ಯುಎಪಿಎ ಕೇಸ್: ಇತ್ತೀಚೆಗಷ್ಟೇ ಶರಣಾಗಿದ್ದ ಮಾಜಿ ನಕ್ಸಲ್ ಲತಾ ಸೇರಿದಂತೆ ನಾಲ್ವರು ಖುಲಾಸೆ
ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು ಇತ್ತೀಚೆಗೆ ಶರಣಾದ ಮಾಜಿ ನಕ್ಸಲ್‌ಗಳಾದ ಮುಂಡಗಾರು ಲತಾ, ರವೀಂದ್ರ, ಸಾವಿತ್ರಿ ಮತ್ತು ವನಜಾಕ್ಷಿ ಅವರನ್ನು ಮೂರು ಪ್ರಕರಣಗಳಿಂದ ಖುಲಾಸೆಗೊಳಿಸಿದೆ. ಪ್ರಾಸಿಕ್ಯೂಷನ್ ಸಾಕ್ಷ್ಯಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ. ಈ ಎಲ್ಲ ನಕ್ಸಲ್ ರು ಇತ್ತೀಚಿಗೆ ಮುಖ್ಯಮಂತ್ರಿಗಳ ಎದುರು ಶರಣಾಗಿದ್ದರು.

ಬೆಂಗಳೂರು, ಮೇ 23: ಇತ್ತೀಚೆಗೆ ಶರಣಾಗಿದ್ದ ಮಾಜಿ ನಕ್ಸಲರಾದ (Naxal) ಮುಂಡಗಾರು ಲತಾ, ರವೀಂದ್ರ ಅಲಿಯಾಸ್ ಕೋಟೆಹೊಂಡ ರವಿ, ಸಾವಿತ್ರಿ ಅಲಿಯಾಸ್ ಉಷಾ, ವನಜಾಕ್ಷಿ ಅಲಿಯಾಸ್ ಜ್ಯೋತಿ ಅಲಿಯಾಸ್ ಕಲ್ಪನಾ ಅವರನ್ನು ಬೆಂಗಳೂರಿನ ಎನ್‌ಐಎ (NIA) ವಿಶೇಷ ನ್ಯಾಯಾಲಯ ಮೂರು ಪ್ರಕರಣಗಳಿಂದ ಖುಲಾಸೆಗೊಳಿಸಿದೆ.
ಮುಂಡಗಾರು ಲತಾ ಅವರಿಗೆ ಸಂಬಂಧಿಸಿದ ಮೂರು, ರವೀಂದ್ರ ಅವರನ್ನೊಳಗೊಂಡ ಎರಡು, ಸಾವಿತ್ರಿ ಮತ್ತು ಜ್ಯೋತಿ ಅವರನ್ನು ಒಳಗೊಂಡ ತಲಾ ಒಂದೊಂದು ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಸಾಕ್ಷ್ಯ ಒದಗಿಸಲು ವಿಫಲವಾಗಿದೆ ಎಂದು ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಎಂ.ಗಂಗಾಧರ್ ಅವರು ಖುಲಾಸೆಗೊಳಿಸಿದ್ದಾರೆ.
ಥಣಿಕೋಡು ಅರಣ್ಯ ಚೆಕ್‌ಪೋಸ್ಟ್ ಧ್ವಂಸ
2005ರ ನವೆಂಬರ್ನಲ್ಲಿ ಥಣಿಕೋಡು ಚೆಕ್ಪೋಸ್ಟ್ಗೆ ಬಂದಿದ್ದ ಮೂವರು ಪುರಷರು ಮತ್ತು ಒಬ್ಬ ಮಹಿಳಾ ನಕ್ಸಲರು ಚೆಕ್‌ಪೋಸ್ಟ್ ಕಚೇರಿ ಧ್ವಂಸ ಮಾಡಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ಕೈಬಿಡಬೇಕು ಎಂದಿದ್ದರು.
ಕಿರಣ್ ಶೆಟ್ಟಿ ಬೈಕ್‌ಗೆ ಬೆಂಕಿ ಹಾಕಿದ್ದ ಕೃತ್ಯ
2008ರ ಮೇ ತಿಂಗಳಲ್ಲಿ ಲೇವಾದೇವಿದಾರ ಗಂಗಾಧರ್ ಶೆಟ್ಟಿ ಅಲಿಯಾಸ್ ಕಿರಣ್ ಶೆಟ್ಟಿ ಬೈಕ್‌ಗೆ ಬೆಂಕಿ ಹಚ್ಚಿದ್ದ ಕೃತ್ಯದ ವಿರುದ್ಧ ದೂರು ದಾಖಲಾಗಿತ್ತು.
ಬುಕ್ಕಡಿಬೈಲುವಿನಲ್ಲಿ ಸಾರ್ವಜನಿಕ ಸಭೆ
2009ರ ಮಾರ್ಚ್ನಲ್ಲಿ ಮುಂಡಗಾರು ಲತಾ ನೇತೃತ್ವದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಇಬ್ಬರು ಪುರುಷ ಮತ್ತು ಇಬ್ಬರು ಮಹಿಳಾ ನಕ್ಸಲರು 80-100 ಜನರನ್ನು ಸೇರಿಸಿ ಸಭೆ ನಡೆಸಿದ್ದ ಸಂಬಂಧ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳಲ್ಲಿ ಐಪಿಸಿ ಜೊತೆಗೆ ಯುಎಪಿಎ ಭಯೋತ್ಪಾದನಾ ಚಟುವಟಿಕೆಗಳ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 143, 144, 147, 148 ಮತ್ತು 506 ಜೊತೆಗೆ ಸೆಕ್ಷನ್ 149, ಶಸ್ತ್ರಾಸ್ತ್ರ ಕಾಯಿದೆ, ಸೆಕ್ಷನ್‌ಗಳಾದ 3 ಮತ್ತು 25 ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ನಿಷೇಧ) ಕಾಯಿದೆ ಸೆಕ್ಷನ್‌ಗಳಾದ 13 ಮತ್ತು 18ರ ಅಡಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು. ಜನವರಿ 9 ರಂದು ಆರು ಮಂದಿ ನಕ್ಸಲರು ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಶರಣಾಗಿದ್ದರು.
ಇದನ್ನೂ ಓದಿ: ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಮರುಜೀವಕ್ಕೆ ಈ ಅಂಶವೇ ಕಾರಣವಾಯ್ತಾ!
ನಕ್ಸಲ್ರ ಶರಣಾಗತಿ
ಇದೇ ವರ್ಷ ಜನವರಿ 8 ರಂದು ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ, ತಮಿಳುನಾಡಿನ ಕೆ.ವಸಂತ ಅಲಿಯಾಸ್ ರಮೇಶ್, ಕೇರಳದ ಜೀಶ, ಆಂಧ್ರದ ಮಾರಪ್ಪ ಅರೋಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಶರಣಾಗಿದ್ದರು. ಸರ್ಕಾರ ಈ ಮಾಜಿ ನಕ್ಸಲ್ರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:25 pm, Fri, 23 May 25







