ದೇಶದ ಮೊದಲ ಅಂತಾರಾಜ್ಯ ಮೆಟ್ರೋ ಸಂಪರ್ಕಕ್ಕೆ ಕೊಕ್: ಹೊಸೂರು ಮೆಟ್ರೋ ಯೋಜನೆ ಕೈಬಿಟ್ಟ ಬಿಎಂಆರ್‌ಸಿಎಲ್
ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿಗೆ ಮೆಟ್ರೋ ಸಂಪರ್ಕ ನೀಡುವ ವಿಚಾರಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ತಾಂತ್ರಿಕ ಸಮಸ್ಯೆಯ ಕಾರಣ ತಮಿಳುನಾಡಿಗೆ ಸಂಪರ್ಕಿಸುವ ಮೆಟ್ರೋ ಸಂಪರ್ಕ ಯೋಜನೆಯನ್ನು ಬಿಎಂಆರ್‌ಸಿಎಲ್ ಕೈಬಿಟ್ಟಿದೆ. ಇದರೊಂದಿಗೆ, ದೇಶದ ಮೊದಲ ಅಂತಾರಾಜ್ಯ ಮೆಟ್ರೋ ಸಂಪರ್ಕ ಯೋಜನೆ ಸಾಕಾರಗೊಳ್ಳುವುದಿಲ್ಲ ಎಂಬುದು ದೃಢಪಟ್ಟಿದೆ.

ಬೆಂಗಳೂರು, ಅಕ್ಟೋಬರ್ 23: ಬೆಂಗಳೂರಿನಿಂದ ತಮಿಳುನಾಡಿನ ಹೊಸೂರನ್ನು (Hosur) ಸಂಪರ್ಕಿಸಲು ಉದ್ದೇಶಿಸಿದ್ದ ಮೆಟ್ರೋ (Namma Metro) ಮಾರ್ಗಕ್ಕೆ ಬಿಎಂಆರ್‌ಸಿಎಲ್ (BMRCL) ಕೊಕ್ ನೀಡಿದೆ. ಆರಂಭದಲ್ಲಿ ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕರು ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸದ್ಯ ತಾಂತ್ರಿಕ ಸಮಸ್ಯೆ ಕಾರಣ ಬಿಎಂಆರ್‌ಸಿಎಲ್ ಯೋಜನೆ ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿದ್ದು, ರಾಜ್ಯ ಸರ್ಕಾರಕ್ಕೂ ಈ ಬಗ್ಗೆ ವರದಿ ನೀಡಿದೆ. ಬೆಂಗಳೂರು ಮೆಟ್ರೋವನ್ನು 470 ಕಿ.ಮೀ.ಗೆ ವಿಸ್ತರಿಸಲು ಯೋಜನೆ ಹಾಕಿಕೊಳ್ಳುವಂತೆ ಕೇಂದ್ರ ಸರ್ಕಾರ ಬಿಎಂಆರ್ಸಿಎಲ್ಗೆ ಮನವಿ ಮಾಡಿತ್ತು. ಹಾಗಾಗಿ ಬಿಎಂಆರ್‌ಸಿಎಲ್ ಈ ಯೋಜನೆ ಬಗ್ಗೆ ಅಧ್ಯಯವನ್ನು ನಡೆಸಿತ್ತು. 23 ಕಿ.ಮೀ. ಹೊಸೂರು-ಬೊಮ್ಮಸಂದ್ರ ಕಾರಿಡಾರ್ಗೆ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳಬಹುದು. ಆದರೆ ನಮ್ಮ ಮೆಟ್ರೋಗೆ ಸಂಯೋಜಿಸಲು ಸಾಧ್ಯವಿಲ್ಲ ಎಂದು ಬಿಎಂಆರ್‌ಸಿಎಲ್ ಕರ್ನಾಟಕ ಸರ್ಕಾರಕ್ಕೆ ತಿಳಿಸಿದೆ.
ಬೆಂಗಳೂರು – ಹೊಸೂರು ಮಾರ್ಗವು ಆರ್.ವಿ ರೋಡ್ ಬೊಮ್ಮಸಂದ್ರ ಯೆಲ್ಲೋ ಮಾರ್ಗದ ವಿಸ್ತರಿತ ಮಾರ್ಗವಾಗಿದೆ. ಚೆನ್ನೈ ಮೆಟ್ರೋಗೂ, ನಮ್ಮ ಮೆಟ್ರೋ ಮಾರ್ಗಕ್ಕೂ ಸಾಕಷ್ಟು ವ್ಯತ್ಯಾಸ ಇರುವ ಕಾರಣ ತಮಿಳುನಾಡಿನ ಹೊಸೂರು ಮಾರ್ಗಕ್ಕೆ ತಾಂತ್ರಿಕವಾಗಿ ಹೊಂದಾಣಿಕೆ ಸಾದ್ಯವಿಲ್ಲ. ಹೀಗಾಗಿ ಇದನ್ನು ಜಾರಿ ಮಾಡುವುದು ಕಷ್ಟ ಸಾಧ್ಯ ಎಂಬುದಾಗಿ ಬಿಎಂಆರ್‌ಸಿಎಲ್ ರಾಜ್ಯ ಸರ್ಕಾರಕ್ಕೆ ವರದಿ ಕೊಟ್ಟಿದೆ.
ನಮ್ಮ ಮೆಟ್ರೋ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರಬೇಕು. ಆವಾಗಲೇ ಚೆನ್ನಾಗಿ ಇರುತ್ತದೆ. ಇದರಿಂದ ಹೊಸೂರು ಅಭಿವೃದ್ಧಿಯೂ ಆಗುತ್ತದೆ. ಈಗಾಗಲೇ ಹೊಸೂರಿನಲ್ಲಿ ಏರ್ಪೋರ್ಟ್ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಬೆಂಗಳೂರಿನ ಅಭಿವೃದ್ಧಿ ಕುಂಠಿತವಾಗುತ್ತದೆ. ಇಲ್ಲಿಂದ ದುಡಿಮೆ ಮಾಡಿಕೊಂಡು ಹೋಗಿ ಅವರ ರಾಜ್ಯ ಉದ್ದಾರ ಮಾಡುತ್ತಾರೆ. ನೀರಿನ ವಿಚಾರಕ್ಕೆ ಎಷ್ಟೊಂದು ಗಲಾಟೆ ಮಾಡುತ್ತಾರೆ, ಅವರಿಗೆ ನಾವು ಮೆಟ್ರೋ ಕೊಡಬೇಕಾ ಎಂದು ಕರ್ನಾಟಕದ ಪ್ರಯಾಣಿಕರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೊಮ್ಮಸಂದ್ರ ಹೊಸೂರು ಮೆಟ್ರೋ ಯೋಜನೆಗೆ ಕರ್ನಾಟಕ ವಿರೋಧ ಸಾಧ್ಯತೆ: ಕಾರಣ ಇಲ್ಲಿದೆ
ಒಟ್ಟಿನಲ್ಲಿ, ಮೊದಲು ಕನ್ನಡಪರ ಸಂಘಟನೆಗಳ ಭಾರಿ ವಿರೋಧಕ್ಕೆ ಗುರಿಯಾಗಿ, ಇದೀಗ ತಾಂತ್ರಿಕ ಸಮಸ್ಯೆಯ ಹೊಸೂರು ಮೆಟ್ರೋ ಮಾರ್ಗ ಯೋಜನೆಯನ್ನು ಬಿಎಂಆರ್‌ಸಿಎಲ್ ಕೈ ಬಿಟ್ಟಿದೆ. ಚೆನ್ನೈ ಮೆಟ್ರೋ ನಿಗಮ ಮತ್ತೆ ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.



