BMTC: ಕ್ಯೂಆರ್- ಕೋಡ್ ಟಿಕೆಟ್ ಪದ್ಧತಿಯನ್ನು ಮರುಪರಿಚಯಿಸಲಿದೆ ಬಿಎಂಟಿಸಿ; ಸಂಪೂರ್ಣ ಮಾಹಿತಿ ಇಲ್ಲಿದೆ
ಬಿಎಂಟಿಸಿಯ ಎಸಿ ಬಸ್‌ಗಳಲ್ಲಿ ಕ್ಯೂಆರ್ ಕೋಡ್ ಟಿಕೆಟ್ ಸೇವೆಯನ್ನು ಮರು ಪರಿಚಯಿಸಲು ನಿರ್ಧರಿಸಿದೆ. ಇದು ಯಾವೆಲ್ಲಾ ಬಸ್‌ಗಳಿಗೆ ಅನ್ವಯವಾಗಲಿದೆ? ಇಲ್ಲಿದೆ ಮಾಹಿತಿ.
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬೆಂಗಳೂರಿನ ಎಲ್ಲಾ ಎಸಿ ಬಸ್‌ಗಳಲ್ಲಿ ಕ್ಯೂಆರ್-ಕೋಡ್ ಟಿಕೆಟ್ ಅನ್ನು ಮರು ಪರಿಚಯಿಸಲು ನಿರ್ಧರಿಸಿದೆ. ಹಣ ಪಾವತಿಸಿದ ದೃಢೀಕರಣವು ತತ್ಕ್ಷಣ ಲಭ್ಯವಾಗುವುದಕ್ಕಾಗಿ ನಗರ ಸಾರಿಗೆ ನಿಗಮವು ಪೇಟಿಎಂ ಸೌಂಡ್‌ಬಾಕ್ಸ್‌ಗಳನ್ನು (ಸ್ಪೀಕರ್‌ಗಳು) ಕಂಡಕ್ಟರ್‌ಗಳಿಗೆ ಒದಗಿಸಲಿದೆ. ಪಾವತಿಯನ್ನು ಮಾಡಿದ ನಂತರ, ಅದು ಆಡಿಯೊ ಸಂದೇಶದ ಮೂಲಕ ಖಚಿತಪಡಿಸಲಿದೆ. ಸಮೂಹ ಸಾರಿಗೆಯಲ್ಲಿ ಡಿಜಿಟಲ್ ತಂತ್ರಜ್ಞಾನದತ್ತ ಸಾಗುತ್ತಿರುವ ಬಿಎಂಟಿಸಿ (BMTC) ಮುಖ್ಯವಾಗಿ ಎಸಿ ಬಸ್‌ಗಳಿಗೆ 500 ಸ್ಪೀಕರ್‌ಗಳನ್ನು ಖರೀದಿಸಲು ಯೋಜಿಸುತ್ತಿದೆ. ಏತನ್ಮಧ್ಯೆ, ಬೆಂಗಳೂರಿನ (Bengaluru) ರಸ್ತೆಗಳಲ್ಲಿ 190 ಎಸಿ ಬಸ್‌ಗಳು ಸಂಚರಿಸುತ್ತಿದ್ದು, ಸಾರಿಗೆ ಇಲಾಖೆಯು ಹೆಚ್ಚಿನ ಎಸಿ ಬಸ್‌ಗಳನ್ನು ನಿಯೋಜಿಸಲು ಚಿಂತನೆ ನಡೆಸುತ್ತಿದೆ. ಮಾರ್ಚ್ ಅಂತ್ಯದ ವೇಳೆಗೆ ಬಸ್‌ಗಳ ಸಂಖ್ಯೆ 400ಕ್ಕೆ ಏರಲಿದೆ ಎಂದು ಮೂಲಗಳು ತಿಳಿಸಿವೆ.
ಮೇ 2020 ರಲ್ಲಿ, ಎಲ್ಲಾ ಬಸ್‌ಗಳಲ್ಲಿ ಯುಪಿಐ ಕ್ಯೂಆರ್ (UPI QR) ಕೋಡ್ ಆಧಾರಿತ ಪ್ರಯಾಣ ಸೌಲಭ್ಯವನ್ನು ಪ್ರಾರಂಭಿಸಲಾಯಿತು ಆದರೆ ಕೆಲವು ಕಾರಣಗಳಿಂದ ಅದನ್ನು ನಿಲ್ಲಿಸಲಾಗಿತ್ತು. ಈ ಉಪಕ್ರಮದ ಕುರಿತು ಪ್ರತಿಕ್ರಿಯಿಸಿದ, ಬಿಎಂಟಿಸಿಯ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎವಿ ಸೂರ್ಯ ಸೇನ್, “ನಾವು 500 ಸ್ಪೀಕರ್‌ಗಳನ್ನು ಖರೀದಿಸಲು ಯೋಜಿಸುತ್ತಿದ್ದೇವೆ. ಮುಖ್ಯವಾಗಿ ಎಸಿ ಬಸ್‌ಗಳಿಗೆ ಮತ್ತು ಬಸ್ ಕಂಡಕ್ಟರ್‌ಗಳು ಈ ಸ್ಪೀಕರ್‌ಗಳನ್ನು ತಮ್ಮ ಬ್ಯಾಗ್‌ಗಳಲ್ಲಿ ಇಡಬಹುದು” ಎಂದು ಖಾಸಗಿ ಮಾಧ್ಯಮವೊಂದು ಉಲ್ಲೇಖಿಸಿದೆ.
ಎಲ್ಲಾ ನಾನ್-ಎಸಿ ಬಸ್‌ಗಳಲ್ಲಿ ಕ್ಯೂಆರ್-ಕೋಡ್ ಟಿಕೆಟಿಂಗ್ ಅನ್ನು ಮರುಪ್ರಾರಂಭಿಸುವ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಟಿಸಿ ಅಧಿಕಾರಿಯೊಬ್ಬರು, ಎಲ್ಲಾ ಬಸ್‌ಗಳಲ್ಲಿ ನಗದು ರಹಿತ ಸೌಲಭ್ಯ ಲಭ್ಯವಿದೆ. ಆದರೆ ಸಾರಿಗೆ ನಿಗಮವು ನಾನ್-ಎಸಿ ಬಸ್‌ಗಳಿಗೆ ಸ್ಪೀಕರ್ ಖರೀದಿಸುವ ಯೋಜನೆ ಹೊಂದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಕನ್ನಡ ಧ್ವಜ ಸುಟ್ಟ ಕಿಡಿಗೇಡಿಗಳು: ಭುಗಿಲೆದ್ದ ಆಕ್ರೋಶ, ಘಟನೆಯನ್ನು ಖಂಡಿಸಿದ ನಟ ದ್ರುವ ಸರ್ಜಾ
ಲೈಂಗಿಕ ಹಗರಣ ಆರೋಪ: ಗೋವಾ ನಗರಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಸಚಿವ ಮಿಲಿಂದ್ ನಾಯಕ್ ರಾಜೀನಾಮೆ
Published On - 2:09 pm, Thu, 16 December 21