ಬೆಂಗಳೂರಿನ ಬಸವನಗುಡಿ ಮತ್ತು ಗರುಡಾ ಮಾಲ್‌ನಲ್ಲಿ ಈ ಬಾರಿ ವಿಶಿಷ್ಟವಾಗಿ ಗೊಂಬೆಗಳ ಪ್ರದರ್ಶನ
ಬೆಂಗಳೂರಿನ ಬಸವನಗುಡಿಯಲ್ಲಿರುವ ದಸರಾ ಬೊಂಬೆ ಮನೆಯಲ್ಲಿ ಈ ಬಾರಿ "ಸರ್ವ ಜನಾಂಗದ ಶಾಂತಿಯ ತೋಟ' ಎಂಬ ಥೀಮ್ನೊಂದಿಗೆ ಒಂದು ತಿಂಗಳ ದಸರಾ ಗೊಂಬೆಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಬೆಂಗಳೂರು ಅ.16: ನಾಡಹಬ್ಬ ದಸರಾವನ್ನು (Dasara) ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿಯ (Navaratri) ಒಂಬತ್ತು ದಿನಗಳ ಕಾಲ ದೇವಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ಮತ್ತು ಆರಾಧನೆ ನಡೆಯುತ್ತದೆ. ಇನ್ನು ಕೆಲ ಮನೆಗಳಲ್ಲಿ ಕೆಲವರು ದೇವಿ ಕೂಡಿಸುತ್ತಾರೆ. ಹಾಗೆ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡುತ್ತಾರೆ. ಗೊಂಬೆಗಳನ್ನು ಕೂಡಿಸುವ ಆಚರಣೆ ದಕ್ಷಿಣ ಕರ್ನಾಟಕ ಹೆಚ್ಚಾಗಿ ಕಂಡುಬರುತ್ತದೆ. ದಸರಾ ದೇವಿಯ ಆರಾಧಾನೆಗೆ ಮಾತ್ರ ಸೀಮಿತವಾಗದೆ ನಮ್ಮ ನಾಡಿನ ಗತವೈಭವ, ಸಂಸ್ಕೃತಿ ಮತ್ತು ಪರಂಪರೆಯ ಸಂಕೇತವಾಗಿದೆ. ಹೀಗಾಗಿ ಬೆಂಗಳೂರಿನ ಬಸವನಗುಡಿಯಲ್ಲಿರುವ ದಸರಾ ಬೊಂಬೆ ಮನೆಯಲ್ಲಿ ಈ ಬಾರಿ ವಿಶೇಷವಾಗಿ ಗೊಂಬೆಗಳನ್ನು ಕೂರಿಸಲಾಗಿದೆ.
ಬೆಂಗಳೂರಿನಲ್ಲಿನ ಎಲ್ಲ ವರ್ಗದ ಜನರನ್ನು ಮತ್ತು ವಿಶೇಷವಾಗಿ ಯುವ ಪೀಳಿಗೆಯನ್ನು ಆಕರ್ಷಿಸಲು ರಿಕ್ಯುಲಮ್ ಕಾಂಟ್ಯೂಷನ್ ಥೀಮ್ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಯುವಕರ ಗುಂಪೊಂದು “ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಥೀಮ್ನೊಂದಿಗೆ ಒಂದು ತಿಂಗಳ ದಸರಾ ಗೊಂಬೆಗಳ ಪ್ರದರ್ಶನವನ್ನು ಆಯೋಜಿಸಿದೆ.
ಬೌದ್ಧ, ಜೈನ, ಇಸ್ಲಾಂ, ಕ್ರಿಶ್ಚಿಯನ್ ಮತ್ತು ಹಿಂದೂ ಧರ್ಮಗಳ ಪ್ರತೀಕವಾದ ಮಹಾನ್ ಪುರಷರ ಮತ್ತು ದೇವಾಲಯಗಳ ಗೊಂಬೆಗಳನ್ನು ತಯಾರಿಸಿ ಕೂರಿಸಲಾಗಿದೆ. ಸಂಸ್ಥೆಯು ಭಾರತದ ಸಂವಿಧಾನ ಸಭೆಯ 15 ಮಹಿಳಾ ಸದಸ್ಯರ ಗೊಂಬೆಗಳನ್ನು, ಜೊತೆಗೆ ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸುಭಾಷ್ ಚಂದ್ರ ಬೋಸ್ ಅವರ ಗೊಂಬೆಗಳನ್ನು ಕೂರಿಸಿದೆ.
ದಸರಾ ಹಬ್ಬವು ಬರೀ ದೇವರ ಆರಾಧನೆಗೆ ಸೀಮಿತವಾಗದೆ ನಮ್ಮ ನಾಡಿನ ಜಾನಪದ ಪ್ರದರ್ಶಕ್ಕೆ ಮುಖ್ಯ ವೇದಿಕೆಯಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಪ್ರದರ್ಶಿಸಲು ಇದು ಅತ್ಯುತ್ತಮ ಮಾರ್ಗವಾಗಿರುವುದರಿಂದ ನಾವು ಈ ವರ್ಷ ಈ ಥೀಮ್ ಅನ್ನು ಆಯ್ಕೆ ಮಾಡಿದ್ದೇವೆ. ಜನರನ್ನು ಒಗ್ಗೂಡಿಸಲು ಮತ್ತು ದಸರಾ ಜಾತ್ಯತೀತ ಹಬ್ಬ ಎಂದು ಹೇಳಲು ನಾವು ಇದನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಲು ಬಯಸಿದ್ದೇವೆ ಎಂದು ರಿಕ್ಯುಲಮ್ ಕಾಂಟ್ಯೂಷನ್ ಸಂಸ್ಥೆ ಸಂಸ್ಥಾಪಕ ವಿನಯ್ ಕುಮಾರ್ ಹೇಳಿದರು.
ಇದನ್ನೂ ಓದಿ: Mysuru Dasara 2023:ವಿಶ್ವವಿಖ್ಯಾತ ಮೈಸೂರು ದಸರಾ 2ನೇ ದಿನದ ಕಾರ್ಯಕ್ರಮಗಳ ವಿವರ
ಇನ್ನೊಂದೆಡೆ ಗರುಡಾ ಮಾಲ್‌ನಲ್ಲಿ ಅಕ್ಟೋಬರ್ 9 ರಿಂದ 25 ರವರೆಗೆ 1,008 ವಿವಿಧ ದೇವರು ಮತ್ತು ದೇವತೆಗಳ ಗೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇಲ್ಲಿನ 1008 ಗೊಂಬೆಗಳನ್ನು 79 ಕಲಾವಿದರು ಆರರಿಂದ ಎಂಟು ತಿಂಗಳ ಕಾಲ ತಯಾರಿಸಿದ್ದಾರೆ. ನಾವು ಪ್ರತಿ ವರ್ಷ ಈ ಪ್ರದರ್ಶನವನ್ನು ಏರ್ಪಡಿಸುತ್ತೇವೆ. ಕೊರೊನಾ ರೋಗದ ಮೊದಲು, ಗೊಂಬೆ ಪ್ರದರ್ಶನದಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದೇವು. ಈ ವರ್ಷ, ನಾವು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದ್ದೇವೆ ಎಂದು ಗರುಡಾ ಮಾಲ್‌ನ ನಿರ್ದೇಶಕಿ ಮೇಧಿನಿ ಉದಯ್ ಗರುಡಾಚಾರ್ ಬಹಿರಂಗಪಡಿಸಿದ್ದಾರೆ.
ಗೊಂಬೆಗಳ ಪ್ರದರ್ಶನ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಜನರು ನಮ್ಮ ಗೊಂಬೆಗಳನ್ನು ಮತ್ತು ಅವುಗಳ ಹಿಂದಿನ ಸೃಜನಶೀಲತೆಯನ್ನು ನೋಡಬೇಕೆಂದು ನಾವು ಬಯಸುತ್ತೇವೆ. ಮೈಸೂರು ದಸರಾ ದರ್ಬಾರ್, ಮೈಸೂರು ಅರಮನೆಯ ಮಾದರಿಗಳು ಮತ್ತು ಹಂಪಿ ವಿಜಯದಶಮಿ ದಿಬ್ಬವನ್ನು ಸಹ ಮಾಲ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಭಾರತೀಯ ವಿದ್ಯಾಭವನದಲ್ಲಿ ಈ ಬಾರಿಯ ದಸರಾ ಆಚರಣೆಯ ಕೇಂದ್ರ ವಿಷಯ ರಾಮಾಯಣ ಪ್ರದರ್ಶನ ಭಾನುವಾರ ಉದ್ಘಾಟನೆಗೊಂಡಿತು.
ಈ ವರ್ಷ, ನಾವು ಗೊಂಬೆಗಳ ಮೂಲಕ ರಾಮಾಯಣದ ಏಳು ಖಂಡಗಳನ್ನು (ಅಧ್ಯಾಯಗಳು) ಚಿತ್ರಿಸಿದ್ದೇವೆ. ನಮ್ಮ ಪುರಾಣದ ಮಾಹಿತಿ ಮತ್ತು ಸಂಸ್ಕೃತಿಯನ್ನು ಜನರಿಗೆ ತಿಳಿಸಲು ಇಚ್ಛಿಸುತ್ತೇವೆ ಎಂದು ಪ್ರದರ್ಶಕರಲ್ಲಿ ಒಬ್ಬರಾದ ಅಪರ್ಣಾ ಆಚಾರ್ಯ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:23 am, Mon, 16 October 23