ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ವಿತರಣೆ ಮೇ 26 ರಿಂದ ಶುರು: ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ವಿವರ

BMTC Student Bus Passes: 2025–26ನೇ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಿಕೆ ಪ್ರಕ್ರಿಯೆಯನ್ನು ಬಿಎಂಟಿಸಿ ಮೇ 26 ರಿಂದ ಶುರು ಮಾಡಲಿದೆ. ಆನ್​​ಲೈನ್ ಮೂಲಕ ಮತ್ತು ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ವಿದ್ಯಾರ್ಥಿಗಳು ಬಸ್ ಪಾಸ್​​ಗೆ ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ 1 ರಿಂದ ಇನ್ನಷ್ಟು ಕೇಂದ್ರಗಳಲ್ಲಿ ಪಾಸ್ ವಿತರಣೆ ಶುರುವಾಗಲಿದ್ದು, ಎಲ್ಲೆಲ್ಲಿ ದೊರೆಯಲಿದೆ ಎಂಬ ವಿವರವನ್ನು ಬಿಎಂಟಿಸಿ ನೀಡಿದೆ. ಆ ಮಾಹಿತಿ ಇಲ್ಲಿದೆ.

ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ವಿತರಣೆ ಮೇ 26 ರಿಂದ ಶುರು: ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ

Updated on: May 24, 2025 | 7:52 AM

ಬೆಂಗಳೂರು, ಮೇ 24: ವಿದ್ಯಾರ್ಥಿಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC) ನೀಡುವ ಬಸ್ ಪಾಸ್ (Student Bus Passes) ವಿತರಣೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಇನ್ನೆರಡು ದಿನಗಳಲ್ಲಿ ಅವಕಾಶ ದೊರೆಯಲಿದೆ. 2025–26ನೇ ಶೈಕ್ಷಣಿಕ ವರ್ಷಕ್ಕಾಗಿ ನೀಡುವ ಬಸ್ ಪಾಸ್​ಗೆ ವಿದ್ಯಾರ್ಥಿಗಳು ಆನ್​​ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಮೇ 26 ರಿಂದ https://sevasindhu.karnataka.gov.in ಪೋರ್ಟಲ್​ನಲ್ಲಿ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಜೂನ್ 1 ರಿಂದ ಪ್ರತಿ ದಿನ ಬೆಳಿಗ್ಗೆ 8 ರಿಂದ ಸಂಜೆ 6.30 ರವರೆಗೆ ಬೆಂಗಳೂರು ಒನ್ ಕೇಂದ್ರಗಳಲ್ಲಿ ಮತ್ತು ಮೆಜೆಸ್ಟಿಕ್, ಕೆಂಗೇರಿ, ಶಾಂತಿನಗರ, ಹೊಸಕೋಟೆ, ಎಲೆಕ್ಟ್ರಾನಿಕ್ಸ್ ಸಿಟಿ ಡಿಪೋ -19 ಮತ್ತು ಕೆಎಸ್ಆರ್​​ಟಿಸಿ ಆನೇಕಲ್ ಬಸ್ ನಿಲ್ದಾಣದಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿಯೂ ಪಾಸ್‌ಗಳನ್ನು ವಿತರಣೆ ಮಾಡಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ, ಬಿಎಂಟಿಸಿ ಕಾಲ್ ಸೆಂಟರ್ ಸಂಖ್ಯೆ 080-22483777 ಕ್ಕೆ ಸಂಪರ್ಕಿಸಬಹುದು ಅಥವಾ ಬಿಎಂಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಸಂಸ್ಥೆ ತಿಳಿಸಿದೆ.

ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯಡಿಯಲ್ಲಿ, ಕರ್ನಾಟಕದ ವಿದ್ಯಾರ್ಥಿನಿಯರು ಸಾಮಾನ್ಯ ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅರ್ಹರಾಗಿರುತ್ತಾರೆ ಎಂದೂ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ
ಮತ್ತು ಬರಿಸಿ ಬೆಳಗಾವಿಯ ಮೆಡಿಕಲ್​​ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
ಪಾಕಿಸ್ತಾನದ ಜೊತೆಗಿನ ಗಲಾಟೆಯಿಂದ ಮೈಸೂರು ಪಾಕ್ ಹೆಸರೂ ಬದಲು!
ಮೆಟ್ರೋ ನಿಲ್ದಾಣಗಳ‌ಲ್ಲಿ ಶೌಚಾಲಯ ಬಳಕೆಗೆ ಶುಲ್ಕ: ವಿವಾದಕ್ಕೆ ತೆರೆಳೆದ BMRC
ಕರಿಮಣಿ ಮಾಲೀಕ ನೀನಲ್ಲ, ವರನ ಬಿಟ್ಟು ಪ್ರಿಯಕರನೊಂದಿಗೆ ಮದುವೆಯಾದ ವಧು

ಬೆಂಗಳೂರಿಗೆ 4,500 ಇ ಬಸ್​ಗೆ ಕೇಂದ್ರ ಸರ್ಕಾರ ಅನುಮೋದನೆ

ಪಿಎಂ ಇ ಡ್ರೈವ್ ಯೋಜನೆಯಡಿ ಕರ್ನಾಟಕಕ್ಕೆ 4,500 ಇ ಬಸ್​​ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಿಂದಾಗಿ ಮುಂದಿನ 2 ವರ್ಷಗಳಲ್ಲಿ ಬಿಎಂಟಿಸಿ ಬಳಿ ಇರುವ ಬಸ್​ಗಳ ಸಂಖ್ಯೆ 10,000 ಆಗಲಿದೆ. ಪಿಎಂ ಇ-ಡ್ರೈವ್ ಯೋಜನೆಯಡಿ ಐದು ನಗರಗಳಿಗೆ 10,900 ಎಲೆಕ್ಟ್ರಿಕ್ ಬಸ್ಸುಗಳನ್ನು ಹಂಚಿಕೆ ಮಾಡುವುದಾಗಿ ಗುರುವಾರವಷ್ಟೇ ಕೇಂದ್ರ ಬೃಹತ್ ಕೈಗಾರಿಕಾ ಇಲಾಖೆ ಘೋಷಣೆ ಮಾಡಿತ್ತು.

ಬೆಂಗಳೂರಿಗೆ ಹೆಚ್ಚಿನ ಪಾಲು

ಕೇಂದ್ರ ಬೃಹತ್ ಕೈಗಾರಿಕಾ ಇಲಾಖೆ ಘೋಷಣೆ ಮಾಡಿರುವ ಬಸ್‌ಗಳ ಪೈಕಿ ಹೆಚ್ಚಿನ ಪಾಲು ಬೆಂಗಳೂರಿಗೆ ಸಿಗಲಿದೆ. ಅಂದರೆ, ಬೆಂಗಳೂರಿಗೆ 4,500 ಬಸ್​ಗಳು ದೊರೆಯಲಿವೆ. ದೆಹಲಿಗೆ 2,800 ಇ-ಬಸ್‌ಗಳು, ಹೈದರಾಬಾದ್‌ಗೆ 2,000, ಅಹಮದಾಬಾದ್‌ಗೆ 1,000 ಮತ್ತು ಸೂರತ್‌ಗೆ 600 ಇ-ಬಸ್‌ಗಳು ಸಿಗಲಿವೆ.

ಇದನ್ನೂ ಓದಿ: ಮೆಟ್ರೋ ನಿಲ್ದಾಣಗಳ‌ಲ್ಲಿ ಶೌಚಾಲಯ ಬಳಕೆಗೆ ಶುಲ್ಕ: ವಿವಾದಕ್ಕೆ ತೆರೆಳೆದ BMRCL

ನವದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಹೆಚ್‌ಡಿ ಕುಮಾರಸ್ವಾಮಿ, 2030 ರ ವೇಳೆಗೆ ಭೂ ಸಾರಿಗೆಯಿಂದ ಉಂಟಾಗುವ ಮಾಲಿನ್ಯವನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಪ್ರಧಾನಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಪಿಎಂ ಇ-ಡ್ರೈವ್ ಯೋಜನೆಯಡಿ ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸುವ ಮೂಲಕ ಪ್ರಧಾನಿಯವರ ಕನಸನ್ನು ನನಸಾಗಿಸಲು ನಾವು ಶ್ರಮಿಸುತ್ತಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:51 am, Sat, 24 May 25