ಬೊಮ್ಮಸಂದ್ರ ಹೊಸೂರು ಮೆಟ್ರೋ ಯೋಜನೆಗೆ ಕರ್ನಾಟಕ ವಿರೋಧ ಸಾಧ್ಯತೆ: ಕಾರಣ ಇಲ್ಲಿದೆ

ಬೊಮ್ಮಸಂದ್ರ ಹೊಸೂರು ಮೆಟ್ರೋ ರೈಲು ಯೋಜನೆ ಬಗ್ಗೆ ನೆರೆಯ ತಮಿಳುನಾಡು ಅಧ್ಯಯನ ನಡೆಸುತ್ತಿದ್ದು, ಬಿಎಂಆರ್​​ಸಿಎಲ್ ಜತೆಗೂ ಚರ್ಚಿಸಿದೆ. ಆದರೆ, ಈ ಯೋಜನೆಗೆ ಕರ್ನಾಟಕದಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಮೊದಲು ಬಿಎಂಆರ್​ಸಿಎಲ್ ಬಳಿ ಇದ್ದ ಈ ಮೆಟ್ರೋ ರೈಲು ಮಾರ್ಗ ಪ್ರಸ್ತಾಪ ತಮಿಳುನಾಡಿನ ಪಾಲಾಗಿದ್ದು ಹೇಗೆ? ಕರ್ನಾಟಕದಿಂದ ಇದಕ್ಕೆ ವಿರೋಧ ಸಾಧ್ಯತೆ ಯಾಕೆ? ಎಲ್ಲ ವಿವರ ಇಲ್ಲಿದೆ.

ಬೊಮ್ಮಸಂದ್ರ ಹೊಸೂರು ಮೆಟ್ರೋ ಯೋಜನೆಗೆ ಕರ್ನಾಟಕ ವಿರೋಧ ಸಾಧ್ಯತೆ: ಕಾರಣ ಇಲ್ಲಿದೆ
ಮೆಟ್ರೋ ರೈಲು (ಸಂಗ್ರಹ ಚಿತ್ರ)
Follow us
|

Updated on: Aug 29, 2024 | 7:52 AM

ಬೆಂಗಳೂರು, ಆಗಸ್ಟ್ 29: ಚೆನ್ನೈ ಮೆಟ್ರೊ ರೈಲು ನಿಗಮ ನಿಯಮಿತ (ಸಿಎಂಆರ್‌ಎಲ್) ಪ್ರಸ್ತಾಪಿಸಿರುವ 6,900 ಕೋಟಿ ರೂ. ವೆಚ್ಚದ ಬೊಮ್ಮಸಂದ್ರ-ಹೊಸೂರು ಮೆಟ್ರೊ ಯೋಜನೆಗೆ ಕರ್ನಾಟಕದಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಈ ಯೋಜನೆಯು ಕರ್ನಾಟಕದಲ್ಲಿ ಐದು ಮತ್ತು ತಮಿಳುನಾಡಿನಲ್ಲಿ ಏಳು ನಿಲ್ದಾಣಗಳನ್ನು ಹೊಂದಿರುತ್ತದೆ. ಒಟ್ಟು 23 ಕಿಮೀ ಎತ್ತರಿತ ಮೆಟ್ರೋ ಮಾರ್ಗದ (ಕರ್ನಾಟಕದಲ್ಲಿ 12 ಕಿಮೀ ಮತ್ತು ಟಿಎನ್‌ನಲ್ಲಿ 11 ಕಿಮೀ) ವಿಸ್ತೃತ ಯೋಜನಾ ವರದಿಯನ್ನು ಸಿಎಂಆರ್‌ಎಲ್‌ ತಂಡವು ಮಂಗಳವಾರ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಅಧಿಕಾರಿಗಳಿಗೆ ಸಲ್ಲಿಸಿದೆ ಎಂದು ವರದಿಯಾಗಿದೆ.

ಆದರೆ, ಬೆಂಗಳೂರಿನ ವ್ಯಾಪಾರ ಹಿತಾಸಕ್ತಿಗಳಿಗೆ ಹೊಸೂರು ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುವುದರಿಂದ ಕರ್ನಾಟಕದಿಂದ ಯೋಜನೆಗೆ ವಿರೋಧ ವ್ಯಕ್ತವಾಗಬಹುದು ಎಂದು ಮೂಲಗಳನ್ನು ಉಲ್ಲೇಖಸಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ತಿಳಿಸಿದೆ. ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ತಮಿಳುನಾಡು ಯೋಜಿಸುತ್ತಿರುದೆ. ಇದು ದಕ್ಷಿಣ ಬೆಂಗಳೂರಿನಿಂದ ವಿಮಾನಯಾನ ಮಾಡುವವರನ್ನು ಆಕರ್ಷಿಸುವ ಸಾಧ್ಯತೆಯಿದೆ. ಅಲ್ಲದೆ, ಬೆಂಗಳೂರಿನೊಂದಿಗೆ ಮೆಟ್ರೋ ಸಂಪರ್ಕವು ಹೊಸೂರಿನತ್ತ ಜನ ಆಕರ್ಷಿತರಾಗುವಂತೆ ಮಾಡಬಹುದು. ಈ ಎಲ್ಲ ಕಾರಣಗಳಿಂದ ಕರ್ನಾಟಕವು ಯೋಜನೆಗೆ ವಿರೋಧ ವ್ಯಕ್ತಪಡಿಸಬಹುದು ಎನ್ನಲಾಗಿದೆ.

ಗಮನಿಸಬೇಕಾದ ಅಂಶವೆಂದರೆ, ನಮ್ಮ ಮೆಟ್ರೋದ ಹಳದಿ ಮಾರ್ಗವು ಬೊಮ್ಮಸಂದ್ರದಿಂದ ಆರ್‌ವಿ ರಸ್ತೆಯನ್ನು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ ಸಂಧಿಸುತ್ತದೆ. ಈ ಮೂಲಕ ಏರ್‌ಪೋರ್ಟ್ ಲೈನ್ (ಬ್ಲೂ ಲೈನ್) ಸಂಪರ್ಕಿಸುತ್ತದೆ.

ಇಷ್ಟೇ ಅಲ್ಲದೆ, ಆ ಮಾರ್ಗವು ಉಪನಗರ ರೈಲು ಮತ್ತು ಬಸ್ ಡಿಪೋಗಳನ್ನು ಸಹ ಒಳಗೊಂಡಿರುತ್ತದೆ. ಬೊಮ್ಮಸಂದ್ರ ಮಾರ್ಗವನ್ನು ಅತ್ತಿಬೆಲೆಯವರೆಗೆ ವಿಸ್ತರಿಸಲು ಬಿಎಂಆರ್​ಸಿಎಲ್ ಜುಲೈ 9 ರಂದು ಯೋಜನೆಯನ್ನು ಆರಂಭಿಸಿದೆ.

ಸದ್ಯ ಬೊಮ್ಮಸಂದ್ರ ಹೊಸೂರು ಮೆಟ್ರೋ ಮಾರ್ಗದ ಬಗ್ಗೆ ಆರ್ವಿ ಅಸೋಸಿಯೇಟ್ಸ್ ಆರ್ಕಿಟೆಕ್ಟ್ಸ್ ಇಂಜಿನಿಯರ್ ಮತ್ತು ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸುತ್ತಿದೆ. ಅದು ಪೂರ್ಣಗೊಳ್ಳಲು ಆರು ತಿಂಗಳು ತೆಗೆದುಕೊಳ್ಳಬಹುದು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಮಿಳುನಾಡು ಸರ್ಕಾರಕ್ಕೆ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಬಿಎಂಆರ್​ಸಿಎಲ್ ಆಸಕ್ತಿ ತೋರದ್ದರಿಂದ ತಮಿಳುನಾಡಿಗೆ ಹೊಣೆ

ಕಾರ್ಯಸಾಧ್ಯತಾ ವರದಿಯನ್ನು ಆರಂಭದಲ್ಲಿ ಬಿಎಂಆರ್‌ಸಿಎಲ್ ಸಿದ್ಧಪಡಿಸಬೇಕಿತ್ತು. ಆದರೆ, ತಮಿಳುನಾಡು ಈ ಯೋಜನೆಗೆ ಹೆಚ್ಚಿನ ಆಸಕ್ತಿ ತೋರಿಸಿದ್ದರಿಂದ ಬೆಂಗಳೂರು ಮೆಟ್ರೋ ಅದನ್ನು ಮುಂದುವರಿಸಲಿಲ್ಲ. ಹೀಗಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈಗ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ತಮಿಳುನಾಡಿಗೆ ಕೇಳಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮೊನ್ನೇ ಅಷ್ಟೇ ಮೋದಿ ಸರ್ಕಾರ ಗ್ರೀನ್​ ಸಿಗ್ನಲ್ ನೀಡಿದ್ದ 3ನೇ ಹಂತದ ನಮ್ಮ ಮೆಟ್ರೋಗೆ ಆರಂಭಿಕ ವಿಘ್ನ..!

ಹೊಸೂರು ಬೆಂಗಳೂರಿನಿಂದ ಕೇವಲ 39 ಕಿಮೀ ದೂರದಲ್ಲಿದೆ. ಬೆಂಗಳೂರಿಗೆ ಹೋಲಿಸಿದರೆ ಉತ್ತಮ ರಸ್ತೆಗಳು ಮತ್ತು ಕಡಿಮೆ ದಟ್ಟಣೆಯೊಂದಿಗೆ, ಮೆಟ್ರೋ ಸಂಪರ್ಕವು ಹೊಸೂರಿನ ಆರ್ಥಿಕ ಭವಿಷ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ. ಬೆಂಗಳೂರಿಗೆ ಹೊಸೂರಿನಿಂದ ಕಠಿಣ ಸ್ಪರ್ಧೆ ಎದುರಾಗಲಿದೆ ಎಂದು ಮೂಲವೊಂದು ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ