ಬೆಂಗಳೂರು, ಫೆಬ್ರವರಿ 14: ದರ ಏರಿಕೆಯಿಂದ ಆಕ್ರೋಶಗೊಂಡಿರುವ ಸಾರ್ವಜನಿಕರನ್ನು, ಪ್ರಯಾಣಿಕರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿರುವ ಬಿಎಂಆರ್‌ಸಿಎಲ್, ಶೇ 90 ರಿಂದ 100 ರಷ್ಟು ದರ ಹೆಚ್ಚಳ ಮಾಡಿರುವ ನಿಲ್ದಾಣಗಳ ಮಧ್ಯೆ ದರ ತುಸು ಇಳಿಕೆ ಮಾಡಿದೆ. ಪರಿಷ್ಕೃತ ದರ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಬಿಎಂಆರ್‌ಸಿಎಲ್ ಗುರುವಾರ ತಿಳಿಸಿತ್ತು. ಆದರೆ, ಈವರಗೆ ಪರಿಷ್ಕೃತ ದರ ಪಟ್ಟಿ ಮೆಟ್ರೋದ ಅಧಿಕೃತ ವೆಬ್ಸೈಟ್ನಲ್ಲಾಗಲೀ ಎಕ್ಸ್ ತಾಣದಲ್ಲಾಗಲೀ ಪ್ರಕಟವಾಗಿಲ್ಲ. ಆದರೆ, ಪ್ರಯಾಣ ದರದಲ್ಲಿ ತುಸು ಇಳಿಕೆ ಇಂದಿನಿಂದಲೇ (ಶುಕ್ರವಾರ) ಜಾರಿಗೆ ಬಂದಿದೆ.
ಮೆಟ್ರೋ ದರ ಏರಿಕೆ ಬಗ್ಗೆ ಪರಿಶೀಲನೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದ ಬೆನ್ನಲ್ಲೇ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಬಿಎಂಆರ್‌ಸಿಎಲ್ ಎಂಡಿ ಮಹೇಶ್ವರ್ ರಾವ್, ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ದುಪ್ಪಟ್ಟು ದರ ಏರಿಕೆಯಾಗಿದೆಯೋ ಅಲ್ಲಿ ಸ್ಟೇಜ್ ಬೈ ಸ್ಟೇಜ್ ಮರ್ಜ್ ಮಾಡುವ ಮೂಲಕ ದರ ಕಡಿಮೆ ಮಾಡಲಾಗುವುದು. ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದಿದ್ದರು.
ಆದರೆ, ನಮ್ಮ ಮೆಟ್ರೋ ಪ್ರಯಾಣದ ಕನಿಷ್ಠ ಹಾಗೂ ಗರಿಷ್ಠ ದರದಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.
ಮೆಟ್ರೋ ಪ್ರಯಾಣದರೆ ಏರಿಕೆ ಬೆನ್ನಲ್ಲೇ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿರುವ ಬಗ್ಗೆ ವರದಿಯಾಗಿತ್ತು. ಆದರೆ, ಗಣನೀಯ ಪ್ರಮಾಣದಲ್ಲಿ ದರ ಹೆಚ್ಚಾಗಿರುವುದನ್ನು ಕಡಿಮೆ ಮಾಡುತ್ತೇವೆ ಎಂದು ಬಿಎಂಆರ್‌ಸಿಎಲ್ ಭರವಸೆ ನೀಡಿದ ಹೊರತಾಗಿಯೂ ಪ್ರಯಾಣಿಕರ ಸಂಖ್ಯೆ ಕಡಿಮೆಯೇ ಇದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಶೇ 30 ರ ವರೆಗೆ ಇಳಿಕೆ: ಆದರೆ ಎಲ್ಲೆಡೆಯೂ ಅಲ್ಲ!
ಶುಕ್ರವಾರ ಬೆಳಗ್ಗೆ ಕೂಡ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂತು. ಸಾಮಾನ್ಯವಾಗಿ ಬೆಳಗ್ಗೆ ಹೊತ್ತು ಮೆಜೆಸ್ಟಿಕ್ ನಿಲ್ದಾಣದಲ್ಲಿ ತೀವ್ರ ಜನದಟ್ಟಣೆ ಇದ್ದು ಮೆಟ್ರೋ ರೈಲು ಹತ್ತುವುದು ಕೂಡ ಕಷ್ಟವಾಗಿರುತ್ತದೆ. ಆದರೆ ಇಂದು ಆರಾಮವಾಗಿ ಪ್ರಯಾಣಿಸುವಷ್ಟು ಅನುಕೂಲಕರವಾಗಿತ್ತು. ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ, ‘ಟಿವಿ9’
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:15 am, Fri, 14 February 25