ಬಿಜೆಪಿಯ ತಿರಂಗ ಯಾತ್ರೆಗೆ ಬೆಂಗಳೂರು ಪೊಲೀಸರಿಂದ ತಡೆ: ಟೌನ್ಹಾಲ್ ಬಳಿ ಹೈಡ್ರಾಮ
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಹಾಗೂ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಟೀಕಾಪ್ರಹಾರ ನಡೆಸುತ್ತಿದೆ. ಭಯೋತ್ಪಾದನಾ ಚಟುವಟಿಕೆ ವಿರುದ್ಧ ಬೆಂಗಳೂರಿನಲ್ಲಿ ಇಂದು ತಿರಂಗ ಯಾತ್ರೆ ಹಮ್ಮಿಕೊಂಡಿದ್ದು, ಇದನ್ನು ತಡೆದ ಪೊಲೀಸರೊಂದಿಗೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ವಾಗ್ವಾದಕ್ಕಿಳಿದರು. ಟೌನ್ಹಾಲ್ ಬಳಿ ಹೈಡ್ರಾಮವೇ ನಡೆಯಿತು.
ಬೆಂಗಳೂರು, ಮಾ.4: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಹಾಗೂ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ (BJP) ಟೀಕಾಪ್ರಹಾರ ನಡೆಸುತ್ತಿದೆ. ಭಯೋತ್ಪಾದನಾ ಚಟುವಟಿಕೆ ವಿರುದ್ಧ ಬೆಂಗಳೂರಿನಲ್ಲಿ (Bengaluru) ಇಂದು ತಿರಂಗ ಯಾತ್ರೆ (Tiranga Yatra) ಹಮ್ಮಿಕೊಂಡಿದ್ದು, ಇದನ್ನು ತಡೆದ ಪೊಲೀಸರೊಂದಿಗೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ವಾಗ್ವಾದಕ್ಕಿಳಿದರು. ಟೌನ್ಹಾಲ್ (Town Hall) ಬಳಿ ಹೈಡ್ರಾಮವೇ ನಡೆಯಿತು.
ಭಯೋತ್ಪಾದನಾ ಚಟುವಟಿಕೆ ವಿರುದ್ಧ ಬೆಂಗಳೂರಿನ ಟೌನ್ಹಾಲ್ನಿಂದ ಫ್ರೀಡಂಪಾರ್ಕ್ವರೆಗೆ ಬಿಜೆಪಿ ಯುವ ಮೋರ್ಚಾದಿಂದ ತಿರಂಗ ಯಾತ್ರೆಗೆ ಸಿದ್ಧತೆ ನಡೆಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಿಎಂಟಿಸಿ ಬಸ್ನಲ್ಲಿ ಇರಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮುಖಂಡರು ಪ್ರತಿಭಟನೆಗೆ ಇಳಿದರು.
ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು, ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಕಾರ್ಯಕರ್ತರನ್ನು ಪೊಲೀಸರು ಬಿಡುಗಡೆ ಮಾಡಿದರು. ನಂತರ ಕೆಲವು ಹೊತ್ತು ಟೌನ್ ಹಾಲ್ ಮುಂದೆ ಘೋಷಣೆ ಕೂಗಿದ ಯುವ ಮೋರ್ಚಾ ಕಾರ್ಯಕರ್ತರು ವಾಪಸ್ ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡೊಯ್ದರು.
ರಾಷ್ಟ್ರಧ್ವಜಗಳನ್ನು ಹೊತ್ತೊಯ್ದ ಪೊಲೀಸರು
ತಿರಂಗ ಯಾತ್ರೆಯನ್ನು ಪೊಲೀಸರು ತಡೆದಿದ್ದಲ್ಲದೆ, ಬಿಜೆಪಿ ಕಾರ್ಯಕರ್ತರು ತಂದಿದ್ದ ರಾಷ್ಟ್ರಧ್ವಜಗಳನ್ನು ಬಲವಂತವಾಗಿ ವಶಕ್ಕೆ ಪಡೆದು ಜೀಪ್ನಲ್ಲಿ ಹಾಕಿ ಕೊಂಡೊಯ್ದರು. ಈ ವೇಳೆ ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಳ್ಳಾಡಿದರು. ಈ ವೇಳೆ ಶಾಸಕ ಸಿ.ಕೆ. ರಾಮಮೂರ್ತಿ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಪೊಲೀಸರ ಜೊತೆ ಜಗಳಕ್ಕೆ ನಿಂತರು.
ಅನುಮತಿ ಪಡೆದಿಲ್ಲ ಎಂದು ಬಿಜೆಪಿ ತಿರಂಗಾ ಯಾತ್ರೆಗೆ ಅನುಮತಿ ನಿರಾಕರಿಸಿ ರಾಷ್ಟ್ರಧ್ವಜವನ್ನು ಬಲವಂತವಾಗಿ ಪೊಲೀಸ್ ಜೀಪ್ನಲ್ಲಿ ಮೂಟೆ ಕಟ್ಟಿದ ರೀತಿಯಲ್ಲಿ ತುಂಬಿ ಕೊಂಡೊಯ್ಯಲಾಗಿದೆ. ಭಾರತ ಮಾತೆಯ ಮಕ್ಕಳಾಗಿ ರಾಷ್ಟ್ರಧ್ವಜ ಹಿಡಿದು ಮೌನ ಪ್ರತಿಭಟನೆಗೆ ಅನುಮತಿ ಯಾಕೆ ಪಡೆಯಬೇಕು ಎಂದು ಬಿಜೆಪಿ ಕಾರ್ಯಕರ್ತರ ಆಕ್ರೋಶ ಹೊರಹಾಕಿದರು.
ಪಾಕ್ ಜಿಂದಾಬಾದ್ ಎಂದವರನ್ನು ಬಿಟ್ಟಿದ್ದೀರಾ, ನಮ್ಮನ್ನು ಎಳೆದಾಡ್ತೀರಾ?
ಟೌನ್ ಹಾಲ್ ಮುಂಭಾಗ ಪೊಲೀಸರು ವಶಕ್ಕೆ ಪಡೆಯುವ ವೇಳೆ ಪೊಲೀಸರ ಜೊತೆ ಶಾಸಕ ಸಿ.ಕೆ. ರಾಮಮೂರ್ತಿ ಮತ್ತು ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ವಾಗ್ವಾದಕ್ಕಿಳಿದರು. ಒಟ್ಟಿಗೇ ಬರುತ್ತೇವೆ ಬಿಡ್ರೀ, ತಳ್ಳಾಡೋದೆಲ್ಲಾ ಇಟ್ಟುಕೊಳ್ಳಬೇಡಿ. ತಿರುಗಿ ನಮ್ಮ ಹತ್ತಿರಕ್ಕೇ ಬರಬೇಕು, ನೋಡುತ್ತೇವೆ. ಡ್ಯೂಟಿ ಮಾಡಿ, ತಳ್ಳಾಡಬೇಡಿ. ನೀವು ಪಾಕಿಸ್ತಾನ ಜಿಂದಾಬಾದ್ ಅಂದಾಗ ಬಿಟ್ಟಿದ್ದೀರಿ, ಈಗ ನಮ್ಮನ್ನು ಯಾಕೆ ಎಳೆದಾಡ್ತೀರಾ? ಎಂದು ಪೊಲೀಸರ ವಿರುದ್ಧ ಹರಿಹಾಯ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:19 pm, Mon, 4 March 24