ಬೆಂಗಳೂರು ಅ.16: ರಾಜ್ಯ ಸರ್ಕಾರವು ಶಕ್ತಿ ಯೋಜನೆ (Shakti Yojana) ಜಾರಿ ಮಾಡಿದ್ದು, ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ (Government Buses) ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಸರ್ಕಾರಿ ಬಸ್ಗಳಲ್ಲಿ ನಿರ್ವಾಹಕರು (Conductor) ಮಹಿಳೆಯರಿಗೆ ಫ್ರೀ ಟಿಕೆಟ್ ನೀಡುತ್ತಿದ್ದು, ಈ ಟಿಕೆಟ್ನ ಹಣವನ್ನು ಸರ್ಕಾರ ನಿಗಮಗಳಿಗೆ ನೀಡುತ್ತದೆ. ಕಳೆದ ಒಂದು ವಾರದಲ್ಲಿ ಅಂದರೆ ಅ.11 ರಿಂದ ಅ.14ರವರೆಗೆ ನಾಲ್ಕು ನಿಗಮದ ಬಸ್ಗಳಲ್ಲಿ 77,56,72,604 ಮಹಿಳೆಯರು ಸಂಚರಿಸಿದ್ದಾರೆ. ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 1808,45,54, 754 ಆಗಿದೆ. ಇನ್ನು ಕಂಡಕ್ಟರ್ಗಳು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಸಂಖ್ಯೆಗಳನ್ನು ನಿಗಮಗಳಿಗೆ ತಪ್ಪಾಗಿ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇನ್ನು ಹೆಚ್ಚಿನ ಇನ್ಷೆಂಟಿವ್ ಆಸೆಗೆ ಬಿಎಂಟಿಸಿ ಕಂಡೆಕ್ಟರೊಬ್ಬ ಬೇಕಾ ಬಿಟ್ಟಿಯಾಗಿ ಫ್ರೀ ಟಿಕೆಟ್ಗಳನ್ನು ಹರಿಯುತ್ತಿರುವ ವೇಳೆ ಸಿಕ್ಕಿಬಿದ್ದಾರೆ. ಮೆಜೆಸ್ಟಿಕ್ನಿಂದ – ತಾವರಕೆರೆಗೆ ಹೋಗುವ (242-ಬಿ) ಬಿಬಿಎಂಟಿಸಿ ಬಸ್ನ ಕಂಡೆಕ್ಟರ್ ನಿನ್ನೆ (ಅ.15) ರಂದು ಸುಖಾಸುಮ್ಮನೇ ಫ್ರೀ ಟಿಕೆಟ್ ಹರಿದು ಬಿಸಾಕುತ್ತಿದ್ದನು. ಇದನ್ನು ಕಂಡ ಮಹಿಳಾ ಪ್ರಯಾಣಿಕರೊಬ್ಬರು “ಯಾಕೆ ಟಿಕೆಟ್ ಹರಿದು ಬಿಸಾಕುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ನಿಮ್ಮಂತವರಿಂದಲೇ ಶಕ್ತಿ ಯೋಜನೆಗೆ ಕೆಟ್ಟ ಹೆಸರೆಂದು” ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಮೂಲಕ ಕಂಡೆಕ್ಟರ್ ವಿಭಾಗಕ್ಕೆ ಹೆಚ್ಚಿನ ಪ್ರಯಾಣಿಕರ ಲೆಕ್ಕವನ್ನು ತೋರಿಸಲು ಮುಂದಾಗಿದ್ದಾರೆ. ಅಲ್ಲದೆ ಹೆಚ್ಚು ಫ್ರೀ ಟಿಕೆಟ್ ಹರಿದರೇ ತನಗೆ ಹೆಚ್ಚು ಇನ್ಷೆಂಟಿವ್ ಸಿಗುತ್ತದೆ ಎಂಬ ಆಸೆಯಿಂದ ಫ್ರೀ ಟಿಕೆಟ್ ಹರಿದಿದ್ದಾರೆ ಎಂದು ಪ್ರಯಾಣಿಕರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ