ಬೆಂಗಳೂರು: ದೇಶದಲ್ಲಿ ಬಿಜೆಪಿ ದಿಗ್ವಿಜಯ ಯಾತ್ರೆ ಪ್ರಾರಂಭವಾಗಿದೆ. ಮುಂದಿನ ಬಾರಿ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದ ಬಿಜೆಪಿ ಕಾರ್ಯಕರ್ತರ ಮೇಲೆ ವರಿಷ್ಠರಿಗೆ ವಿಶ್ವಾಸವಿದೆ. ವಿಧಾನಸಭೆ ಒಳಗೆ ಮೊನ್ನೆ ಕಾಯುತ್ತಿದ್ದವರು ಕಾಣೆಯಾಗಿದ್ದರು. ಪಂಚರಾಜ್ಯ ಫಲಿತಾಂಶ ಬಂದ ಮೇಲೆ ಅವರು ಕಾಣೆಯಾಗಿದ್ದಾರೆ ಎಂದರು.
ರಾಷ್ಟ್ರೀಯ ನಾಯಕತ್ವ ಕರ್ನಾಟಕದ ಕಾರ್ಯಕರ್ತರ ಮೇಲೆ ವಿಶ್ವಾಸ ಹೊಂದಿದ್ದಾರೆ. ದಿಗ್ವಿಜಯ ಯಾತ್ರೆ ಪ್ರಾರಂಭ ಆಗಿದೆ. ಮುಂದಿನ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರಲಿದೆ. ವಿಧಾನಸಭೆಯ ಒಳಗಡೆ ಕಾಯ್ತಾ ಇದ್ದವರು ಮೊನ್ನೆ ಫಲಿತಾಂಶ ಬಂದ ಮೇಲೆ ಕಾಣೆಯಾಗಿದ್ದಾರೆ. ಫಲಿತಾಂಶ ಬಂದ ಮೇಲೆ – ಕೆಪಿಸಿಸಿ ಕಚೇರಿ ಕನಕಪುರ ಕಾಂಗ್ರೆಸ್ ಕಚೇರಿ ಆಗತ್ತೆ ಅಂತ ಮೊನ್ನೆ ನಮ್ಮ ಕಾಂಗ್ರೆಸ್ ಮಿತ್ರರೊಬ್ಬರು ಹೇಳ್ತಾ ಇದ್ರು. ಯಾಕಂದ್ರೆ ಕೆಪಿಸಿಸಿ ಅಧ್ಯಕ್ಷರಿಗೆ ಒಂದು ವರ್ಷವಾದ್ರೂ ಇದುವರೆಗೆ ಜಿಲ್ಲಾ ಕಾಂಗ್ರೆಸ್ ಘಟಕಕ್ಕೆ ಪದಾಧಿಕಾರಿಗಳ ನೇಮಕ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಅದು ಕೆಪಿಸಿಸಿ ಆಗಿಲ್ಲ, ಕನಕಪುರ ಕಾಂಗ್ರೆಸ್ ಆಗಿದೆ ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಡಿಕೆ ಶಿವಕುಮಾರ್ರಿಗೆ ಟಾಂಗ್ ಕೊಟ್ಟಿದ್ದಾರೆ.
ಸೋಲು ಗೆಲುವಿಗಿಂತ ತತ್ವದ ಆಧಾರದಲ್ಲಿ ಎಲೆಕ್ಷನ್ ನಡೆಸಬೇಕು
ಬಿಜೆಪಿ ಆರಂಭದಿಂದಲೂ ಸಂಘಟನೆ ಆಧಾರಿತ ರಾಜಕಾರಣ. ಜನಸಾಮಾನ್ಯರಿಗೆ ನಮ್ಮ ನೀತಿ ತಲುಪಿಸುವುದು ಪ್ರಮುಖವಾಗಿದೆ ಎಂದು ಬೆಂಗಳೂರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಕಾರ್ಯಕರ್ತರ ಪಡೆ ಸಜ್ಜುಗೊಳಿಸುವ ಯತ್ನ ಫಲಪ್ರದವಾಗಿದೆ. ಸೋಲು ಗೆಲುವಿಗಿಂತ ತತ್ವದ ಆಧಾರದಲ್ಲಿ ಎಲೆಕ್ಷನ್ ನಡೆಸಬೇಕು. ತತ್ವ ಸಿದ್ಧಾಂತವನ್ನು ನಾವು ಚಾಚೂ ತಪ್ಪದೇ ಪಾಲಿಸುತ್ತಿದ್ದೇವೆ. ಆದ್ದರಿಂದಲೇ ದೊಡ್ಡಪ್ರಮಾಣ ಗೆಲುವಿಗೆ ಕಾರಣವಾಗಿದೆ ಎಂದರು.
ಕರ್ನಾಟಕದಲ್ಲಿ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿದೆ. ಪಕ್ಷಕ್ಕೆ ಮೋದಿ ನಾಮಬಲ, ಅಭಿವೃದ್ಧಿ, ಕಾರ್ಯಕರ್ತರ ಬಲವಿದೆ. ಕರ್ನಾಟಕದಲ್ಲಿ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಚುನಾವಣೆಯಲ್ಲಿ ನಾವು ಗೆಲ್ಲಲು ಒಗ್ಗಟ್ಟಿನ ಬಲ, ಶ್ರಮ ಅಗತ್ಯವಿದೆ. ಸರ್ಕಾರ, ಪಕ್ಷ ನನ್ನ ಕಣ್ಣುಗಳು ಇದ್ದ ಹಾಗೆ. ಎಲ್ಲೆಲ್ಲಿ ಗೆಲ್ಲಲು ಸಾಧ್ಯವಿಲ್ಲವೋ ಅಲ್ಲೆಲ್ಲ ಬಿಜೆಪಿ ಗೆಲ್ಲಿಸುವೆ. ಚುನಾವಣೆಗೆ ಈಗಿನಿಂದಲೇ ಯೋಜನಬದ್ಧ ಸಿದ್ಧತೆ ಮಾಡೋಣ. ಚುನಾವಣೆ ಗೆಲ್ಲಲು ಒಟ್ಟಾಗಿ ನಿಲ್ಲೋಣ, ಒಗ್ಗಟ್ಟಾಗಿ ನಡೆಯೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ರು.
ಮೋದಿ ನೇತೃತ್ವದಲ್ಲಿ 2ನೇ ಬಾರಿ ಸಿಎಂ ಆಗಿರುವುದು ದಾಖಲೆ
ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಪಕ್ಷ ಗೆಲುವು ಸಾಧಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಯುಪಿಯಲ್ಲಿ ಈವರೆಗೆ ಯಾರೂ 5 ವರ್ಷ ಸಿಎಂ ಆಗಿರಲಿಲ್ಲ. ಅವಧಿ ಪೂರೈಸಿ 2ನೇ ಅವಧಿಗೆ ಸಿಎಂ ಆದ ಉದಾಹರಣೆ ಇಲ್ಲ. ಮೋದಿ ನೇತೃತ್ವದಲ್ಲಿ 2ನೇ ಬಾರಿ ಸಿಎಂ ಆಗಿರುವುದು ದಾಖಲೆ. ಬೇರೆ ಬೇರೆ ಪಕ್ಷಗಳ ಹೊಂದಾಣಿಕೆ ರಾಜಕೀಯ ನಡೆಯುತ್ತಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಅತ್ಯುತ್ತಮ ಬಜೆಟ್ ನೀಡಿದ್ದಾರೆ. ಬಿಎಸ್ವೈ, ಬೊಮ್ಮಾಯಿ ಕಾಲದಲ್ಲಿ ಆಗಿರುವ ಕೆಲಸದ ಮಾಹಿತಿ ರಾಜ್ಯದ ಮನೆಮನೆಗೆ ಎಲ್ಲಾ ಮಾಹಿತಿ ತಲುಪಿಸಬೇಕು. ಬೊಮ್ಮಾಯಿ, ಕಟೀಲು ನೇತೃತ್ವದಲ್ಲಿ ಚುನಾವಣೆಗೆ ಸಿದ್ಧರಾಗಬೇಕು. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತರಾಖಂಡ್ ಬಿಜೆಪಿಯೊಳಗಿನ ಆಂತರಿಕ ವಿಚಾರದ ಮಾಹಿತಿ, ಅಲ್ಲೊಬ್ಬ ಸಚಿವ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದರು. ಕೋರ್ ಕಮಿಟಿ ಸಭೆ ನಡೆಯುವುದನ್ನೂ ಸಚಿವರು ತಪ್ಪಿಸಿದ್ದರು. ಅವರು ನಾನು ಎಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತೇನೆಂಬ ಹಮ್ಮಿನಲ್ಲಿದ್ದರು. ಪಕ್ಷ ನನ್ನನ್ನು ನಿರಾಕರಿಸಲು ಸಾಧ್ಯವಿಲ್ಲ ಎನ್ನುವ ವಿಶ್ವಾಸದಲ್ಲಿದ್ದರು. ಕೆಲವರು ಟಿಕೆಟ್ ಕೊಡದಿದ್ರೆ ಬಂಡಾಯದ ಬೆದರಿಕೆ ಹಾಕುತ್ತಿದ್ರು. ಆ ಮಂತ್ರಿ ನಡವಳಿಕೆ ಬಗ್ಗೆ ಬಿಜೆಪಿ ಅಧ್ಯಕ್ಷ ನಡ್ಡಾ ಬಳಿ ಹೇಳಿದ್ದೆ. ಆ ಸಚಿವನನ್ನು ಸಂಪುಟದಿಂದ ಕೆಳಗಿಳಿಸಿಯೇ ಬಿಟ್ಟರು ಮೋದಿ. ಪ್ರಧಾನಿ ನರೇಂದ್ರ ಮೋದಿ ನಡೆಗೆ ಎಲ್ಲರೂ ಶಾಕ್ ಆಗಿದ್ದರು ಎಂದು ಉತ್ತರಾಖಂಡ್ನಲ್ಲಿ ಮಂತ್ರಿ ವಜಾಮಾಡಿದ ಬಗ್ಗೆ ಜೋಶಿ ಮಾತನಾಡಿದ್ದು ಪರೋಕ್ಷವಾಗಿ ರಾಜ್ಯದ ಸಚಿವರಿಗೆ ಎಚ್ಚರಿಕೆ ನೀಡಿದ್ರು.
ಉತ್ತರಾಖಂಡ್ನಲ್ಲಿ 3 ಬಾರಿ ಸಿಎಂ ಬದಲಿಸಿದ್ದು ಗೊಂದಲವಾಗಿತ್ತು. ಮೂವರು ಸಿಎಂ ಬದಲಾವಣೆ ಮಾಡಿದ್ದು ಸರಿಯಲ್ಲ ಅನ್ನುವವರಿಗೆ ಫಲಿತಾಂಶ ಮೂಲಕ ಸರಿಯಾಗಿ ಮಾಡಿದ್ದೆವು ಎಂದು ಮನವರಿಕೆಯಾಗಿದೆ. ನಮ್ಮ ಕಾರ್ಯಕರ್ತರು ಪೇಯ್ಡ್ ವರ್ಕರ್ಸ್ ಅಲ್ಲ. ಏಯ್ ಹೋಯ್ ಅಂದ್ರೆ ನಡೆಯುವುದಿಲ್ಲ. ನಮ್ಮ ಕಾರ್ಯಕರ್ತರು ಭಾವನಾತ್ಮಕ ಸಂಬಂಧ ಹೊಂದಿದವರು ಎಂದರು.
ಇದನ್ನೂ ಓದಿ: IND vs SL: ಬರೋಬ್ಬರಿ 5 ವರ್ಷಗಳ ಬಳಿಕ ಈ ವಿಚಾರದಲ್ಲಿ ಕೊಹ್ಲಿಗೆ ಶಾಕ್ ಕೊಟ್ಟ ಶ್ರೀಲಂಕಾ..!
ಉಕ್ರೇನ್‌ನ ಪಶ್ಚಿಮ ಭಾಗಗಳಲ್ಲಿ ರಷ್ಯಾ ದಾಳಿ ನಂತರ ಭಾರತ ರಾಯಭಾರ ಕಚೇರಿ ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರ