ಕಿತ್ತಳೆ ಮಾರ್ಗಕ್ಕಾಗಿ ಸಾವಿರಾರು ಮರಗಳ ಮಾರಣಹೋಮಕ್ಕೆ ಮುಂದಾದ BMRCL: ಸಿಡಿದೆದ್ದ ಪರಿಸರ ಪ್ರೇಮಿಗಳು

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿಗಾಗಿ ಬಿಎಂಆರ್‌ಸಿಎಲ್ ಸಾವಿರಾರು ಮರಗಳನ್ನು ಕಡಿಯಲು ಮತ್ತು ಸ್ಥಳಾಂತರಿಸಲು ಮುಂದಾಗಿದೆ. ಬಿಎಂಆರ್‌ಸಿಎಲ್​​ನ ಈ ನಡೆಗೆ ಪರಿಸರ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇರುವ ಮರಗಳನ್ನೆಲ್ಲಾ ಕಟ್ ಮಾಡಿದರೆ ನಾವು ಉಸಿರಾಡುವುದಾದರೂ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಕಿತ್ತಳೆ ಮಾರ್ಗಕ್ಕಾಗಿ ಸಾವಿರಾರು ಮರಗಳ ಮಾರಣಹೋಮಕ್ಕೆ ಮುಂದಾದ BMRCL: ಸಿಡಿದೆದ್ದ ಪರಿಸರ ಪ್ರೇಮಿಗಳು
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Oct 29, 2025 | 8:54 PM

ಬೆಂಗಳೂರು, ಅಕ್ಟೋಬರ್​ 29: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಅನ್ನೋ ಹೆಸರಲ್ಲಿ ಮರಗಳು (trees) ಕಣ್ಮರೆಯಾಗುತ್ತಿದ್ದರೆ, ಇತ್ತ ನಮ್ಮ ಮೆಟ್ರೋ ಕಾಮಗಾರಿ ಮಾಡುತ್ತೇವೆಂದು ಸಾವಿರಾರು ಮರಗಳ ಮಾರಣಹೋಮಕ್ಕೆ ಬಿಎಂಆರ್​​ಸಿಎಲ್​ (BMRCL) ಮುಂದಾಗುತ್ತಿದೆ. ಇದಕ್ಕೆ ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಿತ್ತಳೆ ಮಾರ್ಗಕ್ಕಾಗಿ 1093 ಮರಗಳನ್ನು ಕಟ್ ಮಾಡಲು ಮುಂದಾದ ನಮ್ಮ ಮೆಟ್ರೋ

ಈಗಾಗಲೇ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅಭಿವೃದ್ಧಿ ಅನ್ನೋ ಹೆಸರಲ್ಲಿ ಸಾವಿರಾರು ಮರಗಳ ಮಾರಣಹೋಮ ಆಗಿದೆ. ಇದರಿಂದ ಬೆಂಗಳೂರಿಗರು ಬಿಸಿಲ ಬೇಗೆಯಲ್ಲಿ ತತ್ತರಿಸಿ ಹೋಗಿದ್ರು, ಇದೀಗ ಮತ್ತೆ ನಗರದಲ್ಲಿರುವ ಸಾವಿರಾರು ಮರಗಳನ್ನು ಕಟ್ ಮಾಡಲು ಬಿಎಂಆರ್​​​ಸಿಎಲ್​​ ಮುಂದಾಗುತ್ತಿದೆ. ಮೆಟ್ರೋ ಮೂರನೇ ಹಂತದ ಯೋಜನೆಗಾಗಿ ಬರೋಬ್ಬರಿ 1092 ಮರಗಳನ್ನು ಕಡಿಯಲು ಮತ್ತು ಸ್ಥಳಾಂತರಿಸಲು ತೀರ್ಮಾನ ಮಾಡಲಾಗಿದೆ.

ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ತಪ್ಪು ಲೆಕ್ಕ ನೀಡಿತಾ BMRCL? ಅಧಿಕಾರಿಗಳಿಗೆ ಗಣಿತ ಪಾಠದ ಅವಶ್ಯಕತೆ ಇದೆ ಎಂದ ತೇಜಸ್ವಿ ಸೂರ್ಯ

1ನೇ ಕಾರಿಡಾರ್​​ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 32.15 ಕಿಲೋ ಮೀಟರ್​ ಮಾರ್ಗದಲ್ಲಿ 21 ನಿಲ್ದಾಣಗಳಿರಲಿವೆ. 2ನೇ ಕಾರಿಡಾರ್​​ ಹೊಸಹಳ್ಳಿಯಿಂದ ಕಡಬಗೆರೆಯವರೆಗೂ ಇಲ್ಲಿ 12.50 ಕಿಲೋ ಮೀಟರ್ ಇದ್ದು 9 ನಿಲ್ದಾಣಗಳು ಇರಲಿವೆ. ಎರಡು ಮೆಟ್ರೋ ಮಾರ್ಗ ಒಟ್ಟು 44.65 ಕಿ.ಮೀ ಉದ್ದವಿದ್ದು, 15,611 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.

ಇರುವ ಮರಗಳನ್ನೆಲ್ಲಾ ಕಟ್ ಮಾಡಿದರೆ ನಾವು ಉಸಿರಾಡುವುದು ಹೇಗೆ: ಇನಾಯತ್

ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ಇನಾಯತ್, ನಮ್ಮ ಮನೆಯ ಮುಂಭಾಗ ಮೆಟ್ರೋ ಬರ್ತಿರೋದು ಸಂತೋಷದ ವಿಷಯ. ಆದರೆ ಇದಕ್ಕಾಗಿ ಇರುವ ಮರಗಳನ್ನೆಲ್ಲಾ ಕಟ್ ಮಾಡಿದರೆ ನಾವು ಉಸಿರಾಡುವುದು ಹೇಗೆ, ನಿಮಯಗಳ ಪ್ರಕಾರ ಒಂದು ಮರ ಕಟ್ ಮಾಡಿದರೆ ಹತ್ತು ಗಿಡಗಳನ್ನು ನೆಡಬೇಕು ಅನ್ನೋ ರೂಲ್ಸ್ ಇದೆ. ಅದನ್ನು ಬಿಎಂಆರ್​​ಸಿಎಲ್​​ ಅಧಿಕಾರಿಗಳು ಪಾಲಿಸಬೇಕು ಎಂದರು.

ಇನ್ನು ಈ ಹಿಂದೆ ಕಿತ್ತಳೆ ಮಾರ್ಗದ ಕಾಮಗಾರಿಗಾಗಿ 11 ಸಾವಿರ ಮರಗಳನ್ನು ಕಟ್ ಮಾಡಲು ಸಿದ್ದತೆ ಮಾಡಿಕೊಂಡಿದ್ದ ಬಿಎಂಆರ್​​ಸಿಎಲ್​​, ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ, 6500 ಮರಗಳನ್ನು ಕಟ್ ಮಾಡಲು ತೀರ್ಮಾನ ಮಾಡಲಾಗಿತ್ತು. ಇದಕ್ಕೂ ಪರಿಸರ ಹೋರಾಟಗಾರು ಒಪ್ಪಲಿಲ್ಲ. ಇದೀಗ ಬಿಎಂಆರ್​​ಸಿಎಲ್​ ಅಧಿಕಾರಿಗಳು 2183 ಮರಗಳನ್ನು ಕಡಿಯಲು ಜಿಬಿಎ ಅಧಿಕಾರಿಗಳನ್ನು ಕೇಳಿದ್ದು, ಇದರಲ್ಲಿ ಮೊದಲ ಹಂತದಲ್ಲಿ 1092 ಮರಗಳನ್ನು ಕುಡಿಯಲು ಮತ್ತು ತೆರವು ಮಾಡಲು ಜಿಬಿಎ ಅರಣ್ಯ ವಿಭಾಗ ಅನುಮತಿ ನೀಡಿದ್ದು, ಇದರಿಂದ ಮೂರನೇ ಹಂತದ ಮೆಟ್ರೋ ಕಾಮಗಾರಿ ವೇಳೆ 10,045 ಮರಗಳಿಗೆ ಮುಕ್ತಿ ಸಿಗಲಿದೆ‌.

ಪರಿಸರ ಹೋರಾಟಗಾರ ಅರುಣ್​ ಹೇಳಿದ್ದಿಷ್ಟು 

ಸದ್ಯ ಈ ಕುರಿತಾಗಿ ಪರಿಸರ ಹೋರಾಟಗಾರ ಅರುಣ್​ ಮಾತನಾಡಿದ್ದು, ಒಂದು ಮರ ಕಟ್ ಮಾಡಿದರೆ, ಹತ್ತು ಗಿಡಗಳನ್ನು ನೀಡಬೇಕೆಂಬ ನಿಯಮ ಇದೆ. ಹಾಗಾಗಿ ನೀವು ಕಟ್ ಮಾಡಲು ಮುಂದಾಗಿರುವ ಒಂದು ಸಾವಿರ ಮರಗಳ ಬದಲಿಗೆ ಹತ್ತು ಸಾವಿರ ಮರಗಳನ್ನು ಯಾವ ಜಾಗದಲ್ಲಿ ನೆಡುತ್ತೀರಿ ಮತ್ತು ಹಿಂದೆ ಮೆಟ್ರೋ ಕಾಮಗಾರಿಗಾಗಿ ಕಟ್ ಮಾಡಿದ ಬದಲಿಗೆ ನೆಟ್ಟ ಗಿಡಗಳನ್ನು ಎಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ದೇಶದ ಮೊದಲ ಅಂತಾರಾಜ್ಯ ಮೆಟ್ರೋ ಸಂಪರ್ಕಕ್ಕೆ ಕೊಕ್: ಹೊಸೂರು ಮೆಟ್ರೋ ಯೋಜನೆ ಕೈಬಿಟ್ಟ ಬಿಎಂಆರ್​ಸಿಎಲ್

ಒಟ್ಟಿನದಲ್ಲಿ ನಗರದಲ್ಲಿ ಈಗಲೇ ಜಜನರಿಗೆ ಉಸಿರಾಡಲು ಶುದ್ಧವಾದ ಗಾಳಿ ಸಿಗುತ್ತಿಲ್ಲ. ಹೀಗಿರುವಾಗ ಇರುವ ಮರಗಳನ್ನು ಈ ಮೆಟ್ರೋ ಅಧಿಕಾರಿಗಳು ಕಾಮಗಾರಿ ಅನ್ನೋ ಹೆಸರಲ್ಲಿ ಕಟ್ ಮಾಡಿದರೆ, ಬೆಂಗಳೂರು ಮತ್ತೊಂದು ದೆಹಲಿ ಆಗುವುದರಲ್ಲಿ ಅನುಮಾನವೇ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.