ಲ ಸಮುದಾಯದ ಪೂರ್ಣಿಮಾಗೆ ಮಂತ್ರಿ ಸ್ಥಾನ ಕೊಡಬೇಕು. ನ್ಯಾಯಬದ್ಧವಾಗಿ ಗೊಲ್ಲ ಸಮುದಾಯದ ಪೂರ್ಣಿಮಾಗೆ ಮಂತ್ರಿಗಿರಿ ಕೇಳ್ತಿದ್ದೇವೆ. ಉಪ್ಪಾರ, ಬೆಸ್ತ, ಎಳವ ಸಮಾಜ ಸೇರಿ ಹಿಂದುಳಿದ ಸಮುದಾಯದ ಪ್ರತಿನಿಧಿಯಾಗಿ ಕೆಲಸ ಲಿಂಗಾಯತರಿಗೆ ಹತ್ತಾರು ಜನಕ್ಕೆ ಮಂತ್ರಿ ಸ್ಥಾನ ಕೊಡ್ತಾರೆ. ಒಕ್ಕಲಿಗ, ಕುರುಬ ಸಮುದಾಯಕ್ಕೂ ಹೆಚ್ಚಿನ ಸ್ಥಾನ ನೀಡುತ್ತಾರೆ. ಗೊಲ್ಲ ಸಮುದಾಯದ ಏಕೈಕ ಶಾಸಕಿಗೆ ಮಂತ್ರಿಗಿರಿ ನೀಡಬೇಕು ಎಂದು ಚಿತ್ರದುರ್ಗದಲ್ಲಿ ಶ್ರೀಕೃಷ್ಣ ಯಾದವ ಮಠದ ಪೀಠಾದ್ಯಕ್ಷರು ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಬಳ್ಳಾರಿ ಜಿಲ್ಲೆಗೆ ಸಚಿವ ಸ್ಥಾನ ನೀಡಲು ಇಬ್ಬರು ಬಿಜೆಪಿ ಶಾಸಕರಿಂದ ಲಾಭಿ
ಜಿಲ್ಲೆ ವಿಭಜನೆ ಬಳಿಕ ಜಿಲ್ಲೆಗೆ ಸಚಿವ ಸ್ಥಾನದ ಪ್ರಾತಿನಿಧ್ಯ ನೀಡಲು ಒತ್ತಾಯಿಸಲಾಗಿದೆ. ಬಳ್ಳಾರಿ ಜಿಲ್ಲೆಗೆ ಸಚಿವ ಸ್ಥಾನ ನೀಡಲು ಇಬ್ಬರು ಬಿಜೆಪಿ ಶಾಸಕರು ಲಾಭಿ ಮಾಡಿದ್ದಾರೆ. ಸಿರುಗುಪ್ಪ ಶಾಸಕ ಸೋಮಲಿಂಗಪ್ಪ ದೆಹಲಿಯಲ್ಲಿ ವರಿಷ್ಠರನ್ನ ಭೇಟಿ ಮಾಡಿದ್ದು ದೆಹಲಿಯಲ್ಲಿ ಬಿಡುಬಿಟ್ಟಿದ್ದಾರೆ. ಇದುವರೆಗೆ ಸಿರುಗುಪ್ಪ ಕ್ಷೇತ್ರದಿಂದ ಯಾರೂ ಮಂತ್ರಿಯಾಗಿಲ್ಲ. ಈ ಕಾರಣಕ್ಕಾಗಿ ಸಚಿವ ಸ್ಥಾನ ನೀಡುವಂತೆ ಸೋಮಲಿಂಗಪ್ಪ ಪಟ್ಟು ಹಿಡಿದಿದ್ದಾರೆ.
ಈತ್ತ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿಯಿಂದಲೂ ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಯುತ್ತಿದೆ. ಹೀಗಾಗಲೇ ಸೋಮಶೇಖರ್ ರೆಡ್ಡಿ, ಬಿ.ಎಸ್. ಯಡಿಯೂರಪ್ಪ, ಸಿಎಂ ಬೊಮ್ಮಾಯಿ ರಾಜ್ಯಕ್ಕೆ ಆಗಮಿಸಿದ್ದ ವೀಕ್ಷಕರನ್ನ ಭೇಟಿ ಮಾಡಿದ್ದಾರೆ. ಜಿಲ್ಲೆ ವಿಭಜನೆ ಬಳಿಕ ಬಳ್ಳಾರಿ ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ಸೋಮಶೇಖರ್ ರೆಡ್ಡಿ ವರಿಷ್ಠರ ಬಳಿ ಮನವಿ ಮಾಡಿದ್ದಾರೆ.
ದೆಹಲಿ ತಲುಪಿದ ಸಿಎಂ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ತಲುಪಿದ್ದಾರೆ. ವರಿಷ್ಠರನ್ನು ಭೇಟಿಯಾಗಲಿದ್ದಾರೆ.
ಶಾಸಕ ಅರವಿಂದ ಬೆಲ್ಲದ್‌ಗೆ ಸಚಿವ ಸ್ಥಾನ ನೀಡಲು ಅಭಿಮಾನಿಗಳಿಂದ ಅಭಿಯಾನ
ಶಾಸಕ ಅರವಿಂದ ಬೆಲ್ಲದ್‌ಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಫೇಸ್‌ಬುಕ್‌ನಲ್ಲಿ ಬೆಲ್ಲದ್ ಅಭಿಮಾನಿಗಳಿಂದ ಅಭಿಯಾನ ನಡೆಯುತ್ತಿದೆ. ಧಾರವಾಡ ಜಿಲ್ಲೆಗೆ ಆಗ್ತಿರುವ ಮಲತಾಯಿ ಧೋರಣೆ ನಿಲ್ಲಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಅಭಿಯಾನ ನಡೆಸುತ್ತಿದ್ದಾರೆ.
ಸಚಿವ ಸ್ಥಾನಕ್ಕಾಗಿ ಬೆಳಗಾವಿ ಶಾಸಕರ ತೆರೆಮರೆ ಕಸರತ್ತು
ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆಗೆ ಸಚಿವ ಸ್ಥಾನ ನೀಡುವಂತೆ ಕರ್ನಾಟಕ ಕ್ಷತ್ರಿಯ ಮರಾಠ ಪರಿಷದ್ ಬಹಿರಂಗ ಪತ್ರ ಬರೆದಿದ್ದಾರೆ. ಮರಾಠ ಕೋಟಾದಡಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.
Published On - Jul 30,2021 9:21 AM