ಜಾತಿಗಣತಿ ವರದಿ ವಿರೋಧಿಸುತ್ತಿರುವವರ ವಿರುದ್ಧ ಸಿಡಿದೆದ್ದ ಶೋಷಿತ ಸಮುದಾಯ, ಶಾಮನೂರು ಶಿವಶಂಕರಪ್ಪಗೆ ನೇರ ಸವಾಲ್
ಜಾತಿ ಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಿಸಿದ್ದಕ್ಕೆ ಲಿಂಗಾಯತ ಹಾಗೂ ವಕ್ಕಲಿಗ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಈ ಜಾತಿಗಣತಿ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, 10 ವರ್ಷ ಕಸದ ಬುಟ್ಟಿಯಲ್ಲಿದ್ದ ವರದಿಯನ್ನು ಈಗ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಇದಕ್ಕೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದ್ದು, ಶಾಮನೂರು ಶಿವಶಂಕರಪ್ಪಗೆ ಅವರಿಗೆ ಸಂಘರ್ಷಕ್ಕೆ ಆಹ್ವಾನಿಸಿದೆ.
ಬೆಂಗಳೂರು, (ಮಾರ್ಚ್ 04): 10 ವರ್ಷ ಕಸದ ಬುಟ್ಟಿಯಲ್ಲಿದ್ದ ಜಾತಿಗಣತಿ ವರದಿಯನ್ನು ಈಗ ಸಲ್ಲಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (shamanur shivashankarappa) ವಿರುದ್ಧ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ(Karnataka backward community castes) ಸಿಡಿದೆದ್ದಿದೆ. ಅಲ್ಲದೇ ಬನ್ನಿ ಬೀದಿಗಿಳಿದು ಹೋರಾಟ ಮಾಡೋಣ ಎಂದು ಸವಾಲು ಹಾಕಿದೆ. ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಮಚಂದ್ರ, ಅವನೊಬ್ಬ ಶಾಸಕ ಮಾತಾಡಿದ್ದಾನೆ. ಅವನು ವಿಧಾನಸಭೆಯಲ್ಲೇ ಹಿರಿಯ ಶಾಸಕ. ಅವನು ಮಾತಾಡಿದ್ದು ನೋಡಿದ್ದೀರಾ? ಬನ್ನಿ ಬೀದಿಗಿಳಿದು ಹೋರಾಟ ಮಾಡೋಣ, ನಾವು ಸಂಘರ್ಷಕ್ಕೆ ರೆಡಿ ಇದ್ದೇವೆ. ನಾವಾ ನೀವಾ ನೋಡೇ ಬಿಡೋಣ ಎಂದು ಶಾಮನೂರು ಶಿವಶಂಕರಪ್ಪಗೆ ನೇರ ಸವಾಲು ಹಾಕಿದರು.
ನಮಗೆ ಇಷ್ಟು ವರ್ಷ ಮೋಸ ಮಾಡಿಕೊಂಡು ಬಂದಿದ್ದೀರಿ. ಜಾತಿ ಜನಗಣತಿಗೆ ಯಾರು ವಿರೋಧ ಮಾಡುತ್ತಿದ್ದಾರೋ ಅವರು ಇದುವರೆಗೂ ಲೂಟಿ ಮಾಡಿಕೊಂಡೇ ಬಂದಿದ್ದಾರೆ. ನಾಡಿನ ಸಂಪತ್ತನ್ನು ಲೂಟಿ ಮಾಡಿಕೊಂಡೇ ಬಂದಿದ್ದಾರೆ. ರಾಜ್ಯದಲ್ಲಿ ನೇಮಕ ಆದ ಹಿಂದುಳಿದ ಜಾತಿಗಳ ಎಲ್ಲ ವರದಿಯನ್ನು ವಿರೋಧ ಮಾಡಿಕೊಂಡು ಬಂದ ಜನ ಇವರು. ಹಿಂದುಳಿದ ಜಾತಿಗಳಿಗೆ ರೂಪಿಸುವ ಕಾರ್ಯಕ್ರಮಕ್ಕೆ ದ್ರೋಹ ಮಾಡಿ ನಮ್ಮ ತಟ್ಟೆಯ ಅನ್ನ ಕಸಿದುಕೊಂಡು ತಿನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಜಾತಿಗಣತಿ ವರದಿ ಸ್ವೀಕಾರ: ಈ ಬಗ್ಗೆ ತುಮಕೂರು ಸಿದ್ಧಗಂಗಾಶ್ರೀ ಹೇಳಿದ್ದಿಷ್ಟು
ವರದಿಯನ್ನು ಕ್ಯಾಬಿನೆಟ್ ನಲ್ಲಿ ಚರ್ಚೆಗೆ ಬಿಡಿ. ಒಂದು ವೇಳೆ ವರದಿ ಶಿಫಾರಸು ಅನುಷ್ಠಾನ ಆಗಿಲ್ಲ ಅಂದ್ರೆ ಬೀದಿ ಹೋರಾಟ ಮಾಡುತ್ತೇವೆ. ಮೂರು ಜಾತಿಗಳು ಒಟ್ಟಾಗಿ ಹೋರಾಟ ಮಾಡುತ್ತೇವೆ. ಆ ಮೂರು ಜಾತಿಗಳ ಜನ ಇರುವುದು ಕೇವಲ 25 ರಿಂದ 30 ಪರ್ಸೆಂಟ್. ನಾವು 70% ಜನರು ಇದ್ದೇವೆ. ನಾಲ್ಕರಿಂದ ಐದು ಕೋಟಿ ಜನ ನಾವಿದ್ದೇವೆ. ಸಿಎಂ ಯಾರೇ ಆಗಿರಲಿ ಸರ್ಕಾರದ ವಿರುದ್ದ ನಾವು ಹೋರಾಟಕ್ಕೆ ರೆಡಿ ಇದ್ದೇವೆ. ನಾವು ಸೌಮ್ಯವಾಗಿ ಹೋರಾಟ ಮಾಡುತ್ತಿದ್ದೇವೆ. ರಾಜ್ಯದ ಅಧಿಕಾರ ಅನುಭವಿಸಿದ ವ್ಯಕ್ತಿ ಏನ್ ಹೇಳಿದಾನೆ. ಅವರು ಹಾಗೇನಾದರೂ ಬಂದಿದ್ದೇ ಆದರೆ ನಾವೂ ಕೈಗೆ ಬಳೆ ತೊಟ್ಟುಕೊಂಡು ಕುಳಿತಿಲ್ಲ. ನಾವು ಸಹ ರೆಡಿ ಇದ್ದೇವೆ ಎಂದು ಎಂದರು.
ಚರ್ಚೆಗೆ ಸಿದ್ಧ ಎಂದ ಜಯಪ್ರಕಾಶ್ ಹೆಗ್ಡೆ
ಮತ್ತೊಂದೆಡೆ ಈ ವರದಿ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿದ್ದು,ರಾಜ್ಯದಲ್ಲಿ 5.98 ಕೋಟಿ ಜನಸಂಖ್ಯೆ ಸಮೀಕ್ಷೆ ನಡೆಸಿ ವರದಿ ಸಲ್ಲಿಕೆಯಾಗಿದೆ. ಶಿಕ್ಷಕರು ಸಂಗ್ರಹಿಸಿದ ದತ್ತಾಂಶದ ಆಧಾರದಲ್ಲಿ ಅಧ್ಯಯನ ನಡೆಸಿ ವರದಿ. ವರದಿ ಬಗ್ಗೆ ಚರ್ಚೆ ಮಾಡಲು ಕರೆದರೆ ನಾನು ಸಿದ್ಧ ಎಂದು ಹೇಳಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸರ್ಕಾರ ಒಪ್ಪದೆ ಚರ್ಚೆಮಾಡಿದರೆ ವರದಿ ಬಹಿರಂಗವಾಗಲು ಸಾಧ್ಯವಿಲ್ಲ. 1300ಕ್ಕಿಂತ ಹೆಚ್ಚು ಜಾತಿಗಳಿರುವಾಗ 10 ಹೆಸರು ಮಾತ್ರ ಹೊರಬಂದಿದೆ. ರಾಜ್ಯ ಸರ್ಕಾರ ಅಧಿಕೃತವಾಗಿ ನಿರ್ಧರಿಸಿದ ಮೇಲೆ ಚರ್ಚೆ ಮಾಡೋಣ. ಸರ್ಕಾರ ವರದಿ ಬಿಡುಗಡೆ ಮಾಡದೆ ಯಾವುದೇ ದತ್ತಾಂಶ ಒಪ್ಪುವುದಿಲ್ಲ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ