ಮೊನ್ನೇ ಅಷ್ಟೇ ಮೋದಿ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದ 3ನೇ ಹಂತದ ನಮ್ಮ ಮೆಟ್ರೋಗೆ ಆರಂಭಿಕ ವಿಘ್ನ..!
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಬೆಂಗಳೂರಿನ ನಮ್ಮ ಮೆಟ್ರೋದ 3ನೇ ಹಂತದ 15,611 ಕೋಟಿ ರೂಪಾಯಿಯ ಯೋಜನೆಗೆ ಅನುಮೋದನೆ ನೀಡಿದೆ. ಆದ್ರೆ, ಮೆಟ್ರೋ ಮಾರ್ಗ ಹಾದು ಹೋಗುವ ಕೆಲವು ಕಡೆ ಆರಂಭಿಕ ವಿಘ್ನಗಳು ಎದುರಾಗಿವೆ.
ಬೆಂಗಳೂರು, (ಆಗಸ್ಟ್ 23): ಮೆಟ್ರೋ 3ನೇ ಹಂತಕ್ಕೆ ಕೇಂದ್ರದ ಅನುಮೋದನೆ ಬೆನ್ನಲ್ಲೇ ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣ ಸ್ಥಳಾಂತರಕ್ಕೆ ಪಿಇಎಸ್ ವಿಶ್ವವಿದ್ಯಾಲಯ ಆಗ್ರಹಿಸಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಬೆಂಗಳೂರಿನ ನಮ್ಮ ಮೆಟ್ರೋದ 3ನೇ ಹಂತದ 15,611 ಕೋಟಿ ರೂಪಾಯಿಯ ಯೋಜನೆಗೆ ಅನುಮೋದನೆ ನೀಡಿದ್ದರೂ ,ಮೆಟ್ರೋ ಮಾರ್ಗ ಹಾದು ಹೋಗುವ ಕೆಲವು ಕಡೆ ವಿಘ್ನಗಳು ಎದುರಾಗಿದೆ. ಇದರಿಂದ ಮೆಟ್ರೋ ಕಾಮಗಾರಿ ವಿಳಂಬವಾಗಲಿದೆ. ಇತ್ತ ಔಟರ್ ರಿಂಗ್ ರೋಡ್ ನ ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಪ್ರತಿಷ್ಠಿತ ಪಿಇಎಸ್ ವಿಶ್ವವಿದ್ಯಾಲಯ ಅಪಸ್ವರ ಎತ್ತಿದೆ. ಪಿಇಎಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಜವಾಹರ್ ದೊರೆಸ್ವಾಮಿ, ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣದ ಸ್ಥಳವನ್ನು ಬದಲಾಯಿಸುವಂತೆ ಬಿಎಂಆರ್‌ಸಿಎಲ್ ಎಂಡಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಇನ್ನೂ ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಪಿಇಎಸ್ ನ ವಿರೋಧ ಯಾಕೆ ಅಂತ ನೋಡುವುದಾದರೆ, ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣ ಪ್ರವೇಶಿಸಲು, ಪಿಇಎಸ್ ವಿಶ್ವವಿದ್ಯಾಲಯಕ್ಕೆ ಸೇರಿರುವ 720 ಚ.ಅಡಿ ಭೂಮಿ ಅವಶ್ಯಕತೆ ಇದೆ. ಮೂರನೇ ಹಂತವು ಎರಡು ಎತ್ತರಿಸಿದ ಕಾರಿಡಾರ್‌ಗಳನ್ನು ಹೊಂದಿದೆ. ಔಟರ್ ರಿಂಗ್ ರೋಡ್ ನಲ್ಲಿ 31.15 ಕಿಮೀ ಮತ್ತು ಮಾಗಡಿ ರಸ್ತೆಯಲ್ಲಿ 12.5 ಕಿಮೀ ಹಾದು ಹೋಗಲಿದೆ. ಹೊಸಕೆರೆಹಳ್ಳಿ ನಮ್ಮ ಮೆಟ್ರೋ ನಿಲ್ದಾಣವು ಹೊರ ವರ್ತುಲ ರಸ್ತೆಯಲ್ಲಿ ದ್ವಾರಕಾನಗರ ಮತ್ತು ಕಾಮಾಕ್ಯ ಜಂಕ್ಷನ್ ನಡುವೆ ನಿರ್ಮಾಣವಾಗಲಿದೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: 3ನೇ ಹಂತದ ಮೆಟ್ರೋಗೆ ಜಿಯೋ ಟೆಕ್ನಿಕಲ್ ಸರ್ವೆಗೆ ಮುಂದಾದ BMRC
ಮೆಟ್ರೋ ನಿಲ್ದಾಣವಿರುವ ದಿಕ್ಕಿನಿಂದ ಸುಮಾರು 15 ಸಾವಿರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯವನ್ನು ಪ್ರವೇಶಿಸುತ್ತಾರೆ. ವಿವಿ ಪಕ್ಕದಲ್ಲೇ ಇರುವ, ದಶಕಗಳಿಂದ ಖಾಲಿ ಉಳಿದಿರುವ ಸರ್ಕಾರಿ ಭೂಮಿಯಲ್ಲಿ ಮೆಟ್ರೋ ನಿಲ್ದಾಣವನ್ನು ಸ್ಥಾಪಿಸಬಹುದಾಗಿದೆ. ಇದರಿಂದ ವಶಪಡಿಸಿಕೊಳ್ಳುವ ಭೂಮಿಗೆ ಯಾವುದೇ ಪರಿಹಾರ ನೀಡುವ ಪ್ರಮೇಯವೂ ಉದ್ಭವಿಸುವುದಿಲ್ಲ. ಈ ಮೂಲಕ ವಿಶ್ವವಿದ್ಯಾಲಯ ಪಕ್ಕದಲ್ಲಿ ಕೇವಲ 50 ಮೀಟರ್ ಮುಂದಕ್ಕೆ ಸ್ಟೇಷನ್ ವರ್ಗಾಯಿಸಬಹುದಾಗಿದೆ, ಇಲ್ಲವೇ ಬಲ ಭಾಗದಲ್ಲಿ 100 ಮೀಟರ್ ಸಾಗಿದರೆ ಅಲ್ಲಿಯೂ ಮೆಟ್ರೋ ನಿಲ್ದಾಣವನ್ನು ಸ್ಥಾಪಿಸಬಹುದಾಗಿದೆ.
ಉದ್ದೇಶಿತ ಸ್ಥಳದಲ್ಲಿ ಮೆಟ್ರೋ ನಿಲ್ದಾಣ ಸ್ಥಾಪಿಸಿದರೆ ವಿಶ್ವವಿದ್ಯಾಲಯದ ಮುಖ್ಯ ದ್ವಾರವನ್ನು ಶಾಶ್ವತವಾಗಿ ಮುಚ್ಚಬೇಕಾಗುತ್ತದೆ ಎಂದು ತಮ್ಮ ಪತ್ರದಲ್ಲಿ ಫ್ರೋ ಜವಾಹರ್ ವಿವರಿಸಿದ್ದಾರೆ. ಈ ಬಗ್ಗೆ ಮಾತಾಡಿದ ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್, ಈಗಾಗಲೇ ಮೆಟ್ರೋ ಸ್ಟೇಷನ್ ಸ್ಥಳಾಂತರ ಮಾಡಲು ಮನವಿ ಮಾಡಿದ್ದಾರೆ. ನಮ್ಮ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದು, ಹಿಂದೆ ಅಥವಾ ಮುಂದೆ ಮೆಟ್ರೋ ಸ್ಟೇಷನ್ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.
ಒಟ್ನಲ್ಲಿ ಬೆಂಗಳೂರು ನಗರದ ಬಹುನಿರೀಕ್ಷಿತ ಮೂರನೇ ಹಂತದ ಎರಡು ಕಾರಿಡಾರ್ ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದೆ, ಆದರೆ ಕೆಲವು ಕಡೆ ಜಾಗ ನೀಡುವ ಬಗ್ಗೆ ವಿರೋಧ ವ್ಯಕ್ತವಾಗ್ತಿರೋದಂತು ಸುಳ್ಳಲ್ಲ. ಇನ್ನು ಇದನ್ನು ನಮ್ಮ ಮೆಟ್ರೋ ಹೇಗೆ ಬಗೆ ಹರಿಸಿಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.