
ಬೆಂಗಳೂರು, ಆ.29: ಬೆಂಗಳೂರಿನ ಖಾಸಗಿ ಶಾಲೆ(private school)ಯೊಂದಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನ ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದು(ಗುರುವಾರ) ಬೆಳಗ್ಗೆ 6.57ರ ಸುಮಾರಿಗೆ ಇಂಡಿಯನ್ ಪಬ್ಲಿಕ್ ಶಾಲೆ ಆವರಣದಲ್ಲಿ 5 ಪೈಪ್ಲೈನ್ ಬಾಂಬ್ ಇಡಲಾಗಿದೆ ಎಂದು Father Kodachi ಹೆಸರಿನ coldghost456@gmail.com askbirnorth@tipsglobal.net ಎಂಬ ಐಡಿಯಿಂದ ಬಾಂಬ್ ಬೆದರಿಕೆ ಮೇಲ್ ಬಂದಿತ್ತು.
ಅದರಲ್ಲಿ ಮಧ್ಯಾಹ್ನ 1.30ಕ್ಕೆ ಬಾಂಬ್ ಬ್ಲಾಸ್ಟ್ ಆಗುತ್ತೆಂದು ತಿಳಿಸಲಾಗಿತ್ತು. ಮಾಹಿತಿ ಬಂದ ಕೂಡಲೇ ಶಾಲೆಗೆ ಭೇಟಿ ನೀಡಿದ ಗೋವಿಂದಪುರ ಪೊಲೀಸರು ಹಾಗೂ ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಿದರು. ಅದೃಷ್ಟವಶಾತ್ ಪರಿಶೀಲನೆ ವೇಳೆ ಯಾವುದೇ ರೀತಿ ಬಾಂಬ್ ಪತ್ತೆಯಾಗಿಲ್ಲ. ಸದ್ಯ ಶಾಲೆಯ ಆಡಳಿತಾಧಿಕಾರಿ ನೀಡಿರೋ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಶುರುಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಖಾಸಗಿ ಕಂಪನಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್; ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ದಳ
ಇದೇ ತಿಂಗಳ 13 ರಂದು ಕೂಡ ಬೆಂಗಳೂರಿನ ಜೆ.ಪಿ.ನಗರದ 4ನೇ ಹಂತದಲ್ಲಿರುವ ‘ಬ್ರಾಡ್ ಕಾಂ’ ಕಂಪನಿಗೆ ಬೆಳಗ್ಗೆ 11:50ರ ಸುಮಾರಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಬೆದರಿಕೆ ಮೇಲ್ ಬಗ್ಗೆ ಪರಿಶೀಲನೆ ನಡೆಸಿದ್ದರು. ಜೊತೆಗೆ ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮೂಲಕ ಒಂದೇ ತಿಂಗಳಲ್ಲಿ ಎರಡನೇ ಬಾರಿ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ